ಮೊದಲ ಬಾರಿಗೆ ಪಕ್ಷದ ಬೃಹತ್ ಕಾರ್ಯಕ್ರಮದಿಂದ ದೂರ ಉಳಿದ ಪ್ರಭಾವಿ ಶಾಸಕ
ಹಾಸನ: ವಿಧಾನಸಭೆ ಚುನಾವಣೆಯಲ್ಲಿ ಸತತ ಮೂರು ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿರುವ ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಪಕ್ಷ ತೊರೆಯುವುದು ಪಕ್ಕಾ ಆಗಿದೆ.
ಕಳೆದ ಹಲವು ತಿಂಗಳುಗಳಿಂದ ಶಿವಲಿಂಗೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಗುಸುಗುಸು ಹರಿದಾಡುತ್ತಿತ್ತು. ಇದರ ನಡುವೆಯೇ ಅನೇಕ ಬಾರಿ ಸಿದ್ದರಾಮಯ್ಯ ಅವರ ಜೊತೆ ಕಾಣಿಸಿಕೊಂಡು ಅಂತೆ-ಕಂತೆಗೆ ಪುಷ್ಟಿ ನೀಡಿದ್ದರು. ಇಷ್ಟಾದರೂ ಇದೆಲ್ಲಾ ಮಾಧ್ಯಮಗಳ ಸೃಷ್ಟಿ. ನನ್ನ ಮುಂದೆ ಆ ಪ್ರಶ್ನೆ ಇಲ್ಲ ಎಂದು ಶಿವಲಿಂಗೇಗೌಡ ಅಲ್ಲಗಳೆದಿದ್ದರು.
ಆದರೆ ಕಳೆದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ನಡೆದ ಸಭೆಗೆ ನನಗೆ ಹಾಗೂ ಪಕ್ಷದ ತಾಲೂಕು ಮುಖಂಡರಿಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಇದು ದೊಡ್ಡ ಸುದ್ದಿಯಾದ ನಂತರ ನಾನು ನಮ್ಮ ನಾಯಕರ ಬಗ್ಗೆ ಉದ್ಧಟತನದಿಂದ ಮಾತನಾಡಿಲ್ಲ, ಅವರಿಗೆ ಬೇಸರವಾಗಿದ್ದರೆ ಖುದ್ದು ಭೇಟಿಯಾಗಿ ಮಾತನಾಡುವೆ ಎಂದು ಶಿವಲಿಂಗೇಗೌಡ ಹೇಳಿದ್ದರು.
ಇಷ್ಟೆಲ್ಲಾ ಆದ ಬಳಿಕ ತಮ್ಮ ಕ್ಷೇತ್ರದಲ್ಲಿ ಇತ್ತೀಚಿಗೆ ನಡೆದ ದೇವಾಲಯವೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಮಾತನಾಡಿದ್ದ ಕುಮಾರಸ್ವಾಮಿ, ಕೆ.ಎಂ. ಶಿವಲಿಂಗೇಗೌಡ ಬಗ್ಗೆ ಆಪ್ತವಾಗಿ ಮಾತನಾಡಿ, ನಮ್ಮ ಸರ್ಕಾರ ಬಂದರೆ ನಾನೇ ವಿಶೇಷ ಆಸಕ್ತಿವಹಿಸಿ ಮಂತ್ರಿ ಮಾಡುವೆ ಎಂದು ಭರವಸೆ ನೀಡಿದ್ದರು.
ದೊಡ್ಡ ಕಾರ್ಯಕ್ರಮಕ್ಕೆ ಗೈರು:
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ನಾಯಕರೊಂದಿಗೆ ಅಂತರ ಕಾಯ್ದುಕೊಂಡಿದ್ದ ಶಿವಲಿಂಗೇಗೌಡ ಮೊನ್ನೆಯಷ್ಟೇ ಚಾಲನೆ ಪಡೆದ ಜಲಧಾರೆ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಇದಾದ ನಂತರ ಗುರುವಾರ ನಗರದಲ್ಲಿ ನಡೆದ ಜಲಧಾರೆ ಸಮಾವೇಶದಿಂದಲೂ ಹೊರಗುಳಿಯುವ ಮೂಲಕ ಇನ್ನು ಮುಂದೆ ನಾನು ನಿಮ್ಮೊಂದಿಗೆ ಇರುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅಲ್ಲಿಗೆ ಕೆ.ಎಂ. ಶಿವಲಿಂಗೇಗೌಡ ಜೆಡಿಎಸ್ ತೊರೆಯುವುದು ಖಚಿತ ಎನ್ನಲಾಗಿದೆ. 2008, 2013 ಮತ್ತು 2018ರ ಚುನಾವಣೆಯಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ದಾಖಲೆ ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ ಗಮನ ಸೆಳೆದಿದ್ದರು. ಆದರೀಗ ಅದೇ ಪಕ್ಷ ಬಿಡಲು ಮಾನಸಿಕವಾಗಿ ಅಣಿಯಾಗಿದ್ದಾರೆ.
ಕೈ ಕಡೆಗೆ ನಡಿಗೆ:
ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಹಾಸನದಿಂದಲೂ ಬಿಜೆಪಿ-ಜೆಡಿಎಸ್‌ನಿಂದ ಕೆಲವರು ಕಾಂಗ್ರೆಸ್ ಬರುತ್ತಾರೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಹಾಗಿದ್ದರೆ ಈಗಲೇ ಬಸ್ ಹತ್ತಿಸಿಕೊಳ್ಳಲಿ, ಜಿಲ್ಲೆಯ ಆರು ಮಂದಿ ಶಾಸಕರೂ ಒಟ್ಟಾಗಿದ್ದೇವೆ. ಅದೆಲ್ಲಾ ಗಾಳಿ ಸುದ್ದಿ ಎಂದಿದ್ದರು. ಆದರೆ ಶಿವಲಿಂಗೇಗೌಡ ಸಮಾವೇಶಕ್ಕೆ ಗೈರಾಗಿರುವುದನ್ನು ಗಮನಿಸಿದರೆ ಅವರು ಕೈ ಹಿಡಿಯುವುದು ನಿಜ ಎಂಬುದೀಗ ಸ್ಪಷ್ಟವಾಗಿದೆ.
ಮತ್ತೊಬ್ಬ ನಾಟಕಕಾರ ಹುಟ್ಟಿದ್ದಾರೆ:
ಸಮಾವೇಶಕ್ಕೆ ಶಿವಲಿಂಗೇಗೌಡ ಗೈರಾಗಿದ್ದಕ್ಕೆ ಕೆಂಡಾಮಂಡಲರಾದ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ದೇವೇಗೌಡರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದರು. ಮೊದಲು ಮಾತನಾಡಿದ ಎಚ್‌ಡಿಕೆ, ಬೆನ್ನಿಗೆ ಚೂರಿ ಹಾಕೋ ರಾಜಕಾರಣ ಮಾಡಬಾರದು ಎಂದು ವಾಗ್ದಾಳಿ ನಡೆಸಿದರು. ಶಿವಲಿಂಗೇಗೌಡ ತೆಂಗಿನ ಮರದ ಕೆಳಗೆ ಧರಣಿ ಕೂತಿದ್ರು. ದೇವೇಗೌಡರು ಮೋದಿ ಹತ್ರ ಅವರನ್ನು ಕರೆದುಕೊಂಡ್ರು ಹೋದ್ರು. ಆಗ ಮೋದಿ ಪರಿಹಾರ ಹಣ ಕೊಟ್ರಾ, ನಮ್ಮ ಸರ್ಕಾರ ಬಂದ ನಂತರ 500 ಕೋಟಿ ಹಣ ಕೊಟ್ಟೆ. ಗೆದ್ದ ಮೇಲೆ ಸಿದ್ದರಾಮಯ್ಯರಿಂದ ನಾನು ಗೆದ್ದೆ ಎಂದ್ರು. ಚನ್ನರಾಯಪಟ್ಟಣಕ್ಕೆ ಕೊಡಿ ಎಂದು ಬಾಲಕೃಷ್ಣ ಕೇಳಿದ ಕಾಲೇಜನ್ನು ಅರಸೀಕೆರೆ ತಾಲೂಕು ಹಿಂದುಳಿದಿದೆ ಅಲ್ಲಿಗೆ ಕೊಟ್ಟಿದ್ದೆ ಎಂದು ಗುಡುಗಿದರು. ಮಧ್ಯ ಪ್ರವೇಶಿಸಿದ ದೇವೇಗೌಡರು, ನಾನು ತೆಂಗಿಗೆ ಪರಿಹಾರ ವಿಚಾರವಾಗಿ ಧರಣಿ ಮಾಡ್ತೀನಿ, ನೀವು ಮೂರು ದಿನ ಬಿಟ್ಟು ಬಂದು ಏಳಿಸಿ, ಕುಮಾರಸ್ವಾಮಿಗೆ ಹೇಳಿ ಏನಾದ್ರೂ ಪರಿಹಾರ ಕೊಡಿಸಿ ಅಂದ್ರು. ಅಬ್ಬಾ ಎಂತಾ ಡ್ರಾಮಾ, ಜಿಲ್ಲೆಯಲ್ಲಿ ಮತ್ತೊಬ್ಬ ನಾಟಕಕಾರ ಹುಟ್ಟಿದ್ದಾರೆ ವ್ಯಂಗ್ಯವಾಡಿದರು. ಇದಕ್ಕೆ ದನಿಗೂಡಿಸಿದ ಎಚ್‌ಡಿಕೆ, ಹೌದು ನನಗೂ ಗೊತ್ತು ವಿಧಾನಸಭೆಯಲ್ಲಿ ಮಾತಾಡೋದೂ ಡ್ರಾಮಾನೇ. ಕ್ಷೇತ್ರದ ಜನ ನೋಡಲಿ ಅಂತ ಡ್ರಾಮಾ ಮಾಡ್ತಾರೆ ಎಂದು ಜರಿದರು.
ಮಾತಾಡಿರುವುದರ ಬಗ್ಗೆ ಕೇಳುವೆ
ನನ್ನ ಕ್ಷೇತ್ರದಲ್ಲಿ ಜಾತ್ರೆ ಇದ್ದುದರಿಂದ ನಾನು ಸಮಾವೇಶಕ್ಕೆ ಹೋಗಲು ಆಗಲಿಲ್ಲ. ಅವರು ಮಾಡಿದ ಕೆಲಸವನ್ನು ನಾವು ಇಲ್ಲ ಎಂದು ಹೇಳಿಲ್ಲ. ನಾಟಕ ಆಡ್ತಾರೆ ಅಂದ್ರೆ ಅರಸೀಕೆರೆ ಕ್ಷೇತ್ರವೇ ಹಾಗೆ. ದೇವೇಗೌಡರಿಗೆ ಒಂದು ಚುನಾವಣೆಯಲ್ಲಿ 13 ಸಾವಿರ ಓಟು ಬಂದಿತ್ತು. ಇಲ್ಲಿ ನಾಟಕ ಮಾಡದೆ ಓಟ್ ಪಡೆಯೋಕೆ ಆಗುತ್ತಾ. ಬೇರೆಯವರನ್ನು ಹೊಗಳುತ್ತಾನೆ, ಕಾಲಿಗೆ ಬೀಳ್ತಾನೆ ಎಂದು ಹಾಗೆ ಹೇಳಿರಬಹುದು. ಕ್ಷೇತ್ರದ ಜನರಿಗೋಸ್ಕರ ನಾಟಕ ಮಾಡಿರಬಹುದು. ನಾನು ಇಲ್ಲ ಅನ್ನಲ್ಲ. ಜೆಡಿಎಸ್ ಬಾಗಿಲು ಬಂದ್ ಆದ್ರೆ ಇನ್ನೇನು ಮಾಡೋಕೆ ಆಗುತ್ತೆ ನಮ್ಮ ಹಣೇಬರಹ ಅನ್ಕೊತ್ತೀನಿ.
ನಾನು ಇತ್ತೀಚೆಗೆ ರೇವಣ್ಣ ಅವರನ್ನು ಭೇಟಿ ಮಾಡಿ 2 ತಿಂಗಳ ನಂತರ ಮಾತಾಡುವೆ, ಸಭೆಗೆ ಬರುವುದಿಲ್ಲ ಎಂದು ಹೇಳಿ ಬಂದಿದ್ದೆ. ಅವರು ಏನು ಹೇಳಿದ್ರೋ ಗೊತ್ತಿಲ್ಲ. ಅವರು ಡ್ರಾಮ ಆಡಿದ್ದಾರೋ, ನಾನು ಆಡಿದ್ದೀನೋ ಕ್ಷೇತ್ರದ ಜನರಿಗೆ ಗೊತ್ತಿದೆ. ನಾನು ಯಾವ ಡ್ರಾಮಾನೂ ಮಾಡಿಲ್ಲ, ಅಭಿವೃದ್ಧಿ ಕೆಲಸಕ್ಕೆ ಸಹಕಾರ ನೀಡಿದ ಸಿದ್ದರಾಮಯ್ಯ ಬಗ್ಗೆ ಒಳ್ಳೇ ಮಾತು ಆಡಿರಬಹುದು. ವಿಧಾನ ಸಭೆಯಲ್ಲಿ ನಾನು ಡ್ರಾಮಾ ಆಡ್ತೀನೋ, ಇಲ್ವೋ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ. ಯಾಕೆ ಹೀಗೆ ಮಾತಾಡಿದ್ರಿ ನಾನು ಏನು ಡ್ರಾಮಾ ಮಾಡಿದ್ದೀನಿ ಎಂದು ಕೇಳ್ತೀನಿ. ನಾನು ಇನ್ನೂ ಏನನ್ನೂ ತೀರ್ಮಾನ ಮಾಡಿಲ್ಲ. ಯಾವುದೇ ಪಕ್ಷದ ನಾಯಕರ ಸಂಪರ್ಕದಲ್ಲಿ ಇಲ್ಲ. ಅವರು ಹೀಗೆಲ್ಲಾ ಮಾತಾಡಿದ ಮೇಲೆ ಮುಂದೆ ಏನು ಮಾಡಬೇಕು ಎಂಬುದನ್ನು ನಮ್ಮ ಕಾರ್ಯಕರ್ತರ ಬಳಿ ಕೇಳುವೆ. ಎ.ಟಿ.ರಾಮಸ್ವಾಮಿ ಗೈರಾಗಿರಲಿಲ್ಲವೇ, ಅವರಿಗೆ ಏನೋ ಕೆಲಸದ ಒತ್ತಡ ಇರಬಹುದು.
- ಕೆ.ಎಂ.ಶಿವಲಿಂಗೇಗೌಡ, ಶಾಸಕ