ಬೆಂಗಳೂರು: ತೆಲುಗು ಚಿತ್ರರಂಗದ ನಟ ನಂದಮೂರಿ ತಾರಕತ್ನ ನಿಧನರಾಗಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು. ತೀವ್ರ ಹೃದಯಾಘಾತಕ್ಕೀಡಾಗಿದ್ದ ಅವರನ್ನು ನಗರದ ನಾರಾಯಣ ಹೃದಯಾಲಯದಲ್ಲಿ ಕಳೆದ 23 ದಿನಗಳಿಂದ ಚಿಕಿತ್ಸೆ ನೀಡಲಾಗುತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಫೆಬ್ರವರಿ 18ರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ನಂದಮೂರಿ ತಾರಕ ರತ್ನ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಮುಂಭಾಗ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಇದನ್ನು ಓದಿ: ‘ಪಠಾಣ್’ ಯಶಸ್ಸು #BoycottBollywood ಗ್ಯಾಂಗಿನ ಸೋಲಿನ ಸೂಚನೆಯೇ?- ಭಾಗ1
ಜ್ಯೂನಿಯರ್ ಎನ್‌ಟಿಆರ್ ಸಹೋದರ ಹಾಗೂ ರಾಜಕಾರಣಿ ನಂದಮೂರಿ ತಾರಕ ರತ್ನ ಆಂಧ್ರಪ್ರದೇಶದ ಕುಪ್ಪಂನಲ್ಲಿ ಜನವರಿ 27 ರಂದು ತೆಲುಗು ದೇಶಂ ಪಾರ್ಟಿ (ಟಿಡಿಪಿ) ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ತಾರಕ ರತ್ನ ತೀವ್ರ ಹೃದಯಾಘಾತಕ್ಕೆ ಒಳಗಾದರು. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ದಾಖಲಿಸಲಾಗಿತ್ತು.
ಮೃತರು ಪತ್ನಿ ಅಲೇಖ್ಯಾ ರೆಡ್ಡಿ, ಪುತ್ರಿ ನಿಷ್ಕಾ ಅವರನ್ನು ಆಗಲಿದ್ದಾರೆ. ಪಾರ್ಥೀವ ಶರೀರವನ್ನು ಆಂಬ್ಯುಲೆನ್ಸ್ ಮೂಲಕ ಹೈದರಾಬಾದ್ ಗೆ ರವಾನಿಸಲಾಯಿತು.
ಹೈದರಾಬಾದಿನ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ ಆವರಣದಲ್ಲಿ ನಂದಮೂರಿ ತಾರಕ ರತ್ನ ಪಾರ್ಥೀವ ಶರೀರ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಸಾರ್ವಜನಿಕರು ಅಂತಿಮ ದರ್ಶನ ಪಡೆಯಲಿದ್ದು, ಇಂದು ಸಂಜೆ 5 ಗಂಟೆ ಸುಮಾರಿಗೆ ಹೈದರಾಬಾದ್‌ನ ಮಹಾಪ್ರಸ್ತಾನಂನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ ಮೊಮ್ಮಗ ತಾರಕ ರತ್ನ ಅವರ ತಂದೆ ನಂದಮೂರಿ ಮೋಹನ ಕೃಷ್ಣ ಅವರು. ತಾರಕ್, ಯುವರತ್ನ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ