ಹೈದರಾಬಾದ್: ತೆಲಂಗಾಣದಲ್ಲಿ ಕಾಂಗ್ರೆಸ್ ಬಹುಮತ ಪಡೆದರೂ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳಲು ರಾಜ್ಯದ ಮಾಜಿ ಆಡಳಿತರೂಢ ಪಕ್ಷವಾದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯ ಶಾಸಕರೊಂದಿಗೆ ಪಕ್ಷ ಬದಲಾಯಿಸುವ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ ಅನ್ನು ಸೋಲಿಸಿ ಸರ್ಕಾರ ರಚನೆಗೆ ಮುಂದಾಗಿರುವ ಕಾಂಗ್ರೆಸ್, ಕೆಲವು ಶಾಸಕರು ತಮ್ಮ ಪಕ್ಷಕ್ಕೆ ಸೇರ್ಪಡೆಗೊಂಡರೆ ಪಕ್ಷದ ಬಲವು ಇನ್ನಷ್ಟು ಹೆಚ್ಚುತ್ತದೆ ಎಂದು ಪಕ್ಷದ ಕೆಲವು ನಾಯಕರ ಅಭಿಪ್ರಾಯವಾಗಿದೆ ಎಂದು ವರದಿಗಳು ಹೇಳಿವೆ.
ರಾಜ್ಯದ 119 ಸ್ಥಾನಗಳಲ್ಲಿ ಕಾಂಗ್ರೆಸ್ 64 ಸ್ಥಾನಗಳನ್ನು ಗೆದ್ದರೆ, ಬಿಆರ್‌ಎಸ್ 39 ಸ್ಥಾನಗಳನ್ನು ಪಡೆದುಕೊಂಡಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಮಧಿರಾ ಶಾಸಕ ಮಲ್ಲು ಭಟ್ಟಿ ವಿಕ್ರಮಾರ್ಕ, ಮಾಜಿ ಟಿಪಿಸಿಸಿ ಮುಖ್ಯಸ್ಥ ಎನ್ ಉತ್ತಮ್ ಕುಮಾರ್ ರೆಡ್ಡಿ ಮತ್ತು ನಲ್ಗೊಂಡ ಶಾಸಕ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಅವರಂತಹ ಹಿರಿಯ ನಾಯಕರು ಕೂಡ ಕಣದಲ್ಲಿದ್ದಾರೆ.
ಇದನ್ನೂ ಓದಿ: Belagavi Winter Session| ಬೆಳಗಾವಿ ಅಧಿವೇಶನದಲ್ಲಿ ಈ 18 ಬಿಲ್ ಮಂಡನೆ ಸಾಧ್ಯತೆ
ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಕ್ಷದ ಒಳಗಿನ ಆಂತರಿಕ ಕಚ್ಚಾಟವು ಭವಿಷ್ಯದಲ್ಲಿ ವಿಕೋಪ ಪರಿಸ್ಥಿತಿಗೆ ಕಾರಣವಾಗಬಹುದು ಎಂಬ ಆತಂಕದಲ್ಲಿರುವ ಕಾಂಗ್ರೆಸ್ ಪಕ್ಷವು ತನ್ನ ಬಲವನ್ನು ಹೆಚ್ಚಿಸಿ ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ಬಯಸಿದೆ.
ಇಬ್ಬರು ಬಿಆರ್‌ಎಸ್ ಶಾಸಕರು ಈಗಾಗಲೇ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದ್ದಾರೆ ಎಂದು ಹೈದರಾಬಾದ್‌ನ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ. ಅವರಲ್ಲಿ ಒಬ್ಬರು ಹುಜೂರಾಬಾದ್ ಕ್ಷೇತ್ರದಿಂದ ಗೆದ್ದ ಪಾಡಿ ಕೌಶಿಕ್ ರೆಡ್ಡಿ ಎಂದು ವರದಿಗಳು ಉಲ್ಲೇಖಿಸಿವೆ. ಅವರು ಬಿಜೆಪಿ ನಾಯಕ ಮತ್ತು ಮಾಜಿ BRS ಸಚಿವ ಈಟಾಲ ರಾಜೇಂದರ್ ಅವರನ್ನು ಸೋಲಿಸಿದ್ದಾರೆ.
ಕೌಶಿಕ್ ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದಿದ್ದ ಪಾಡಿ ಕೌಶಿಕ್ ಅವರು 2021 ರ ಹುಜೂರಾಬಾದ್ ಉಪಚುನಾವಣೆಯ ಮೊದಲು ಬಿಆರ್‌ಎಸ್‌ಗೆ ಸೇರಿದ್ದರು. 2018 ರ ಚುನಾವಣೆಯ ನಂತರ ಬಿಆರ್‌ಎಸ್‌ಗೆ ತೆರಳಿದ್ದ ಕಾಂಗ್ರೆಸ್‌ನ ಮಾಜಿ ನಾಯಕರು ಸಹ ಕಾಂಗ್ರೆಸ್‌ಗೆ ಮರಳುವ ಸಾಧ್ಯತೆಯಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೆ ಬಿಜೆಪಿ ಶಾಸಕಾಂಗ ಸಭೆಗೆ ಹಾಜರಾಗಲ್ಲ | ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
“ಹಲವು ಬಿಆರ್‌ಎಸ್ ಶಾಸಕರು ನಮ್ಮನ್ನು ಸಂಪರ್ಕಿಸಿದ್ದಾರೆ, ಆದ್ದರಿಂದ ನಾವು ಆಸಕ್ತಿ ಹೊಂದಿರುವವರನ್ನು ಕರೆದೊಯ್ಯಲಿದ್ದೇವೆ. ಪಸ್ತುತ ನಾವು ಆರಾಮದಾಯಕ ಸ್ಥಿತಿಯಲ್ಲಿದ್ದೇವೆ ಮತ್ತು ಎಲ್ಲವನ್ನೂ ಸೂಕ್ತ ಸಮಯದಲ್ಲಿ ನಿರ್ಧರಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ತಮ್ಮ ಕೆಲವು ಶಾಸಕರು ಆಡಳಿತ ಪಕ್ಷಕ್ಕೆ ತೆರಳಲಿದ್ದಾರೆ ಎಂದು ಬಿಆರ್‌ಎಸ್ ಕಾರ್ಯನಿರ್ವಾಹಕರೊಬ್ಬರು ಹೇಳಿದ್ದಾರೆ. 2014ರಲ್ಲಿ ತೆಲಂಗಾಣ ರಚನೆಯಾದ ನಂತರ ಬಿಆರ್‌ಎಸ್‌ಗೆ ತೆರಳಿದ ಹಳೆಯ ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷದ ಬಹುತೇಕ ಹೆಸರುಗಳು ಇದರಲ್ಲಿ ಪ್ರಮುಖವಾಗಿವೆ. ಇವರಲ್ಲಿ ಮಾಜಿ ಸಚಿವೆ ಸಬಿತಾ ಇಂದ್ರಾ ರೆಡ್ಡಿ, ದಾನಂ ನಾಗೇಂದರ್, ಕೆಪಿ ವಿವೇಕಾನಂದ್, ಮತ್ತು ಸಚಿವರಾಗಿದ್ದ ತಲಾಸಾನಿ ಶ್ರೀನಿವಾಸ್ ಯಾದವ್ ಸೇರಿದ್ದಾರೆ ಎಂದು ಅವರು ಸೂಚಿಸಿದ್ದಾರೆ.
ಸುಮಾರು 10 ವರ್ಷಗಳ ಕಾಲ ತೆಲಂಗಾಣದಲ್ಲಿ ಆಡಳಿತ ನಡೆಸಿದ್ದ ಬಿಆರ್‌ಎಸ್, ಇದುವೆ ಮೊದಲ ಬಾರಿಗೆ ಅಧಿಕಾರ ಕಳೆದುಕೊಂಡಿದೆ. ಆಂಧ್ರಪ್ರದೇಶದಿಂದ ರಾಜ್ಯ ವಿಭಜನೆಯಾದ ನಂತರ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಧಿಕಾರ ಹಿಡಿಯುತ್ತಿದೆ.
ವಿಡಿಯೊ ನೋಡಿ: ಪಿಚ್ಚರ್ ಪಯಣ – 143, ಸಿನೆಮಾ : ಗಂಗೂಬಾಯಿ ಕಾಠೆವಾಡಿ, ವಿಶ್ಲೇಷಣೆ : ಮೀನಾಕ್ಷಿ ಬಾಳಿ Janashakthi Media