ಟಿಆರ್‌ಎಸ್‌ ಶಾಸಕರ ಖರೀದಿ ಯತ್ನ ಪ್ರಕರಣ ಸಿಬಿಐಗೆ ವರ್ಗ: ತೆಲಂಗಾಣ ಹೈಕೋರ್ಟ್

ಹೈದರಾಬಾದ್: ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ-ಟಿಆರ್‌ಎಸ್‌ (ಈಗ ಭಾರತ್ ರಾಷ್ಟ್ರ ಸಮಿತಿ-ಬಿಆರ್‌ಎಸ್‌) ಪಕ್ಷದ ನಾಲ್ವರು ಶಾಸಕರನ್ನು ಬಿಜೆಪಿ ಖರೀದಿಸಲು ಯತ್ನಿಸಿದ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿರುವ ತೆಲಂಗಾಣ ಹೈಕೋರ್ಟ್ ಈ ಪ್ರಕರಣವನ್ನು ಕೇಂದ್ರ ತನಿಖಾ ದಳ(ಸಿಬಿಐ)ಕ್ಕೆ ವರ್ಗಾಯಿಸಿದೆ.

ಕೆ.ಚಂದ್ರಶೇಖರ್‌ ರಾವ್‌ ನೇತೃತ್ವದ ಸರ್ಕಾರದ ನಾಲ್ವರು ಶಾಸಕರನ್ನು ಬಿಜೆಪಿ ಪಕ್ಷ ಆಪರೇಷನ್‌ ಕಮಲದಡಿ ಖರೀದಿಸಲು ಯತ್ನ ನಡೆದಿದೆ ಎಂಬ ಪ್ರಕರಣದ ವಿಚಾರಣೆಗೆ ನೇಮಿಸಲಾಗಿದ್ದ ಏಳು ಸದಸ್ಯರ ವಿಶೇಷ ತನಿಖಾ ದಳ(ಎಸ್‌ಐಟಿ)ಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಇದನ್ನು ಓದಿ: ಟಿಆರ್​ಎಸ್​ ಶಾಸಕರ ಖರೀದಿ ಯತ್ನ ಪ್ರಕರಣ: ಬಿ ಎಲ್ ಸಂತೋಷ್​ಗೆ ಸಮನ್ಸ್​ ಜಾರಿ-ಬಂಧನ ಸಾಧ್ಯತೆ

ಬಿಜೆಪಿ ಮುಖಂಡ ರಾಮ್ ಚಂದರ್ ರಾವ್ ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ್ದು, ಬಿಆರ್‌ಎಸ್ ಶಾಸಕರ ಖರೀದಿ ಯತ್ನ ಪ್ರಕರಣವನ್ನು ಹೈಕೋರ್ಟ್ ಸಿಬಿಐಗೆ ವರ್ಗಾಯಿಸಿದೆ. ನ್ಯಾಯಾಲಯ ಎಸ್‌ಐಟಿಯನ್ನು ರದ್ದುಗೊಳಿಸಿದೆ. ನಾವು ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.

ತೆಲಂಗಾಣದ ಮೊಯಿನಾಬಾದ್‌ ನಲ್ಲಿರುವ ಫಾರ್ಮ್ ಹೌಸ್ ನಲ್ಲಿ ತಲಾ ₹ 100 ಕೋಟಿಗೆ ನಾಲ್ವರು ಶಾಸಕರನ್ನು ‘ಖರೀದಿ’ ಮಾಡುವ ಮೂಲಕ ಆಡಳಿತಾರೂಢ ಟಿಆರ್‌ಎಸ್ ಸರ್ಕಾರವನ್ನು ಉರುಳಿಸುವ ಪಿತೂರಿ ಹೆಣೆಯಲಾಗಿತ್ತು. ಈ ವೇಳೆ ದಾಳಿ ನಡೆಸಿದ ಸೈಬರಾಬಾದ್ ಪೊಲೀಸರು ಅವ್ಯವಹಾರವನ್ನು ಬಯಲಿಗೆ ಎಳೆದರು. ಶಾಸಕರ ಖರೀದಿ ಪ್ರಕರಣದ ನಾಲ್ವರು ದೂರುದಾರರಲ್ಲಿ ಒಬ್ಬರಾದ ಟಿಆರ್‌ಎಸ್ ಶಾಸಕ ರೋಹಿತ್ ರೆಡ್ಡಿ, ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮಾ, ನಂದು ಕುಮಾರ್ ಮತ್ತು ಸಿಂಹಯಾಜಿ ಸ್ವಾಮಿ ಎಂಬ ಮೂವರು ವ್ಯಕ್ತಿಗಳು ತಮಗೆ ದಲ್ಲಾಳಿಗಳು 100 ಕೋಟಿ ರೂ.ಗಳನ್ನು ನೀಡಿದ್ದರು. ಅದಕ್ಕೆ ಪ್ರತಿಯಾಗಿ ಶಾಸಕರು ಟಿಆರ್‌ಎಸ್ ತೊರೆಯಬೇಕು ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ಆಪರೇಷನ್‌ ಕಮಲ: ತೆಲಂಗಾಣದ ನಾಲ್ವರು ಟಿಆರ್‌ಎಸ್‌ ಶಾಸಕರ ಖರೀದಿ ಯತ್ನ

ತಾಂಡೂರಿನ ಶಾಸಕ ರೋಹಿತ್ ರೆಡ್ಡಿ ಮತ್ತು ಇತರ ನೀಡಿದ ದೂರು ನೀಡಿದ ಅನ್ವಯ ಆರೋಪಿಗಳನ್ನು ಬಂಧಿಸಲಾಯಿತು. ನಂತರ ತೆಲಂಗಾಣ ಹೈಕೋರ್ಟ್ ಇವರಿಗೆ  ಜಾಮೀನು ನೀಡಿತು. ಎಫ್‌ಐಆರ್ ದಾಖಲಿಸಿರುವ ಪ್ರಕಾರ, ಆರೋಪಿಗಳು ಬಿಜೆಪಿಗೆ ಸೇರಲು ತಲಾ 50 ಕೋಟಿ ರೂಪಾಯಿ ನೀಡುವ ಮೂಲಕ ಇನ್ನೂ ಕೆಲವು ಟಿಆರ್‌ಎಸ್ ಶಾಸಕರನ್ನು ಕರೆತರುವಂತೆ ರೋಹಿತ್‌ ರೆಡ್ಡಿ ಅವರಿಗೆ ಕೇಳಿಕೊಂಡಿದ್ದರು.‌

ದೇಶದಲ್ಲಿ ಬಿಜೆಪಿಯೇತರ ಆಡಳಿತವಿರುವ ರಾಜ್ಯ ಸರ್ಕಾರಗಳನ್ನು ಕಿತ್ತೊಗೆಯುವುದು ಬಿಜೆಪಿಯ ಮುಖ್ಯ ಧ್ಯೇಯವಾಗಿದೆ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್ ಆರೋಪಿಸಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *