ಕುಂದಾಪುರ: ತೆಂಗಿನಕಾಯಿ ಬೆಲೆ ಕುಸಿತದಿಂದ ರೈತರು ಕಂಗೆಟ್ಟಿದ್ದು, ಸರಕಾರ ಕೂಡಲೇ ನೆರವಿಗೆ ಬಂದು ಬೆಂಬಲ ಬೆಲೆ ನೀಡಿ ಖರೀದಿಸಲು ಕರ್ನಾಟಕ ಪ್ರಾಂತ್ಯ ರೈತ ಸಂಘ(ಕೆಪಿಆರ್‌ಎಸ್), ಕುಂದಾಪುರ ತಾಲೂಕು ಸಮಿತಿ ಆಗ್ರಹಿಸಿದೆ.
ಕರಾವಳಿ ಜಿಲ್ಲೆಗಳ ಸಣ್ಣ ಮತ್ತು ಮಧ್ಯಮ ರೈತರು ಬದುಕು ನಿಂತಿರುವುದು ತೆಂಗು ಬೆಳೆಯಿಂದಾಗಿ, ಈ ಬಾರಿ 10 ವರ್ಷದಲ್ಲೇ ಅಧಿಕ ಪ್ರಮಾಣದಲ್ಲಿ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೇರಳ ರಾಜ್ಯದಲ್ಲಿ ಅತೀ ಹೆಚ್ಚು ತೆಂಗು ಬೆಳೆದರು, ಬೆಲೆಯಲ್ಲಿ ಸ್ಥಿರತೆ ಕಾಪಾಡಿಕೊಂಡು ಬರಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಬೆಲೆಯ ಮೇಲೆ ಸರಕಾರದ ನಿಯಂತ್ರಣವಿಲ್ಲವಾಗಿದೆ ಎಂದು ಕೆಪಿಆರ್‌ಎಸ್ ಆರೋಪಿಸಿದೆ.
ತಾಲ್ಲೂಕು ಕಾರ್ಯರ್ಶಿ ಶ್ರೀಧರ ನಾಡ ಅವರು, ತೆಂಗಿನಕಾಯಿ ಬೆಲೆ ಕುಸಿತ ಆಗುತ್ತಿದೆ, ಅದೇ ಸಂದರ್ಭದಲ್ಲಿ ತೆಂಗಿನ ಎಣ್ಣೆ ಮತ್ತು ಇತರೆ ಉತ್ಪನ್ನಗಳ ಬೆಲೆ ಗಗನಕ್ಕೆ ಏರುತ್ತಿದೆ. ರೈತರಿಂದ ಒಂದು ತೆಂಗಿನಕಾಯಿ 8 ರಿಂದ 9 ರೂಪಾಯಿ ದರದಲ್ಲಿ ಖರಿದಿಯಾಗುತ್ತಿದ್ದರು. ಸಿಪ್ಪೆ ತೆಗೆದ ತೆಂಗಿನಕಾಯಿಗೆ ಪ್ರತಿ ಕೆಜಿಗೆ ಕೇವಲ 26 ರೂಪಾಯಿಯನ್ನು ಸಗಟು ವ್ಯಾಪಾರಿಗಳು ನೀಡಿ ರೈತರಿಂದ ಖರೀದಿ ಮಾಡುತ್ತಿದ್ದಾರೆ. ಅದೇ ಸಂದರ್ಭದಲ್ಲಿ ಸಗಟು ವ್ಯಾಪಾರಿಗಳಿಂದ ಅಂಗಡಿಯವರು ಖರೀದಿಸಿ ಸುಮಾರು 40 ರೂಪಾಯಿಗಳಿಗೆ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ತೆಂಗಿನ ಕೊಬ್ಬರಿ ಕೆ.ಜಿ. ಸರಾಸರಿ 130 ರೂಪಾಯಿವರೆಗೂ ಇರುತಿತ್ತು. ಈಗ ಅದು ಕೂಡ ಕಡಿಮೆಯಾಗಿದೆ. ಸುಪೀರಿಯರ್ ಗುಣಮಟ್ಟದ ಕೊಬ್ಬರಿಯು ಕೆಜಿಗೆ 80 ರೂಪಾಯಿಗಳಿಂದ 85 ರೂಪಾಯಿ ಹಾಗೂ ಸಾಮಾನ್ಯ ಕೊಬ್ಬರಿಗೆ ಕೆಜಿಗೆ 70 ರೂಪಾಯಿಗಳಿಂದ 80 ರೂಪಾಯಿಗೆ ಇಳಿದಿದೆ ಎಂದಿದ್ದಾರೆ.
ತಾಲ್ಲೂಕು ಅಧ್ಯಕ್ಷ ಕೆ. ಶಂಕರ್ ಅವರು, ಬೇಡಿದ್ದನ್ನು ನೀಡುವ ಕಲ್ಪವೃಕ್ಷ ಎನ್ನುವ ಮಾತು ಇತ್ತೀಚೆಗೆ ರೈತರಿಗೆ ಬೇಸರ ತರುವ ಮಟ್ಟಕ್ಕೆ ಹೋಗಿದೆ. ರೈತರು ತೆಂಗು ಬೆಳೆಯಲ್ಲಿ ಕೀಟಗಳ ಬಾಧೆ, ವನ್ಯಜೀವಿಗಳಿಂದ ಕೃಷಿಗೆ ಹಾನಿ, ಬೆಲೆ ಕುಸಿತದಿಂದ ತೆಂಗಿನ ಮರದ ಬುಡಕ್ಕೆ ಹಾಕುವ ಗೊಬ್ಬರ, ಕೂಲಿ, ತೆಂಗಿನಕಾಯಿ ಕೊಯ್ಲಿಗೆ ಮಾಡುವ ಖರ್ಚಿನ ಮೊತ್ತವೂ ಸಹ ರೈತರಿಗೆ ಸಿಗುತ್ತಿಲ್ಲ. ಅತ್ಯಂತ ನಷ್ಟಕ್ಕೆ ರೈತರು ಸಿಲುಕಿದ್ದಾರೆ. ಇದರಿಂದಾಗಿ ಕರಾವಳಿಯ ರೈತರು ಹೊಸದಾಗಿ ತೆಂಗು ಬೆಳೆಯುವ ಮನಸ್ಸು ಮಾಡುತ್ತಿಲ್ಲ. ತೆಂಗು ಬೆಳೆ ಅವಸಾನದ ಅಂಚಿಗೆ ಬಂದು ನಿಂತಿದೆ. ಕರಾವಳಿಯಲ್ಲಿ ತೆಂಗಿನಿಂದ ರೈತರ ಆದಾಯ ಹೆಚ್ಚಾಗುವ ಬದಲು ಕಡಿಮೆ ಆಗುತ್ತಿದೆ ಎಂದು ತಿಳಿಸಿದ್ದಾರೆ.
ಕೂಡಲೇ ಸರಕಾರ ತೆಂಗಿಗೆ ಬೆಂಬಲ ಬೆಲೆ ಘೋಷಿಸಿ, ಪ್ರತಿ ತೆಂಗಿನಕಾಯಿ ಪ್ರತಿ ಕೆಜಿಗೆ ಕನಿಷ್ಠ 50 ರೂಪಾಯಿ ನೀಡಿ ಖರೀದಿಗೆ ವ್ಯವಸ್ಥೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘ(ಕೆಪಿಆರ್‌ಎಸ್), ಕುಂದಾಪುರ ತಾಲೂಕು ಸಮಿತಿಯ ಆಗ್ರಹಿಸಿದೆ.
ಸರಕಾರ ಈ ಬಗ್ಗೆ ಕ್ರಮ ವಹಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ತೆಂಗು ಬೆಳೆಗಾರರ ಸಮಾವೇಶ ನಡೆಸಿ ಪ್ರತಿ ತಾಲೂಕು ಮತ್ತು ಜಿಲ್ಲಾ ಕಛೇರಿ ಎದುರು ನಿರಂತರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.