ಹೈದರಾಬಾದ್: ಕೇಂದ್ರದ ಬಿಜೆಪಿ ಸರ್ಕಾರದ ನೂತನ ಘೋಷಣೆ ಅಗ್ನಿಪಥ ಯೋಜನೆ ವಿರುದ್ಧ ದೇಶದ ಹಲವು ಕಡೆಗಳಲ್ಲಿ ಪ್ರತಿಭಟನೆ ಉಗ್ರರೂಪ ಪಡೆದುಕೊಳ್ಳುತ್ತಿದೆ. ಇಂದು(ಜೂನ್ 17) ಬೆಳಗ್ಗೆಯಿಂದಲೇ ದೇಶದ ಹಲವಾರು ಭಾಗಗಳಲ್ಲಿ ತೀವ್ರತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಯುವ ಸಮುದಾಯಕ್ಕೆ ಮಾರಕವಾದ ಯೋಜನೆಯನ್ನು ಹಿಂಪಡೆಯಬೇಕೆಂದು ಯುವಕರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಬಿಹಾರ್ ನಿಂದ ಹಿಡಿದು ತೆಲಂಗಾಣವರೆಗೆ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ.
ಯೋಜನೆ ರದ್ದುಗೊಳಿಸಬೇಕೆಂದು ಸಿಕಂದರಾಬಾದ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದರು. ಈ ವೇಳೆ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಕನಿಷ್ಟ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಚಿಕಿಯತ್ಸೆಗೆ ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ಯುವಕ ನಿರ್ಮಲ್ ನಿವಾಸಿ ದಾಮೋದರ ಕುರಷಿಯಾ ಎಂದು ಗುರುತಿಸಲಾಗಿದೆ.
ಪ್ರತಿಭಟನಾಕಾರರು ಪೊಲೀಸರು ಮತ್ತು ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಸಿಕಂದರಾಬಾದ್ ರೈಲ್ವೆ ನಿಲ್ದಾಣ ರಣರಂಗವಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ, ನೂಕುನುಗ್ಗಲಾಗಿದ್ದು, ಹಲವಾರು ಯುವಕರು ಗಾಯಗೊಂಡಿದ್ದಾರೆ. ಅಗ್ನಿಪಥ್ ಯೋಜನೆ ರದ್ದುಗೊಳಿಸಿ ಎಂದಿನಂತೆ ಸೇನಾ ನೇಮಕಾತಿ ನಡೆಸಬೇಕು ಎಂದು ಯುವಕರು ಆಗ್ರಹಿಸುತ್ತಿದ್ದಾರೆ.
ತೆಲಂಗಾಣದ ಹೈದರಾಬಾದ್‌ನ ಸೇನಾ ನೇಮಕಾತಿ ಮಂಡಳಿಗೆ ತೆರಳಿ, ಅಲ್ಲಿಂದ ರೈಲ್ವೆ ನಿಲ್ದಾಣಕ್ಕೆ ಬಂದ ಪ್ರತಿಭಟನಾಕಾರರು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಸಂದರ್ಭ ಹೋರಾಟದ ಕಾವು ಜೋರಾಗಿತ್ತು. ಸಿಕಂದರಾಬಾದ್ ರೈಲ್ವೆ ಸ್ಟೇಷನ್ ನಲ್ಲಿ ನಿಂತಿದ್ದ ರೈಲೊಂದಕ್ಕೆ ಬೆಂಕಿ ಹಚ್ಚಲಾಗಿದೆ. ಅಲ್ಲದೆ ರೈಲ್ವೆ ಸ್ಟೇಷನ್ ಗೆ ಹಾನಿ ಮಾಡಲಾಗಿದೆ.
ಸಿಕಂದರಾಬಾದ್ ಗಲಭೆ ಭುಗಿಲೆದ್ದ ನಂತರದಲ್ಲಿ ರಾಜ್ಯದ ಇತರ ರೈಲು ನಿಲ್ದಾಣಗಳಲ್ಲಿ ಭದ್ರತೆಗಾಗಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ವಿಶೇಷವಾಗಿ ನಾಂಪಲ್ಲಿ, ವಾರಂಗಲ್, ಮಹಬೂಬಾಬಾದ್, ಕಾಜಿಪೇಟ್, ಜನಗಾಮ, ಡೋರ್ನಕಲ್ ರೈಲು ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ನಿಲ್ದಾಣಗಳಲ್ಲಿ ರೈಲ್ವೆ ಪೊಲೀಸರು ಹಾಗೂ ಸಾಮಾನ್ಯ ಪೊಲೀಸರನ್ನು ನಿಯೋಜಿಸಲಾಗಿದ್ದು, ಹೈದರಾಬಾದ್‌ನ ಮುಖ್ಯವಾದ ನಾಂಪಲ್ಲಿ ರೈಲು ನಿಲ್ದಾಣಕ್ಕೆ ಪ್ರವೇಶ ನಿರಾಕರಿಸಲಾಗಿದೆ.
ಉತ್ತರಾಖಂಡ ರಾಜ್ಯದ ಹಲ್ದವಾನಿಯಲ್ಲಿ ಯೋಜನೆ ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಯುವಕರ ಮೇಲೆ ಲಘು ಲಾಠಿ ಪ್ರಹಾರ ಮಾಡಲಾಗಿದೆ. ಇದರಿಂದ ಕೆಲ ಯುವಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನೂ ಕೆಲ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಹಾರ ರಾಜ್ಯದ ಲಖ್ಮಿನಿಯಾದಲ್ಲಿ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಯುವಕರು ಲಖ್ಮಿನಿಯಾ ರೈಲ್ವೆ ಸ್ಟೇಷನ್ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಸ್ಟೇಷನ್ ಬಹುತೇಕ ಸುಟ್ಟು ಹೋಗಿದೆ.
ಉತ್ತರ ಪ್ರದೇಶ ರಾಜ್ಯದ ಬಲಿಯಾದಲ್ಲಿ ಯೋಜನೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ ತೀವ್ರಗೊಂಡಿದೆ. ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ನುಗ್ಗಿದ ಪ್ರತಿಭಟನಾಕಾರರು ರೈಲೊಂದಕ್ಕೆ ಬೆಂಕಿ ಹಚ್ಚಿದ್ದು, ರೈಲಿನ ಮೂರು ಬೋಗಿಗಳು ಸಂಪೂರ್ಣ ಸುಟ್ಟು ಹೋಗಿವೆ.
ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಕೇಂದ್ರ ಸರ್ಕಾರವು ಇತ್ತೀಚೆಗೆ ಘೋಷಣೆ ಮಾಡಿರುವ ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ಪ್ರಬಲವಾದ ಹೋರಾಟ ತೀವ್ರಗೊಳ್ಳುತ್ತಿದೆ. ಯೋಜನೆ ಘೋಷಣೆಯಾದಾಗಲೇ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಪ್ರಮುಖ ಪ್ರತಿಪಕ್ಷಗಳು ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ಯೋಜನೆಯನ್ನು ವಿರೋಧಿಸಿದ್ದವು. ಇದು ಸೇನೆಗೆ ಸೇರಬಯಸುವ ಗ್ರಾಮೀಣ ಯುವಕರ ಭವಿಷ್ಯಕ್ಕೆ ಕುತ್ತು ತರಲಿದೆ ಎಂದು ಎಚ್ಚರಿಸಿದವು. ಕೇಂದ್ರ ಸರ್ಕಾರ ಯೋಜನೆಯನ್ನು ತಕ್ಷಣವೇ ಮರುಪರಿಶೀಲಿಸಿ ಹಿಂಪಡೆಯಬೇಕೆಂದು ಆಗ್ರಹಿಸಿದರು.