ಸದನದಲ್ಲಿ ತೀವ್ರ ಅವಮಾನ: ಮುಖ್ಯಮಂತ್ರಿಯಾಗುವವರೆಗೂ ಸದನ ಪ್ರವೇಶಿಸುವುದಿಲ್ಲವೆಂದ ಚಂದ್ರಬಾಬು ನಾಯ್ಡು!

ಅಮರಾವತಿ: ಆಂಧ್ರಪ್ರದೇಶ ರಾಜ್ಯದ ಆಡಳಿತಾರೂಢ ವೈಎಸ್‌ಆರ್‌ಪಿ ಪಕ್ಷದ ಸದಸ್ಯರು  ಮಾಡಿರುವ ತೀವ್ರ ವಾಗ್ದಾಳಿ ಮತ್ತು ಅಪಮಾನದಿಂದಾಗಿ ತೀವ್ರತರವಾದ ನೊಂದಿರುವೆನು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಮತ್ತೆ ಮುಖ್ಯಮಂತ್ರಿಯಾಗುವವರೆಗೂ ವಿಧಾನಸಭೆಯ ಸದನ ಪ್ರವೇಶಿಸುವುದಿಲ್ಲವೆಂದು ಶಪಥ ಗೈದಿದ್ದಾರೆ.

ಸದನ ಆರಂಭವಾದಾಗಿನಿಂದಲೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ಶಾಸಕರು ಟಿಡಿಪಿ ಪಕ್ಷದ ಮುಖ್ಯಸ್ಥರನ್ನು ನಿಂದಿಸುವುದರಲ್ಲೇ ನಿರತರಾಗಿದ್ದಾರೆ. ಒಂದೆಡೆ ಸಚಿವ ಕೊಡಾಲಿ ನಾನಿ ಚಂದ್ರಬಾಬು ನಾಯ್ಡು ಅವರನ್ನು ಲುಚ್ಚಾ ಎನ್ನುತ್ತಿದ್ದರೆ, ಮತ್ತೊಂದೆಡೆ ಮತ್ತೊಬ್ಬ ಸಚಿವ ಕನ್ನಬಾಬು ಸೇರಿದಂತೆ ಕೆಲ ಶಾಸಕರು ತಮ್ಮದೇ ಶೈಲಿಯಲ್ಲಿ ಅವಚ್ಯ ಶಬ್ದಗಳನ್ನು ಬಳಸಿ ಚಂದ್ರಬಾಬು ನಾಯ್ಡು ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ನನ್ನ ಮೇಲೆ ಮಾತ್ರವಲ್ಲದೇ ನನ್ನ ಕುಟುಂಬಸ್ಥರ ವಿರುದ್ಧವೂ, ನನ್ನ ಪತ್ನಿ ವಿರುದ್ಧವೂ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ಆಘಾತವಾಗಿದ್ದು, ನಾನು ಮತ್ತೆ ಮುಖ್ಯಮಂತ್ರಿಯಾಗುವವರೆಗೂ ಸದನಕ್ಕೆ ಕಾಲಿಡುವುದಿಲ್ಲ ಎಂದು ಭಾವುಕರಾಗಿ ನುಡಿದಿದ್ದಾರೆ.

‘ಇಷ್ಟು ವರ್ಷಗಳ ನನ್ನ ರಾಜಕೀಯ ಜೀವನದ ಇತಿಹಾಸದಲ್ಲಿ ಸಾಕಷ್ಟು ಹಿರಿಯ ನಾಯಕರೊಂದಿಗೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಯೂ ಹಲವರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಕಳೆದ ಎರಡೂವರೆ ವರ್ಷಗಳಿಂದ ನನ್ನ ಮೇಲೆ ಸದನದಲ್ಲಿ ಹಲವು ಟೀಕೆಗಳು ಕೇಳಿ ಬರುತ್ತಿವೆ. ನಾನು ವಿರೋಧ ಪಕ್ಷದಲ್ಲಿದ್ದಾಗಲೂ.. ಆಡಳಿತದಲ್ಲಿದ್ದಾಗಲೂ ಇಂತಹ ಕೆಟ್ಟ ಅನುಭವವನ್ನು ಕಂಡಿರಲಿಲ್ಲ.

ದೊಡ್ಡ ದೊಡ್ಡ ನಾಯಕರೊಂದಿಗಾಗದ ಅಪಮಾನಗಳನ್ನು ಈಗ ಎದುರಿಸುತ್ತಿದ್ದೇವೆ. ನಿನ್ನೆ ಕೂಡ ಮುಖ್ಯಮಂತ್ರಿ ಜಗನ್ ಮೋಹನ್‌ ರೆಡ್ಡಿ ಅವರು ಸದನಕ್ಕೆ ಗೈರಾದ ಕುರಿತು ಕೆಟ್ಟದಾಗಿ ನನ್ನ ಬಗ್ಗೆ ಮಾತನಾಡಿದರು. ಈ ಸದನದಲ್ಲಿ ಹೇಳಲಾಗದ ಅವಮಾನಗಳಿಗೆ ಒಳಗಾದ ಅನೇಕ ಸನ್ನಿವೇಷಗಳಿವೆ. ವೈಯಕ್ತಿಕವಾಗಿ ಮತ್ತು ಪಕ್ಷದ ದೃಷ್ಟಿಯಿಂದ ಟೀಕಿಸುತ್ತಿದ್ದಾರೆ ಎಂದು ಗದ್ಗಧಿತರಾಗಿ ಹೇಳಿದರು.

ಸದನದಲ್ಲಿ ಕೃಷಿ ಕ್ಷೇತ್ರದ ಕುರಿತು ನಡೆಯುತ್ತಿದ್ದ ಚರ್ಚೆಯ ವೇಳೆಯಲ್ಲಿ ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ಹತಾಶೆಯನ್ನು ಹೊರಹಾಕಿದರು.

Donate Janashakthi Media

Leave a Reply

Your email address will not be published. Required fields are marked *