ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿದ್ದರು
ನವದೆಹಲಿ: ಒಟಿಟಿಯಲ್ಲಿನ ಹೊಸ ಸಿನಿಮಾ, ವೆಬ್ ಸೀರಿಸ್ ಹಾಗೂ ರೀಲ್ಸ್ ಸೇರಿದಂತೆ ಹಲವು ವಿಷಯಗಳನ್ನು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದ್ದಾಗಿ ಪ್ರಧಾನಿ ಮೋದಿ ದೆಹಲಿ ವಿಶ್ವವಿದ್ಯಾನಿಲಯದ ಕಾರ್ಯಕ್ರಮವನ್ನು ಉದ್ದೇಶಿಸಿ ಶುಕ್ರವಾರ ಮಾತನಾಡುತ್ತಾ ಹೇಳಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಪ್ರಧಾನ ಮಂತ್ರಿ ಮೋದಿ ಅವರು ದೆಹಲಿ ಮೆಟ್ರೋದಲ್ಲಿ ತೆರಳಿದ್ದರು.
ದೆಹಲಿ ವಿಶ್ವವಿದ್ಯಾನಿಲಯದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮ ಮೆಟ್ರೋ ಪ್ರಯಾಣದ ಅನುಭವವನ್ನು ಹಂಚಿಕೊಂಡರು. “ಇಲ್ಲಿನ ವಿದ್ಯಾರ್ಥಿಗಳ ರೀತಿಯಲ್ಲಿ ನಾನು ಇಂದು ಮೆಟ್ರೋದಲ್ಲಿ ಪ್ರಯಾಣಿಸಿದೆ. ವಿದ್ಯಾರ್ಥಿಗಳ ಜೊತೆ ಮಾತನಾಡಲು ಬಹಳಷ್ಟು ವಿಷಯಗಳಿವೆ. ಒಟಿಟಿಯಲ್ಲಿನ ಹೊಸ ವೆಬ್ ಸರಣಿಯಿಂದ ಹಿಡಿದು ವಿಜ್ಞಾನದ ವಿಷಯಗಳವರೆಗೆ ಚರ್ಚಿಸುವ ಅವರು ಯಾವುದೇ ವಿಷಯಗಳನ್ನು ಬಿಡುವುದಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದರು.
“ಅವರು ಸೂರ್ಯನ ಕೆಳಗಿರುವ ಎಲ್ಲದರ ಬಗ್ಗೆ ಮಾತನಾಡುತ್ತಾರೆ… ಯಾವ ಸಿನಿಮಾ ನೋಡಿದಿರಿ, ಒಟಿಟಿಯಲ್ಲಿ ಅದೊಂದು ಸೀರಿಸ್ ಚೆನ್ನಾಗಿದೆ…. ನೀವು ಆ ರೀಲ್ ಅನ್ನು ನೋಡಿದಿರಾ…ಇಲ್ಲವೇ? ಸಾಗರದಷ್ಟು ವಿಷಯಗಳು ಚರ್ಚಿಸಲು ವಿಷಯಗಳು ಅವರ ಬಳಿಯಿದೆ” ಎಂದು ಪ್ರಧಾನಿ ಹೇಳಿದ್ದಾರೆ.
On the way to the DU programme by the Delhi Metro. Happy to have youngsters as my co-passengers. pic.twitter.com/G9pwsC0BQK
— Narendra Modi (@narendramodi) June 30, 2023
ತಮ್ಮ ಮೆಟ್ರೋ ಪ್ರಯಾಣದ ದೃಶ್ಯಗಳನ್ನು ಮೋದಿ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, “ಯುವಕರ ಜೊತೆಗೆ ಸಹ-ಪ್ರಯಾಣಿಕರಾಗಿರುವುದಕ್ಕೆ ಸಂತೋಷವಾಗಿದೆ” ಎಂದು ಹೇಳಿದ್ದಾರೆ.
ದೆಹಲಿ ಮೆಟ್ರೋದಲ್ಲಿ ಪ್ರಧಾನಿಯ ಪ್ರಯಾಣ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಪ್ರಧಾನಿಯವರು ಪ್ರಯಾಣಿಕರೊಂದಿಗೆ ಸಂವಾದ ನಡೆಸುತ್ತಿರುವುದು ವೀಡಿಯೊಗಳಲ್ಲಿ ಕಾಣಿಸುತ್ತಿವೆ.
ಶುಕ್ರವಾರ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಪ್ರಧಾನಿ ಮೋದಿ ಅವರು ಮೂರು ಕಟ್ಟಡಗಳ ಶಂಕುಸ್ಥಾಪನೆ ಮತ್ತು ಕಾಫಿ ಟೇಬಲ್ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಸಮಾರಂಭಕ್ಕೆ ಒಕ್ಕೂಟ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅತಿಥಿಯಾಗಿ ಆಗಮಿಸಿದ್ದರು.