ಔರೈಯಾ : ದಲಿತ ವಿದ್ಯಾರ್ಥಿಗಳ ಮೇಲೆ ಶಿಕ್ಷಕರ ಅಮಾನುಷ ವರ್ತನೆ ಮತ್ತೆ ಮುಂದುವರೆದಿದೆ. ಉತ್ತರ ಪ್ರದೇಶದ 10ನೇ ತರಗತಿಯ ದಲಿತ ವಿದ್ಯಾರ್ಥಿಯ ಮೇಲೆ ಶಿಕ್ಷಕ ಥಳಿಸಿದ್ದು, ಚಿಕಿತ್ಸೆ ಫಲಿಸದೇ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಕೋಪಗೊಂಡ ಕೆಲವು ಸ್ಥಳೀಯರು ಪೊಲೀಸ್ ಜೀಪಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಇಲ್ಲಿನ ಅಚಲ್ಡಾ ಪ್ರದೇಶದ ಆದರ್ಶ ಇಂಟರ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ 15 ವರ್ಷದ ದಲಿತ ಬಾಲಕ ನಿಖಿತ್ ದೋಹ್ರೆ ಸೆಪ್ಟೆಂಬರ್ 7 ರಂದು ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ಒಂದು ಪದವನ್ನು ತಪ್ಪಾಗಿ ಬರೆದಿದ್ದಕ್ಕಾಗಿ ಮೇಲ್ಜಾತಿಗೆ ಸೇರಿದ ತನ್ನ ಶಾಲಾ ಶಿಕ್ಷಕ ಅಶ್ವಿನಿ ಸಿಂಗ್ ಬಾಲಕನನ್ನು ತೀವ್ರವಾಗಿ ಥಳಿಸಿದ್ದನು.
ಈ ವೇಳೆ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸೋಮವಾರ ಮೃತಪಟ್ಟಿದ್ದಾನೆ. ಶಿಕ್ಷಕ ಬಾಲಕನ ಚಿಕಿತ್ಸೆಗೆ ₹ 40,000 ನೀಡಿದ್ದು, ಪರಾರಿಯಾಗಿದ್ದಾನೆ. ಶಿಕ್ಷಕ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಶಿಕ್ಷಕನು ನನ್ನ ಮಗನನ್ನು ಜಾತಿ ನಿಂದನೆ ಮಾಡಿ ಥಳಿಸಿದ ಕಾರಣ ಆತ ಸಾವನ್ನಪ್ಪಿದ್ದಾನೆ ಎಂದು ಬಾಲಕನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.