ಚೀನಾ ವಿಜ್ಞಾನ-ತಂತ್ರಜ್ಞಾನದ ಸೂಪರ್ ಪವರ್ ಆಗಿ ಬಿಟ್ಟಿದೆಯೇ?

ವಸಂತರಾಜ ಎನ್.ಕೆ.

ಕೃತಕ ಬುದ್ಧಿಮತ್ತೆ, 5ಜಿ, ಸೆಮಿಕಂಡಕ್ಟರ್ ಮುಂತಾದ ವಿಜ್ಞಾನ-ತಂತ್ರಜ್ಞಾನದ ಮುಂಚೂಣಿ ಕ್ಷೇತ್ರಗಳಲ್ಲಿ ಚೀನಾ ಸ್ವಾವಲಂಬನೆ ಮತ್ತು ಉತ್ತಮ ಮುನ್ನಡೆ ಸಾಧಿಸಿದೆ ಎಂಬುದು ಸರ್ವವಿದಿತ. ಚೀನಾದ  5ಜಿ, ಸೆಮಿಕಂಡಕ್ಟರ್  ಚಿಪ್ ಕೈಗಾರಿಕೆಗೆ ಪಾಶ್ಚಿಮಾತ್ಯ ದಿಗ್ಬಂಧನಗಳು, ಬಲೂನು ಬೆದರಿಕೆ ಪ್ರಕರಣ- ಇವುಗಳಲ್ಲಿ ವ್ಯಕ್ತವಾದ ಆತಂಕಕ್ಕೆ ಇದೇ ಕಾರಣ.  ಆದರೆ ಇಂತಹ 44 ಕ್ಷೇತ್ರಗಳಲ್ಲಿ ಚೀನಾ 37ರಲ್ಲಿ ಮೊದಲ ಸ್ಥಾನದಲ್ಲಿದೆ ಎಂಬ ಆಸ್ಟ್ರೇಲಿಯಾದ ಅಧ‍್ಯಯನ ಸಂಸ್ಥೆ ASPI  ಇತ್ತೀಚೆಗೆ ಪ್ರಕಟಿಸಿರುವ ‘Critical Technology Tracker’ ಎಂಬ ವರದಿ ಅಚ್ಚರಿ ತಂದಿದೆ.  ಈಗಾಗಲೇ ಪಾಶ್ಚಿಮಾತ್ಯ ಆಳುವ ವಲಯಗಳಲ್ಲಿ ಗಾಬರಿಯನ್ನೂ ತಂದಿದೆ. ಈ ವರದಿಯ ಪ್ರಕಾರ ಯು.ಎಸ್, ಯು.ಕೆ ಬಿಟ್ಟರೆ ಇತರ ಜಿ-7 ದೇಶಗಳು ಈ ಕ್ಷೇತ್ರಗಳಲ್ಲಿ ಬಹಳ ಹಿಂದೆ ಬಿದ್ದಿವೆ, ಭಾರತ ಯುಕೆಯ ಜತೆಗೆ ಮೂರನೆಯ ಸ್ಥಾನದಲ್ಲಿದೆ ಎಂಬುದು ವರದಿಯ ಗಮನಾರ್ಹ ಅಂಶ. ಈ ವರದಿಯನ್ನು ನಂಬಬಹುದೇ? ಈ ವರದಿಯ ದತ್ತಾಂಶಗಳು, ವಿಶ್ಲೇಷಣಾ ವಿಧಾನ ಏನು?  ಭಾರತದ ವಿಜ್ಞಾನ-ತಂತ್ರಜ್ಞಾನ ನೀತಿ ಯೋಜನೆ ಈ ವರದಿಯಿಂದ ಏನು ಕಲಿಯಬಹುದು? ವರದಿಯ ಮುಖ್ಯಾಂಶಗಳನ್ನು ತಿಳಿಸುತ್ತಲೇ ಈ ಪ್ರಶ್ನೆಗಳನ್ನು ಉತ್ತರಿಸುವ ಪ್ರಯತ್ನ ಇಲ್ಲಿದೆ.

ಹೌದು.  ಜಗತ್ತಿನ ಭವಿಷ್ಯ ನಿರ್ಧರಿಸುವಲ್ಲಿ  ಮಹತ್ವದ ಮತ್ತು ನಿರ್ಣಾಯಕ ಪಾತ್ರ ವಹಿಸುವ ವಿಜ್ಞಾನ-ತಂತ್ರಜ್ಞಾನದ 44 (Critical Technology) ಕ್ಷೇತ್ರಗಳಲ್ಲಿ 37ರಲ್ಲಿ ಚೀನಾ ಮುಂದಿದೆ, ಎನ್ನುತ್ತದೆ ಆಸ್ಟ್ರೇಲಿಯಾದ ವ್ಯೂಹಾತ್ಮಕ ನೀತಿ ಅಧ‍್ಯಯನ ಸಂಸ್ಥೆ (Australian Strategic Policy Institute – ASPI)  ಇತ್ತೀಚೆಗೆ ಪ್ರಕಟಿಸಿರುವ ‘Critical Technology Tracker’ ಎಂಬ ವಿಶ್ಲೇಷಣಾತ್ಮಕ ಅಧ್ಯಯನ ವರದಿ. ಯು.ಎಸ್ 7 ಕ್ಷೇತ್ರಗಳಲ್ಲಿ ಮೊದಲಿನ ಸ್ಥಾನದಲ್ಲಿ ಮತ್ತು ಹೆಚ್ಚಿನ ಇತರ ಕ್ಷೇತ್ರಗಳಲ್ಲಿ ಎರಡನೆಯ ಸ್ಥಾನದಲ್ಲಿದೆ. ಈ ವರದಿಯ ಪ್ರಕಾರ ಒಂದು ದಶಕದ ಹಿಂದೆ ಈ ಹೆಚ್ಚಿನ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದ ಯು.ಎಸ್ ಈಗ ದೂರದ ಎರಡನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಚೀನಾ 5ಜಿ, ಸೆಮಿಕಂಡಕ್ಟರ್ ಚಿಪ್, ಕೃತಕ ಬುದ್ಧಿಮತ್ತೆ ಇತ್ಯಾದಿ ಕ್ಷೇತ್ರಗಳಲ್ಲಿ ಮುನ್ನಡೆ ಬಗ್ಗೆ ಪಾಶ್ಚಿಮಾತ್ಯ ದೇಶಗಳಿಗೆ ಅರಿವಿದ್ದು ಅದರಿಂದಾಗಿಯೇ ಈ ಕೈಗಾರಿಕೆಗೆ ಯು.ಎಸ್ ನಾಯಕತ್ವದಲ್ಲಿ ಪಾಶ್ಚಿಮಾತ್ಯ ದೇಶಗಳು ದಿಗ್ಬಂಧನಗಳನ್ನು ಹಾಕಿದ್ದವು. ಬಲೂನಿನ ಬೆದರಿಕೆ ಬಗ್ಗೆ ಬೊಬ್ಬೆ ಹಾಕಿದ್ದವು. ಆದರೆ ಚೀನಾದ ಮುನ್ನಡೆ ಇಷ್ಟು ಸಮಗ್ರವಾಗಿದೆ ತೀವ್ರವಾಗಿದೆ ಎಂಬುದು ಬಹುಶಃ ಈ ದೇಶಗಳಿಗೂ ಅಚ್ಚರಿ ತಂದಿರಬೇಕು.

ಇದನ್ನು ಓದಿ: ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸಶೋಧ ನೀತಿ (STIP 2020) ಕೈಗಾರಿಕಾ ಕ್ರಾಂತಿಯ ನಾಲ್ಕನೇ ಅಲೆಯಲ್ಲಿ ಸಹ ಭಾರತ ಹಿಂದೆ ಬೀಳುತ್ತಾ?

ಭಾರತ ಮತ್ತು ಯು.ಕೆ ಮೂರನೇಯ ಸ್ಥಾನಕ್ಕೆ ಪೈಪೋಟಿಯಲ್ಲಿವೆ ಎಂಬುದು ಈ ವರದಿ ಹೊರಗೆಡಹುವ ಇನ್ನೊಂದು ಅಚ್ಚರಿಯ ಸಂಗತಿ. ಈ 44 ನಿರ್ಣಾಯಕ ಕ್ಷೇತ್ರಗಳಲ್ಲಿ 29ರಲ್ಲಿ ಭಾರತ ಮತ್ತು ಯು.ಕೆ ಅತ‍್ಯಂತ ಅಭಿವೃದ್ಧ 5 (ಟಾಪ್-5) ದೇಶಗಳ ಪಟ್ಟಿಯಲ್ಲಿದೆ. ದಕ್ಷಿಣ ಕೊರಿಯಾ ಮತ್ತು ಜರ್ಮನಿ ಅನುಕ್ರಮವಾಗಿ 20 ಮತ್ತು 17 ನಿರ್ಣಾಯಕ ಕ್ಷೇತ್ರಗಳಲ್ಲಿ ಟಾಪ್-5 ಪಟ್ಟಿಯಲ್ಲಿವೆ  ಆಸ್ಟ್ರೇಲಿಯಾ 9, ಇಟಲಿ 7, ಇರಾನ್ 6, ಜಪಾನ್ 4, ಕೆನಡಾ 4 ಕ್ಷೇತ್ರಗಳ ಟಾಪ್-5 ದೇಶಗಳ ಪಟ್ಟಿಯಲ್ಲಿವೆ. ಈ ಮಾಹಿತಿಯಿಂದ ವಿಜ್ಞಾನ-ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಮೇಲುಗೈ ಗೆ ಪೈಪೋಟಿಯಲ್ಲಿ ‘ಪಾಶ್ಚಿಮಾತ್ಯ’ (ಜಿ-7 ಹೇಳುವುದು ಹೆಚ್ಚು ಸರಿಯಾದೀತು) ದೇಶಗಳು ತಮ್ಮ ಏಕಸ್ವಾಮ್ಯ, ಯಜಮಾನಿಕೆಗಳನ್ನು ಕಳೆದುಕೊಂಡಿವೆ ಎಂಬಂತೆ ಕಾಣುತ್ತಿದೆ.

 

ವರದಿಯ ದತ್ತಾಂಶ, ವಿಧಾನ

ಈ ವರದಿಯನ್ನು ನಂಬಬಹುದೇ? ಇದು ಚೀನಾದ ಪ್ರಚಾರದ ಭಾಗವೇ? ಅಥವಾ ಪೆಡಂಭೂತ ಚೀನಾದ ಕುರಿತು ಅತಿಶಯವಾದ ಬೆದರಿಕೆ ಹುಟ್ಟಿಸುವ ಪಾಶ್ಚಿಮಾತ್ಯ ಪ್ರಚಾರವೇ? ನಿರ್ಣಾಯಕ ಪಾತ್ರ ವಹಿಸುವ ವಿಜ್ಞಾನ-ತಂತ್ರಜ್ಞಾನದ ಕ್ಷೇತ್ರಗಳ ಪ್ರಗತಿ ಸಾಮಾನ್ಯವಾಗಿ ‘ರಾಷ್ಟ್ರೀಯ ಗೋಪ್ಯ’ ಸಂಗತಿ, ಈ ಕುರಿತು ನಂಬಲರ್ಹ ಮಾಹಿತಿ ಸಂಗ್ರಹಿಸಲು ಸಾಧ‍್ಯವೇ? ಈ ಮೇಲಿನ ಸುದ್ದಿ ಕೇಳಿದವರಲ್ಲಿ ಏಳುವ ಪ್ರಶ್ನೆಗಳು ಇವು. ಇದಕ್ಕಾಗಿ ‘Critical Technology Tracker’ ವರದಿ ತಯಾರಿಸಲು ASPI ಬಳಸಿರುವ ಮಾಹಿತಿ, ಅದರ ಮೂಲ, ವಿಶ್ಲೇಷಣಾ ವಿಧಾನವನ್ನು ಪರಿಶೀಲಿಸಬೇಕಾಗುತ್ತದೆ.

ಇದನ್ನು ಓದಿ: ವಿಶ್ವದೆಲ್ಲೆಡೆ ನಿರ್ದಯ ಲೂಟಿಗೆ ವಿಧ-ವಿಧ ಪರಿಕಲ್ಪನೆ

ಈ ವರದಿ ನಿಗದಿಪಡಿಸಿದ ನಿರ್ದಿಷ್ಟ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕಳೆದ 5 ವರ್ಷಗಳಲ್ಲಿ ‘ಅತ್ಯಂತ ಪರಿಣಾಮಕಾರಿ’ ಸಂಶೋಧನಾ (high-impact research) ಪ್ರಬಂಧಗಳಲ್ಲಿ ಪ್ರತಿ ದೇಶದ ಪಾಲನ್ನು ಪ್ರಮುಖ ದತ್ತಾಂಶವಾಗಿ ಪರಿಗಣಿಸುತ್ತದೆ.  ಒಂದು ಕ್ಷೇತ್ರದ ‘ಅತ್ಯಂತ ಪರಿಣಾಮಕಾರಿ’ ಸಂಶೋಧನಾ ಪ್ರಬಂಧಗಳನ್ನು ಗುರುತಿಸುವುದು ಹೇಗೆ? ಆ ಕ್ಷೇತ್ರದ ಪ್ರಬಂಧಗಳಲ್ಲಿ ಅತ್ಯಂತ ಹೆಚ್ಚು ಉಲ್ಲೇಖಗಳನ್ನು (most highly cited) ಪಡೆದ ಟಾಪ್-10% ಸಂಶೋಧನಾ ಪ್ರಬಂಧಗಳನ್ನು  ‘ಅತ್ಯಂತ ಪರಿಣಾಮಕಾರಿ’ ಎಂದು ಗುರುತಿಸಲಾಗುತ್ತದೆ. ಈ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ ವಿಜ್ಞಾನಿ-ತಂತ್ರಜ್ಞಾನಿಗಳು, ಅವರು ಕೆಲಸ ಮಾಡುವ ಸಂಶೋದನಾ ಸಂಸ್ಥೆಗಳು, ದೇಶಗಳ ಕುರಿತು ಮಾಹಿತಿ ಇತರ ದತ್ತಾಂಶಗಳು. ಈ ವಿಜ್ಞಾನಿ-ತಂತ್ರಜ್ಞಾನಿಗಳು ಶಿಕ್ಷಣ ಪಡೆದ ಸಂಸ್ಥೆಗಳು, ಪರಿಣತಿಯ ಅವಧಿ, ಸಂಶೋಧನೆಯಲ್ಲಿ ತೊಡಗಿಕೊಂಡ ಇತರ ಸಂಸ್ಥೆಗಳು ಇತ್ಯಾದಿ ಮಾಹಿತಿಗಳನ್ನೂ ಪರಿಶೀಲಿಸುತ್ತದೆ. ಇದೇ ರೀತಿ ಸಂಶೋದನಾ ಸಂಸ್ಥೆಗಳ ಕುರಿತ ಮಾಹಿತಿಗಳನ್ನು ಪರಿಶೀಲಿಸುತ್ತದೆ. ಆಯಾ ಕ್ಷೇತ್ರದಲ್ಲಿ ಒಂದು ದೇಶದ ಸ್ಥಳೀಯ/ವಿದೇಶಿ ವಿಜ್ಞಾನಿಗಳ ಪ್ರಮಾಣಗಳನ್ನೂ ಪರಿಶೀಲಿಸಿ ಯಾವ ದೇಶದಿಂದ ಯಾವ ದೇಶಕ್ಕೆ  ಪ್ರತಿಭಾ ಪಲಾಯನವಾಗುತ್ತಿದೆ ಎಂಬುದನ್ನೂ ಪರಿಶೀಲಿಸುತ್ತದೆ. ಆಯಾ ದೇಶ ವಿಜ್ಞಾನಿಗಳಿಗೆ, ಸಂಶೋಧನಾ ಸಂಸ್ಥೆಗಳಿಗೆ, ಶಿಕ್ಷಣ-ಸಂಶೋಧನೆಗಳ ನಡುವಿನ ಕೊಂಡಿ ಇತ್ಯಾದಿಗಳ ಕುರಿತು ಆಯಾ ದೇಶದ ನೀತಿ ಮತ್ತು ದೀರ್ಘಕಾಲೀನ ಯೋಜನೆ/ವ್ಯೂಹಗಳನ್ನು ಸಹ ವಿಶ್ಲೇಷಣಾ ವಿಧಾನ ಪರಿಶೀಲಿಸುತ್ತದೆ.

ನಿರ್ಣಾಯಕ ಕ್ಷೇತ್ರಗಳು ಯಾವುವು?

ನಿರ್ಣಾಯಕ ವಿಜ್ಞಾನ-ತಂತ್ರಜ್ಞಾನದ ಕ್ಷೇತ್ರಗಳನ್ನು ಹೇಗೆ ಗುರುತಿಸಲಾಯಿತು? ಇಂದು ಮನುಕುಲದ ಮುಂದಿರುವ ಬಿಕ್ಕಟ್ಟುಗಳನ್ನು, ಸವಾಲುಗಳನ್ನು ಪರಿಹರಿಸಬಲ್ಲ, ಮತ್ತು ಈ ವರೆಗಿನ ಪ್ರಗತಿಗಯನ್ನು ಕಾಯ್ದುಕೊಂಡು ತೀವ್ರ ಮುನ್ನಡೆಗಳನ್ನು  ಕೊಡಬಲ್ಲ ಮುಂಚೂಣಿ ಕ್ಷೇತ್ರಗಳನ್ನು ನಿರ್ಣಾಯಕ ಕ್ಷೇತ್ರಗಳೆಂದು ಗುರುತಿಸಲಾಯಿತು. ಉನ್ನತ ಮಟ್ಟದ ಹೊಸ ಸಾಮಗ್ರಿಗಳು ಮತ್ತು ಸಾಮೂಹಿಕ ಉತ್ಪಾದನಾ ವಲಯದಲ್ಲಿ 12 ಕ್ಷೇತ್ರಗಳು (ಉದಾ: ನಾನೋಸಾಮಗ್ರಿಗಳು ಮತ್ತು ಅವುಗಳ ಉತ್ಪಾದನೆ, ಸೂಪರ್ ಕಂಡಕ್ಟರ್ ಗಳು, 3-ಡಿ ಪ್ರಿಂಟಿಂಗ್), ಕೃತಕ ಬುದ್ಧಿಮತ್ತೆ, ಕಂಪ್ಯೂಟರ್ ಮತ್ತು ಕಮ್ಯುನಿಕೇಶನ್ಸ್ ವಲಯದ 10  ಕ್ಷೇತ್ರಗಳು (ಉದಾ:  ಯಂತ್ರದ ಕಲಿಕೆ, ಸೈಬರ್ ಭದ್ರತೆ, ಕೃತಕ ಬುದ್ಧಿಮತ್ತೆ ವಿಧಾನಗಳು ಮತ್ತು ವೇಗವರ್ಧಕ ಯಂತ್ರಾಂಶ), ಶಕ್ತಿ ಮತ್ತು ಪರಿಸರ ವಲಯದ 8 ಕ್ಷೇತ್ರಗಳು (ಉದಾ: ಬ್ಯಾಟರಿಗಳು, ಜೈವಿಕ ಇಂಧನಗಳು, ಪರಮಾಣು ಶಕ್ತಿ) ಕ್ವಾಂಟಂ ತಂತ್ರಜ್ಞಾನ ವಲಯದ 4 ಕ್ಷೇತ್ರಗಳು (ಉದಾ: ಕ್ವಾಂಟಂ ಕಂಪ್ಯುಟರುಗಳು, ಇಂದ್ರಿಯಗಳು), ಜೈವಿಕ ತಂತ್ರಜ್ಞಾನ ವಲಯದ 3 ಕ್ಷೇತ್ರಗಳು, ರಕ್ಷಣೆ, ಬಾಹ್ಯಾಕಾಶ, ರೊಬೊಟಿಕ್ಸ್, ಸಾರಿಗೆ ವಲಯದ 6 ಕ್ಷೇತ್ರಗಳು ( ಉದಾ: ಡ್ರೋನ್, ಹೈಪರ್ ಸೋನಿಕ್ ಸೇರಿದಂತೆ ಉನ್ನತ ವಿಮಾನ ಇಂಜಿನುಗಳು) – ಇವುಗಳನ್ನು ನಿರ್ಣಾಯಕ ಕ್ಷೇತ್ರಗಳೆಂದು ಗುರುತಿಸಲಾಗಿದೆ.

ಉನ್ನತ ಮಟ್ಟದ ಹೊಸ ಸಾಮಗ್ರಿಗಳು ಮತ್ತು ಸಾಮೂಹಿಕ ಉತ್ಪಾದನಾ ವಲಯದ ಎಲ್ಲ 12 ಕ್ಷೇತ್ರಗಳಲ್ಲಿ, ಹಾಗೂ ಶಕ್ತಿ ಮತ್ತು ಪರಿಸರ ವಲಯದ ಎಲ್ಲ 8 ಕ್ಷೇತ್ರಗಳಲ್ಲಿ ಚೀನಾ ನಂ.1 ಆಗಿದೆ. ಕೃತಕ ಬುದ್ಧಿಮತ್ತೆ, ಕಂಪ್ಯೂಟರ್ ಮತ್ತು ಕಮ್ಯುನಿಕೇಶನ್ಸ್ ವಲಯದ 10  ಕ್ಷೇತ್ರಗಳಲ್ಲಿ 7 ರಲ್ಲಿ ಚೀನಾ, 3 ರಲ್ಲಿ ಯು.ಎಸ್ ಮೊದಲ ಸ್ಥಾನದಲ್ಲಿದೆ. ರಕ್ಷಣೆ, ಬಾಹ್ಯಾಕಾಶ, ರೊಬೊಟಿಕ್ಸ್, ಸಾರಿಗೆ ವಲಯದ 6 ಕ್ಷೇತ್ರಗಳಲ್ಲಿ 4 ರಲ್ಲಿ ಚೀನಾ, 2 ರಲ್ಲಿ ಯು.ಎಸ್ ನಂಬರ್ 1 ಆಗಿದೆ. ಕ್ವಾಂಟಂ ವಲಯದ 4 ಕ್ಷೇತ್ರಗಳಲ್ಲಿ, 3 ರಲ್ಲಿ ಚೀನಾ,1 ರಲ್ಲಿ ಯು.ಎಸ್ ಮೊದಲ ಸ್ಥಾನದಲ್ಲಿದೆ.

ಸಂಶೋಧನಾ ಸಂಸ್ಥೆಗಳಲ್ಲೂ ಚೀನಾ ಮುಂದು

ಚೀನಾ ಹೆಚ್ಚಿನ ಕ್ಷೇತ್ರಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಮಾತ್ರವಲ್ಲ, ಯು.ಎಸ್ ನ್ನು ದೂರದ ಎರಡನೆಯ ಸ್ಥಾನಕ್ಕೆ ತಳ್ಳಿದೆ. ಉದಾಹರಣೆಗೆ ಉನ್ನತ ಮಟ್ಟದ ಹೊಸ ಸಾಮಗ್ರಿಗಳು ಮತ್ತು ಸಾಮೂಹಿಕ ಉತ್ಪಾದನಾ ವಲಯದ 2 ಕ್ಷೇತ್ರಗಳಲ್ಲಿ (ನ್ಯಾನೊ ಸಾಮಗ್ರಿ ಸೇರಿದಂತೆ) ಅತ್ಯಂತ ಪರಿಣಾಮಕಾರಿ ಸಂಶೋದನಾ ಪ್ರಬಂಧಗಳ ಚೀನಾದ ಪಾಲು ಸುಮಾರು 58% ಆಗಿದ್ದು ಯು.ಎಸ್ ನ ಪಾಲಿನ 8 ಪಟ್ಟಿನಷ್ಟು ಇದೆ. ಇತರ 7 ಕ್ಷೇತ್ರಗಳಲ್ಲಿ ಚೀನಾದ ಪಾಲು ಯು.ಎಸ್ ನ ಪಾಲಿನ 2 ಮತ್ತು ಹೆಚ್ಚು ಪಟ್ಟಿನಷ್ಟು ಇದೆ.  ಕೃತಕ ಬುದ್ಧಿಮತ್ತೆ, ಕಂಪ್ಯೂಟರ್ ಮತ್ತು ಕಮ್ಯುನಿಕೇಶನ್ಸ್ ವಲಯದ 10  ಕ್ಷೇತ್ರಗಳಲ್ಲಿ, 6 ರಲ್ಲಿ ಚೀನಾದ ಪಾಲು ಯು.ಎಸ್ ನ ಪಾಲಿನ 2 ಮತ್ತು ಹೆಚ್ಚು ಪಟ್ಟಿನಷ್ಟು ಇದೆ.

ಇದನ್ನು ಓದಿ: ಪೆಗಸಸ್ ಗೆ ಬಳಸುವ ಕಿಟ್‍ಗಳನ್ನು ಹೋಲುವ ಯಂತ್ರಾಂಶಗಳನ್ನು ಐ.ಬಿ. ಇಸ್ರೇಲಿನಿಂದ ಖರೀದಿಸಿರುವ ಮಾಹಿತಿಗಳಿವೆ- ಒ.ಸಿ.ಸಿ.ಆರ್.ಪಿ.

ಸಂಶೋಧನಾ ಸಂಸ್ಥೆಗಳಲ್ಲೂ ಚೀನಾ ಬಹಳ ಮುಂದಿದೆ. ಕೆಲವು ನಿರ್ಣಾಯಕ ಕ್ಷೇತ್ರಗಳಲ್ಲಿ ಜಗತ್ತಿನ ಎಲ್ಲ ಟಾಪ್-10 ಸಂಸ್ಥೆಗಳೂ ಚೀನಾದವು ಹಾಗೂ ಎರಡನೆಯ ಸ್ಥಾನದಲ್ಲಿರುವ ದೇಶದ ಸಂಸ್ಥೆಗಳಿಗಿಂತ 9 ಪಟ್ಟು ಹೆಚ್ಚು ಅತ್ಯಂತ ಪರಿಣಾಮಕಾರಿ ಸಂಶೋದನಾ ಪ್ರಬಂಧಗಳನ್ನು ಪ್ರಕಟಿಸಿವೆ. ಚೀನಾ ವಿಜ್ಞಾನ ಅಕಾಡೆಮಿ 44 ರಲ್ಲಿ 27 ಕ್ಷೇತ್ರಗಳಲ್ಲಿ ಟಾಪ್-5 ಸಂಸ್ಥೆಗಳಲ್ಲಿ ಒಂದಾಗಿದೆ. ಅದರ 116 ಸಂಶೋದನಾ ಸಂಘಟನೆಗಳು ಹೆಚ್ಚು ಕಡಿಮೆ ಎಲ್ಲ ಕ್ಷೇತ್ರಗಳ ಸಂಶೋಧನೆಯಲ್ಲಿ ಸಕ್ರಿಯವಾಗಿವೆ. ಪರಿಣಾಮಕಾರಿ ಸಂಶೋದನಾ ಪ್ರಬಂಧಗಳನ್ನು ಪ್ರಕಟಿಸಿದ ಚೀನಾದ ವಿಜ್ಞಾನಿ-ತಂತ್ರಜ್ಞಾನಿಗಳಲ್ಲಿ ಶೇ.80 ದೇಶದಲ್ಲೇ ಶಿಕ್ಷಣ ಪಡೆದು ದೇಶದಲ್ಲೇ ಸಂಶೋಧನೆಯಲ್ಲಿ ತೊಡಗಿರುವವರು. ಅವರು ಶಿಕ್ಷಣ ಅಥವಾ ಸಂಶೋಧನೆಗಾಗಿ ವಿದೇಶಗಳಿಗೆ ಹೋದವರಲ್ಲ ಎಂಬುದು ಗಮನಾರ್ಹ.

ಸಂಶೋಧನೆಯಲ್ಲಿ ಮೇಲುಗೈ ಯಿಂದ ಉತ್ಪನ್ನಗಳಲ್ಲಿ ಮೇಲುಗೈ ಆಗಬೇಕಿಲ್ಲ

ಆದರೆ ಯಾವುದೇ ಕ್ಷೇತ್ರದಲ್ಲಿ ಅತ್ಯಂತ ಪರಿಣಾಮಕಾರಿ ಸಂಶೋಧನಾ ಪ್ರಬಂಧ ಪ್ರಕಟಣೆಯಲ್ಲಿ ಮೈಲುಗೈ ಸಾಧಿಸಲಾಗಿದೆ ಎಂಬುದು, ಆ ಕ್ಷೇತ್ರದಲ್ಲಿ ಅದನ್ನು ಬಳಸಿ ುತ್ತಮ ಗುಣಮಟ್ಟದ ಪರಿಣಾಮಕಾರಿ ಉತ್ಪನ್ನಗಳ ಡಿಸೈನ್, ಸಾಮೂಹಿಕ ಉತ್ಪಾದನೆಗೆ  ತನ್ನಷ್ಟಕ್ಕೆ ಹಾದಿ ಮಾಡಿ ಕೊಡುತ್ತದಾ  ಅಂತ ವರದಿ ಸ್ವಯಂ-ವಿಮರ್ಶಾತ್ಮಕವಾಗಿ ಕೇಳಿಕೊಳ್ಳುತ್ತದೆ. ಹೌದು, ಉತ್ತಮ ಸಂಶೋಧನೆಯನ್ನು ಡಿಸೈನ್, ಉತ್ಪಾದನೆಗೆ ಅಳವಡಿಸಲು ಇನ್ನೂ ಹಲವು ಸಾಮಥ್ರ್ಯಗಳು, ಕಾರ್ಯಕ್ರಮಗಳು, ಯೋಜನೆಗಳು ಬೇಕಾಗುತ್ತವೆ. ಆದರೆ ಈ ವಿಶ್ಲೇಷಣೆ ಭವಿಷ್ಯದಲ್ಲಂತೂ ಅಂತಹ ಸಾಧ್ಯತೆಗೆ ಕ್ಷಮತೆಯತ್ತ ಮುನ್ನಡೆಯ ಸರಿಯಾದ ಸೂಚನೆಯನ್ನಂತೂ ಕೊಡುತ್ತದೆ ಎಂದು ಉತ್ತರಿಸುತ್ತದೆ. ಚೀನಾ ಉತ್ತಮ ಗುಣಮಟ್ಟದ ಡಿಸೈನ್, ಸಾಮೂಹಿಕ ಉತ್ಪಾದನೆಯಲ್ಲಿ ಸಾರ್ವತ್ರಿಕ ಕ್ಷಮತೆಯನ್ನಂತೂ ಬೆಳೆಸಿರುವುದರಿಂದ ಈ ನಿಟ್ಟಿನಲ್ಲಿ ಪ್ರಮುಖ ಸವಾಲುಗಳೇನೂ ಎದುರಾಗಲಿಕ್ಕಿಲ್ಲ.

ಅಲ್ಲದೆ ವಿಜ್ಞಾನ-ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುವ ಕುರಿತು ಚೀನಾದ ರಾಜಕೀಯ ನಾಯಕತ್ವದ ಬದ್ಧತೆ, ವ್ಯೂಹಾತ್ಮಕ ಯೋಜನೆ, ಅದರ ದಕ್ಷ ಜಾರಿಯ ಫಲಿತವೇ ಈ ವರದಿ ಸೂಚಿಸುತ್ತಿರುವ ಮುನ್ನಡೆ ಎಂಬುದರತ್ತ ಗಮನ ಸೆಳೆಯುತ್ತದೆ.

ಇದನ್ನು ಓದಿ: ಭಾರತದಲ್ಲಿ ಅಧ್ಯಯನ ಸಂಶೋಧನೆ ಮತ್ತು ಮಹಿಳಾ ಪ್ರಾತಿನಿಧ್ಯ

ಭಾರತ ಏನು ಕಲಿಯಬಹುದು?

ವರದಿ ಚೀನಾದ ಮುನ್ನಡೆಯನ್ನು ವಸ್ತುನಿಷ್ಠವಾಗಿ ದಾಖಲಿಸುತ್ತಲೇ ಅದೊಂದು ಜಾಗತಿಕ ಅಪಾಯವೆಂದೇ ಬಿಂಬಿಸುತ್ತದೆ. ವರದಿ ರಾಜಕೀಯವಾಗಿ ತಟಸ್ಥವಾಗೇನಿಲ್ಲ. ವಿಜ್ಞಾನ-ತಂತ್ರಜ್ಞಾನದ ಮುಂಚೂಣಿ ಕ್ಷೇತ್ರಗಳಲ್ಲಿ ತಮ್ಮ ಏಕಸ್ವಾಮ್ಯ, ಯಜಮಾನಿಕೆ ಹೋಗುತ್ತಿದೆ ಎಂಬ ಯು.ಎಸ್ ನಾಯಕತ್ವದ ಪಾಶ್ಚಿಮಾತ್ಯ ದೇಶಗಳ ಗಾಬರಿ, ಆತಂಕಗಳನ್ನು ಬಿಂಬಿಸುತ್ತದೆ. 44 ನಿರ್ಣಾಯಕ ಕ್ಷೇತ್ರಗಳಲ್ಲಿ 37ರಲ್ಲಿ ಚೀನಾದ ಪ್ರಾಬಲ್ಯ ‘ಪ್ರಜಾಪ್ರಭುತ್ವ ಜಗತ್ತಿಗೆ’ ಗಂಭೀರ ಅಪಾಯ ಎಂದು ಹೇಳುತ್ತದೆ. (ಇದನ್ನು ಪಾಶ್ಚಿಮಾತ್ಯ ಅಥವಾ ಜಿ-7 ದೇಶಗಳ ಯಜಮಾನಿಕೆಗೆ ಅಪಾಯ ಎಂದು ಓದಿಕೊಳ್ಳಬೇಕು) ಹಾಗಾದರೆ ಈ ವರೆಗಿದ್ದ ಯು.ಎಸ್  (ಪಾಶ್ಚಿಮಾತ್ಯ ಅಥವಾ ಜಿ-7 ದೇಶಗಳ) ಪ್ರಾಬಲ್ಯ ಜಗತ್ತಿನ ಬಡದೇಶಗಳ ಬೆಳವಣಿಗೆಗೆ ಅಪಾಯಕರವಾಗಿರಲಿಲ್ಲವೇ? ಈ ‘ಅಪಾಯವನ್ನು’ ಎದುರಿಸಲು ಎಲ್ಲ ‘ಪ್ರಜಾಪ್ರಭುತ್ವ ದೇಶ’ಗಳು ಯಾವ ರೀತಿ ಪರಸ್ಪರ ಸಹಕರಿಸಬೇಕು, ಜಂಟಿ ಹೂಡಿಕೆ-ಯೋಜನೆಗಳನ್ನು ಮಾಡಬೇಕು ಇತ್ಯಾದಿ ಪರಿಹಾರಗಳನ್ನು ಸೂಚಿಸುತ್ತದೆ. ಆದರೆ ಜಗತ್ತಿನ ಯಾವುದೇ ದೇಶ ಒಂದು ಕ್ಷೇತ್ರದಲ್ಲಿ ಮುನ್ನಡೆಯನ್ನು ಏಕಸ್ವಾಮ್ಯವನ್ನು ಪ್ರಾಬಲ್ಯ ಸೂಪರ್ ಲಾಭಕ್ಕೆ ಬಳಸದೆ, ಎಲ್ಲ ದೇಶಗಳು ಪರಸ್ಪರ ಸಹಕಾರದಿಂದ ಮುನ್ನಡೆಯನ್ನು ತೀವ್ರಗೊಳಿಸಿ ಮನುಕುಲದ ಸಮಸ್ಯೆಗಳನ್ನು ಪರಿಹಾರ ಮಾಡುವತ್ತ ಹೋಗುವ ಬದಲಿ ಸಾಧ್ಯವಿಲ್ಲವೇ?

ಈ ವರದಿಯಿಂದ ಭಾರತ ಏನು ಕಲಿಯಬಹುದು? ಭಾರತ ಮೂರನೆಯ ಸ್ತಾನದಲ್ಲಿರುವುದು ಮೊದಲ ದಶಕಗಳಲ್ಲಿ ವಿಜ್ಞಾನ-ತಂತ್ರಜ್ಞಾನದಲ್ಲಿ ಸ್ವಾವಲಂಬನೆಯ ನೀತಿ, ಯೋಜನೆಗಳನ್ನು ಕೈಗೊಂಡು ಶಿಕ್ಷಣ-ಸಂಶೋಧನೆಗಳ ಸ್ಥಾಪನೆಗೆ ಒತ್ತು ಕೊಟ್ಟಿದ್ದರ ಫಲ. ಸಂಶೋಧನಾ ಸಾಧನೆಯಿಂದ ಡಿಸೈನ್, ಉತ್ಪಾದನೆಯತ್ತ ಪಯಣದಲ್ಲಿನ ವರದಿ ಎತ್ತುವ ಸವಾಲುಗಳು ಬಹುಶಃ ಭಾರತಕ್ಕೆ ಹೆಚ್ಚು ಅನ್ವಯಿಸುತ್ತದೆ. ‘ಮೇಕ್ ಇನ ಇಂಡಿಯಾ’,  ಉನ್ನತ ಶಿಕ್ಷಣ ಮತ್ತು ಸಂಶೋಧನೆಗಳ ನಿರ್ವಹಣೆಯ ನೀತಿಗಳಲ್ಲಿ ಖಾಸಗಿ ಕ್ಷೇತ್ರದ ಮೇಲೆ ಅವಲಂಬನೆಯತ್ತ ಮಾಡಿರುವ ಬದಲಾವಣೆಗಳು ಈಗಿನ ಸಾಧನೆ ಮತ್ತು ಅದರ ಮುನ್ನಡೆಗೆ ಮಾರಕವಾದೀತು ಎಂಬುದನ್ನು ಕಲಿಯಬೇಕು. ವಿಜ್ಞಾನ-ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುವ ಕುರಿತು ರಾಜಕೀಯ ನಾಯಕತ್ವದ ಬದ್ಧತೆ, ವ್ಯೂಹಾತ್ಮಕ ಯೋಜನೆ, ಅದರ ದಕ್ಷ ಜಾರಿಯ ಚೀನಾ ನೀತಿಯಿಂದ ಬಹಳಷ್ಟು ಕಲಿಯಬಹುದು. ಅದೇ ಸಮಯದಲ್ಲಿ ಯು.ಎಸ್ ನಾಯಕತ್ವದ ಪಾಶ್ಚಿಮಾತ್ಯ ಪ್ರಾಬಲ್ಯದ ಕುಸಿತ ಮತ್ತು ಚೀನಾದ ಮುನ್ನಡೆಯನ್ನು ಅಪಾಯವೆಂದು ಭಾರತ ಪರಿಗಣಿಸಬೇಕಿಲ್ಲ.  ಮೇಲೆ ಹೇಳಿದ ಬದಲಿಯತ್ತ ಇಡೀ ಜಗತ್ತನ್ನು ಒಯ್ಯುವ ಪ್ರಯತ್ನ ಮಾಡಬಹುದು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *