ಪ್ರೊ. ಪ್ರಭಾತ್ ಪಟ್ನಾಯಕ್
ಕೃತಕ ಬುದ್ಧಿಮತ್ತೆ(ಎ.ಐ.)ಯಂತಹ ತಾಂತ್ರಿಕ ಪ್ರಗತಿ ಸಮಾಜವಾದದ ಅಗತ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಏಕೆಂದರೆ ಒಂದು ಸಮಾಜವಾದಿ ಸಮಾಜ ಮಾತ್ರವೇ ಎ.ಐ.ಯಂತಹ ಉದ್ಯೋಗ-ನಾಶಕಾರಿ ಎಂದು ಭಾವಿಸಿರುವ ತಂತ್ರಜ್ಞಾನದ ಪರಿಣಾಮಗಳನ್ನು ನಿಭಾಯಿಸಬಲ್ಲದು ಮಾತ್ರವಲ್ಲ, ವಾಸ್ತವವಾಗಿ ಅದರ ಪ್ರಯೋಜನವನ್ನು ಕೂಡ ಪೂರ್ಣವಾಗಿ ಪಡೆಯಬಲ್ಲದು. ಏಕೆಂದರೆ ಅದು ಕೆಲಸ ಮತ್ತು ಉತ್ಪಾದನೆಯನ್ನು ಎಲ್ಲರ ನಡುವೆ ಸಮದರ್ಶಿಯಾಗಿ ಹಂಚಿಕೊಳ್ಳುವ ಸಮಾಜ. ವಾಸ್ತವವಾಗಿ, ವೈಜ್ಞಾನಿಕ ಪ್ರಗತಿಯು ಹೆಚ್ಚು ಅದ್ಭುತವಾದಷ್ಟೂ, ಅಂತಹ ಪ್ರಗತಿಯ ಪೂರ್ಣ ಪ್ರಯೋಜನವನ್ನು ಪಡೆಯಬಹುದಾದ ಒಂದು ಸಮಾಜದ ಅಗತ್ಯವೂ ಅಷ್ಟೇ ಹೆಚ್ಚು ತುರ್ತಿನದಾಗುತ್ತದೆ ಮತ್ತು ಸಮಾಜವಾದ ಮಾತ್ರವೇ ಅಂತಹ ಒಂದು ಸಮಾಜವನ್ನು ಪ್ರತಿನಿಧಿಸುತ್ತದೆ.
ಅನು:ಕೆ.ಎಂ.ನಾಗರಾಜ್
ದಾವೋಸ್‌ನಲ್ಲಿ ತಮ್ಮ ವಾರ್ಷಿಕ ಮೇಳಕ್ಕಾಗಿ ಒಟ್ಟುಗೂಡಿದ್ದ ವಿಶ್ವ ಆರ್ಥಿಕ ವೇದಿಕೆಯ ಇತ್ತೀಚೆಗೆ ಮುಕ್ತಾಯಗೊಂಡ ಶೃಂಗಸಭೆಯಲ್ಲಿ ವಿಶ್ವದ ಶ್ರೀಮಂತರು ಮತ್ತು ಪ್ರಭಾವಿಗಳು ಕೃತಕ ಬುದ್ಧಿಮತ್ತೆ (ಎಐ – Artificial Intelligence) ಬಗ್ಗೆ ಬಹಳ ಉತ್ಸಾಹಭರಿತರಾಗಿದ್ದರು. ಎ.ಐ. ವ್ಯಾಪಕವಾಗಿ ಪರಿಚಯಿಸುವಷ್ಟು ಲಾಭದಾಯಕವಾಗಿ ಇದೆಯೇ ಎಂಬುದು ಈ ವರೆಗೂ ಸ್ಪಷ್ಟವಾಗಿಲ್ಲ. ಆದರೆ ದಾವೋಸ್‌ನಲ್ಲಿ ಒಟ್ಟುಗೂಡಿದ್ದ ಬಂಡವಾಳಗಾರರು ಮತ್ತು ಅವರ ಬೆಂಬಲಿಗರು ಶೀಘ್ರದಲ್ಲೇ ಅದರ ದೆಸೆ ತಿರುಗುತ್ತದೆ ಎಂಬ ನಂಬಿಕೆಯನ್ನು ಹೊಂದಿದ್ದರು. ಅದು ಸೃಷ್ಟಿಸುವ ನಿರುದ್ಯೋಗದ ಪ್ರಶ್ನೆಯನ್ನು ಸಂದರ್ಭಾನುಸಾರವಾಗಿ ಎತ್ತಲಾಗುತ್ತಿತ್ತಾದರೂ ಸಾಮಾನ್ಯವಾಗಿ ಅದನ್ನು ತಳ್ಳಿಹಾಕಲಾಗುತ್ತಿತ್ತು. ಕೆಲವರಂತೂ ಎಐ ಸೃಷ್ಟಿಸುವ ನಿರುದ್ಯೋಗವನ್ನು ಅದರ ದುರಸ್ತಿ ಮತ್ತು ನಿರ್ವಹಣೆಯ ಪ್ರಕ್ರಿಯೆಯಲ್ಲಿ ಉದ್ಭವಿಸುವ ಉದ್ಯೋಗಗಳು ಸರಿದೂಗಿಸುತ್ತವೆ ಎಂಬುದಾಗಿಯೂ ಅಭಿಪ್ರಾಯ ವ್ಯಕ್ತಪಡಿಸಿದರು. ಅದಂತೂ ದೂರದ ಸಂಗತಿ. ಎಐ ಉಂಟುಮಾಡುವ ನಿರುದ್ಯೋಗದ ಪರಿಣಾಮವನ್ನು ಒಪ್ಪಿಕೊಂಡ ದಕ್ಷಿಣ ಆಫ್ರಿಕಾ-ಕೆನಡಾ-ಅಮೇರಿಕನ್ ಬಲಪಂಥೀಯ ಉದ್ಯಮಿ ಇಲಾನ್ ಮಸ್ಕ್ ಒಂದು ಸಲಹೆಯನ್ನು ನೀಡಿದರು: ಬೇರೆಡೆ ಉದ್ಯೋಗಗಳನ್ನು ಸೃಷ್ಟಿಸಲು ಅಥವಾ ಎಐ ಬಳಕೆಯಿಂದ ಕೆಲಸದಿಂದ ಹೊರಹಾಕಲ್ಪಟ್ಟವರಿಗೆ ಪರಿಹಾರ ನೀಡಲು ಸಂಪನ್ಮೂಲಗಳನ್ನು ಸಂಗ್ರಹಿಸಲು ಎಐ-ಬಳಕೆದಾರರ ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪ ಅವರದ್ದಾಗಿತ್ತು.
ಲಾಭ-ಪ್ರೇರಿತ ವ್ಯವಸ್ಥೆಯಲ್ಲಿ ಉದ್ಯೋಗ-ನಾಶಕ ತಂತ್ರಜ್ಞಾನ
ಎ.ಐ. ಬಳಕೆಯು ಉದ್ಯೋಗಗಳನ್ನು ನಾಶಪಡಿಸುತ್ತದೆ ಎಂಬುದಂತೂ ನಿಸ್ಸಂದೇಹವೇ. ಇಲಾನ್ ಮಸ್ಕ್ ಕೂಡ ಈ ಸಾಧ್ಯತೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ ಈ ಚರ್ಚೆಯಲ್ಲಿ ನಿರ್ಲಕ್ಷಿಸಲ್ಪಡುತ್ತಿರುವ ವಿಷಯವೆಂದರೆ, ಸಮಸ್ಯೆ ಇರುವುದು ಎ.ಐ. ನಲ್ಲಿ ಅಲ್ಲ, ಸಮಸ್ಯೆ ಇರುವುದು ಬಂಡವಾಳಶಾಹಿಯಲ್ಲಿ ಎಂಬುದು. ಎ.ಐ. ಬಳಕೆದಾರರಿಗೆ ತೆರಿಗೆ ವಿಧಿಸುವ ಇಲಾನ್ ಮಸ್ಕ್ ಅವರ ಸಲಹೆಯನ್ನು ನಾವೀಗ ಪರಿಶೀಲಿಸೋಣ. ಒಂದು ಕೆಲಸವನ್ನು ನಿರ್ವಹಿಸಲು 100 ಮಂದಿ ನೇಮಕಗೊಂಡಿದ್ದಾರೆರೆಂದು ಭಾವಿಸೋಣ. ಎ.ಐ. ಬಳಕೆಯಿಂದ, ಅವರಲ್ಲಿ 50 ಮಂದಿ ನಿರುದ್ಯೋಗಿಗಳಾಗುತ್ತಾರೆ. ಈ 50 ಮಂದಿ ನಿರುದ್ಯೋಗಿಗಳು ಮೊದಲು ಪಡೆದ ವೇತನದಷ್ಟೇ ಪರಿಹಾರವನ್ನು ಅವರಿಗೆ ಒದಗಿಸಬೇಕು ಎಂದಾದರೆ (ಅವರು ತಮ್ಮ ಹಿಂದಿನ ವೇತನಕ್ಕಿಂತ ಕೆಳ ಮಟ್ಟದ ನಿರುದ್ಯೋಗ ಭತ್ಯೆಯನ್ನು ಪಡೆದಾಗ ಮಾತ್ರ ಅಧಿಕ ನಿರುದ್ಯೋಗವು ಒಂದು ಸಾಮಾಜಿಕ ಸಮಸ್ಯೆಯಾಗಿಯೇ ಉಳಿಯುತ್ತದೆ) ಆಗ ವೇತನದ ಬಾಬ್ತು ಮೊತ್ತದಲ್ಲಿ ಯಾವುದೇ ಕಡಿತ ಇರುವುದಿಲ್ಲ; ಅಂತಹ ಸಂದರ್ಭದಲ್ಲಿ ಸಾಕಷ್ಟು ಲಾಭದಾಯಕವಲ್ಲದ ಕಾರಣದಿಂದ ಎ.ಐ. ಬಳಕೆಯನ್ನು ದೂರವಿಡಲಾಗುತ್ತದೆ. ಅದು ಉದ್ಯೋಗಗಳನ್ನು ಇಳಿಕೆ ಮಾಡುತ್ತಿರುವ ಹೊತ್ತಿನಲ್ಲೇ ಉತ್ಪಾದನೆಯನ್ನು (ವಹಿವಾಟು) ಹೆಚ್ಚಿಸಿದರೆ ಮಾತ್ರ ಹೀಗಾಗಲಿಕ್ಕಿಲ್ಲ. ಆದರೆ ವಹಿವಾಟುಗಳ ಈ ಹೆಚ್ಚಳವು, ಹೊಸ ಪರಿಸ್ಥಿತಿಯಲ್ಲಿ ವೇತನ ಮತ್ತು ಪರಿಹಾರ ಭತ್ತೆ ಇವುಗಳ ಒಟ್ಟು ಮೊತ್ತವು ಎ.ಐ. ಬಳಕೆ-ಪೂರ್ವ ವೇತನ ಮೊತ್ತದಷ್ಟೇ ಇದ್ದರೂ ಲಾಭಗಳು ಏರಿಕೆಯಾಗಲು ಕಾರಣವಾಗುತ್ತದೆ ಮತ್ತು ಅದು ವಹಿವಾಟುಗಳು ಎ.ಐ. ಬಳಕೆ ಇಲ್ಲದಿದ್ದ ಪಕ್ಷದಲ್ಲಿ ಉದ್ಯೋಗವನ್ನು ಪಡೆಯಬಹುದಾಗಿದ್ದವರ ಹಿತವನ್ನು ಬಲಿಗೊಟ್ಟು ಇರುತ್ತದೆ.
ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಅಂತಹ ಸನ್ನಿವೇಶದಲ್ಲಿ ವಹಿವಾಟುಗಳ ಹೆಚ್ಚಳವು ಈಗಿರುವ ಉದ್ಯೋಗಗಳನ್ನು ವಾಸ್ತವವಾಗಿ ಇಳಿಕೆ ಮಾಡದೆ ಸಂಭಾವ್ಯ ಉದ್ಯೋಗಗಳನ್ನು ಇಳಿಕೆ ಮಾಡುತ್ತದೆ. ಈ ಸಂಭಾವ್ಯ ಉದ್ಯೋಗಗಳ ನಾಶವೂ ಸಹ ನಿರುದ್ಯೋಗವು ಉಂಟುಮಾಡುವ ಸಾಮಾಜಿಕ ಸಮಸ್ಯೆಗಳನ್ನೇ ಉಂಟುಮಾಡುತ್ತವೆಯಾದರೂ, ಈ ಸಂಭಾವ್ಯ ಉದ್ಯೋಗಗಳಿಂದ ವಂಚಿಸಲ್ಪಟ್ಟವರಿಗೆ ಪರಿಹಾರ ದೊರೆಯುವುದಿಲ್ಲ. ಏಕೆಂದರೆ ಅವರನ್ನು ನೇರವಾಗಿ ನಿರುದ್ಯೋಗಿಗಳನ್ನಾಗಿ ಮಾಡಲಾಗಿಲ್ಲ. ಆದ್ದರಿಂದ ನಿರುದ್ಯೋಗಿಗಳಿಗೆ ಯಾವುದೇ ಪರಿಹಾರ ಯೋಜನೆಗಳನ್ನು ರೂಪಿಸಿದರೂ ಸಹ, ಬಂಡವಾಳಶಾಹಿಯ ತರ್ಕ ಹೇಗಿದೆ ಅಂದರೆ ಈ ವ್ಯವಸ್ಥೆಯಡಿಯಲ್ಲಿ ತಾಂತ್ರಿಕ ಪ್ರಗತಿಯು ನಿರುದ್ಯೋಗ ಮತ್ತು ಅದರ ಸಂಬಂಧಿತ ಸಾಮಾಜಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಮತ್ತು, ಈ ವ್ಯವಸ್ಥೆಯಡಿಯಲ್ಲಿ ತಾಂತ್ರಿಕ ಪ್ರಗತಿಯನ್ನು ಪರಿಚಯಿಸುವುದಕ್ಕೆ ಕಾರ್ಮಿಕರು ವಿರೋಧಿಸುತ್ತಿದ್ದರೆ, ಅದರ ಹಿಂದೆ ಬಲವಾದ ತರ್ಕವಿದೆ. ಏಕೆಂದರೆ ಯಂತ್ರಗಳು ಅವರ ಭೌತಿಕ ಸಂಕಟದ ಹಿಂದಿರುವ ತಕ್ಷಣದ ಕಾರಣವಾಗಿವೆ. ಅದು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ಯಂತ್ರಗಳನ್ನು ಉದ್ಯೋಗ-ನಾಶಕಾರಿ ಎಂದು ಭಾವಿಸಿ ಯಂತ್ರಗಳನ್ನು ನಾಶಮಾಡಲು ಹೊರಟ “ಲುಡೈಟ್”ಗಳ ಮೊದ್ದುತನವನ್ನು ನೆನಪಿಸುತ್ತದೆ ಎಂಬುದು ಬೇರೆ ಮಾತು..
ಸಮಾಜವಾದಿ ವ್ಯವಸ್ಥೆಯ ಅಡಿಯಲ್ಲಿ
ಈ ಪರಿಸ್ಥಿತಿಯನ್ನು ಒಂದು ಸಮಾಜವಾದಿ ಆರ್ಥಿಕ ವ್ಯವಸ್ಥೆಯಡಿಯಲ್ಲಿ ಎ.ಐ. ತಾಂತ್ರಿಕ ಪ್ರಗತಿಯನ್ನು ಪರಿಚಯಿಸಿದರೆ ಏನಾಗಬಹುದು ಎಂಬುದರೊಂದಿಗೆ ಹೋಲಿಸಿ ನೋಡೋಣ. ಇಂಥಹ ಒಂದು ಸನ್ನಿವೇಶದಲ್ಲಿ, ವೇತನಗಳ ಮೊತ್ತದ ಬಾಬ್ತನ್ನು ಕಡಿತಗೊಳಿಸದೆ, ಅಂದರೆ, ಕಾರ್ಮಿಕರ ನಿಜ ವೇತನ ದರವನ್ನು ಕಡಿತಗೊಳಿಸದೆಯೇ, ನಿರುದ್ಯೋಗದ ಸಮಸ್ಯೆ ಪ್ರತಿಯೊಬ್ಬ ಕೆಲಸಗಾರನಿಗೂ ಅಧಿಕ ವಿರಾಮವನ್ನು ಒದಗಿಸುವ ಮೂಲಕ ಪರಿಹಾರಗೊಳ್ಳುತ್ತಿತ್ತು, ಸಮಾಜವಾದಿ ಸಮಾಜದಲ್ಲಿ ತಾಂತ್ರಿಕ ಪ್ರಗತಿಯು ಯಾರೊಬ್ಬರಿಗೂ ದುಃಖವನ್ನುಂಟುಮಾಡುವುದರ ಬದಲು, ಪ್ರತಿಯೊಬ್ಬರ ಜೀವನವನ್ನೂ ಸುಧಾರಿಸುತ್ತದೆ, ಪ್ರತಿಯೊಬ್ಬರನ್ನೂ ಕತ್ತೆ ಚಾಕರಿಯ ಜಂಜಾಟದಿಂದ ಮುಕ್ತಗೊಳಿಸುತ್ತದೆ ಮತ್ತು ಪ್ರತಿಯೊಬ್ಬರಿಗೂ ಅವರ ಒಳಗಿರುವ ಸೃಜನಶೀಲತೆಯನ್ನು ಬೆಳೆಸಿಕೊಳ್ಳುವ ಅವಕಾಶವನ್ನು ಕಲ್ಪಿಸುತ್ತದೆ.
ಸಮಾಜವಾದಿ ಸಮಾಜದಲ್ಲಿ ತಾಂತ್ರಿಕ ಪ್ರಗತಿಯು ಯಾರೊಬ್ಬರಿಗೂ ದುಃಖವನ್ನುಂಟುಮಾಡುವುದರ ಬದಲು, ಪ್ರತಿಯೊಬ್ಬರ ಜೀವನವನ್ನೂ ಸುಧಾರಿಸುತ್ತದೆ, ಪ್ರತಿಯೊಬ್ಬರನ್ನೂ ಕತ್ತೆ ಚಾಕರಿಯ ಜಂಜಾಟದಿಂದ ಮುಕ್ತಗೊಳಿಸುತ್ತದೆ ಮತ್ತು ಪ್ರತಿಯೊಬ್ಬರಿಗೂ ಅವರ ಒಳಗಿರುವ ಸೃಜನಶೀಲತೆಯನ್ನು ಬೆಳೆಸಿಕೊಳ್ಳುವ ಅವಕಾಶವನ್ನು ಕಲ್ಪಿಸುತ್ತದೆ.
100 ಮಂದಿ ಹಿಂದೆ ಮಾಡಿದ ಕೆಲಸವನ್ನು ಈಗ 50 ಮಂದಿ ಮಾಡುವುದು ಸಾಧ್ಯವಾದರೆ, ಪ್ರತಿಯೊಬ್ಬರೂ ಅಷ್ಟೇ ಗಂಟೆಗಳ ಕಾಲ ಕೆಲಸ ಮಾಡಿ, ಗಂಟೆಗಳ ಸಂಖ್ಯೆ ಮತ್ತು ಕೂಲಿಯ ದರ ಬದಲಾಗದೆ ಉಳಿಯುವ ಬದಲು ಬಂಡವಾಳಶಾಹಿಯಲ್ಲಿ ಸಂಭವಿಸುವ ರೀತಿಯಲ್ಲಿ ತಾಂತ್ರಿಕ ಪ್ರಗತಿಯಿಂದಾಗಿ 50 ಮಂದಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸುವ ಬದಲು, ಅದೇ 100 ಮಂದಿಯೂ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ; ಪ್ರತಿಯೊಬ್ಬರೂ ಹಿಂದಿನ ಅರ್ಧದಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ, ಪ್ರತಿಯೊಬ್ಬರೂ ಹಿಂದೆ ಪಡೆದಷ್ಟೇ ಕೂಲಿಯನ್ನು ಪಡೆಯುತ್ತಾರೆ. ಈ ರೀತಿಯಾಗಿ ಉತ್ಪಾದನೆಯಲ್ಲಿ ಮಿಗುತಾಯದ (ಅಥವಾ ಲಾಭಕ್ಕೆ ಸಮಾನವಾದದ್ದು) ಪಾಲು ಬದಲಾಗದೆ ಉಳಿಯುತ್ತದೆ ಮತ್ತು ತಾಂತ್ರಿಕ ಪ್ರಗತಿಯ ಪರಿಣಾಮವು ಲಾಭದ ಪ್ರಮಾಣವನ್ನು ಹೆಚ್ಚಿಸುವ ಬದಲು ಪ್ರತಿಯೊಬ್ಬರಿಗೂ ಕತ್ತೆ ಚಾಕರಿಯನ್ನು ಕಡಿಮೆ ಮಾಡುವ ಮೂಲಕ ಕಾರ್ಮಿಕರ ಜೀವನವನ್ನು ಸುಧಾರಿಸುತ್ತದೆ.
ಇಂತಹ ಒಂದು ಫಲಿತಾಂಶವು ಒಂದು ಬಂಡವಾಳಶಾಹಿ ಸಮಾಜದಲ್ಲಿ ಎಂದಿಗೂ ಸಂಭವಿಸುವುದಿಲ್ಲ, ಏಕೆಂದರೆ ಬಂಡವಾಳಶಾಹಿ ಸಮಾಜದಲ್ಲಿ ಆರ್ಥಿಕ ನಿರ್ಧಾರಗಳು ಅಧಿಕ ಲಾಭದ ಬಯಕೆಯಿಂದ ರೂಪುಗೊಂಡಿರುತ್ತವೆ. ವಾಸ್ತವವಾಗಿ, ಅಂತಹ ತಾಂತ್ರಿಕ ಪ್ರಗತಿಯನ್ನು ಅದು ಕೆಲಸ ಮಾಡುವ ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಲು ಸಾಧ್ಯವಿದೆ ಎಂಬ ಭರವಸೆಯಿದ್ದರೆ ಮಾತ್ರವೇ ಪರಿಚಯಿಸಲಾಗುತ್ತದೆ. ಅಂತಹ ತಾಂತ್ರಿಕ ಪ್ರಗತಿಯನ್ನು ಪರಿಚಯಿಸುವುದರೊಂದಿಗೆ ಉದ್ಯೋಗದ ಪ್ರಮಾಣವು ಅಗತ್ಯವಾಗಿ ಕುಗ್ಗುತ್ತದೆ ಮತ್ತು ಅದರೊಂದಿಗೆ ಕಾರ್ಮಿಕರ ಚೌಕಾಸಿ ಬಲವೂ ಕಡಿಮೆಯಾಗುತ್ತದೆ ಮತ್ತು ಈ ನಿರುದ್ಯೋಗದ ಹೆಚ್ಚಳವೇ ಉದ್ಯೋಗದಲ್ಲಿರುವವರ ಕೂಲಿ ದರದಲ್ಲಿ ಯಾವುದೇ ಏರಿಕೆಯನ್ನು ತಡೆಯುತ್ತದೆ. ಹೀಗಾಗಿ ಉದ್ಯೋಗದಲ್ಲಿರುವವರ ಕೂಲಿಯ ದರದಲ್ಲಿ ಯಾವುದೇ ಏರಿಕೆ ಇರುವುದಿಲ್ಲ. ಆದರೆ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ (ಪ್ರಸ್ತುತ ಸಂದರ್ಭದಲ್ಲಿ ಅರ್ಧದಷ್ಟು) ಇರುತ್ತದೆ. ಇದು ಉತ್ಪತ್ತಿಯಲ್ಲಿ ಉಂಟಾಗುವ ಮಿಗುತಾಯದ ಪಾಲನ್ನು ಹೆಚ್ಚಿಸುವ ಮೂಲಕ ತಾಂತ್ರಿಕ ಪ್ರಗತಿಯನ್ನು ಪರಿಚಯಿಸುವುದರ ಹಿಂದಿರುವ ನಿರೀಕ್ಷೆಗಳನ್ನು ಸಮರ್ಥಿಸುತ್ತದೆ.
ಮೂಲಭೂತ ವ್ಯತ್ಯಾಸ
ಈ ರೀತಿಯಲ್ಲಿ ಕೆಲಸ-ಹಂಚಿಕೆ ಮತ್ತು ಉತ್ಪನ್ನ-ಹಂಚಿಕೆಯ ನೈತಿಕತೆಯನ್ನು ಹೊಂದಿರುವ ಸಮಾಜ ಮತ್ತು ಲಾಭವನ್ನು ಹೆಚ್ಚಿಸುವ ಬಯಕೆಯಿಂದ ನಡೆಸಲ್ಪಡುವ ಸಮಾಜದ ನಡುವೆ ಒಂದು ಮೂಲಭೂತ ವ್ಯತ್ಯಾಸವಿದೆ. ಇದು ಪ್ರಾಸಂಗಿಕವಾಗಿ, ಒಂದು ಸಮಾಜವಾದಿ ಸಮಾಜವು ಖಾಸಗಿ ಮಾಲೀಕತ್ವವನ್ನು ತೊಡೆದುಹಾಕಬೇಕು, ಈ ಮೂಲಕ ಎಲ್ಲ ಸಂಸ್ಥೆಗಳೂ ಸರ್ಕಾರದ ಒಡೆತನದಲ್ಲಿರುತ್ತವೆ, ಆದರೆ ಎಲ್ಲ ಸಂಸ್ಥೆಗಳ ಎಲ್ಲಾ ಕ್ರಿಯೆಗಳೂ ಲಾಭ-ಪ್ರೇರಣೆಯ ಆಧಾರದ ಮೇಲೆ ನಡೆಯಬೇಕು ಎಂದು ಪ್ರತಿಪಾದಿಸುವ ಎಲ್ಲಾ ಸಿದ್ಧಾಂತಗಳು ಏಕೆ ತಪ್ಪಾಗಿವೆ ಎಂಬುದನ್ನೂ ತೋರಿಸುತ್ತದೆ. ಹೀಗೆ ಪ್ರಭುತ್ವದ ಒಡೆತನದಲ್ಲಿದ್ದರೂ ಲಾಭ-ಚಾಲಿತವಾಗಿರುವ ಸಂಸ್ಥೆಗಳನ್ನು ಒಳಗೊಂಡಿರುವ ಸಮಾಜವಾದೀ ವ್ಯವಸ್ಥೆ ಅಪರೂಪವೇನೂ ಅಲ್ಲ. ಆದರೆ ಅಂತಹ ಪರಿಕಲ್ಪನೆಯು, ಸಮಾಜವಾದ ಎಂಬ ವಿಚಾರಕ್ಕೇ ವಿರುದ್ಧವಾಗಿದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಉತ್ಪಾದನಾ ಸಾಧನಗಳ ಒಡೆತನದ ಬದಲಾವಣೆಯನ್ನು ಮಾತ್ರ ಒಳಗೊಂಡಿರುವ ಒಂದು ಸಮಾಜವಾದಿ ಅರ್ಥವ್ಯವಸ್ಥೆಯ ಕಲ್ಪನೆಯು, ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯ ರೀತಿಯಲ್ಲೇ ನಡೆಯುವ ಏಕಸ್ವಾಮ್ಯ-ಪ್ರಾಬಲ್ಯವಲ್ಲದ ಒಂದು ಸ್ಪರ್ಧಾತ್ಮಕ ಬಂಡವಾಳಶಾಹಿ ಅರ್ಥವ್ಯವಸ್ಥೆಯ ರೀತಿಯೂ ಸಹ, ಸಮಾಜವಾದದ ಕಲ್ಪನೆಗೇ ವಿರುದ್ಧವಾಗಿದೆ. ಈಗಾಗಲೇ ಹೇಳಿದ ಅಂತಹ ಒಂದು ಕಲ್ಪನೆಯು ಒಂದು ಹಂತದಲ್ಲಿ ಸಾಕಷ್ಟು ವ್ಯಾಪಕವಾಗಿ ನೆಲೆಗೊಂಡಿತ್ತು ಮತ್ತು ಯುಗೊಸ್ಲಾವಿಯಾದ ಸಮಾಜವಾದಿ ಅರ್ಥವ್ಯವಸ್ಥೆಯು ಅದರಿಂದ ಪ್ರೇರಿತವಾಗಿದೆ ಎಂದು ಭಾವಿಸಲಾಗಿತ್ತು. ಪೂರ್ವ ಯುರೋಪಿನ ದೇಶಗಳ ಪೈಕಿ ಯುಗೊಸ್ಲಾವಿಯಾ ಮಾತ್ರವೇ ಗಮನಾರ್ಹ ನಿರುದ್ಯೋಗ ಮತ್ತು ಆರ್ಥಿಕ ಏರಿಳಿತಗಳಿಂದ ಕೂಡಿದ ಸಮಾಜವಾದಿ ಅರ್ಥವ್ಯವಸ್ಥೆಯಾಗಿತ್ತು ಎಂಬುದು ಆಶ್ಚರ್ಯವೇನಲ್ಲ. ಪೂರ್ವ ಯುರೋಪಿನ ದೇಶಗಳ ಪೈಕಿ ಯುಗೊಸ್ಲಾವಿಯಾ ಮಾತ್ರವೇ ಇಂತಹ ವ್ಯವಸ್ಥೆಯಾಗಿತ್ತು. ಈ ಏರಿಳಿತಗಳು ಒಂದು ಸಮಾಜವಾದಿ ಅರ್ಥವ್ಯವಸ್ಥೆಯಲ್ಲಿ ಹಿಂದಿನ ಯಾವುದೋ ಒಂದಿಷ್ಟು ಹೂಡಿಕೆಗಳಿಂದಾಗಿ ಉಂಟಾಗಿರುವ ಏರಿಳಿಕೆಗಳಿಗೆ ಸಂಬಂಧಪಟ್ಟಿರುವುದಿಲ್ಲ.
ಸಮಾಜವಾದ ಮಾತ್ರವೇ ಮಾನವಕುಲವು ಪ್ರಮುಖ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗಳ ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂಬ ತರ್ಕವು ಸಮಾಜವಾದದ ಆಶಯವನ್ನು ಬಹಳಷ್ಟು ಬಲಪಡಿಸುತ್ತದೆ. ಮಾನವಕುಲವನ್ನು ಮುಂದೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿರುವ ಪ್ರಮುಖ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗಳನ್ನು ಬಂಡವಾಳಶಾಹಿ ಪರಿಸ್ಥಿತಿಗಳಲ್ಲಿ ಪರಿಚಯಿಸಿದಾಗ ಅವು ದುಡಿಯುವ ಜನರಿಗೆ ಕಷ್ಟ-ಕಾರ್ಪಣ್ಯಗಳನ್ನು ತಂದರೆ, ಆಗ ಈ ಅಂಶವು ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧವಾಗಿ ಒಂದು ಪ್ರಬಲ ವಾದವಾಗುತ್ತದೆ. ದುಡಿಯುವ ಜನರ ಹಿತಗಳನ್ನು ಬಲಿಗೊಟ್ಟು ಮಾತ್ರವೇ, ತಾಂತ್ರಿಕ ಪ್ರಗತಿಯನ್ನು ಪರಿಚಯಿಸುವ ಬಂಡವಾಳಶಾಹಿಯ ವಿಲಕ್ಷಣ ಗುಣವನ್ನು ಮಾರ್ಕ್ಸ್ “ಕೊಲ್ಲಲ್ಪಟ್ಟವರ ತಲೆಬುರುಡೆಗಳಿಂದ ಮಾತ್ರವೇ ಅಮೃತವನ್ನು ಕುಡಿಯುವ ವಿಕಾರ ರೂಪದ ಅನಾಗರಿಕ ವಿಗ್ರಹ”ಕ್ಕೆ ಹೋಲಿಸುತ್ತಾರೆ (ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಭವಿಷ್ಯದ ಫಲಿತಾಂಶಗಳು ಎಂಬ ಅವರ ಲೇಖನದಲ್ಲಿ). ಮಾನವಕುಲವು ಪ್ರಮುಖ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ಹೊಸ್ತಿಲಲ್ಲಿದ್ದರೆ, ಅಂತಹ ಪ್ರಗತಿಗಳ ಲಾಭವನ್ನು ಪಡೆಯಲು ಸಮಾಜವಾದದ ಅವಶ್ಯಕತೆಯು ಅಗಾಧವಾಗುತ್ತದೆ. ಸಮಾಜವಾದವು ಆಗ ಒಂದು ಹೆಚ್ಚು ಸಮದರ್ಶಿಯಾದ ಸಮಾಜವಾಗುತ್ತದೆ ಮಾತ್ರವಲ್ಲ, ಉನ್ನತ ತಾಂತ್ರಿಕ ಪ್ರಗತಿಯನ್ನು ತರುವಲ್ಲಿ ಮಾನವ ಬುದ್ಧಿಮತ್ತೆಗೆ ನ್ಯಾಯವನ್ನು ಒದಗಿಸಬಲ್ಲದು, ಏಕೆಂದರೆ ಅದು ತನ್ನ ಸಮದರ್ಶಿ ಸ್ವಭಾವದಿಂದಾಗಿ ಕೆಲಸ ಮತ್ತು ಉತ್ಪತ್ತಿಯನ್ನು ಎಲ್ಲರ ನಡುವೆ ಸಮಾನವಾಗಿ ಹಂಚಿಕೊಳ್ಳುವ ಒಂದು ಸಮಾಜವಾಗಿದೆ.
ಸಮಾಜವಾದ ಮಾತ್ರವೇ ಮಾನವಕುಲವು ಪ್ರಮುಖ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗಳ ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂಬ ತರ್ಕವು ಸಮಾಜವಾದದ ಆಶಯವನ್ನು ಬಹಳಷ್ಟು ಬಲಪಡಿಸುತ್ತದೆ. ಮಾನವಕುಲವನ್ನು ಮುಂದೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿರುವ ಪ್ರಮುಖ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗಳನ್ನು ಬಂಡವಾಳಶಾಹಿ ಪರಿಸ್ಥಿತಿಗಳಲ್ಲಿ ಪರಿಚಯಿಸಿದಾಗ ಅವು ದುಡಿಯುವ ಜನರಿಗೆ ಕಷ್ಟ-ಕಾರ್ಪಣ್ಯಗಳನ್ನು ತಂದರೆ, ಆಗ ಈ ಅಂಶವು ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧವಾಗಿ ಒಂದು ಪ್ರಬಲ ವಾದವಾಗುತ್ತದೆ.
ವಾಸ್ತವವಾಗಿ, ವೈಜ್ಞಾನಿಕ ಪ್ರಗತಿಯು ಹೆಚ್ಚು ಅದ್ಭುತವಾದಷ್ಟೂ, ಅಂತಹ ಪ್ರಗತಿಯ ಪೂರ್ಣ ಪ್ರಯೋಜನವನ್ನು ಪಡೆಯಬಹುದಾದ ಒಂದು ಸಮಾಜದ ಅಗತ್ಯವೂ ಅಷ್ಟೇ ಹೆಚ್ಚು ತುರ್ತಿನದಾಗುತ್ತದೆ ಮತ್ತು ಸಮಾಜವಾದ ಮಾತ್ರವೇ ಅಂತಹ ಒಂದು ಸಮಾಜವನ್ನು ಪ್ರತಿನಿಧಿಸುತ್ತದೆ. ಹಾಗಾಗಿ, ಬಂಡವಾಳಶಾಹಿಯ ಅಡಿಯಲ್ಲಿ ಎ.ಐ. ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದಾದರೂ, ಎ.ಐ. ಪ್ರತಿನಿಧಿಸುವ ಪ್ರಗತಿಯ ಅದ್ಭುತ ಸ್ವರೂಪವೇ ಸಮಾಜವಾದದ ಆಶಯವನ್ನು ಬೆಂಬಲಿಸುವ ಒಂದು ಪ್ರಬುದ್ಧ ಮತ್ತು ದೊಡ್ಡ ಕಾರಣವಾಗುತ್ತದೆ.
ನಿಜ, ಉದ್ಯೋಗ-ವಿನಾಶದ ಹೊರತಾಗಿ ಎ.ಐ. ಸಾಮಾಜಿಕವಾಗಿ ಇತರ ಹಾನಿಕಾರಕ ಪರಿಣಾಮಗಳನ್ನು ಬೀರಬಹುದಾದ್ದರಿಂದ, ಅದನ್ನು ಬಳಸಿಕೊಳ್ಳುವಲ್ಲಿ ಒಂದು ಸಮಾಜವಾದಿ ಸಮಾಜವೂ ಸಹ ವಿವೇಚನಾಯುಕ್ತವಾಗಿರಬೇಕಾಗುತ್ತದೆ. ಇಲ್ಲಿ ಸರಳವಾಗಿ ಹೇಳಬಹುದಾದ ಅಂಶವೆಂದರೆ, ಸಮಾಜವಾದಿ ಸಮಾಜ ಮಾತ್ರವೇ ಎ.ಐ. ನ ಉದ್ಯೋಗ-ವಿನಾಶಕಾರಿ ಎಂದು ಭಾವಿಸಬಹುದಾದ ಪರಿಣಾಮವನ್ನು ನಿಭಾಯಿಸಬಲ್ಲದು ಮಾತ್ರವಲ್ಲ, ವಾಸ್ತವವಾಗಿ ಅದರ ಪ್ರಯೋಜನವನ್ನು ಕೂಡ ಪೂರ್ಣವಾಗಿ ಪಡೆಯಬಲ್ಲದು.
