ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ದೇಶದ ಗಮನ ಸೆಳೆದಿದ್ದ ಕುಲ್ಗಾಮ್ ಕ್ಷೇತ್ರದಲ್ಲಿ ಸಿಪಿಐಎಂ ಅಭ್ಯರ್ಥಿ ಎಂವೈ ತಾರಿಗಾಮಿ ಗೆಲುವು ಸಾಧಿಸಿದ್ದಾರೆ.
ಧಾರ್ಮಿಕ ಆಧಾರದ ಮೇಲೆ ಮತದಾರರನ್ನು ಧ್ರುವೀಕರಿಸುವ ನಿಷೇಧಿತ ಸಂಘಟನೆಯ ಪ್ರಯತ್ನದ ಹೊರತಾಗಿಯೂ ಜಮಾತ್-ಎ-ಇಸ್ಲಾಮಿ ಬೆಂಬಲಿತ ಅಭ್ಯರ್ಥಿಯನ್ನು ತರಿಗಾಮಿ 7838 ಮತಗಳಿಂದ ಸೋಲಿಸಿದ್ದಾರೆ.
ಇದನ್ನೂ ಓದಿ : ವಿಧಾನಸಭೆ ಚುನಾವಣೆ ಫಲಿತಾಂಶ: ಹರಿಯಾಣದಲ್ಲಿ ಸಮಬಲ, ಜಮ್ಮು – ಕಾಶ್ಮೀರದಲ್ಲಿ ಇಂಡಿಯಾ ಕೂಟ ಮುನ್ನಡೆ
ಎಲ್ಲಾ ಸುತ್ತಿನ ಮತ ಎಣಿಕೆ ಮುಗಿದಾಗ, ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಶ್ರೀ ತಾರಿಗಾಮಿ ಸುಮಾರು 7838 ಮತಗಳಿಂದ ಗೆಲುವು ಸಾಧಿಸಿದ್ದಾರೆ. 1996 ರಿಂದ ಸತತವಾಗಿ ಐದನೇ ಬಾರಿ ಗೆಲ್ಲುತ್ತಿರುವ ಕ್ಷೇತ್ರ ಇದಾಗಿದೆ. ಮುಸ್ಲಿಂ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಚುನಾವಣಾ ಪೂರ್ವ ಪ್ರಚಾರದಲ್ಲಿ “ಜಮಾತ್ ಅಭ್ಯರ್ಥಿ ಸೋತರೆ ಅದು ಇಸ್ಲಾಮಿನ ಸೋಲು ಎಂದು ಸಯರ್ ಅಹಮದ್ ರೇಶಿ ಪ್ರಚಾರ ಮಾಡಿದ್ದರು. ತರಿಗಾಮಿಯವರನ್ನು ಸೋಲಿಸಲು ಹಿಂದು ಮೂಲಭೂತವಾದಿಗಳು, ಮುಸ್ಲಿಂ ಮೂಲಭೂತವಾದಿಗಳಿಬ್ಬರು ಇವರನ್ನು ಸೋಲಿಸಲು ಧಾರ್ಮಿಕ ಧ್ರುವೀಕರಣಕ್ಕೆ ಪ್ರಯತ್ನಿಸಿದ್ದರು. ಅದನ್ನು ಸೋಲಿಸುವ ಮೂಲಕ ಮತಾಂದರಿಗೆ ತರಿಗಾಮಿ ಹಾಗೂ ಮತದಾರರು ತಕ್ಕ ಉತ್ತರ ನೀಡಿದ್ದಾರೆ.
“ನಾನು ಕುಲ್ಗಾಮ್ ಜನರಿಗೆ ನಮಸ್ಕರಿಸುತ್ತೇನೆ. ಅವರು ಕುಲ್ಗಾಮ್‌ಗಾಗಿ, ಕಾಶ್ಮೀರಕ್ಕಾಗಿ, ಕಾಶ್ಮೀರದ ಜನರ ಹಕ್ಕುಗಳಿಗಾಗಿ ನನ್ನ ಜೊತೆ ನಿಂತಿದ್ದಾರೆ. ಧಾರ್ಮಿಕವಾಗಿ ಜನರನ್ನು ವಿಭಜಿಸಿದವರಿಗೆ ಪಾಠ ಕಲಿಸಲು ನನ್ನ ಬೆನ್ನಿಗೆ ನಿಂತಿದ್ದಕ್ಕಾಗಿ ಮತದಾರರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. “ಒಂದೆಡೆ, ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಮತ್ತೊಂದೆಡೆ, ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಮತ್ತು ಸಿಪಿಎಂನ ಜಾತ್ಯತೀತ ಮೈತ್ರಿಯನ್ನು ಬೆಂಬಲಿಸಿದ್ದಾರೆ” ಎಂದು ಶ್ರೀ ತಾರಿಗಾಮಿ ಹೇಳಿದರು.