ಹೊಸಪೇಟೆ/ ಕೊಪ್ಪಳ :ತುಂಗಭದ್ರಾ ಅಣೆಕಟ್ಟಿನ ಒಟ್ಟು 33 ಗೇಟ್‌ಗಳ ಪೈಕಿ 19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಆಗಿದ್ದು, ಆತಂಕ ಮೂಡಿಸಿದೆ. ಶನಿವಾರ ಮಧ್ಯರಾತ್ರಿ ಸರಪಳಿ ತುಂಡಾಗಿ 35 ಸಾವಿರ ಕ್ಯೂಸೆಕ್ ನೀರು ಏಕಾಏಕಿ ನದಿಗೆ ಹರಿದು ಬಂದಿದೆ ಎಂದು ತಿಳಿದುಬಂದಿದೆ.
70 ವರ್ಷಗಳ ನಂತರ ಮೊದಲ ಬಾರಿಗೆ ಇಂಥದ್ದೊಂದು ಘಟನೆ ನಡೆದಿದೆ ಎನ್ನಲಾಗುತ್ತಿದೆ. ತುಂಗಭದ್ರಾ ಡ್ಯಾಂನಿಂದ ಸುಮಾರು 60 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಿದ ಬಳಿಕವೇ ಇದರ ಪುನಶ್ಚೇತನ ಕೆಲಸ ನಡೆಯುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಭಾನುವಾರ ಬೆಳ್ಳಂಬೆಳಗ್ಗೆ ಅಣೆಕಟ್ಟೆಗೆ ಭೇಟಿ ನೀಡಿದ್ದರು. ಶನಿವಾರ ರಾತ್ರಿ ನಡೆದ ಘಟನೆಯ ನಂತರ ತುಂಗಭದ್ರಾ ಅಣೆಕಟ್ಟಿನ ಎಲ್ಲಾ 33 ಗೇಟ್‌ಗಳಿಂದ ನೀರು ಬಿಡಲಾಗುತ್ತಿದೆ. ಸದ್ಯ ಅಣೆಕಟ್ಟಿನಿಂದ ಸುಮಾರು ಒಂದು ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಬಿಡಲಾಗುತ್ತಿದೆ.
ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀಡು ಹರಿದು ಬರುತ್ತಿದೆ. ಇದರಿಂದ ಕಂಪ್ಲಿ ಪಟ್ಟಣದ ಜನರಲ್ಲಿ ಆತಂಕ ಮೂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಂಪ್ಲಿ ಸೇತುವೆ ಬಳಿ ಪೊಲೀಸ್ ಬಂದೋಬಸ್ಥ ನಿಯೋಜಿಸಲಾಗಿದೆ.