ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕರ ಏಟಿಗೆ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ.
ರಾಮಚಂದ್ರಾಪುರದ ಆರ್.ಡಿ.ಇಂಟರ್ನ್ಯಾಷನಲ್ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ನಿಶಿತಾ ಎಂಬ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ಶಿಕ್ಷಕನ ಹೊಡೆತಕ್ಕೆ ವಿದ್ಯಾರ್ಥಿನಿ ತರಗತಿಯಲ್ಲೇ ಎಚ್ಚರ ತಪ್ಪಿ ಬಿದ್ದಿದ್ದಾಳೆ.
ಮೊದಲಿಗೆ ವಿದ್ಯಾರ್ಥಿನಿ ನಿಶಿತಾಗೆ ಶಿಕ್ಷಕರು ಒಂದು ಏಟು ಹೊಡೆದಿದ್ದಾರೆ. ನಂತರ ಮತ್ತೆ ಹೊಡೆಯುವ ವೇಳೆ ಈಕೆ ತಪ್ಪಿಸಿಕೊಳ್ಳಲೆತ್ನಿಸಿದ್ದು, ನಂತರ ತರಗತಿಯಲ್ಲೇ ಮೂರ್ಛೆ ಹೋಗಿದ್ದಳು. ಬಳಿಕ ಅವಳನ್ನು ತಕ್ಷಣ ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವಿಗೀಡಾದಳು.
ಈ ಸಂಬಂಧ ಗಂಗಮ್ಮನ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ, ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.