ಬೆಂಗಳೂರು : 2012–13 ಹಾಗೂ 2014–15ನೇ ಸಾಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಶಿಕ್ಷಕರ ನೇಮಕಾತಿ ಹಗರಣ ಸಂಬಂದ ಸುಳ್ಳು ದಾಖಲೆ ನೀಡಿ ನೇಮಕಗೊಂಡಿದ್ದ 11 ಮಂದಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕರನ್ನು ಮಂಗಳವಾರ ಬಂಧಿಸಿದೆ.
2012–13 ಹಾಗೂ 2014–15ನೇ ಸಾಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ (ಪ್ರೌಢ) ಅವರು ವಿಧಾನಸೌಧ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದರು. ಈ ಸಂಬಂಧ 15 ದಿನಗಳ ಹಿಂದೆ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿತ್ತು. ಐಪಿಸಿ ಸೆಕ್ಷನ್ 420, 465, 468, 471 ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.
ಇದನ್ನೂ ಓದಿ : ಪಿಎಸ್‌ಐ ಪರೀಕ್ಷಾ ಅಕ್ರಮ : ಕಲಬುರಗಿ ಜಿಲ್ಲೆಗ ಸಿಕ್ಕಿದ್ದ ಸೀಟುಗಳೆಷ್ಟು ಗೊತ್ತೆ?!
ಪ್ರಕರಣದ ಕಡತ ಹಾಗೂ ದಾಖಲೆಗಳನ್ನು ಸುಪರ್ದಿಗೆ ಪಡೆದಿರುವ ಸಿಐಡಿ ಅಧಿಕಾರಿಗಳು, ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಸಿ ಕರ್ತವ್ಯನಿರತ 11 ಸಹ ಶಿಕ್ಷಕರನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆಗೆ ವಿಶೇಷ ತಂಡ ತನಿಖೆ ಮುಂದುವರಿಸಿದೆ. ಕುಣಿಗಲ್ ತಾಲೂಕಿನ ಕೊಡವೆತ್ತಿ ಪ್ರೌಢಶಾಲೆಯ ಸಹ ಶಿಕ್ಷಕಿ ರಾಜೇಶ್ವರಿ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನ ಕಣಿವೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಶಮೀನಾಜ್ ಬಾನು, ತುರುವೆಕೆರೆ ತಾಲೂಕಿನ ಹುಲಿಕಲ್ ಪ್ರೌಢಶಾಲೆಯ ಶಿಕ್ಷಕ ಬಿ. ಎನ್. ನವೀನ್ ಹನುಮನಗೌಡ, ಹುಲಿಕೆರೆ ಪ್ರೌಢಶಾಲೆಯ ಬಿ.ಎಂ.ಪ್ರಸನ್ನ, ಹೊಳಗೇರಿಪುರ ಪ್ರೌಢಶಾಲೆಯ ಆರ್.ಹರೀಶ್, ನಾಗಸಂದ್ರ ಪ್ರೌಢಶಾಲೆಯ ನಾಗರತ್ನ, ಅಮೃತೂರು ಪ್ರೌಢಶಾಲೆಯ ಜಿ.ಎನ್. ನವೀನ್ ಕುಮಾರ್, ತಿಪಟೂರು ತಾಲೂಕಿನ ಅಲ್ದೂರಿನ ಪ್ರೌಢಶಾಲೆಯ ಶಿಕ್ಷಕಿ ಕಮಲಾ, ಗುಪ್ಪಿ ತಾಲೂಕಿನ ಕೆ. ಮತ್ತಿಘಟ್ಟ ಸರ್ಕಾರಿ ಕಂಪೋಸಿಟ್ ಪ್ರೌಢಶಾಲೆ ಎಸ್. ದೇವೇಂದ್ರ ನಾಯ್ಕ್ ಹಾಗೂ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಮಹೇಶ್ ಶೀಮಂತ ಸೂಸಲಾಡಿ ಎಂಬುವರನ್ನು ಸಿಐಡಿ ಬಂಧಿಸಿದೆ.
‘ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಹೇಗಾಯಿತು? ಹಣದ ವ್ಯವಹಾರ ನಡೆದಿದೆಯಾ? ಎಂಬಿತ್ಯಾದಿ ಸಂಗತಿಗಳು ತನಿಖೆಯಿಂದ ಹೊರಬೀಳಬೇಕಿದೆ’ ಕೆಲ ರಾಜಕಾರಣಿಗಳು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ವಿಧಾನಸೌಧದ ಸುತ್ತ ಜನ ಮಾತನಾಡಿಕೊಳ್ಳುತ್ತಿದ್ದಾರೆ.