ತೆಲಂಗಾಣ | ಮತದಾನ ದಿನವೆ ನಾಗಾರ್ಜುನ ಸಾಗರ್ ಅಣೆಕಟ್ಟಿನಲ್ಲಿ ಉದ್ವಿಗ್ನತೆ!

ಹೈದರಾಬಾದ್: ತೆಲಂಗಾಣದಲ್ಲಿ ಮತದಾನ ಪ್ರಾರಂಭವಾಗುವ ಗಂಟೆಗಳ ಮೊದಲು, ರಾಜ್ಯದ ನಲ್ಗೊಂಡ ಜಿಲ್ಲೆಯ ಅಂತರರಾಜ್ಯ ನಾಗಾರ್ಜುನ ಸಾಗರ್ ಅಣೆಕಟ್ಟಿನ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದ್ದು, ತೆಲಂಗಾಣ ಸರ್ಕಾರದ ನಿಯಂತ್ರಣದಲ್ಲಿ ಇರಬೇಕಾದ ಅಣೆಕಟ್ಟನ್ನು ಅದರ ಅರ್ಧಕ್ಕಿಂತ ಹೆಚ್ಚು ಸ್ಥಳಗಳಲ್ಲಿ (ಗೇಟ್‌ಗಳು) ಪೊಲೀಸರನ್ನು ನಿಯೋಜಿಸುವ ಮೂಲಕ ಆಂಧ್ರ ಪ್ರದೇಶ ಸರ್ಕಾರವು ಸ್ವಾಧೀನಪಡಿಸಿಕೊಂಡಿದೆ ಎಂದು ಗುರುವಾರ ವರದಿಯಾಗಿದೆ.

ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ತಿರುಗುತ್ತಿರುವುದು ಮಾಧ್ಯಮಗಳು ವರದಿ ಮಾಡಿದ್ದು, ಕೆಲವರು ಘರ್ಷಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಇದರ ವಿರುದ್ಧ ತೆಲಂಗಾಣ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಪರಿಶೀಲಿಸುವಂತೆ ನಲ್ಗೊಂಡ ಪೊಲೀಸರು ಮತ್ತು ಜಿಲ್ಲಾಧಿಕಾರಿಗೆ ಸೂಚಿಸಿದೆ. ನಾಗಾರ್ಜುನ ಸಾಗರ್

ಇದನ್ನೂ ಓದಿ: ಹೊಳೆನರಸೀಪುರ| ಚಿಟ್ಟನಹಳ್ಳಿ ಗ್ರಾಮದ ವಾಟರ್‌ಮನ್ ಭೈರಯ್ಯ ಬದುಕು ದುಸ್ತರ

ಆಂಧ್ರ ಮತ್ತು ತೆಲಂಗಾಣ ಭಾಗಗಳಿಗೆ ನೀರು ಸರಬರಾಜು ಮಾಡುವ ನಾಗಾರ್ಜುನ ಸಾಗರ ಅಣೆಕಟ್ಟನ್ನು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಅದೇ ರೀತಿ, ಕೃಷ್ಣಾ ನದಿಗೆ ನಿರ್ಮಿಸಲಾದ ಶ್ರೀಶೈಲಂ ಅಣೆಕಟ್ಟು, ಆಂಧ್ರ ಮತ್ತು ತೆಲಂಗಾಣದ ನಂದ್ಯಾಲ್ ಮತ್ತು ನಾಗರಕರ್ನೂಲ್ ಜಿಲ್ಲೆಗಳನ್ನು ವ್ಯಾಪಿಸಿದೆ.

2014 ರಲ್ಲಿ ತೆಲಂಗಾಣ ರಚನೆಯ ನಂತರ, ಕೃಷ್ಣಾ ನದಿ ನಿರ್ವಹಣಾ ಮಂಡಳಿಯನ್ನು (ಕೆಆರ್‌ಎಂಬಿ) ರಚಿಸಿದ ಕೇಂದ್ರ ಸರ್ಕಾರವು ಅಂತಿಮವಾಗಿ ಶ್ರೀಶೈಲಂ ಅಣೆಕಟ್ಟಿನ ನಿಯಂತ್ರಣವನ್ನು ಆಂಧ್ರ ಸರ್ಕಾರಕ್ಕೆ ಮತ್ತು ನಾಗಾರ್ಜುನ ಸಾಗರ್ ಅಣೆಕಟ್ಟಿನ ನಿಯಂತ್ರಣವನ್ನು ತೆಲಂಗಾಣಕ್ಕೆ ನೀಡಿತು.

“ಎರಡೂ ಅಣೆಕಟ್ಟುಗಳನ್ನು ಅಂತಿಮವಾಗಿ ಕೆಆರ್‌ಎಂಬಿಗೆ ಹಸ್ತಾಂತರಿಸಬೇಕಾಗಿದೆ ಮತ್ತು ನಂತರದ ಹಂತದಲ್ಲಿ ಅದನ್ನು ಮಾಡಲು ಪ್ರಕ್ರಿಯೆ ನಡೆಯುತ್ತಿದೆ. ನಾಗಾರ್ಜುನ ಸಾಗರ್ ಅಣೆಕಟ್ಟಿನ ಅರ್ಧ ಭಾಗವನ್ನು ಆಂಧ್ರ ಪ್ರದೇಶ ಸರ್ಕಾರ ಆಕ್ರಮಿಸಿಕೊಂಡಿದೆ” ಎಂದು ತೆಲಂಗಾಣ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನಕ್ಕೆ ಗೃಹಲಕ್ಷ್ಮಿ ದುಡ್ಡು | ಪಡಿತರ ಚೀಟಿ, ಆಧಾರ್‌ ಲಿಂಕ್ ಆಗಿದೆಯೆ ಎಂದ ಜನರು!

“ಅವರು ಈಗಾಗಲೆ 13 ಗೇಟ್‌ಗಳನ್ನು ಆಕ್ರಮಿಸಿಕೊಂಡಿದ್ದಾರೆ. ಅನೇಕ ಆಂಧ್ರ ಪೊಲೀಸ್ ಸಿಬ್ಬಂದಿಯೂ ಅಲ್ಲಿದ್ದರು. ನಮ್ಮ ರಾಜ್ಯದಲ್ಲಿ ಮತದಾನ ನಡೆಯುವ ದಿನದಲ್ಲಿ ಅವರು ಏನು ಮಾಡಲು ಪ್ರಯತ್ನಿಸುತ್ತಿದ್ದಾರೆ? ಸರ್ಕಾರವು ಚುನಾವಣಾ ತಯಾರಿಯಲ್ಲಿ ನಿರತರಾಗಿದ್ದರಿಂದ ಅವರು ಈ ರೀತಿ ಮಾಡಿದ್ದಾರೆ” ಎಂದು ಅಧಿಕಾರಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಂಧ್ರ ಸರ್ಕಾರದ ಅಧಿಕಾರಿಗಳು ನಾಗಾರ್ಜುನ ಸಾಗರ್ ಅಣೆಕಟ್ಟಿನ ಯಾವುದೇ ಭಾಗವನ್ನು ಆಕ್ರಮಿಸಿಕೊಂಡಿಲ್ಲ ಎಂದು ಹೇಳಿದ್ದು, ವರದಿಗಳನ್ನು ನಿರಾಕರಿಸಿದ್ದಾರೆ.

ಈ ಮಧ್ಯೆ, ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಘಟನೆಯು ಅನುಮಾನಾಸ್ಪದವಾಗಿದೆ ಎಂದು ಹೇಳಿದ್ದಾರೆ. “ಇದು ಆಡಳಿತರೂಢ ಭಾರತ್ ರಾಷ್ಟ್ರ ಸಮಿತಿಯ ಕಾರ್ಯತಂತ್ರದ ಕ್ರಮವಾಗಿದೆ. ನಾಗಾರ್ಜುನ ಸಾಗರ ಅಣೆಕಟ್ಟು ಎಲ್ಲಿಯೂ ಹೋಗುವುದಿಲ್ಲ. ಗೇಟ್‌ಗಳು ಮತ್ತು ನೀರು ಎಲ್ಲಿಯೂ ಹೋಗುವುದಿಲ್ಲ. ತೆಲಂಗಾಣದ ಜನರು ಬುದ್ಧಿವಂತರು. ಅತಿ ಶೀಘ್ರದಲ್ಲಿ ಹೊಸ ಸರ್ಕಾರ ರಚನೆಯಾಗಲಿದ್ದು, ಈ ಜಲ ವಿವಾದ ಬಗೆಹರಿಯಲಿದೆ” ಎಂದು ಹೇಳಿದ್ದಾರೆ.

ಒಂಬತ್ತೂವರೆ ವರ್ಷಗಳಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಕಳಪೆ ಆಡಳಿತದಿಂದಾಗಿ ಈ ನೀರಿನ ಸಮಸ್ಯೆಗಳು ಇನ್ನೂ ಬಗೆಹರಿಯಲಿಲ್ಲ ಎಂದು ರೇವಂತ್ ರೆಡ್ಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವೆಂಬರ್ 30 ರಂದು ನಡೆದ ಮತದಾನದ ಫಲಿತಾಂಶ ಡಿಸೆಂಬರ್ 3 ರಂದು ಪ್ರಕಟವಾಗಲಿದೆ.

ವಿಡಿಯೊ ನೋಡಿ: ದುಡಿವ ಜನರ ಮಹಾಧರಣಿ ಹೇಗಿತ್ತು? ಮೂರು ದಿನಗಳ ಕಾಲ ಅಲ್ಲಿ ಏನು ನಡೆಯಿತು. ವಿಶೇಷ ಸುದ್ದಿ Janashakthi Media

Donate Janashakthi Media

Leave a Reply

Your email address will not be published. Required fields are marked *