ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸೋಮವಾರ ಭೇಟಿ ಮಾಡಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ. ಈ ವಿಚಾರವನ್ನು ಈಗಾಗಲೆ ರಾಜ್ಯ ಘಟಕವು ಈಗಾಗಲೇ ಅವಿರೋಧವಾಗಿ ನಿರ್ಣಯವನ್ನು ಅಂಗೀಕರಿಸಿದ್ದು, ರಾಜ್ಯದಿಂದ ಸ್ಪರ್ಧಿಸುವಂತೆ ಒತ್ತಾಯಿಸಿದೆ ಎಂದು ಪಕ್ಷದ ರಾಜ್ಯ ಮುಖ್ಯಸ್ಥರೂ ಆಗಿರುವ ರೇವಂತ್ ರೆಡ್ಡಿ ಅವರು ಗಾಂಧಿ ಅವರಿಗೆ ತಿಳಿಸಿದ್ದಾರೆ.
ತೆಲಂಗಾಣವನ್ನು ರಚನೆ ಮಾಡಿದ್ದಕ್ಕಾಗಿ ತೆಲಂಗಾಣದ ಜನರು ಅವರನ್ನು ತಾಯಿಯಂತೆ ಗೌರವಿಸುತ್ತಾರೆ. ಅವರು ರಾಜ್ಯದಿಂದ ಸ್ಪರ್ಧಿಸಲು ವಿನಂತಿಸಿದ್ದಾರೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ. ಮನವಿಗೆ ಸ್ಪಂದಿಸಿದ ಸೋನಿಯಾ ಗಾಂಧಿ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: 1000 ಕೋಟಿ ರೂ, ಭೂ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿ – ದಾಖಲೆ ಬಿಡುಗಡೆ ಮಾಡಿದ ಎಎಪಿ!
ಸೋನಿಯಾ ಗಾಂಧಿ ಅವರನ್ನು ಅವರ ಜನಪಥ್ 10 ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರೊಂದಿಗೆ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಅವರು ಕೂಡಾ ಜೊತೆಗಿದ್ದರು ಎಂದು ವರದಿ ಹೇಳಿದೆ.
ರಾಜ್ಯ ಸರ್ಕಾರದ ಖಾತರಿಗಳ ಅನುಷ್ಠಾನದ ಬಗ್ಗೆಯೂ ಮುಖ್ಯಮಂತ್ರಿ ಅವರಿಗೆ ವಿವರಿಸಿದ್ದಾರೆ ಎಂದು ವರದಿ ಹೇಳಿದೆ. ರಾಜ್ಯದ ಜನತೆಗೆ ನೀಡಲಾಗಿರುವ ಆರು ಖಾತರಿಗಳಲ್ಲಿ, ಸರ್ಕಾರವು ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಜಾರಿಗೆ ತರಲು ಪ್ರಾರಂಭಿಸಿದೆ ಮತ್ತು ರಾಜೀವ್ ಆರೋಗ್ಯಶ್ರೀಯ ವ್ಯಾಪ್ತಿಯನ್ನು 5 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ ರೇವಂತ್ ಅವರು ಸೋನಿಯಾ ಅವರಿಗೆ ತಿಳಿಸಿದ್ದಾರೆ.
ಈ ವೇಳೆ ಇಲ್ಲಿಯವರೆಗೆ ಮಹಿಳೆಯರು 14 ಕೋಟಿ ಬಾರಿ ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಷ್ಟೆ ಅಲ್ಲದೆ, 500 ರೂ.ಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಮತ್ತು ಮನೆಗಳಿಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂದು ರೇವಂತ್ ರೆಡ್ಡಿ ಅವರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳದಲ್ಲೊಂದು ಅಚ್ಚರಿಯ ಬೆಳವಣಿಗೆ | ಗೋಡ್ಸೆ ಭಾವಚಿತ್ರ ಸುಟ್ಟು ಎಬಿವಿಪಿ ಪ್ರತಿಭಟನೆ!
ರಾಜ್ಯ ಸರ್ಕಾರವು ಜಾತಿ ಗಣತಿಯನ್ನು ಕೈಗೊಳ್ಳಲು ನಿರ್ಧರಿಸಿದ್ದು, ಅದಕ್ಕಾಗಿ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದಿಂದ ಗರಿಷ್ಠ ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಮತ್ತು ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ರೇವಂತ್ ರೆಡ್ಡಿ ಅವರಿಗೆ ತಿಳಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಯ ಭಾಗವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾದೆ. ಅರ್ಜಿಗಳ ಪರಿಶೀಲನೆ ನಂತರ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಮುಖ್ಯಮಂತ್ರಿ ಅವರು ಸೋನಿಯಾ ಅವರಿಗೆ ಮನವರಿಕೆ ಮಾಡಿದ್ದಾರೆ. ಈ ಹಿಂದೆ ರಾಂಚಿಯಲ್ಲಿ ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ರೇವಂತ್ ರೆಡ್ಡಿ ಭಾಗವಹಿಸಿದ್ದರು.
ವಿಡಿಯೊ ನೋಡಿ: ಚಂಡೀಗಢ ಮೇಯರ್ ಚುನಾವಣೆಯಲ್ಲಿ ಮತ ತಿರುಚಿದ ಚುನಾವಣಾ ಅಧಿಕಾರಿ – ವಿಡಿಯೋ ಬಹಿರಂಗ! Janashakthi Media