ದಲಿತ ಕೇರಿಯ ನೀರಿನ ಟ್ಯಾಂಕಿಗೆ ಮಲ ಸುರಿದ ದುಷ್ಕರ್ಮಿಗಳು: ಹಲವು ಮಕ್ಕಳು ಅಸ್ವಸ್ಥ

ಚೆನ್ನೈ : ದಲಿತರು ದೇವಸ್ಥಾನ ಪ್ರವೇಶ ಮಾಡಿದರು ಎಂಬ ದ್ವೇಷದ ಹಿನ್ನೆಲೆಯಲ್ಲಿ ದಲಿತರು ನೀರು ಕುಡಿಯುವ ಟ್ಯಾಂಕ್‌ಗೆ ಮನುಷ್ಯರ ಮಲ ಸುರಿದಿರುವ ಅಮಾನವೀಯ ಘಟನೆ ತಮಿಳುನಾಡಿನನಲ್ಲಿ ನಡೆದಿದೆ.

ತಮಿಳುನಾಡಿನ ಪುದುಕೋಟ್ಟೈ ಜಿಲ್ಲೆಯ ಅನ್ನವಸಲ್ ಬ್ಲಾಕ್‌ನ ವೆಂಗವಯಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಲುಷಿತ ನೀರು ಸೇವಿಸಿದ 30ಕ್ಕೂ ಹೆಚ್ಚು ಮಕ್ಕಳಿಗೆ ವಾಂತಿ ಬೇಧಿ ಕಾಣಿಸಿಕೊಂಡಿದ್ದು, ಅಸ್ವಸ್ಥರಾದ ಮಕ್ಕಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವರದಿಯಾಗಿದೆ.

ಮಕ್ಕಳು ವಾಂತಿ ಬೇಧಿಯಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದಾಗ ವೈದ್ಯರು ಕುಡಿಯುವ ನೀರು ಕಲುಷಿತಗೊಂಡಿರಬಹುದೇ ಎಂದು ಪರಿಶೀಲಿಸಲು ಗ್ರಾಮಸ್ಥರನ್ನು ಕೇಳಿದ್ದರು. ನೀರು ಕೆಟ್ಟ ವಾಸನೆ ಬರುತ್ತಿರುವುದು ಗ್ರಾಮಸ್ಥರ ಗಮನಕ್ಕೆ ಬಂದಾಗ ಕೆಲವರು ನೀರಿನ ಟ್ಯಾಂಕ್‌ ತೆರೆದು ನೋಡಿದಾಗ ಅದರೊಳಗೆ ಮಲ ಸುರಿದಿರುವುದು ಪತ್ತೆಯಾಗಿತ್ತು.

ಅನಾರೋಗ್ಯಕ್ಕೀಡಾದ ಮಗುವೊಂದರ ಹೆತ್ತವರು ನೀಡಿದ ದೂರಿನಂತೆ ಪೊಲೀಸರು ಸೆಕ್ಷನ್‌ 277, 328 ಅನ್ವಯ ಹಾಗೂ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ವಯ ಪ್ರಕರಣ ದಾಖಲಿಸಿದ್ದಾರೆ.

ಪುದುಕ್ಕೊಟೈ ಕಲೆಕ್ಟರ್‌ ಕವಿತಾ ರಾಮು ಹಾಗೂ ಎಸ್‌ಪಿ ವಂದಿತಾ ಪಾಂಡೆ ಇತ್ತೀಚೆಗೆ ವೆಂಗವಯಲ್ ಗೆ ಭೇಟಿ ನೀಡಿದ್ದರು. ಆಗ ಗ್ರಾಮಸ್ಥರು ಗ್ರಾಮದಲ್ಲಿರುವ ಜಾತಿ ತಾರತಮ್ಯದ ಬಗ್ಗೆ, ಗ್ರಾಮದ ಅರುಲ್ಮಿಗು ಅಯ್ಯನರ್‌ ದೇವಸ್ಥಾನಕ್ಕೆ ಪರಿಶಿಷ್ಟರಿಗೆ ಪ್ರವೇಶ ನೀಡದೇ ಇರುವ ಬಗ್ಗೆ ಹಾಗೂ ಚಹಾ ಅಂಗಡಿಗಳಲ್ಲಿ ಎರಡು ಲೋಟ ವ್ಯವಸ್ಥೆ ಇರುವ ಬಗ್ಗೆ ಅವರ ಗಮನ ಸೆಳೆದಿದ್ದರು.

ಆಗ ಕಲೆಕ್ಟರ್‌ ಮತ್ತು ಎಸ್‌ಪಿ ಗ್ರಾಮಸ್ಥರನ್ನು ತಾವಾಗಿಯೇ ದೇವಸ್ಥಾನದೊಳಗೆ ಕರೆದುಕೊಂಡು ಹೋದರು ಹಾಗೂ ಜಾತಿ ತಾರತಮ್ಯ ನಡೆಸುವವರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದರು ಎಂದು ತಿಳಿದು ಬಂದಿದೆ.

“ಈ ಘಟನೆ ಹಿನ್ನೆಲೆಯಲ್ಲಿ ಕೆಲ ದುಷ್ಕರ್ಮಿಗಳು ನಾವು ನೀರು ಕುಡಿಯುವ ಟ್ಯಾಂಕ್‌ಗೆ ಮನುಷ್ಯರ ಮಲ ಮಿಶ್ರಣ ಮಾಡಿದ್ದಾರೆ ಎಂದು ದಲಿತರು ದೂರಿದ್ದಾರೆ. ನಾವು ವೈಚಾರಿಕ ಜಾಲದಲ್ಲೂ ಇಂತಹ ಅಮಾನವೀಯ ಕೃತ್ಯಗಳು ನಡೆಯುತ್ತಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಕೃತ್ಯ ಇದಾಗಿದೆ. ದಲಿತರನ್ನು ಕೀಳಾಗಿ ಕಾಣುವ, ಶೋಷಿಸುವ ವ್ಯವಸ್ಥೆ ಕೊನೆಯಾಗಬೇಕು. ಸಮಾಜ ಜಾಗೃತವಾಗಬೇಕು ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೀಡಾದವರ ಚಿಕಿತ್ಸೆಗೆಂದು ಗ್ರಾಮದಲ್ಲಿ ವಿಶೇಷ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *