ಟಾಟಾಗಳಿಗೆ ಏರ್ ಇಂಡಿಯ ಮಾರಾಟ: ಹಲವು ಲಕ್ಷ ಕೋಟಿ ರೂ.ಗಳ ಮೌಲ್ಯದ ರಾಷ್ಟ್ರೀಯ ಸೊತ್ತು ಕೇವಲ 18 ಸಾವಿರ ಕೋಟಿ ರೂ.ಗೆ ಮತ್ತೆ ಖಾಸಗಿಯವರಿಗೆ-ಸಿಐಟಿಯು ಖಂಡನೆ

ಗೃಹ ಮಂತ್ರಿಗಳ ನೇತೃತ್ವದ ಮಂತ್ರಿಗುಂಪು(ಜಿ.ಒ.ಎಂ.) ದೇಶದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯದ 100% ಶೇರುದಾರಿಕೆಯನ್ನು ಟಾಲೆಸ್ ಪ್ರೈವೇಟ್‍ ಲಿ. ಎಂಬ ಕಂಪನಿಗೆ ಮಾರುವ ವ್ಯವಹಾರಕ್ಕೆ ಮಂಜೂರಾತಿ ನೀಡಿದೆ ಎಂದು ವರದಿಯಾಗಿದೆ. ಈ ಮಾರಾಟ ವ್ಯವಹಾರದಲ್ಲಿ ಏರ್‍ ಇಂಡಿಯಾ ಎಕ್ಸ್‌ಪ್ರೆಸ್‍ ಮತ್ತು ಎ.ಐ.ಎಸ್‍.ಎ.ಟಿ.ಎಸ್‍.ನಲ್ಲಿರುವ ಏರ್‍ ಇಂಡಿಯಾದ ಶೇರುಗಳನ್ನೂ ಮಾರಲಾಗಿದೆ. ಟಾಲೆಸ್ ಎಂಬುದು ದೇಶದ ಪ್ರಮುಖ ದೊಡ್ಡ ಬಂಡವಾಳಿಗ ಗುಂಪಾದ ಟಾಟಾ ಸನ್ಸ್ ಈ ವ್ಯವಹಾರಕ್ಕಾಗಿಯೇ ರಚಿಸಿರುವ ‘ಎಸ್‍.ಪಿ.ವಿ.(ವಿಶೇಷ ಉದ್ದೇಶದ ವಾಹಕ). ಈ ಮೂಲಕ  ದೇಶದ ಹೆಮ್ಮೆಗಳಲ್ಲಿ ಒಂದಾದ ‘ಏರ್‍ ಇಂಡಿಯಾ’ವನ್ನು ಖಾಸಗಿ ಏಕಸ್ವಾಮ್ಯ ಗುಂಪು ಟಾಟಾಗಳಿಗೆ ಮಾರಲಾಗಿದೆ, ಪುಕ್ಕಟೆಯಾಗಿಯಷ್ಟೇ ಅಲ್ಲ, ಋಣಾತ್ಮಕ ಬೆಲೆಗೆ ಮಾರಲಾಗಿದೆ ಎಂದು ಸಿಐಟಿಯು ಈ ಮಾರಾಟ ವ್ಯವಹಾರವನ್ನು ಬಲವಾಗಿ ಖಂಡಿಸಿದೆ.

68 ವರ್ಷಗಳ ಹಿಂದೆ ಭಾರತ ಸರಕಾರ ತಮ್ಮಿಂದ ಕಿತ್ತುಕೊಂಡದ್ದನ್ನು ಟಾಟಾಗಳು ಈಗ 18,000 ಕೋಟಿ ರೂ.ಗಳನ್ನು ತೆತ್ತು ಮರಳಿ ಪಡೆದಿದ್ದಾರೆ ಎಂಬಂತೆ ಪ್ರಚಾರ ನಡೆಯುತ್ತಿದೆ. ಆದರೆ ವಾಸ್ತವ ತದ್ವಿರುದ್ಧವಾಗಿದೆ.

ಸ್ವಾತಂತ್ರ್ಯದ ನಂತರ ಭಾರತ ಸರಕಾರ, ಆಗ ಅದಕ್ಷವಾಗಿ ನಡೆಯುತ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆಗಳನ್ನು ವಹಿಸಿಕೊಂಡು 1953ರಲ್ಲಿ ರಾಷ್ಟ್ರೀಕರಿಸಿ ಒಂದೇ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ರಚಿಸಿದ ನಂತರ  ರಾಷ್ಟ್ರೀಯ ಖಜಾನೆಯಿಂದ ಹಲವು ಲಕ್ಷ ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ಅದರ ಮೂಲರಚನಾ ನೆಲೆಯನ್ನು, ದೇಶದಲ್ಲೂ ವಿದೇಶಗಳಲ್ಲೂ ದೊಡ್ಡ ಸಂಖ್ಯೆಯ ವಿಮಾನಗಳ ಪಡೆಯನ್ನು ಮತ್ತು ಸೊತ್ತುಗಳನ್ನು ಕಟ್ಟಿ ಬೆಳೆಸಲಾಗಿದೆ.

ದೇಶದ ಎಲ್ಲ ಭಾಗಗಳನ್ನು, ಲಾಭ-ನಷ್ಟದ ದೃಷ್ಟಿಯಿಂದಷ್ಟೇ ನೋಡದೆ ಸಂಪರ್ಕಿಸುವುದೂ ಸೇರಿದಂತೆ ರಾಷ್ಟ್ರೀಕರಣದ ಮೂಲ ಉದ್ದೇಶಗಳನ್ನು ಈಡೇರಿಸುತ್ತಲೇ ಲಾಭದಲ್ಲೇ ಯಶಸ್ವಿಯಾಗಿ ನಡೆಯುತ್ತಿದ್ದ ಸಂಸ್ಥೆ ನವ-ಉದಾರೀಕರಣದ ಧೋರಣೆಗಳ ಅಡಿಯಲ್ಲಿ ಆಳುವ ಸರಕಾರದ ದುರುದ್ದೇಶಪೂರಿತ ಕ್ರಮಗಳಿಂದಾಗಿ ಅಪಾರ ನಷ್ಟವನ್ನು ಅನುಭವಿಸಲಾರಂಭಿಸಿದಾಗ 2009-10ರಿಂದ ಇದುವರೆಗೆ 1,10,000 ಕೋಟಿ ರೂ.ಗಳನ್ನು ನಗದು ಬೆಂಬಲ ಹಾಗೂ ಸಾಲಕ್ಕೆ ಸರಕಾರೀ ಗ್ಯಾರಂಟಿಯ ಮೂಲಕ ಹಾಕಲಾಗಿದೆ.

ಈಗ ಟಾಟಾ ಗುಂಪು ತೆರುತ್ತಿರುವ 18,000 ಕೋಟಿ ರೂ.ನಲ್ಲಿ ಅದು ವಾಸ್ತವವಾಗಿ ಭಾರತ ಸರಕಾರಕ್ಕೆ ತೆರುತ್ತಿರುವುದು ಕೇವಲ 2700 ಕೋಟಿ ರೂ. ಮಾತ್ರ. ಉಳಿದದ್ದು ಅದು ವಹಿಸಿಕೊಳ್ಳುತ್ತಿರುವ ಸಾಲಹೊರೆಯ ಪಾಲಿನ ಒಂದು ಸಣ್ಣ ಆಂಶವಷ್ಟೇ ಎಂಬ ಸಂಗತಿಯತ್ತ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ಗಮನ ಸೆಳೆದಿದೆ.

ಏರ್‍ ಇಂಡಿಯಾ ಈಗ 61,562 ಕೋಟಿ ರೂ. ಸಾಲ ಹೊರೆ ಹೊಂದಿದೆ. ಜಿ.ಒ.ಎಂ. ಮಂಜೂರು ಮಾಡಿದ ವ್ಯವಹಾರದ ಪ್ರಕಾರ ಅದರಲ್ಲಿ 46,262 ಕೋಟಿ ರೂ.ಗಳ ಹೊರೆಯನ್ನು ಸರಕಾರವೇ ನಿಭಾಯಿಸುತ್ತದೆ, ಕೇವಲ 15,300 ಕೋಟಿ ರೂ. ಸಾಲವನ್ನು ಮಾತ್ರ ಟಾಟಾ ಗುಂಪು ವಹಿಸಿಕೊಳ್ಳುತ್ತದೆ. ಆದರೆ ಈ ಒಟ್ಟು ಸಾಲದ ಹೊರೆಯಿಂದ ನಿರ್ಮಿಸಿದ ಆಸ್ತಿಗಳೆಲ್ಲವನ್ನೂ ಟಾಟಾಗಳಿಗೆ ಹಸ್ತಾಂತರಿಸಲಾಗುತ್ತದೆ. ಇದರಲ್ಲಿ ನೂರಕ್ಕೂ ಹೆಚ್ಚು ವಿಮಾನಗಳು, ಸಾವಿರಾರು ತರಬೇತಿ ಹೊಂದಿದ ಪೈಲಟ್‍ಗಳು ಮತ್ತು ಇತರ ವಿಮಾನ ಸಿಬ್ಬಂದಿ, ದೇಶಾದ್ಯಂತ ಮತ್ತು ಜಗತ್ತಿನಾದ್ಯಂತ ಬಹಳಷ್ಟು ಲಾಭ ತರುವ ನಿಯೋಜಿತ ವಿಮಾನ ಇಳಿಯುವ ಮತ್ತು ನಿಲ್ಲಿಸುವ (ಲ್ಯಾಂಡಿಂಗ್‍ ಮತ್ತು ಪಾರ್ಕಿಂಗ್‍) ತಾಣಗಳು  ಸೇರಿವೆ. ಇವೆಲ್ಲವೂ ಟಾಟಾಗಳಿಗೆ ಪುಕ್ಕಟೆಯಾಗಿ ಸಿಗುತ್ತಿರುವ ಬಕ್ಷೀಸುಗಳಲ್ಲದೆ ಬೇರೇನೂ ಅಲ್ಲ ಎಂದು  ಸಿಐಟಿಯು ಹೇಳಿದೆ.

ಇದು  ಕಾರ್ಪೊರೇಟ್ ಬಂಡವಾಳದೊಂದಿಗೆ ಸಾವಯವ ನಂಟು ಹೊಂದಿರುವ ಒಂದು  ಫ್ಯಾಸಿಸ್ಟ್ ತೆರನ ರಾಜಕೀಯ ಗುಂಪು ತಮ್ಮ ನೆಚ್ಚಿನ ಕಾರ್ಪೊರೇಟ್‍ ಯಜಮಾನರುಗಳಿಗೆ ರಾಷ್ಟ್ರೀಯ ಆಸ್ತಿಗಳನ್ನು ಅತ್ಯಂತ ಅಗ್ಗದಲ್ಲಿ ವಹಿಸಿಕೊಡುವ ಒಂದು ಅತ್ಯಂತ ಮೂರ್ಖ ಆರ್ಥಿಕ ವ್ಯವಹಾರ ಎಂದು ಸಿಐಟಿಯು ವರ್ಣಿಸಿದೆ.

ಈಗಿರುವ ಏರ್‍ ಇಂಡಿಯಾದ ನೌಕರರ ಹಣೆಬರೆಹ ಇನ್ನೂ ತೂಗುಯ್ಯಾಲೆಯಲ್ಲಿದೆ. ಒಟ್ಟು 12085 ನೌಕರರಲ್ಲಿ 8084 ಖಾಯಂ ನೌಕರರು, ಉಳಿದ 4001 ಕಾಂಟ್ರಾಕ್ಟ್ ಕೆಲಸಗಾರರು. ಏರ್ ಇಂಡಿಯ ಎಕ್ಸ್ ಪ್ರೆಸ್‍ ನಲ್ಲಿ 1434 ನೌಕರರು ಕೆಲಸ ಮಾಡುತ್ತಿದ್ದಾರೆ. ಜಿ.ಒ.ಎಂ. ಮಂಜೂರು ಮಾಡಿದ ವ್ಯವಹಾರದ ಪ್ರಕಾರ ಟಾಟಾಗಳು ಒಂದು ವರ್ಷದ ವರೆಗೆ ಮಾತ್ರವೇ ಇವರನ್ನು ತೆಗೆದು ಹಾಕುವಂತಿಲ್ಲ, ಆಮೇಲೆ ಅವರು ಏನು ಬೇಕಾದರೂ ಮಾಡಬಹುದು ಎಂಬ ಸಂಗತಿಯತ್ತವೂ ಸಿಐಟಿಯು ಗಮನ ಸೆಳೆದಿದೆ.

ನಮ್ಮ ರಾಷ್ಟ್ರೀಯ ವಿಮಾನಯಾನವನ್ನು ಖಾಸಗೀಕರಿಸುವ ಪ್ರಯತ್ನಗಳು ವಾಜಪೇಯಿ ನೇತೃತ್ವದ ಎನ್‍ಡಿಎ-1 ಸರಕಾರದ ಅಡಿಯಲ್ಲೇ ಆರಂಭವಾಯಿತು. ನಂತರ ಎಲ್ಲ ಸರಕಾರಗಳೂ ಏರ್ ಇಂಡಿಯಾವನ್ನು ಒಂದು ನಷ್ಟ ಅನುಭವಿಸುವ ಸಂಸ್ಥೆಯಾಗಿ ಮಾಡುವಲ್ಲಿ ತಂತಮ್ಮ ಕೊಡುಗೆಗಳನ್ನು ನೀಡಿದರು. ಇದು ಎಲ್ಲ ಸಾರಿಗೆ ಮತ್ತು ಸಂಪರ್ಕ ಕ್ಷೇತ್ರಗಳಿಂದ ಸರಕಾರದ ಪಾತ್ರವನ್ನು ಹಿಂತೆಗೆದುಕೊಂಡು ಅವನ್ನೆಲ್ಲ ಖಾಸಗಿ ಬಂಟ ಬಂಡವಾಳಿಗರಿಗೆ ಒಪ್ಪಿಸುವ ಒಂದು ದೀರ್ಘಕಾಲೀನ ಕಾರ್ಯತಂತ್ರದ ಭಾಗವಾಗಿತ್ತು. ಇದೀಗ  ಅದರ ಭಾಗವಾಗಿ  ಈ ವ್ಯವಹಾರವನ್ನು ಅಂತಿಮಗೊಳಿಸಲಾಗಿದೆ ಎಂದು  ವಿಶ್ಲೇಷಿಸಿರುವ ಸಿಐಟಿಯು, ಮೋದಿ ಸರಕಾರದ ಈ ಖಾಸಗೀಕರಣದ ಧಾವಂತವನ್ನು ಖಂಡಿಸಬೇಕು, ಈ ಸರಕಾರದ ಈ ರಾಷ್ಟ್ರ-ವಿರೋಧಿ ಚಟುವಟಿಕೆಗಳನ್ನು, ಅದರ ಖೋಟಾ ರಾಷ್ಟ್ರ ಪ್ರೇಮವನ್ನು, ಜತೆಗೆ ಕಾರ್ಪೊರೇಟ್‍ ಬಂಡವಾಳದೊಂದಿಗೆ ಈ ಬಲ ಪ್ರತಿಗಾಮಿ ನಂಟನ್ನು ಪ್ರತಿರೋಧಿಸಬೇಕು, ಬಯಲಿಗೆಳೆಯಬೇಕು ಎಂದು ಸಮಸ್ತ ಕಾರ್ಮಿಕ ವರ್ಗಕ್ಕೆ, ನಿರ್ದಿಷ್ಟವಾಗಿ ತನ್ನ ಘಟಕಗಳಿಗೆ ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *