ಹರಿಯಾಣ: ರಾಜನ ಪ್ರತಿಮೆ ವಿಚಾರವಾಗಿ ಗುಜ್ಜರ್‌ ಮತ್ತು ರಜಪೂತ್ ಸಮುದಾಯಗಳ ನಡುವೆ ಉದ್ವಿಗ್ನತೆ

ಬಿಜೆಪಿ ಇತಿಹಾಸ ತಿರುಚುತ್ತಿದೆ ಎಂದು ಆರೋಪಿಸಿ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುತ್ತಿರುವ ನಾಯಕರು ಹರಿಯಾಣ

ಹರಿಯಾಣ: ಉತ್ತರ ಭಾರತದ ಒಂಬತ್ತನೇ ಶತಮಾನದ ರಾಜ ಮಿಹಿರ್ ಭೋಜ್‌ನ ಪ್ರತಿಮೆ ಅನಾವರಣ ಮಾಡಿದ ನಂತರ ರಾಜ್ಯದ ಕೈತಾಲ್‌ ಜಿಲ್ಲೆಯಲ್ಲಿ ಗುಜ್ಜರ್ ಮತ್ತು ರಜಪೂತ ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟಾಗಿದೆ. ಮಿಹಿರ್‌ ಜೋಜ್‌ನನ್ನು ಗುಜ್ಜರ್‌ ಸಮುದಾಯದ ರಾಜ ಎಂಬಂತೆ ಬಿಂಬಿಸಿದ್ದನ್ನು ವಿರೋಧಿಸಿ ಜಿಲ್ಲೆಯ ಮೂವರು ಬಿಜೆಪಿ ಕೌನ್ಸಿಲರ್‌ಗಳು ಸೇರಿದಂತೆ ಕನಿಷ್ಠ 29 ಸದಸ್ಯರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರತಿಮೆಯನ್ನು ಅನಾವರಣಗೊಳಿಸಬೇಕಿದ್ದ ಹರಿಯಾಣದ ಶಿಕ್ಷಣ ಸಚಿವ ಕನ್ವರ್‌ಪಾಲ್‌ ಗುಜ್ಜರ್ ವಿರುದ್ಧ ರಜಪೂತ ಸಮುದಾಯ ಭಾರೀ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯನ್ನು ತಡೆಯಲು ಸರ್ಕಾರ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದು, ಪ್ರತಿಭಟನಾಕಾರರು ಕೈತಾಲ್‌ಗೆ ತೆರಳದಂತೆ ಪೊಲೀಸರು ವಾಹನಗಳನ್ನು ಬೇರೆಡೆಗೆ ತಿರುಗಿಸಿದ್ದಾರೆ.

ಇದನ್ನೂ ಓದಿ: ಜಾತಿ ತಾರತಮ್ಯ ತಡೆಯುವಲ್ಲಿ ಸರ್ಕಾರ ವಿಫಲ-ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ನಂತರ, ಬಿಜೆಪಿ ಶಾಸಕಿ ಲೀಲಾ ರಾಮ್ ಗುಜ್ಜರ್ ಅವರು ಗುರುವಾರ ಬೆಳಿಗ್ಗೆ ಮಿಹಿರ್ ಭೋಜ್‌ನನ್ನು ‘ಗುಜ್ಜರ್ ದೊರೆ’ ಎಂದು ಬಿಂಬಿಸುವ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಶಿಕ್ಷಣ ಸಚಿವ ಕನ್ವರ್‌ಪಾಲ್‌ ಗುಜ್ಜರ್ ಸಭೆಗೆ ಹಾಜರಾಗಬೇಕಾಗಿತ್ತು, ಆದರೆ ಅವರು ಬರಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಪೊಲೀಸ್ ರಕ್ಷಣೆಯಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಿದ ಅವರು, ”ಮಿಹಿರ್ ಭೋಜ್ ಗುಜ್ಜರ್‌ಗಳ ಪೂರ್ವಜ” ಎಂದು ಕರೆದಿದ್ದಾರೆ.

“ನಾವು ಗುಜ್ಜರರ ಪೂರ್ವಜರಾದ ಸಾಮ್ರಾಟ್ ಮಿಹಿರ್ ಭೋಜ್ ಅವರ ಪ್ರತಿಮೆಯನ್ನು ಉದ್ಘಾಟಿಸಿದ್ದೇವೆ. ಇಡೀ ಸಮುದಾಯವು ಸಂತೋಷವಾಗಿದೆ. ಈ ವಿಷಯದ ಬಗ್ಗೆ ಯಾವುದೇ ವಿವಾದ ಸಂಭವಿಸಿಲ್ಲ” ಎಂದು ಲೀಲಾ ರಾಮ್ ಗುಜ್ಜರ್ ಹೇಳಿದ್ದಾರೆ.

ಇದನ್ನೂ ಓದಿ: ಶಾಹೀನ್ ಬಾಗ್ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಕಪಿಲ್ ಬಿಜೆಪಿಗೆ ಸೇರ್ಪಡೆ

“ಗುಜ್ಜರ್ ಸಾಮ್ರಾಟ್ ಮಿಹಿರ್ ಭೋಜ್ ಅವರ ಪ್ರತಿಮೆಯನ್ನು ಉದ್ಘಾಟಿಸಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ. ಶಿಕ್ಷಣ ಸಚಿವ ಕನ್ವರ್‌ಪಾಲ್ ಗುಜ್ಜರ್ ಪ್ರತಿಮೆಯನ್ನು ಅನಾವರಣಗೊಳಿಸಲು ಇಲ್ಲಿಗೆ (ಕೈತಾಲ್) ತಲುಪಬೇಕಿತ್ತು. ಆದರೆ ಕೆಲವು ಸಭೆಗಳ ನಿಮಿತ್ತ ಅವರು ತಲುಪಲು ಸಾಧ್ಯವಾಗಲಿಲ್ಲ” ಎಂದು ಲೀಲಾ ಹೇಳಿದ್ದಾರೆ.

ಆದರೆ, ಮಿಹಿರ್ ಭೋಜ್ ರಾಜನನ್ನು ಗುಜ್ಜರರ ಪೂರ್ವಜರನ್ನು ಕರೆಯುವುದು “ಇತಿಹಾಸದ ವಿರೂಪ” ಎಂದು ರಜಪೂತ ಸಮುದಾಯವು ಹೇಳಿದೆ. ಒಂಬತ್ತನೇ ಶತಮಾನದ ದೊರೆ ಪ್ರತಿಹಾರ್ ರಜಪೂತ ರಾಜವಂಶಕ್ಕೆ ಸೇರಿದವನೆಂದು ಇತಿಹಾಸಕಾರರು ಪ್ರತಿಪಾದಿಸುತ್ತಾರೆ.

ಹರಿಯಾಣ ಬಿಜೆಪಿಗೆ ಸಾಮೂಹಿಕ ರಾಜೀನಾಮೆ

ಘಟನೆಯ ನಂತರ, ಕೈತಾಲ್ ಜಿಲ್ಲೆಯ ಮೂವರು ಕೌನ್ಸಿಲರ್‌ಗಳು ಸೇರಿದಂತೆ ಬಿಜೆಪಿಯ ಕನಿಷ್ಠ 29 ಸದಸ್ಯರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಪತ್ರ ಬರೆದಿರುವ ಸದಸ್ಯರು, “ಪಕ್ಷವು ನಮ್ಮ ಇತಿಹಾಸವನ್ನು ತಿರುಚಲು ಸಹಾಯ ಮಾಡುತ್ತಿದ್ದು, ಪೊಲೀಸರ ಸಹಾಯದಿಂದ ಮಿಹಿರ್ ಭೋಜ್ ಅವರನ್ನು ಗುಜ್ಜರ್ ಎಂದು ಬಿಂಬಿಸುವ ಪ್ರತಿಮೆಯನ್ನು ಅನಾವರಣಗೊಳಿಸಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯುಪಿ: ಉಪಕುಲಪತಿ & ಪೊಲೀಸರ ಮೇಲೆ ತೀವ್ರ ಹಲ್ಲೆ ನಡೆಸಿದ ABVP ದುಷ್ಕರ್ಮಿಗಳು

“ಸಾಮೂಹಿಕ ರಾಜೀನಾಮೆ ಇದೀಗಷ್ಟೆ ಆರಂಭವಾಗಿದೆ. ಪಕ್ಷವು ನಮ್ಮ ಇತಿಹಾಸವನ್ನು ತಿರುಚುವುದನ್ನು ಮುಂದುವರೆಸಿದರೆ, ಮುಂಬರುವ ಚುನಾವಣೆಯಲ್ಲಿ ಪಕ್ಷವು ಹೀನಾಯವಾಗಿ ಸೋಲುತ್ತದೆ. ರಜಪೂತರ ವಿರುದ್ಧ ಪಕ್ಷಪಾತಿ ಕ್ರಮಗಳನ್ನು ಪೊಲೀಸರು ತೆಗೆದುಕೊಂಡಿದ್ದಾರೆ. ಇದು ಬಿಜೆಪಿ ಸರ್ಕಾರದ ಆಶ್ರಯದಲ್ಲಿ ನಡೆದಿದೆ” ಎಂದು ಕೈತಾಲ್‌ನ ಬಿಜೆಪಿ ಕೌನ್ಸಿಲರ್ ವಿಕಾಸ್ ರಾಣಾ ಹೇಳಿದ್ದಾರೆ.

“ನಮ್ಮ ಸಮುದಾಯದ ಬಗ್ಗೆ ಗೌರವವಿಲ್ಲದ ಪಕ್ಷದ ಸದಸ್ಯರಾಗಿದ್ದಕ್ಕೆ ನಾವು ನಾಚಿಕೆಪಡುತ್ತೇವೆ. ಆದ್ದರಿಂದ ಸಾಮೂಹಿಕ ರಾಜೀನಾಮೆ ನೀಡಲಾಯಿತು” ಎಂದು ಅವರು ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಉತ್ತರ ಪ್ರದೇಶದ ದಾದ್ರಿ ಮತ್ತು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಇದೇ ವಿಷಯಗಳ ಮೇಲೆ ಹಲವಾರು ಘಟನೆಗಳು ನಡೆದಿವೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ದಾದ್ರಿಯಲ್ಲಿ ಗುಜ್ಜರ್ ಪೂರ್ವಪ್ರತ್ಯಯವನ್ನು ಬಿಟ್ಟು ಮಿಹಿರ್ ಭೋಜ್ ಪ್ರತಿಮೆಯನ್ನು ಉದ್ಘಾಟಿಸಿದ್ದರು.

ವಿಡಿಯೊ ನೋಡಿ: ಪ್ರೇಕ್ಷಕನ ಮನಗೆದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ Janashakthi Media

 

Donate Janashakthi Media

Leave a Reply

Your email address will not be published. Required fields are marked *