ನಾಗರ್‌ಕರ್ನೂಲ್ ಜಿಲ್ಲೆಯ ಅಮ್ರಾಬಾದ್‌ನಿಂದ ಸುರಂಗ ನಿರ್ಮಾಣವಾಗುತ್ತಿದೆ. ದೋಮಲಪೆಂಟಾ ಬಳಿಯ ಶ್ರೀಶೈಲಂ ಅಣೆಕಟ್ಟಿನ ಹಿಂಭಾಗದ ಸುರಂಗದಲ್ಲಿ ಸೋರಿಕೆ ಉಂಟಾಗಿದ್ದು, ಸೋರಿಕೆ ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಛಾವಣಿ ಕುಸಿದಿದೆ. ಈ ಪೈಕಿ ಮೂವರು ತಪ್ಪಿಸಿಕೊಂಡಿದ್ದು, ಕನಿಷ್ಠ 8 ಮಂದಿ ಸುರಂಗದಲ್ಲಿ ಸಿಲುಕಿರುವ ಶಂಕೆಯಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಗಳು ತಿಳಿಸಿವೆ.
ಇದನ್ನೂ ಓದಿ:ರಾಜ್ಯ ಸರಕಾರ ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ಹಿಂಪಡೆಯಲು ಎಸ್ಎಫ್ಐ ಒತ್ತಾಯ
ಸದ್ಯ ಸುರಂಗ ನಿರ್ಮಾಣ ಕಂಪನಿ ನೀಡಿದ ಮಾಹಿತಿಯ ಪ್ರಕಾರ, ಸುರಂಗದಲ್ಲಿ 12-13 ಕಿಮೀ ಒಳಗೆ ಸೋರಿಕೆ ಉಂಟಾಗಿತ್ತು. ಅದನ್ನು ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಎಡಭಾಗದಲ್ಲಿರುವ ಸುರಂಗದ ಮೇಲ್ಛಾವಣಿ ಮೂರು ಮೀಟರ್‌ಗಳಷ್ಟು ಕುಸಿದಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ. ಆದ್ರೆ ಈಗಲೇ ನಿಖರವಾದ ಅಂಕಿ-ಅಂಶ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಮಹಿಳಾ ಐಪಿಎಲ್; ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳ ವೀಕ್ಷಣೆಗೆ ಮೆಟ್ರೋ ಸೇವೆ ವಿಸ್ತರಣೆ
ಜೊತೆಗೆ ಜಿಲ್ಲಾಧಿಕಾರಿ, ಎಸ್ಪಿ, ಅಗ್ನಿಶಾಮಕ ದಳ, ಜಲಮಂಡಳಿ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಿಎಂ ಸೂಚನೆ ಬೆನ್ನಲ್ಲೇ ನೀರಾವರಿ ಸಚಿವ ಎನ್ ಉತ್ತಮ್ ಕುಮಾರ್ ಹಾಗೂ ನೀರಾವರಿ ಇಲಾಖೆಯ ಇತರ ಅಧಿಕಾರಿಗಳು ವಿಶೇಷ ಹೆಲಿಕಾಪ್ಟರ್‌ನಲ್ಲಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.