ವಿಸ್ಮಯಕಾರಿ ಗೆದ್ದಲು ಪ್ರಪಂಚ !!

ಡಾ: ಎನ್.ಬಿ.ಶ್ರೀಧರ, ಪ್ರಾಧ್ಯಾಪಕರು
ಗೂಡುಗಳನ್ನು ಕಟ್ಟುವಾಗ, ರಿಪೇರಿ ಮಾಡುವಾಗ ಆಹಾರವನ್ನು ಹುಡುಕಿ ಸಾಗಿಸುವಾಗ, ರೆಕ್ಕೆಹುಳು ಗೂಡಿನಿಂದ ಹೊರಗೆ ಬರುವಾಗ ಒಂದು ನಿರ್ದಿಷ್ಟ ಅಂತರದ ದೂರದಲ್ಲಿ ಸೈನಿಕರಂತೆ ಕಾವಲಿದ್ದು ಗೆದ್ದಲನ್ನು ಶತ್ರುಗಳಿಂದ ರಕ್ಷಿಸುತ್ತವೆ. ಗೂಡಿನ ಪ್ರತಿಭಾಗದಲ್ಲಿ ನಿಂತು ಪಹರೆ ತಿರುಗುತ್ತಾ ಶತ್ರುಗಳು ಗೂಡಿನೊಳಗೆ ನುಗ್ಗದಂತೆ ನಮ್ಮ ಭಾರತೀಯ ಸೇನೆಯ ತರ ತಡೆಯುತ್ತವೆ.

ಗೆದ್ದಲುಗಳು ಸುಮಾರು ೩೦೦ ಮಿಲಿಯನ್ ವರ್ಷಗಳಿಂದ ಭೂಮಿಯ ಮೇಲಿರುವ ಪುರಾತನ ಜೀವಿಗಳು. ಇವುಗಳ ಅಯಸ್ಸು ಗರೀಷ್ಟ ಒಂದು ವರ್ಷ ಮಾತ್ರ. ಆದರೆ ರಾಣಿ ಹುಳುಗಳು ೧೫-೨೫ ವರ್ಷ ಬದುಕುತ್ತವೆ. ಗೆದ್ದಲು ಸಂಘ ಜೀವಿ. ತನ್ನದೇ ಆದ ವಸಾಹತುವಿನಲ್ಲಿ ಮಾನವ ಸಮಾಜಕ್ಕಿಂತಲೂ ಅತ್ಯಂತ ಸುವ್ಯವಸ್ಥಿತವಾದ ಕುಟುಂಬ ಜೀವನ ನಡೆಸುವ ಕೀಟ. ಗಟ್ಟಿಮಣ್ಣಿನಿಂದ ನಿರ್ಮಿಸಿರುವ ಗೂಡುಗಳೇ ಇವುಗಳ ವಾಸಸ್ಥಾನ. ಗೆದ್ದಲಿನ ಹುತ್ತ ಒಂದು ಅಭೇದ್ಯ ಕೋಟೆ. ಗೂಡುಗಳ ವಿನ್ಯಾಸ, ರೆಕ್ಕೆಹುಳುಗಳ ಹಾರಾಟ, ವಸಾಹತುಗಳ ಸ್ಥಾಪನೆ, ಸಂಘ ಜೀವನ, ಕೆಲಸದ ಹಂಚಿಕೆ, ಆಹಾರ ಶೇಖರಣೆ, ಜೀರ್ಣಕ್ರಿಯೆಗಾಗಿ ಸಹಜೀವಿಗಳ ಅವಲಂಬನೆ, ಶಿಲೀಂದ್ರ ತೋಟಗಳನ್ನು ಬೆಳೆಸುವಿಕೆ, ಸಹಕಾರ ಬಾಳ್ವೆ ಮತ್ತು ಶಿಸ್ತು ಮುಂತಾದ ಅಂಶಗಳನ್ನು ಗೆದ್ದಲುಗಳಲ್ಲಿ ಕಾಣಬಹುದು.

ಗೆದ್ದಲಿನಿಂದ ಪ್ರತಿವರ್ಷ ಭಾರತದಲ್ಲಿ 280 ದಶಲಕ್ಷ ರೂಪಾಯಿಗಳು ನಷ್ಟವಾಗುತ್ತದೆಂದು ಅಂದಾಜುಮಾಡಲಾಗಿದೆ. ಭಾರತದಲ್ಲಿ ಗುರ್ತಿಸಿರುವ ಒಟ್ಟು 300 ಗೆದ್ದಲಿನ ಪ್ರಬೇಧಗಳಲ್ಲಿ 50 ಪ್ರಬೇಧಗಳು ಈ ರೀತಿ ನಷ್ಟವುಂಟುಮಾಡುತ್ತವೆ. ಗೆದ್ದಲುಗಳು ಹುಟ್ಟು ಕುರುಡು. ಸದಾ ಕತ್ತಲೆಯ ಕೋಣೆಯಲ್ಲಿ ದುಡಿಯುತ್ತಿರುವ ಅವುಗಳಿಗೆ ಕಣ್ಣಿನ ಅವಶ್ಯಕತೆ ಇರುವುದಿಲ್ಲ. ಅವು ಇಡಿ ಜೀವಮಾನವನ್ನು ಕತ್ತಲಿನಲ್ಲಿಯೇ ಕಳೆಯುತ್ತವೆ.

ಗೆದ್ದಲಿನ ಪ್ರಮುಖ ಆಹಾರ ಹಳೆಯ ಮರಗಳು. ಮರದಂತ ಗಟ್ಟಿ ವಸ್ತುಗಳನ್ನು ತಿಂದು ಜೀರ್ಣ ಮಾಡಿಕೊಳ್ಳುವ ಅಸಾಧಾರಣ ಜೀರ್ಣಕ್ರಿಯೆ ಅದರದು. ಮರದಲ್ಲಿ ಹೇರಳವಾಗಿರುವ ಸೆಲ್ಯುಲೊಸ್ ಮತ್ತು ಲಿಗ್ನಿನ್ ಬಹುಶರ್ಕರ ಪಿಷ್ಟ ಅಥವಾ ಸೆಲ್ಯುಲೋಸ್ ಅಂಶಗಳನ್ನು ಗೆದ್ದಲು ಹುಳುಗಳು ಬಳಸಿಕೊಳ್ಳುತ್ತವೆ. ತನ್ನ ಬಲಿಷ್ಠ ಕೊಂಡಿಗಳಿಂದ ಮರವನ್ನು ಕತ್ತರಿಸುವ ಕೆಲಸವನ್ನು ಕೆಲಸಗಾರ ಗೆದ್ದಲು ಹುಳುಗಳು ಮಾಡುತ್ತವೆ. ಗೆದ್ದಲು ಹುಳುಗಳ ಹೊಟ್ಟೆಯಲ್ಲೊಂದು ಬ್ರಹ್ಮಾಂಡವೇ ಅಡಗಿದೆ. ಎಂತಹ ದೊಡ್ಡ ಮರವೇ ಆಗಿದ್ದರೂ ಈ ಹುಳುಗಳು ಅದನ್ನು ಚೂರುಚೂರಾಗಿ ಕತ್ತರಿಸಿ ತಮ್ಮ ಹೊಟ್ಟೆಗೆ ಸೇರಿಸುತ್ತವೆ. ಗೆದ್ದಲುಗಳ ಹೊಟ್ಟೆಯಲ್ಲಿ ಕೋಟಿಗಳ ಲೆಕ್ಕದಲ್ಲಿರುವ ವಿಶೇಷ ಸೂಕ್ಷ್ಮ ಜೀವಿ ಸಮೂಹ ಮರದ ಪುಡಿಗಳಲ್ಲಿ ಅಡಗಿರುವ ಸೆಲ್ಯುಲೊಸ್ ಅನ್ನು ಜೀರ್ಣಿಸಲು ಅಗತ್ಯವಿರುವ ಕಿಣ್ವಗಳನ್ನು ಸ್ರವಿಸಿ ಮರವನ್ನು ಸಂಪೂರ್ಣವಾಗಿ ಕರಗಿಸುತ್ತವೆ. ಈ ಸೂಕ್ಷ್ಮಜೀವಿಗಳು ಗೆದ್ದಲಿನ ಹೊಟ್ಟೆಯಲ್ಲಿರುವ ಶೇ 95ರಷ್ಟು ಸೆಲ್ಯುಲೋಸನ್ನು ಕೇವಲ 24 ಗಂಟೆಗಳ ಒಳಗೆ ಸರಳವಾಗಿ ಬಳಸುವಂತಹ ಶರ್ಕರಪಿಷ್ಟಾವನ್ನಾಗಿ ಪರಿವರ್ತಿಸುವ ಕ್ಷಮತೆ ಹೊಂದಿವೆ. ಸುಮಾರು 200ಕ್ಕೂ ಹೆಚ್ಚು ಪ್ರಭೇದಗಳನ್ನು ಹೊಂದಿದ ಸೂಕ್ಷ್ಮಜೀವಿ ಸಮೂಹದಲ್ಲಿ ಬ್ಯಾಕ್ಟಿರಿಯಾ ಮತ್ತು ಏಕಕೋಶ ಜೀವಿಗಳು (ಪ್ರೊಟೊಝೋವಾ) ಇರುತ್ತಿದ್ದು ಈ ಸಣ್ಣ ಹೊಟ್ಟೆ ಜಗತ್ತಿನ ಎಲ್ಲಾ ಪ್ರಾಣಿಗಳಲ್ಲಿ ಅತ್ಯಂತ ಉನ್ನತ ಶ್ರೇಣಿಯದಾಗಿದೆ.

ಗೆದ್ದಲಿನ ಗೂಡಿನಲ್ಲಿ ಪ್ರಧಾನವಾಗಿ ಎರಡು ಬಗೆಯ ಗೆದ್ದಲಿನ ಜಾತಿಗಳಿವೆ. ರೆಕ್ಕೆಗಳಿರುವ ಸಂತಾನೋತ್ಪಾದಕರು (ಗಂಡು ಮತ್ತು ಹೆಣ್ಣು ಸಮಸಂಖ್ಯೆಯಲ್ಲಿ) ಮತ್ತು ರೆಕ್ಕೆಗಳಿಲ್ಲದ ಬರಡು ಗೆದ್ದಲುಗಳು (ಕೆಲಸಗಾರ ಮತ್ತು ಸೈನಿಕರು). ಒಟ್ಟಾರೆ ಗೆದ್ದಲಿನ ಗೂಡಿನಲ್ಲಿ ರಾಜ, ರಾಣಿ, ಕೆಲಸಗಾರ ಮತ್ತು ಸೈನಿಕರೆಂದು ನಾಲ್ಕು ಪ್ರಕಾರಗಳನ್ನು ಸ್ಪಷ್ಟವಾಗಿ ನೋಡಬಹುದು. ಇವು ಭಿನ್ನ ಭಿನ್ನ ಕೆಲಸಗಳನ್ನು ನಿರ್ವಹಿಸುತ್ತವೆ. ಗೆದ್ದಲಿನ ಗೂಡಿನಲ್ಲಿ ಸಾಮಾನ್ಯವಾಗಿ ಒಂದೇ ರಾಜ ಮತ್ತು ರಾಣಿಗಳಿದ್ದು ಕೆಲಸಗಾರರ ಸಂಖ್ಯೆ ಶೇ. 80 ರಷ್ಟು ಇರುತ್ತವೆ. ಪ್ರತಿಯೊಂದು ಗೆದ್ದಲು ಹುಳವೂ ಸಹ ಗೂಡಿನಲ್ಲಿ ತನ್ನ ಜವಾಬ್ದಾರಿಯನ್ನು ಅರಿತು ಶಿಸ್ತಿನಿಂದ ತನ್ನ ಕೆಲಸವನ್ನು ನಿರ್ವಹಿಸುತ್ತದೆ. ಅವುಗಳ ಸಮಯ ಪ್ರಜ್ಞೆ ಮತ್ತು ವಹಿಸಿದ ಕಾರ್ಯನಿರ್ವಹಣೆ ಅತ್ಯಂತ ನಿಖರ.

ಸಂತಾನೋತ್ಪಾದನೆ ಸಾಮರ್ಥ್ಯಹೊಂದಿದ ರೆಕ್ಕೆಯುಳ್ಳ ಗೆದ್ದಲುಗಳಲ್ಲಿ ಪ್ರಬಲವಾದ 2 ಸಂಯುಕ್ತ ಕಣ್ಣುಗಳಿಂದ ಕೂಡಿ ಎರಡು ಜೊತೆ ಸರಳ ಕಣ್ಣುಗಳಿರುತ್ತವೆ. ಎರಡು ಜೊತೆ ಸಾಮಾನ್ಯ ನರಗಳುಳ್ಳ ಶರೀರದಿಂದ ಬೇಗ ಕಳಚುವಂತಹ ಪಾರದರ್ಶಕ ರೆಕ್ಕೆಗಳಿವೆ. ಸಂತಾನೋತ್ಪಾದಕ ರೆಕ್ಕೆಹುಳುಗಳಾಗಿ ವರ್ಷಕ್ಕೊಂದಾವರ್ತಿ ಮಳೆಗಾಲದ ಮುಸ್ಸಂಜೆಯಲ್ಲಿ ಗೂಡುಗಳಿಂದ ಹಿಂಡು ಹಿಂಡಾಗಿ ಹೊರಬಂದು ಬೆಳಕಿನಲ್ಲಿ ಹಾರಾಡಿ ಗಂಡು ಮತ್ತು ಹೆಣ್ಣು ಜೊತೆಗೂಡಿ ನಂತರ ರೆಕ್ಕೆಗಳನ್ನು ಕಳಚಿ ಸೂಕ್ತ ಸ್ಥಳವನ್ನು ಗುರ್ತಿಸಿ ಭೂಮಿಯಲ್ಲಿ ಸಣ್ಣಗೂಡನ್ನು ಕಟ್ಟಲು ಪ್ರಾರಂಭಿಸುತ್ತವೆ. ಇವುಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾರಾಡುವುದರಿಂದ ಕಪ್ಪೆ, ಓತಿಕ್ಯಾತ ಮತ್ತು ಪಕ್ಷಿಗಳು ಇತ್ಯಾದಿಗಳೆಲ್ಲ ರೆಕ್ಕೆಹುಳುಗಳು ಹಾರಾಡಿ ಕೆಳಗೆ ಬಿದ್ದ ತಕ್ಷಣ ಹಿಡಿದು ಮುಕ್ಕುತ್ತವೆ.

ಗಂಡು ಹೆಣ್ಣುಗಳು ಜೊತೆಗೂಡಿ ಸಣ್ಣ ಗೂಡನ್ನು ತೋಡಿ ನಂತರ ಗಂಡು ಹೆಣ್ಣಿನೊಡನೆ ಸಂಯೋಗ ನಡೆಸಿದ ಕೆಲವು ದಿನಗಳಲ್ಲಿ ಮೊಟ್ಟೆ ಇಡಲು ಪ್ರಾರಂಭಿಸುತ್ತವೆ. ರಾಣಿ ಮೊದ ಮೊದಲು ಕೇವಲ 20-25 ಮೊಟ್ಟೆಗಳನ್ನಿಡುತ್ತದೆ. ಈ ಮೊಟ್ಟೆಗಳಿಂದ ಮೊದಲ ಕುಟುಂಬದ ಬೆಳೆವಣಿಗೆಗಾಗಿ ಬರಡು ಗೆದ್ದಲು ಮಾತ್ರ ಹುಟ್ಟುತ್ತವೆ. ನಂತರ ರಾಣಿ ಗರ್ಭ ಧರಿಸಿ, ಅಂಡಾಶಯ ಬೆಳೆದು ಹೊಟ್ಟೆ ಅಸಂಖ್ಯಾತ ಮೊಟ್ಟೆಗಳಿಂದ ತುಂಬಿ ಜೀವಮಾನವೆಲ್ಲ ಮೊಟ್ಟೆ ಇಡುವುದೇ ಇದರ ಕೆಲಸವಾಗಿ ಗೆದ್ದಲನ್ನು ಉತ್ಪಾದಿಸುವ ಯಂತ್ರವಾಗುತ್ತದೆ. ರಾಣಿಗೆದ್ದಲು ಸುಮಾರು 9-10 ಸೆಂ.ಮೀ. ಉದ್ದವಿರುತ್ತದೆ ಮತ್ತು ಅದರ ತೂಕ ೧೦-೧೫ ಗ್ರಾಂ. ಇದರ ಶರೀರದ ಭಾರದ ಕಾರಣದಿಂದ ಇದಕ್ಕೆ ಚಲಿಸಲಾಗುವುದಿಲ್ಲ. ಒಂದು ದಿವಸಕ್ಕೆ ರಾಣಿ ಸುಮಾರು 15,000-20,000 ಮೊಟ್ಟೆಗಳನ್ನಿಡುತ್ತದೆ. ಕೆಲವೊಂದು ಜಾತಿಯ ರಾಣಿ ಗೆದ್ದಲುಗಳು ಪ್ರತಿ ದಿನ ೩೦,೦೦೦ ಮೊಟ್ಟೆಗಳನ್ನು ನಿರಂತರವಾಗಿ ೧೫ ವರ್ಷಗಳ ಕಾಲ ಇಡುತ್ತವೆ. ಅಂದರೆ ಅದರ ಜೀವನಮಾನ ಪರ್ಯಂತ ಅದು ಸುಮಾರು ೧೬.೫ ಕೋಟಿ ಮೊಟ್ಟೆಗಳನ್ನು ಇಡುತ್ತದೆ. ರಾಣಿಗೆದ್ದಲನ್ನು “ತಾಯಿ ಈಚಲು” ಅಥವಾ “ತುಪ್ಪದ ಹುಳು”ಎಂದು ಕರೆಯುತ್ತಾರೆ.

ರಾಣಿ ಹುಳಕ್ಕೆ ಕೆಲಸಗಾರ ಹುಳಗಳೇ ಆಹಾರ ತಿನ್ನಿಸುವುದು, ಅದರ ಆರೈಕೆ ಮಾಡುವುದು, ಮನೆ ಸ್ವಚ್ಚ ಗೊಳಿಸುವುದು ಇತ್ಯಾದ ಮಾಡುತ್ತವೆ. ಸೈನಿಕ ಗೆದ್ದಲುಗಳು ಸದಾ ರಾಣಿಗೆ ಕಾವಲು ಕಾಯುತ್ತಿದ್ದು ಅದಕ್ಕೆ ರಕ್ಷಣೆ ನೀಡುತ್ತವೆ. ರಾಜ ಮತ್ತು ರಾಣಿಗಳಿಗಾಗಿ ಗಟ್ಟಿ ಜೋಡಣೆಯಿಂದ ನಿರ್ಮಿತವಾಗಿರುವ ವಿಶೇಷ ಕೊಠಡಿಯೇ ಅರಮನೆಯಾಗಿ ವಸಾಹತುವಿನ ಬೆಳೆವಣಿಗಾಗಿ ರಾಣಿಯು ಸ್ರವಿಸುವ ಮೋಹಕ ದ್ರವ ಅಥವಾ ಫೆರೋಮೋನ್ ಮೂಲಕ ಎಲ್ಲಾ ಹುಳಗಳ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಭಾರತದಲ್ಲಿರುವ ಹುತ್ತ ಕಟ್ಟುವ ಒಡೊಂಟೊ ಟರ್ಮಿಸ್ ಗೆದ್ದಲಿನ ಜಾತಿಗಳು ಸುಮಾರು 25 ರಿಂದ 30 ವರ್ಷಗಳು ಬದುಕಿರುತ್ತವೆಂದು ತಿಳಿದುಬಂದಿದೆ. ಇವುಗಳನ್ನು ಪೌಷ್ಟಿಕವೆಂದು ಕೆಲವರು ತಿನ್ನುತ್ತಾರೆ.

ಇದನ್ನೂ ಓದಿ : ಚೀನಾ ವಿಜ್ಞಾನ-ತಂತ್ರಜ್ಞಾನದ ಸೂಪರ್ ಪವರ್ ಆಗಿ ಬಿಟ್ಟಿದೆಯೇ?

ಭೂಮಿಯಲ್ಲಿ ಪ್ರತಿವರ್ಷ 20 ಸಾವಿರ ಕೋಟಿ ಟನ್‌ಗಳಷ್ಟು ಆಹಾರಕ್ಕೆ ಬಳಸಲಾಗದ ಸೆಲ್ಯುಲೋಸ್ ಇರುವ ಜೀವರಾಶಿಯ ಉತ್ಪನ್ನವಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದನ್ನು ಇಂಧನ ಮೂಲವಾಗಿ ಬಳಸಲು ಸೆಲ್ಯುಲೋಸನ್ನು ಜೀರ್ಣಿಸುವುದು ಅತಿ ಅವಶ್ಯಕ. ಹಾಗಾಗಿ ಗೆದ್ದಲು ಹುಳುಗಳ ಹೊಟ್ಟೆಯಿಂದ ಸೂಕ್ಷ್ಮ ಜೀವಿಗಳನ್ನು ಹೊರತೆಗೆದು ಪ್ರಯೋಗಶಾಲೆಯಲ್ಲಿ ಸೂಕ್ತವಾದ ಪೋಷಕಾಂಶಗಳನ್ನು ನೀಡಿ ಬೆಳೆಸಿ ನಂತರ ದೊಡ್ಡ ಕಾರ್ಖಾನೆಗಳಲ್ಲಿ ಅವುಗಳು ಸ್ರವಿಸುವ ಕಿಣ್ವಗಳ ಉತ್ಪಾದಿಸುವ ಸಂಶೋಧನೆ ಜೈವಿಕ ತಂತ್ರಜ್ಞಾನದ ಪ್ರಯೋಗಶಾಲೆಗಳಲ್ಲಿ ನಡೆಯುತ್ತಿದೆ.

ಕೆಲಸಗಾರ ಗೆದ್ದಲುಗಳು ವೃಷಣ ಮತ್ತು ಅಂಡಾಶಯಗಳಿರದೆ ಬಂಜೆಯಾಗಿರುತ್ತವೆ. ವಸಾಹತುವಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಇವುಗಳಿಗೆ ಸದಾ ಕೆಲಸದೊಂದೇ ಚಿಂತೆ. ಸೈನಿಕಗೆ ದ್ದಲು ಗಾತ್ರದಲ್ಲಿ ಕೆಲಸಗಾರರಿಗೆ ಹೋಲಿಕೆ ಇದ್ದರೂ ತಲೆ ದಪ್ಪ, ಬಲಿಷ್ಠ ದವಡೆ ಹಲ್ಲುಗಳು ದೊಡ್ಡದಾಗಿ ಮೊನಚಾಗಿವೆ. ಹುತ್ತಕ್ಕೆ ಯಾವುದಾದರೂ ಶತ್ರುಕೀಟಗಳು ಪ್ರವೇಶಿಸಿದರೆ ತಕ್ಷಣ ಕುಡಿಮೀಸೆ ಮತ್ತು ತಲೆಯನ್ನು ಮೇಲಕ್ಕೆತ್ತಿ ಭಯಾನಕ ಭಂಗಿಯನ್ನು ತಾಳಿ ತಮ್ಮ ದವಡೆ ಹಲ್ಲುಗಳಿಂದ ಕಚ್ಚಿ ಹಿಡಿಯುತ್ತವೆ ಮತ್ತು ಒಂದು ಬಗೆಯ ತೀಕ್ಷ್ಣವಾದ ದ್ರವವನ್ನು ಹೊರಸೂಸಿ ಶತೃಗಳನ್ನು ಹಿಮ್ಮೆಟ್ಟಿಸುತ್ತವೆ.

ಸೈನಿಕ ಗೆದ್ದಲಿಗೆ ತಮ್ಮ ವಸಾಹತುವಿನ ಕಾವಲಿನದೊಂದೇ ಚಿಂತೆ. ಕೆಲಸಗಾರ ಗೆದ್ದಲು ಅತ್ಯಂತ ಶಿಸ್ತು ಮತ್ತು ಜವಾಬ್ದಾರಿಯಿಂದ ವಸಾಹತುವಿನ ಏಳಿಗೆಗಾಗಿ ದುಡಿಯುತ್ತವೆ. ಇವು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅನೇಕ ಕೆಲಸಗಳನ್ನು ಮೊಟ್ಟೆ ಮರಿಗಳನ್ನು ವಿಶೇಷವಾದ ಗೂಡುಗಳಲ್ಲಿಟ್ಟು ಸಾಕುವುದು ರಾಜ, ರಾಣಿ ಮತ್ತು ಮರಿಗಳಿಗೆ ಆಹಾರವನ್ನು ತಿನ್ನಿಸುವುದು. ಗೂಡುಗಳ ನಿರ್ಮಾಣ, ರಿಪೇರಿ ಮತ್ತು ಸ್ವಚ್ಛತೆ ಗೂಡುಗಳಲ್ಲಿ ಸಹಜೀವಿ ಶಿಲೀಂದ್ರ ತೋಟಗಳನ್ನು ಬೆಳೆಸುವುದು, ಗೂಡಿನಿಂದ ಸುರಂಗಗಳನ್ನು ತೋಡಿ ಆಹಾರವನ್ನು ಗುರ್ತಿಸಿ ನಂತರ ಸಾಗಿಸುವುದು ಇತ್ಯಾದಿ ಇವುಗಳ ಕೆಲಸ. ಸಾಮಾನ್ಯವಾಗಿ ಆಹಾರವನ್ನು ಸತತವಾಗಿ ಸಾಗಿಸುವ ಸಲುವಾಗಿ ತೆಳುವಾದ ಮಣ್ಣಿನ ಪೊರೆಯನ್ನು ಕಟ್ಟಿ ನಂತರ ಸಾಗಿಸುತ್ತವೆ. ಮಳೆಗಾಲ ಕಳೆದ ನಂತರ ಮರಗಳ ಮೇಲೆ, ಹುಲ್ಲಿನ ಮೇಲೆ, ಗಿಡಗಳಲ್ಲಿ, ತರಗೆಲೆ, ಸಗಣಿ ಮುಂತಾದ ಸಾವಯವ ವಸ್ತುಗಳ ಮೇಲೆ ಗೆದ್ದಲಿನಿಂದ ಕೂಡಿರುವ ಮಣ್ಣಿನ ಪೊರೆಯನ್ನು ನೋಡಬಹುದು.

 

ಗೂಡುಗಳನ್ನು ಕಟ್ಟುವಾಗ, ರಿಪೇರಿ ಮಾಡುವಾಗ ಆಹಾರವನ್ನು ಹುಡುಕಿ ಸಾಗಿಸುವಾಗ, ರೆಕ್ಕೆಹುಳು ಗೂಡಿನಿಂದ ಹೊರಗೆ ಬರುವಾಗ ಒಂದು ನಿರ್ದಿಷ್ಟ ಅಂತರದ ದೂರದಲ್ಲಿ ಸೈನಿಕರಂತೆ ಕಾವಲಿದ್ದು ಗೆದ್ದಲನ್ನು ಶತ್ರುಗಳಿಂದ ರಕ್ಷಿಸುತ್ತವೆ. ಗೂಡಿನ ಪ್ರತಿಭಾಗದಲ್ಲಿ ನಿಂತು ಪಹರೆ ತಿರುಗುತ್ತಾ ಶತ್ರುಗಳು ಗೂಡಿನೊಳಗೆ ನುಗ್ಗದಂತೆ ನಮ್ಮ ಭಾರತೀಯ ಸೇನೆಯ ತರ ತಡೆಯುತ್ತವೆ.

ಅರಣ್ಯಪ್ರದೇಶಗಳಲ್ಲಿ ಗೆದ್ದಲುಗಳು ಬೃಹದಾಕಾರವಾಗಿ ಹುತ್ತಗಳನ್ನು ನಿರ್ಮಿಸುತ್ತವೆ. ಆಫ್ರಿಕಾ, ಆಸ್ಟ್ರೇಲಿಯ, ಉತ್ತರ ಅಮೆರಿಕಾ, ಭಾರತ ಪ್ರಾಂತ್ಯಗಳಲ್ಲಿ ಪ್ರವಾಸಿಗಳನ್ನು ವಿಶೇಷವಾಗಿ ಆಕರ್ಷಿಸುವಂತಹ ಹುತ್ತಗಳನ್ನು ಕಟ್ಟುತ್ತವೆ. ಗೂಡುಗಳ ಒಳಗೆ ಮತ್ತು ಹೊರಗೆ ಅತ್ಯುನ್ನತ ಮಟ್ಟದಲ್ಲಿ ಅವುಗಳದೇ ಆದ “ಮೃತ್ತಿಕಾ ಕಲೆ”ಯನ್ನು ಅಳವಡಿಸಿ ಹುತ್ತಗಳನ್ನು ನಿರ್ಮಿಸುತ್ತವೆ.ಈ ಹುತ್ತದಲ್ಲಿ ಸಕಲ ಸೌಲಭ್ಯಗಳೂ ಸಹ ಇರುತ್ತವೆ ಮತ್ತು ರಾಣಿಗಾಗಿ ವಿಶೇಷ ಕೋಣೆ ಇರುತ್ತದೆ. ಈ ಹುತ್ತದ ಮಣ್ಣು ಅತ್ಯಂತ ಮ್ರದುವಾಗಿಯೂ ಮತ್ತು ಸಾರಯುಕ್ತವಾಗಿಯೂ ಇರುತ್ತದೆ. ಇದರಿಂದ ಭೂಮಿ ಸದಾ ಜಾಳಾಗಿ ಗಾಳಿ ಆಡುತ್ತಾ ಇರುತ್ತದೆ.

ಗೆದ್ದಲುಗಳು ಹೇಗೆ ಮಾನವ ತನಗಾಗಿ ಮರಕಡಿದು ಮನೆ ನಿರ್ಮಿಸಿಕೊಂಡಾಗ ಅದನ್ನು ತಿಂದು ಹಾಳುಗೆಡವುತ್ತವೋ ಅಷ್ಟೆ ಪ್ರಮಾಣದಲ್ಲಿ ಪ್ರಕ್ರತಿಗೆ ಸಾಕಷ್ಟು ಉಪಕಾರ ಮಾಡುತ್ತವೆ. ಅಂದ ಹಾಗೆ ಅವುಗಳಿಗೆ ನಮ್ಮ ಹಾಗೆ ಈ ಭೂಮಿಯ ಮೇಲೆ ಇರುವ ಹಕ್ಕು ಇದ್ದೇ ಇದೆ.

ಈ ವಿಡಿಯೋ ನೋಡಿ : ಕೀಟಗಳನ್ನು ತಿನ್ನುವ ಸಸ್ಯಗಳು ಯಾವುವು ಎಂದು ನಿಮಗೆ ತಿಳಿದಿದೆಯೇ?

 

 

ಡಾ: ಎನ್.ಬಿ.ಶ್ರೀಧರ

ಲೇಖಕರ ಬಗ್ಗೆ 

ಡಾ: ಎನ್.ಬಿ.ಶ್ರೀಧರರವರು ಖ್ಯಾತ ಪಶುವೈದಕೀಯ ವಿಜ್ಞಾನಿ, ಸಾಹಿತಿ, ಚಿಂತಕರಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದಾರೆ. ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 

Donate Janashakthi Media

Leave a Reply

Your email address will not be published. Required fields are marked *