ಬಿಜೆಪಿ ಸರ್ಕಾರದಿಂದ ಟೆಂಡರ್ ಹಗರಣ, ಸಾವಿರಾರು ಕೋಟಿ ರೂಪಾಯಿ ಲೂಟಿ – ಡಿಕೆಶಿ ಆರೋಪ

ಬೆಂಗಳೂರು :  ರಾಜ್ಯ ಸರ್ಕಾರ ಇಲಾಖಾವಾರು ಟೆಂಡರ್ ಕರೆದಿದ್ದು, ತರಾತುರಿಯಲ್ಲಿ ಟೆಂಡರ್ ಹಂಚಿಕೆ ಮಾಡಿ ಗೋಲ್ ಮಾಲ್ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಹಾಗೂ ಸಿದ್ದರಾಮಯ್ಯ ಅವರು ರಾಜ್ಯ ಪ್ರವಾಸ ಮಾಡುತ್ತಿದ್ದು, ಈ ಸರ್ಕಾರದ ಅವಧಿ ಇನ್ನು ಒಂದು ತಿಂಗಳು ಮಾತ್ರ. ಬಜೆಟ್ ಅಧಿವೇಶನದ ನಂತರ ಮುಂದಿನ ತಿಂಗಳು 7-10 ರ ಒಳಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಬಿಜೆಪಿ ಸರ್ಕಾರ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ, ಇಂಧನ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಟೆಂಡರ್ ಗಳನ್ನು ತರಾತುರಿಯಲ್ಲಿ ಸಿದ್ಧಪಡಿಸುತ್ತಿದೆ. 500 ಕೋಟಿ ರೂ ಮೌಲ್ಯದ ಟೆಂಡರ್ ಇದ್ದರೆ ಅದರ ಅಂದಾಜು ಮೊತ್ತವನ್ನು 1000 ಕೋಟಿಯಷ್ಟು ಮಾಡಿಸಿದ್ದಾರೆ. ಈ ಬಗ್ಗೆ ನಾವು ಎಲ್ಲ ರೀತಿಯ ದಾಖಲೆ ನೀಡಲು ಸಿದ್ಧವಿದ್ದೇವೆ ಎಂದರು.

ಪ್ರಮುಖ ಇಲಾಖೆಗಳಲ್ಲಿ ಪ್ರತಿ ಟೆಂಡರ್ ಮೊತ್ತವನ್ನು ದುಪ್ಪಟ್ಟು ಮಾಡಿ ಕೆಲವನ್ನು ಸಂಪುಟದಲ್ಲಿ ತೀರ್ಮಾನಿಸಿ ನೀಡಿದರೆ, ಮತ್ತೆ ಕೆಲವನ್ನು ಸಂಪುಟದ ತೀರ್ಮಾನವಿಲ್ಲದೇ ಕೇವಲ 7 ದಿನಗಳ ಅಲ್ಪಾವಧಿಯಲ್ಲೇ ನೀಡುತ್ತಿದ್ದಾರೆ. ಶಾಸಕರುಗಳಿಗೆ ಇದರ ಉಸ್ತುವಾರಿ ವಹಿಸಿ, ಅವರೇ ಗುತ್ತಿಗೆದಾರರನ್ನು ಗುರುತಿಸಿ ಟೆಂಡರ್ ನೀಡುವ ಜವಾಬ್ದಾರಿ ನೀಡಲಾಗಿದೆ. ಈ ಶಾಸಕರು ಬೀದಿ, ಬೀದಿಯಲ್ಲಿ ಗುತ್ತಿಗೆದಾರರಿಗೆ ಆಹ್ವಾನ ನೀಡಿ ಈ ಟೆಂಡರ್ ಪಡೆಯಲು ಚುನಾವಣೆಗೂ ಮುನ್ನ ಇಂತಿಷ್ಟು ಹಣ ನೀಡಬೇಕು ಎಂದು ಹೇಳುತ್ತಿದ್ದಾರೆ. ಈ ವಿಚಾರವಾಗಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಕೂಡ ದೂರು ನೀಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಶಾಸಕರು, ಮಂತ್ರಿಗಿರಿ ಸಿಗದವರಿಗೆ ಈ ರೀತಿ ಟೆಂಡರ್ ಹಂಚುತ್ತಿದ್ದಾರೆ. ಈ ವಿಚಾರವಾಗಿ ಶಾಸಕರು, ಗುತ್ತಿಗೆದಾರರು ನಮಗೆ ಮಾಹಿತಿ ನೀಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹಳೆ ಕಾಮಗಾರಿಯ ಸಾವಿರಾರು ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದು, ಯಾರು ಮಂತ್ರಿಗಳು ಹಾಗೂ ಸರ್ಕಾರಕ್ಕೆ ಕಮಿಷನ್ ನೀಡುತ್ತಾರೋ ಅವರ ಬಿಲ್ ಮಾತ್ರ ಪಾಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿಅತಿ ಹೆಚ್ಚು ಹಗರಣಗಳ ಸಚಿವ ಆರಗ ಜ್ಞಾನೇಂದ್ರ : ರಮೇಶ್‌ ಬಾಬು ಆರೋಪ

ಇನ್ನು ನೂತನ ಟೆಂಡರ್ ಗಳನ್ನು ಪಾರದರ್ಶಕವಾಗಿ, ಅರ್ಹ ಗುತ್ತಿಗೆದಾರರಿಗೆ ನೀಡುತ್ತಿಲ್ಲ. ಉದಾಹರಣೆಗೆ ಶಿವರಾಮ ಕಾರಂತ್ ಲೇಔಟ್ ನಿರ್ಮಾಣಕ್ಕೆ ಜಮೀನು ವಶಪಡಿಸಿಕೊಳ್ಳದೇ ಟೆಂಡರ್ ಕರೆಯಲಾಗಿದೆ. ಅಲ್ಲದೆ ಮುಂಗಡವಾಗಿ ಹಣ ಬಿಡುಗಡೆ ಮಾಡಿ ಗುತ್ತಿಗೆದಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಮ್ಮ ಬಳಿ ಎಲ್ಲ ದಾಖಲೆಗಳಿವೆ ಎಂದು ತಿಳಿಸಿದರು.

ಬೆಂಗಳೂರು ನಗರದಲ್ಲಿ ಯಾವುದಾದರೂ ಕೆಲಸ ಆಗಬೇಕಾದರೆ ಸಿಎಂ ಕಚೇರಿಯಲ್ಲಿ ಡೀಲ್ ಆಗುತ್ತಿವೆ. ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಸರ್ಕಾರ 7100 ಕೋಟಿ ವೆಚ್ಚ ಮಾಡಿರುವುದಾಗಿ ತಿಳಿಸಿದ್ದು, ಯಾವ ರಸ್ತೆ ಗುಂಡಿ ಮುಕ್ತವಾಗಿದೆ? ಈ ರೀತಿ ಭ್ರಷ್ಟಾಚಾರ ಮಾಡುವ ಮೂಲಕ ರಾಜ್ಯವನ್ನು ದೇಶದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದ್ದಾರೆ. ಈ ಸರ್ಕಾರದ ಭ್ರಷ್ಟಾಚಾರದ ವಿರುದ್ದ ನಾವು ಹೋರಾಟ ಮಾಡುತ್ತೇವೆ. ಸರ್ಕಾರ, ಗುತ್ತಿಗೆದಾರರು, ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡುತ್ತಿದ್ದೇವೆ. ನಮ್ಮ ಸರ್ಕಾರ ಮುಂದೆ ಅಧಿಕಾರಕ್ಕೆ ಬಂದ ನಂತರ ಕಳೆದ 6 ತಿಂಗಳಿಂದ ನಡೆಸಲಾಗಿರುವ ಅಕ್ರಮ ಟೆಂಡರ್ ಗಳನ್ನು ನಾವು ರದ್ದು ಮಾಡಲಿದ್ದೇವೆ. ಎಲ್ಲ ಟೆಂಡರ್ ತನಿಖೆ ಮಾಡಿಸುತ್ತೇವೆ. ಆ ಮೂಲಕ ಈ ಭ್ರಷ್ಟಾಚಾರದ ಕೂಪವನ್ನು ಕಿತ್ತುಹಾಕುತ್ತೇವೆ ಎಂದರು.

ಶಾಸಕರು ಪ್ರತಿ ಗುತ್ತಿಗೆದಾರರ ಮನೆ ಮನೆಗೆ ಹೋಗಿ ಕಮಿಷನ್ ನೀಡಿ ಟೆಂಡರ್ ಪಡೆಯುವಂತೆ ಒತ್ತಡ ಹಾಕುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲೂ ಇಂತಹ ಅಕ್ರಮ ನಡೆಯುತ್ತಿವೆ ಎಂದರು.

ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಹಿಂದಿನಿಂದಲೂ ಭ್ರಷ್ಟಾಚಾರ, 40 ಪರ್ಸೆಂಟ್ ಕಮಿಷನ್ ಆರೋಪವಿದೆ. ಗುತ್ತಿಗೆ ಕಾಮಗಾರಿಯಲ್ಲಿ ಸಚಿವರು, ಶಾಸಕರು ಗುತ್ತಿಗೆದಾರರಿಂದ ಶೇಕಡಾ 40ರವರೆಗೆ ಕಮಿಷನ್ ಪಡೆಯುತ್ತಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಈ ಹಿಂದೆ ಆರೋಪಿಸಿದ್ದರು. ಈ ಆರೋಪದ ಮೇಲೆ ಕೆ ಎಸ್ ಈಶ್ವರಪ್ಪ ಸಚಿವ ಸ್ಥಾನ ಕಳೆದುಕೊಂಡಿದ್ದರು. ರಾಜ್ಯ ಚುನಾವಣೆ ಹೊಸ್ತಿಲಿನಲ್ಲಿ ಈ ಆರೋಪ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಲಿದೆ ಎಂದು ಹೇಳಲಾಗುತ್ತಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *