ಚೆನ್ನೈ : ಎಡೆಬಿಡದೆ ಸುರಿಯುತ್ತಿರುವ ಮಹಾಮಳೆಗೆ ಚೆನ್ನೈ ಜನ ತತ್ತರಿಸಿಹೋಗಿದ್ದಾರೆ. ಮನೆಗಳಿಗೆ ಮಳೆ ನೀರು ನುಗ್ಗಿ ಜನ ಜೀವನ ಬೀದಿಪಾಲಾಗಿದೆ. ರಸ್ತೆಗಳು ನದಿಗಳಂತಾಗಿ ಸಂಚಾರ ವ್ಯವಸ್ಥೆ ಅಲ್ಲೋಲಕಲ್ಲೋಲಗೊಂಡಿದೆ. ತೀವ್ರ ಮಳೆಹಾನಿಗೊಳಗಾದ ಪ್ರದೇಶಗಳಲ್ಲಿನ ಜನ ಸಂಪರ್ಕ ಇಲ್ಲದಾಗಿದೆ. ದೂರವಾಣಿ ಸಂಪರ್ಕವೂ ಸಾಧ್ಯವಾಗುತ್ತಿಲ್ಲ. ಇಲ್ಲಿಯವರೆಗೆ ಧಾರಾಕಾರ ಮಳೆಗೆ 14 ಮಂದಿ ಮೃತರಾದ ವರದಿಯಾಗಿದೆ.
ಚೆನ್ನೈನಲ್ಲಿ ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಚೆನ್ನೈ ನ ಪ್ರಮುಖ ಪ್ರದೇಶಗಳಾದ ಟಿ ನಗರ್, ಅಶೋಕ್ ನಗರ್, ಕೆಕೆ ನಗರ್, ತೇಯ್ನಮ್ಪೇಟ್ ಗಳು ಜಲಾವೃತಗೊಂಡಿವೆ.
ಗುರುವಾರ ಒಂದೇ ದಿನ 502 ರಸ್ತೆಗಳು ಜಲಾವೃತಗೊಂಡಿದ್ದು, ಸ್ಥಳೀಯ ಆಡಳಿತ ತೆರೆದಿರುವ ಸಹಾಯವಾಣಿಗೆ 3,800 ದೂರುಗಳು ಬಂದಿದ್ದು, ಈ ಮಳೆಗಾಲದ ಋತುವಿನಲ್ಲಿ ಬಂದಿರುವ ಗರಿಷ್ಠ ದೂರುಗಳಾಗಿವೆ.
ಈಗಾಗಲೇ ಜಲಾವೃತಗೊಂಡಿರುವ ಅಶೋಕ್ ನಗರ ಹಾಗೂ ಟಿ ನಗರಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಳವಾಗಿದ್ದು, ಈ ಭಾಗದಲ್ಲಿ ವಾಸಿಸುತ್ತಿರುವ ಮಂದಿ ಮನೆಯಿಂದ ಹೊರಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಇಂದು ಮಳೆಯಾಗದೇ ಇದ್ದಲ್ಲಿ ಜಲಾವೃತಗೊಂಡ ರಸ್ತೆಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕಾರ್ಪೊರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.
“ನಾವು ನೀರನ್ನು ಪಂಪ್ ಮಾಡಿ ಅಡ್ಯಾರ್ ನದಿಗೆ ಹೊರಹಾಕುತ್ತಿದ್ದೇವೆ. ಆದರೆ ನೀರಿನ ಮಟ್ಟ ಹೆಚ್ಚಾಗಿದೆ. ಮುಖ್ಯಮಂತ್ರಿಗಳ ನಿವಾಸವೂ ಜಲಾವೃತಗೊಳ್ಳುವುದರಿಂದ ತಪ್ಪಿಸಿಕೊಂಡಿಲ್ಲ. ಸಾಧ್ಯವಾದಷ್ಟೂ ಬೇಗ ನೀರನ್ನು ತೆರವುಗೊಳಿಸಲು ಯತ್ನಿಸುತ್ತೇವೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : ಬಿರುಗಾಳಿ ಎಬ್ಬಿಸಿದ ಬಿಟ್ ಕಾಯಿನ್ ಹಗರಣ, ಸಿಎಂ ಮೇಲೆ ತೂಗುಕತ್ತಿ
ಜಲಾವೃತಗೊಂಡ ಕೃಷಿ ಭೂಮಿ : ತಮಿಳುನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸುಮಾರು 55,000 ಹೆಕ್ಟೇರ್ ಭೂಮಿ ಜಲಾವೃತವಾಗಿದ್ದು, 3,500 ಹೆಕ್ಟೇರ್‌ನಲ್ಲಿನ ಬೆಳೆಗಳು ನಾಶವಾಗಿವೆ. ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಕೇರಳದಂತಹ ನೆರೆಯ ರಾಜ್ಯಗಳಿಗೆ ತರಕಾರಿ ಪೂರೈಕೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. “ಕೇರಳಕ್ಕೆ ತರಕಾರಿಗಳ ಪೂರೈಕೆಯಲ್ಲಿ ಕುಸಿತ ಕಂಡು ಬಂದಿದೆ. ಒಂದು ಅಂದಾಜಿನ ಪ್ರಕಾರ ಪೂರೈಕೆಯು ಶೇಕಡಾ 60 ಕ್ಕಿಂತ ಹೆಚ್ಚು ಪರಿಣಾಮ ಬೀರಿದೆ. ಈ ನಷ್ಟವನ್ನು ಹೇಗೆ ನಿಭಾಯಿಸಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ಪ್ರತಿದಿನ ಸರಾಸರಿ 400-450 ಟ್ರಕ್ ಗಳಲ್ಲಿ ತರಕಾರಿ ಲೋಡ್ ಬರುತ್ತಿತ್ತು. ಆದರೆ, ಮಳೆಯಿಂದ 300 ಟ್ರಕ್ ಮಾತ್ರ ಮಾರುಕಟ್ಟೆ ತಲುಪುತ್ತಿವೆ. ಟೊಮ್ಯಾಟೋ 125 ಪ್ರತಿ ಕೆ.ಜಿ ಇದ್ದರೆ, ನುಗ್ಗೇಕಾಯಿ 100 ರು ಪ್ರತಿ ಕೆ.ಜಿ, ಬೆಂಡೇಕಾಯಿ 150 ರು ಪ್ರತಿ ಕೆ.ಜಿ, ಕ್ಯಾರೇಟ್ ಮತ್ತು ಹುರುಳಿಕಾಯಿ 120 ರು ಪ್ರತಿ 1 ಕೆ.ಜಿ ಯಂತೆ ನಗರ ಪ್ರದೇಶಗಳಲ್ಲಿ ಮಾರಾಟವಾಗುತ್ತಿರುವ ವರದಿ ಬಂದಿದೆ. ಮಳೆ ಪ್ರಮಾಣ ತಗ್ಗಿದ ಬಳಿಕ ಸರಕು ಸಾಗಣೆ ಎಂದಿನಂತಾದರೆ ಮಾತ್ರ ತರಕಾರಿ ಬೆಲೆ ತಗ್ಗಲು ಸಾಧ್ಯ ಎಂದು ಬೀದಿ ಬದಿ ತರಕಾರಿ ವ್ಯಾಪಾರಿಯೊಬ್ಬರು ಹೇಳಿದರು.
ಕಳೆದ ಕೆಲವು ದಿನಗಳಿಂದ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರ ಪರಿಣಾಮ ಐದು ಜನರು ಸಾವನ್ನಪ್ಪಿದ್ದಾರೆ, 530 ಮನೆಗಳಿಗೆ ಹಾನಿಯಾಗಿದೆ.ಕಷ್ಟ ಪಟ್ಟಯ ಕೂಲಿ ನಾಲಿ ಮಾಡಿ ಕಟ್ಟಿಕೊಂಡಿದ್ದ ಅದೆಷ್ಟೋ ಗುಡಿಸಲುಗಳು ಕೂಡ ವರುಣನ ಅಬ್ಬರಕ್ಕೆ ಚೆಲ್ಲಾಪಿಲ್ಲಿಯಾಗಿ ಕೊಚ್ಚಿಕೊಂಡು ಹೋಗಿದೆ. ಇಲ್ಲಿನ ಜನರು ದಿಕ್ಕುತೋಚದೇ ಕಣ್ಣೀರಿಡುತ್ತಿದ್ದಾರೆ.
ಇದನ್ನೂ ಓದಿ : ರೈತರಿಗೆ ಪರಿಹಾರ ನೀಡಿ : ಸಿಎಂಗೆ ಸಿದ್ದರಾಮಯ್ಯ ಪತ್ರ
ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಿದ ಇನ್ಸ್ಪೆಕ್ಟರ್ : ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಸುರಿಯುತ್ತಿರುವ ಭಾರಿ ಮಳೆ ಅಲ್ಲಿನ ಜನಜೀವನವನ್ನು ತೀವ್ರ ಅಸ್ಥವ್ಯಸ್ಥಗೊಳಿಸಿದ್ದು, ಸತತ ಮಳೆಯಿಂದಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರನ್ನು ಅಲ್ಲಿನ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಮಳೆ ಪೀಡಿತ ಚೆನ್ನೈನ ಟಿಪಿ ಚತ್ರಂ ಸ್ಮಶಾನದ ಬಳಿ ಈ ಘಟನೆ ನಡೆದಿದ್ದು, ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೂರಿಲ್ಲದೇ ನೆಂದು ಅಸ್ವಸ್ಥನಾಗಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಮಹಿಳಾ ಪೊಲೀಸ್ ಅಧಿಕಾರಿ ರಾಜೇಶ್ವರಿ ಅವರ ಸಹಾಯದಿಂದ ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರವಾಹ ಪೀಡಿತ ಪ್ರದೇಶದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ರಾಜೇಶ್ವರಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಮಳೆಯಿಂದಾಗಿ ಅಲ್ಲಿ ಮರವೊಂದು ಬಿದ್ದಿದ್ದು, ಮರವನ್ನು ತೆರವುಗೊಳಿಸುವಾಗ ಅಲ್ಲೇ ಪಕ್ಕದಲ್ಲಿ ಟಿಪಿ ಚತ್ರಂ ಸ್ಮಶಾನದ ಬಳಿ ವ್ಯಕ್ತಿಯೋರ್ವ ಅಸ್ವಸ್ಥನಾಗಿ ಬಿದ್ದಿದ್ದನ್ನು ಅವರು ಗಮನಿಸಿದ್ದಾರೆ. ಕೂಡಲೇ ಸ್ಥಳೀಯರ ನೆರವಿನಿಂದ ಆತನನ್ನು ತಮ್ಮ ಭುಜದ ಮೇಲೆ ಹಾಕಿಕೊಂಡು ಆಟೋದಲ್ಲಿ ಹಾಕಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಅಲ್ಲದೆ ಅಸ್ವಸ್ಥ ವ್ಯಕ್ತಿಯೊಂದಿಗೆ ಮತ್ತೋರ್ವ ಸ್ಥಳೀಯನನ್ನು ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಮಿಳುನಾಡಿನಲ್ಲಿ ಧಾರಾಕಾರ ಮಳೆಯಿಂದ ಹಾನಿಗೊಳಗಾದ ಎಲ್ಲ ಜನರ ಬಗ್ಗೆ ತಮ್ಮ ಸರ್ಕಾರ ಕಾಳಜಿ ವಹಿಸಲಿದ್ದು, ಬೆಂಬಲವಾಗಿ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಘೋಷಿಸಿದ್ದಾರೆ.