- 8 ತಿಂಗಳಲ್ಲೇ 240 ದೇಗುಲಗಳಲ್ಲಿ ಕಳ್ಳತನ
- ಜುಲೈ ತಿಂಗಳಿನಲ್ಲಿ 50 ದೇಗುಲ ಕಳ್ಳತನ
- 70ಕ್ಕಿಂತ ಹೆಚ್ಚು ಕೇಸ್‌ಗಳಲ್ಲಿ ಹುಂಡಿ ಹಣ ಕಳ್ಳತನ
ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಸರಾಸರಿ ದಿನಕ್ಕೊಂದು ದೇಗುಲದಲ್ಲಿ ಕಳ್ಳತನ ನಡೆಯುತ್ತಿದೆ..! ಪೊಲೀಸ್ ಇಲಾಖೆ ಬಳಿ ಇರುವ ಅಂಕಿ – ಅಂಶಗಳೇ ಈ ಸಂಗತಿಯನ್ನು ಬಿಚ್ಚಿಡುತ್ತಿವೆ.
ಅಪರಾಧ ಹಾಗೂ ತಾಂತ್ರಿಕ ಸೇವೆಯ ಎಡಿಜಿಪಿ ಆರ್. ಹಿತೇಂದ್ರ ಈ ಕುರಿತಾಗಿ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಪ್ರಕರಣ ದಾಖಲಾಗದೆ ಇರುವ ಯಾವುದೆ ದೇಗುಲ ಅಪರಾಧ ಕೃತ್ಯಗಳೂ ಬಾಕಿ ಉಳಿದಿಲ್ಲ ಎಂದಿದ್ದಾರೆ. ದೇಗುಲದಲ್ಲಿ ನಡೆಯುವ ಕಳ್ಳತನ, ದರೋಡೆ ಕೃತ್ಯಗಳಲ್ಲೂ 2 ಬಗೆ ಇದೆ. ಮೊದಲನೆಯದು ಒಳಗಿನವರ ಕೈವಾಡ. ಎರಡನೆಯದು ಹೊರಗಿನವರ ಕೃತ್ಯ. ಆದರೆ, ಒಳಗಿನವರ ಕೈವಾಡ ಇರುವ ಪ್ರಕರಣಗಳು ಅತಿ ಕಡಿಮೆ ಇವೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ನಡೆಯುವ ಪ್ರತಿ ತಿಂಗಳ ಅಪರಾಧ ಪ್ರಕರಣಗಳ ಅಂಕಿ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ 2022ರಲ್ಲಿ ಮೊದಲ 8 ತಿಂಗಳಲ್ಲೇ ದೇಗುಲಗಳಲ್ಲಿ ನಡೆದ 240 ಅಪರಾಧ ಪ್ರಕರಣಗಳು ಲೆಕ್ಕಕ್ಕೆ ಸಿಗುತ್ತಿವೆ. ಇದರಲ್ಲಿ ದೇಗುಲದಲ್ಲಿ ನಡೆದ ಕಳ್ಳತನ ಹಾಗೂ ದರೋಡೆ ಪ್ರಕರಣಗಳೂ ಸೇರಿವೆ. ಈ ಪ್ರಕರಣಗಳ ಸರಾಸರಿ ಲೆಕ್ಕಾಚಾರ ಹಾಕಿದರೆ ದಿನಕ್ಕೊಂದು ಕಳ್ಳತನ ನಡೆದಂತಾಗುತ್ತದೆ ಎಂದ ಅಂಶ ಈಗ ಹೊರ ಬಿದ್ದಿದೆ.
ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ 340ಕ್ಕೂ ಹೆಚ್ಚು ದೇಗುಲಗಳನ್ನು ಅತಿ ಹೆಚ್ಚು ಆದಾಯ ಬರುವ ದೇವಸ್ಥಾನಗಳು ಎಂದು ಗುರ್ತಿಸಲಾಗಿದೆ. ಆದರೆ, ಈ ದೇಗುಲಗಳಿಗೆ ರಕ್ಷಣೆಯೇ ಇಲ್ಲವಾಗುತ್ತಿದೆ. ಅದರಲ್ಲೂ ರಾತ್ರಿ ವೇಳೆ ದೇಗುಲಗಳಲ್ಲಿ ಯಾರೂ ಇಲ್ಲದ ಸಂದರ್ಭದಲ್ಲೇ ಕಳ್ಳತನಗಳು ಹೆಚ್ಚಾಗಿ ನಡೆಯುತ್ತಿವೆ. ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು 50 ದೇಗುಲ ಕಳ್ಳತನ ಪ್ರಕರಣಗಳು ವರದಿಯಾಗಿವೆ. ಆಗಸ್ಟ್‌ನಲ್ಲಿ 33 ಪ್ರಕರಣಗಳು ವರದಿಯಾಗಿವೆ. ಅತಿ ಕಡಿಮೆ ಎಂದರೆ, ಫೆಬ್ರುವರಿಯಲ್ಲಿ 18 ಕಳ್ಳತನ, ದರೋಡೆ ಪ್ರಕರಣಗಳು ನಡೆದಿವೆ ಎಂಬ ಅಂಕಿ ಅಂಶಗಳು ಲಭ್ಯವಾಗಿವೆ.
ಭಕ್ತರು ಹರಕೆ ರೂಪದಲ್ಲಿ ಸಲ್ಲಿಸಿರುವ ಹಣ ಕಳ್ಳರ ಪಾಲಾಗುತ್ತಿದೆ. ಈ ಹಣವನ್ನು ಕಾಪಾಡುವವರು ಯಾರು? ದೇವರಿಗೆಂದು ಕೊಟ್ಟ ಹಣ ಇನ್ಯಾರದ್ದೋ ಪಾಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.