ನಾಳೆ ಯಾವೆಲ್ಲಾ ಸಿನಿಮಾಗಳು ಬಿಡುಗಡೆಯಾಗುತ್ತಿವೆ; ಇಲ್ಲಿದೆ ವಿವರ

ಶುಕ್ರವಾರ ಎಂದರೆ ಮೊದಲು ನೆನಪಾಗುವುದೇ ಸಿನಿಮಾ. ಈ ವಾರ ಯಾವೆಲ್ಲಾ ಸಿನಿಮಾಗಳು ಬಿಡುಗಡೆ ಆಗುತ್ತವೆ ಎಂದು ಸಿನಿಪ್ರಿಯರು ಕಾದು ನೋಡುತ್ತಿರುತ್ತಾರೆ. ನಾಳೆ ಯಾವೆಲ್ಲಾ ಸಿನಿಮಾಗಳು ಬಿಡುಗಡೆಯಾಗುತ್ತಿವೆ ಎಂಬ ವಿವರ ಇಲ್ಲಿದೆ.

ಗಾರುಡಿಗ, ರಾಂಚಿ, ಅರ್ಧಂಬರ್ಧ ಪ್ರೇಮಕಥೆ, ಶೋಷಿತೆ, ಯಥಾಭವ, ಕನ್ನಡ ಸಿನಿಮಾಗಳು ನಾಳೆ ಬಿಡುಗಡೆಯಾಗಲಿವೆ. ಬಹುನಿರಿಕ್ಷಿತ ಹಿಂದಿ ಸಿನಿಮಾ ಅನಿಮಲ್‌ ಕೂಡ ನಾಳೆ ತೆರೆಗೆ ಬರಲಿದೆ.

ʼಗಾರುಡಿಗʼ ಸಿನಿಮಾವನ್ನು ವಿಧ ರಾಘವ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರುದ್ವಿನ್ ವೀರ್ ನಾಯಕನಾಗಿ ಹಾಗೂ ಮಾನಸಾ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಅರ್ಚನಾ ಪಿಳ್ಳೇಗೌಡ, ಸೋನು ರಕ್ಷಿ, ಗಿರೀಶ್ ಹಿರಿಯೂರು, ಸಂದೀಪ್ ರಾಜ್‌ಗೋಪಾಲ್ ತಾರಾಗಣದಲ್ಲಿದ್ದಾರೆ. ಎಂ ಸಂಜೀವ್ ರಾವ್ ಸಂಗೀತ ನಿರ್ದೇಶನ ಹಾಗೂ ಅನಿರುಧ್ದ್-ಭರತ್ ಛಾಯಾಗ್ರಹಣ ಚಿತ್ರಕ್ಕಿದೆ. ವಕೀಲರಾದ ಡಾ.ಎಂ.ವೆಂಕಟಸ್ವಾಮಿ ‘ಎಂ.ವಿ.ಫಿಲ್ಮ್ಸ್’ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ʼರಾಂಚಿʼ ಕನ್ನಡ ಸಿನಿಮಾವನ್ನು ಶಶಿಕಾಂತ್ ಗಟ್ಟಿ ನಿರ್ದೇಶನ ಮಾಡಿದ್ದಾರೆ. ಇದೊಂದು ನೈಜ ಕಥೆ ಆಧರಿತ ಸಿನಿಮಾ. ರಾಂಚಿ ಪ್ರದೇಶದಲ್ಲಿ ನಡೆದ ಕುಕೃತ್ಯದ ಕಥೆಯುಳ್ಳ ಸಿನಿಮಾ.

ʼಅರ್ಧಂಬರ್ಧ ಪ್ರೇಮಕಥೆʼ ಸಿನಿಮಾವನ್ನು ಅರವಿಂದ್ ಕೌಶಿಕ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಬಿಗ್‌ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಬೈಕ್ ರೇಸರ್ ಆಗಿದ್ದ ಅರವಿಂದ್ ಕೆ.ಪಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಉಳಿದಂತೆ ಸೂರಜ್ ಹೂಗಾರ್, ಶ್ರೇಯಾ ಬಾಬು, ಅಭಿಲಾಶ್ ದ್ವಾರಕೀಶ್, ಅಲ್ ಓಕೆ ಮುಂತಾದವರು ತಾರಾಗಣದಲ್ಲಿದ್ದಾರೆ. ಅರ್ಜುನ್ ಜನ್ಯ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದು, ಸೂರ್ಯ ಅವರ ಛಾಯಾಗ್ರಹಣವಿದೆ. ಕಾರ್ತಿಕ್ ಗೌಡ ಅರ್ಧಂಬರ್ಧ ಪ್ರೇಮಕಥೆ ಚಿತ್ರವನ್ನು ನಿರ್ಮಿಸಿದ್ದಾರೆ.

ʼಶೋಷಿತೆʼ ಸಿನಿಮಾವನ್ನು ಶಶಿಧರ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಿರೂಪಕಿ ಜಾನ್ವಿ ರಾಯಲ್ ಹಾಗೂ ಕೆಜಿಎಫ್ ಖ್ಯಾತಿಯ ರೂಪ ರಾಯಪ್ಪ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ದರ್ಶನ್ ವೆಂಕಟೇಶ್, ಪ್ರಶಾಂತ್ ಕುಮಾರ್ ರಾಮಸ್ವಾಮಿ, ಸಿಕಂದರ್ ಶೈಕ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ರವಿವರ್ಮಕುಮಾರ್ ಛಾಯಾಗ್ರಹಣ ಹಾಗೂ ಕೆವಿನ್ ಎಂ ಸಂಗೀತವಿದೆ.

ʼಯಥಾಭವʼ ಸಿನಿಮಾವನ್ನು ಗೌತಮ್ ಬಸವರಾಜು ನಿರ್ದೇಶನ ಮಾಡಿದ್ದಾರೆ. ಕೋರ್ಟ್‌ ಡ್ರಾಮಾ ಕಥೆಯುಳ್ಳ ಈ ಸಿನಿಮಾದಲ್ಲಿ ಪವನ್ ಶಂಕರ್ ಹಾಗೂ ಸಹನಾ ಸುಧಾಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟ ರಾಕ್‌ಲೈನ್ ಸುಧಾಕರ್ ಅವರ ಪುತ್ರ ಗೌತಮ್ ಸುಧಾಕರ್ ಕೂಡ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ದತ್ತಣ್ಣ, ಬಾಲ ರಾಜವಾಡಿ, ಗೋಪಾಲಕೃಷ್ಣ ದೇಶಪಾಂಡೆ, ಮಾಸ್ಟರ್ ಶಮಂತ್, ನೀನಾಸಂ ಆನಂದ್, ಉಮಾ ಹೆಬ್ಬಾರ್, ಮಹೇಶ್ ಕಾಳಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಜೊತೆಗೆ ಹಿಂದಿಯಲ್ಲಿ ಅರ್ಜುನ್ ರೆಡ್ಡಿ, ಕಬೀರ್ ಸಿಂಗ್ ಸಿನಿಮಾ ಖ್ಯಾತಿಯನ್ನು ಸಂದೀಪ್ ರೆಡ್ಡಿ ವಂಗಾ ‘ಅನಿಮಲ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಣ್‌ಬೀರ್ ಕಪೂರ್ ನಾಯಕನಾಗಿ ಹಾಗೂ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ರಣಬೀರ್ ತಂದೆಯ ಪಾತ್ರದಲ್ಲಿ ಅನಿಲ್ ಕಪೂರ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಾಬಿ ಡಿಯೋಲ್, ತ್ರಿಪ್ತಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಸಂದೀಪ್ ರೆಡ್ಡಿ ಅಪ್ಪ-ಮಗನ ಬಾಂಧವ್ಯದ ಹಿನ್ನೆಲೆಯನ್ನು ಇಟ್ಟುಕೊಂಡು ಕ್ರೈಂ ಡ್ರಾಮಾ ಥ್ರಿಲ್ಲರ್ ಸಿನಿಮಾ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *