ಮುಸ್ಲಿಮರು ಮರು ಮತಾಂತರ ಆದರೆ ಹಿಂದು ಧರ್ಮದ ಯಾವ ಜಾತಿಗೆ ಸೇರಿಸಿಕೊಳ್ಳುತ್ತೀರಿ? ಸಂಸದ ತೇಜಸ್ವಿಗೆ ಬಹಿರಂಗ ಪ್ರಶ್ನೆ

ಮಂಗಳೂರು : ಮುಸ್ಲಿಮರನ್ನ, ಕ್ರೈಸ್ತರನ್ನು ಘರ್ ವಾಪಸಿ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಉಡುಪಿಯಲ್ಲಿ ವಿವಾದಾತ್ಮಕ ಭಾಷಣ ಮಾಡಿದ್ದರು. ಇದರ ಬೆನ್ನಲ್ಲೇ ” ಮರು ಮತಾಂತರ ಆದರೆ ಅವರನ್ನು ಯಾವ ಜಾತಿಗೆ ಸೇರಿಸಿಕೊಳ್ಳುತ್ತೀರಿ” ಎಂದು DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಬಹಿರಂಗ ಸವಾಲು ಹಾಕಿದ್ದಾರೆ.

ಈ ಕುರಿತಾಗಿ ಅವರು ತಮ್ಮ ಫೆಸ್ಬುಕ್ ನಲ್ಲಿ ಬರೆದುಕೊಂಡಿದ್ದು, ಸಂಸದ ತೇಜಸ್ವಿ ಸೂರ್ಯ ಇಲ್ಲವೇ ಕಾರ್ಯಕ್ರಮ ಆಯೋಜಿಸಿದ್ದ ಉಡುಪಿಯ ಕೃಷ್ಣ ಮಠದ ಮಠಾದೀಶರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ಅವರು ಫೆಸ್ಬುಕ್ ನಲ್ಲಿ ಬರೆದಿರುವ ಪೂರ್ಣ ವಿವರಣೆ ಈ ಕೆಳಗಿನಂತಿದೆ.

“ಭಾರತದಲ್ಲಿರುವ ಮುಸಲ್ಮಾನರು ಹಿಂದು ಧರ್ಮದಿಂದ ಮತಾಂತರಗೊಂಡ ಸಂತತಿಯವರು, ಅವರನ್ನು ಪೂರ್ತಿಯಾಗಿ ಹಿಂದು ಧರ್ಮಕ್ಕೆ ಮರು ಮತಾಂತರಗೊಳಿಸಬೇಕು. ಅದು ಹಿಂದು ಸಮಾಜದ ಗುರಿಯಾಗಬೇಕು. ಮಠ, ಮಂದಿರಗಳು ಈ ಘರ್ ವಾಪ್ಸಿಗೆ ಮುಂದಾಳತ್ವ ವಹಿಸಬೇಕು” ಹೀಗಂತ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಉಡುಪಿ‌ ಕೃಷ್ಣ ಮಠದ ಕಾರ್ಯಕ್ರಮದಲ್ಲಿ ಮಠಾಧೀಶರುಗಳ ತಲೆದೂಗುವಿಕೆಯ ನಡುವೆ ಕರೆ ನೀಡಿದ್ದಾರೆ‌.

ಭಾರತದ ಮುಸಲ್ಮಾನರು ಇತಿಹಾಸದ ವಿವಿಧ ಕಾಲಘಟ್ಟದಲ್ಲಿ ಹಿಂದು ಧರ್ಮದ ವಿವಿಧ ಜಾತಿಗಳಿಂದ ಮತಾಂತರಗೊಂಡ ಸಂತತಿಯವರು ಎಂಬುದರಲ್ಲಿ ನನಗೆ ತಕರಾರಿಲ್ಲ. ಸ್ವತಹ ನಾನೂ ಅದೇ ಪರಂಪರೆಗೆ ಸೇರಿದವನು. ಈಗ ನಾವೆಲ್ಲ ಮರುಮತಾಂತರವಾಗುವ ವಿಷಯ ಎತ್ತಿಕೊಳ್ಳುವ ಮುನ್ನ ನನ್ನ ಮುತ್ತಜ್ಜಂದಿರು ಇಸ್ಲಾಂ ಧರ್ಮ ಸ್ವೀಕರಿಸಲು ಕಾರಣ ಏನು ? ಎಂದು ಚರ್ಚಿಸೋಣವೆ. ನಮ್ಮ ಕರಾವಳಿಯ ಬ್ಯಾರಿಗಳು ಟಿಪ್ಪುವಿನ ಆಗಮನಕ್ಕಿಂತ ಮುಂಚಿತವಾಗಿಯೇ ಇಸ್ಲಾಂ ಧರ್ಮ ಸ್ವೀಕರಿಸಿದವರು. ದೈವಗಳ ಪಾಡ್ದನಗಳಲ್ಲಿ, ಕೋಟಿ ಚೆನ್ನಯ್ಯರ ಜನಪದಗಳಲ್ಲಿಯೂ ಬ್ಯಾರಿ ಮುಸಲ್ಮಾನರ ಉಲ್ಲೇಖಗಳಿವೆ. (ಆದುದರಿಂದ ಟಿಪ್ಪುವಿನ ಮೇಲಿನ ನಿಮ್ಮ ಆರೋಪಗಳು ಶುದ್ದ ಸುಳ್ಳು)

ಈಗ ವಿಷಯಕ್ಕೆ ಬರುವ. ನಿಮ್ಮ ಆದೇಶದ ಪ್ರಕಾರ ಮುಸ್ಲಿಂ ಸಮುದಾಯ ಹಿನ್ನಲೆಯ ಮುನೀರ್ ಕಾಟಿಪಳ್ಳ ಆದ ನಾನು ಮತಾಂತರಗೊಂಡು ಹಿಂದು ದರ್ಮ ಸ್ವೀಕರಿಸಬೇಕು. ಹಾಗೇ ಆಗುವುದಾದರೆ ನನಗೆ ಎರಡು ಮುಖ್ಯ ಪ್ರಶ್ಮೆಗಳಿಗೆ ಉತ್ತರ ಬೇಕು.

ಕಾರ್ಟೂನ್‌ ಕೃಪೆ : ದಿನೇಶ್ ಕುಕ್ಕುಜಡ್ಕ
ಕಾರ್ಟೂನ್‌ ಕೃಪೆ : ದಿನೇಶ್ ಕುಕ್ಕುಜಡ್ಕ

ಮೊದಲ ಪ್ರಶ್ನೆ, ನನ್ನ ಹಿರೀಕರು ಹಿಂದು ಧರ್ಮದ ಮೇಲ್ಜಾತಿಗಳು ಆಚರಿಸುತ್ತಿದ್ದ ತಾರತಮ್ಯ, ಅಸ್ಪೃಶ್ಯತೆ, ಅಸಮಾನತೆ, ಹಿಂಸೆಯನ್ನು ಸಹಿಸಲಾಗದೆ ಇಸ್ಲಾಂ ಧರ್ಮ ಸ್ವೀಕರಿಸಿದುವುದು. ಈಗ ಅಂತಹ ಭೇದಭಾವವನ್ನು ಹಿಂದು ಧರ್ಮದ ಮೇಲ್ಜಾತಿಗಳು ತೊರೆದಿದ್ದಾರೆಯೆ ? ಸ್ವತಹ ನೀವು ಭಾಷಣ ಮಾಡಿದ ಕೃಷ್ಣ ಮಠದಲ್ಲಿಯಾದರು ಕೆಳ ಜಾತಿಗಳೊಂದಿಗೆ ಸಮಾನವಾಗಿ ನಡೆದೊಳ್ಳುವ ಸ್ಥಿತಿ ನಿರ್ಮಾಣವಾಗಿದೆಯೆ ?

ಎರಡನೆಯದು, “ನಾನು (ಮುಸ್ಲಿಮರು)ಮರು ಮತಾಂತರ ಆಗುವಾಗ ಹಿಂದು ಧರ್ಮದ ಯಾವ ಜಾತಿಗೆ ಸೇರಿಸಿಕೊಳ್ಳುತ್ತೀರಿ ? ನಮ್ಮ ನಮ್ಮ ಆಯ್ಕೆಯ ಜಾತಿಗಳನ್ನು ಆಯ್ದುಕೊಳ್ಳಲು ಸ್ವಾತಂತ್ರ್ಯ ಇರುತ್ತದೆಯೆ ? ಅಥವಾ, ಪಂಚಮರ ತರಹ ಈ ಮರುಮತಾಂತರಿಗಳಿಗೆ ಒಂದು ಅಸ್ಪೃಷ್ಯ ಜಾತಿಯನ್ನು ಸೃಷ್ಟಿಸಲಾಗುತ್ತದೆಯೆ ?

ಈ ಪ್ರಶ್ನೆಗಳ ಕುರಿತು ಮುಕ್ತ ಚರ್ಚೆಗೆ ನಾನು ಸಿದ್ದನಿದ್ದೇನೆ. ನೀವಾಗಲಿ (ತೇಜಸ್ವಿ ಸೂರ್ಯ) ನಿಮ್ಮ ಭಾಷಣಕ್ಕೆ ವೇದಿಕೆ ಒದಗಿಸಿದ ಉಡುಪಿಯ ಮಠಾಧೀಶರುಗಳಾಗಲಿ ಬಹಿರಂಗ ವೇದಿಕೆಗೆ ಯಾವಾಗ ಬರುತ್ತೀರಿ ತಿಳಿಸಿ. ಉತ್ತರಗಳು ಸಿಕ್ಕಿದ ಕ್ಷಣದಿಂದ ಮುಸ್ಲಿಮರ ಮರುಮತಾಂತರದ ಪರ್ವ ಶುಭಾರಂಭಗೊಳ್ಳಬಹುದು. ಸವಾಲು ಸ್ವೀಕರಿಸಲು ಸಿದ್ದರಿದ್ದೀರಾ ಎಂದು ಬಹಿರಂಗವಾಗಿ ಪ್ರಶ್ನಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *