ಬಿಬಿಸಿ ಇಂಡಿಯಾ ಕಚೇರಿಯಲ್ಲಿ ಮುಂದುವರಿದ ಐಟಿ ದಾಳಿ : ಹಲವರಿಂದ ಖಂಡನೆ

ಹೊಸದಿಲ್ಲಿ: ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಸಂಸ್ಥೆಯ ದಿಲ್ಲಿ ಮತ್ತು ಮುಂಬಯಿ ಕಚೇರಿಗಳಲ್ಲಿ ಮಂಗಳವಾರ ಪರಿಶೀಲನೆ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ ಆರಂಭವಾದ ಪರಿಶೀಲನೆ, ರಾತ್ರಿಯಿಡೀ ಮುಂದುವರಿದಿದ್ದು, ಬುಧವಾರ ಕೂಡ ನಡೆಯುತ್ತಿದೆ.

2002ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಆರೋಪಿಸುವ ಎರಡು ಕಂತುಗಳ ಸಾಕ್ಷ್ಯಚಿತ್ರ ಬಿಡುಗಡೆಯಾಗಿತ್ತು.  ದೇಶಾದ್ಯಂತ ಪರ – ವಿರೋಧದ ಚರ್ಚೆಗೆ ಕಾರಣವಾಗಿತ್ತು.  ಈ ಚರ್ಚೆಗಳು ನಡೆದ ಕೆಲವು ವಾರಗಳಲ್ಲಿಯೇ ಐಟಿ ಇಲಾಖೆ ಈ ಕ್ರಮ ಕೈಗೊಂಡಿರುವದನ್ನು ನೋಡಿದರೆ ಹೆದರಿಸುವ ತಂತ್ರವಾಗಿದೆ ಎಂದು ಸಾರ್ವಜನಿಕರು ಸರಕಾರದ ನಡೆಯನ್ನು ಖಂಡಿಸಿದ್ದಾರೆ.

ತನ್ನ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿರುವ ಬಿಬಿಸಿ, ವರ್ಕ್ ಫ್ರಂ ಹೋಮ್ ಮಾಡುವಂತೆ ಮನವಿ ಮಾಡಿದೆ. “ವೈಯಕ್ತಿಕ ಆದಾಯದ ಬಗ್ಗೆ ಐಟಿ ಅಧಿಕಾರಿಗಳ ಪ್ರಶ್ನೆಗೆ ಉದ್ಯೋಗಿಗಳು ಉತ್ತರಿಸುವುದಕ್ಕೆ ನಿರಾಕರಿಸಬಹುದು. ಅವರು ತಮ್ಮ ಸಂಬಳ ಕುರಿತಾದ ಪ್ರಶ್ನೆಗೆ ಮಾತ್ರ ಉತ್ತರಿಸಿದರೆ ಸಾಕು” ಎಂದಿರುವ ಬಿಬಿಸಿ, ಐಟಿ ಅಧಿಕಾರಿಗಳ ಪ್ರಶ್ನೆಗೆ ಸೂಕ್ತವಾಗಿ ಉತ್ತರಿಸುವ ಮೂಲಕ ಸಹಕಾರ ಕೊಡಬೇಕು ಎಂದು ಸಲಹೆ ನೀಡಿದೆ.

“ಆದಾಯ ತೆರಿಗೆ ಅಧಿಕಾರಿಗಳು ಹೊಸದಿಲ್ಲಿ ಮತ್ತು ಮುಂಬಯಿಯ ಕಚೇರಿಗಳಲ್ಲಿ ಇದ್ದಾರೆ. ನಾವು ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಈ ಸನ್ನಿವೇಶ ಆದಷ್ಟು ಬೇಗನೆ ಪರಿಹಾರವಾಗಲಿದೆ ಎಂದು ಆಶಯ ಹೊಂದಿದ್ದೇವೆ” ಎಂಬುದಾಗಿ ಮಂಗಳವಾರ ಮಧ್ಯಾಹ್ನ ಬಿಬಿಸಿ ಟ್ವೀಟ್ ಮಾಡಿತ್ತು.

ಕೆಲವು ದಾಖಲೆಗಳನ್ನು ಐಟಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದು, ಪತ್ರಕರ್ತರ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಕೂಡ ಕೊಂಡೊಯ್ಯಲಾಗಿದೆ. ಪರಿಶೀಲನೆ ಆರಂಭವಾದ ಆರು ಗಂಟೆಗಳ ಬಳಿಕವಷ್ಟೇ ಉದ್ಯೋಗಿಗಳು ಕಚೇರಿಯಿಂದ ಹೊರಗೆ ಹೋಗಲು ಅವಕಾಶ ನೀಡಲಾಗಿದೆ. ಅದಕ್ಕೂ ಮುನ್ನ ಅವರ ಲ್ಯಾಪ್‌ಟಾಪ್‌ಗಳನ್ನು ಪರಿಶೀಲನೆ ಮಾಡಲಾಗಿದೆ. ಕೆಲವು ಉದ್ಯೋಗಿಗಳು ಐಟಿ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದರು.

ಇದನ್ನೂ ಓದಿಮೋದಿ ಕುರಿತ ಸಾಕ್ಷ್ಯಚಿತ್ರ ವಿವಾದ; ಬಿಬಿಸಿ ಮೇಲೆ ಕೆಂಡವಾದ ಕೇಂದ್ರ – ಆದಾಯ ತೆರಿಗೆ ಇಲಾಖೆಯಿಂದ ದಾಳಿ

ಹಲವರಿಂದ ಖಂಡನೆ : ಬಿಬಿಸಿ ಸುದ್ದಿ ಸಂಸ್ಥೆಯ ಮೇಲೆ ಐಟಿ(ಆದಾಯ ತೆರಿಗೆ ಇಲಾಖೆ) ಶೋಧ ನಡೆಸಿರುವುದನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ) ಖಂಡಿಸಿದೆ. ಬಿಬಿಸಿಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡಿದ ಬೆನ್ನಲ್ಲೇ ಈ ದಾಳಿ ನಡೆದಿರುವುದನ್ನು ನೋಡಿದರೆ, ಮಾಧ್ಯಮವನ್ನು ಭಯದಲ್ಲಿಟ್ಟು, ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಇದಾಗಿದೆ ಎಂದು ಕೆಯುಡಬ್ಲ್ಯೂಜೆ ಪ್ರತಿಕ್ರಿಯಿಸಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ನಾಲ್ಕನೇ ಅಂಗವೆಂದು ಕರೆಯುವ ಮಾಧ್ಯಮ ಬಲಿಷ್ಠವಾಗಿದ್ದರೆ ಮಾತ್ರ ಪ್ರಜಾಪ್ರಭುತ್ವ ಸದೃಢವಾಗಿರಲು ಸಾಧ್ಯ. ಆದರೆ ಮಾಧ್ಯಮವನ್ನು ಹೆದರಿಸಿ ಭಯದಲ್ಲಿರಿಸುವ ಪ್ರಯತ್ನ ಖಂಡನೀಯ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ಈ ಬಗ್ಗೆ ಬೆಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಆರ್‌. ಶ್ರೀಧರ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಪಿ ಮಲ್ಲಪ್ಪ ಅವರು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಇಲ್ಲಿ ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಅದರಲ್ಲೂ ವಿಶೇಷವಾಗಿ ಮಾಧ್ಯಮಗಳು ಸ್ವತಂತ್ರ್ಯವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತ, ಸಮಾಜವನ್ನು ಸರಿದಾರಿಯಲ್ಲಿ ನಡೆಯಲು ಸಹಕಾರಿಯಾಗಿದೆ. ಅಂತಹದರಲ್ಲಿ ಇದೀಗ ಪ್ರತಿಷ್ಠಿತ ಬಿಬಿಸಿ ಮಾಧ್ಯಮದ ದೆಹಲಿ ಕಚೇರಿ ಮೇಲೆ ಐಟಿ ಶೋಧ ಮಾಡಿರುವುದು ತೀವ್ರ ಖಂಡನೀಯ’ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *