ದೆಹಲಿ : ಕೊವಿಡ್ ಮಹಾಸೋಂಕು ದೇಶಾದ್ಯಂತ ಹತೋಟಿಯಿಲ್ಲದಂತೆ ಎಗರುತ್ತಿದೆ. ಸಾವುಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ತಡೆದು ನಿಲ್ಲಿಸಲು ಮತ್ತು ಆರೋಗ್ಯ ಸೌಕರ್ಯಗಳ ಕೊರತೆಯನ್ನು ನೀಗಿಸಲು ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಇದನ್ನು ಓದಿ : ಕೋವಿಡ್ ಎರಡನೇ ಅಲೆ : ಅತ್ತ ಅಂತ್ಯ ಸಂಸ್ಕಾರಕ್ಕೆ ಕ್ಯೂ, ಇತ್ತ ಬೆಡ್‌ಗಳ ಕೊರತೆ
ಕೇಂದ್ರ ಸರಕಾರ ಜನಗಳು ಸೋಂಕು-ನಿರೋಧಕ ಆಚರಣೆಗಳನ್ನು ಅನುಸರಿಸುತ್ತಿಲ್ಲ ಎಂದು ದೂಷಿಸಿ ಅಥವ ರಾಜ್ಯ ಸರಕಾರಗಳ ಮೇಲೆ ಅವನ್ನು ವರ್ಗಾಯಿಸಿ ತನ್ನ ಹೊಣೆಯನ್ನು ನಿಭಾಯಿಸದೇ ಇರುವುದು ಸಾಧ್ಯವಿಲ್ಲ. ಅದು ತಕ್ಷಣವೇ ಎಲ್ಲ ಬಣ್ಣಗಳ ಸಾಮೂಹಿಕ ಜಮಾವಣೆಗಳನ್ನು ನಿಷೇಧಿಸಬೇಕು; ಚುನಾವಣಾ ಸಭೆಗಳಲ್ಲಿ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿಯಂತ್ರಿಸಬೇಕು; ಎಲ್ಲ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಉಚಿತವಾಗಿ ಹೋಗಲು ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಬೇಕು; ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸಲು ಹೆಚ್ಚುವರಿ ಸಂಪನ್ಮೂಲಗಳನ್ನು ಮತ್ತು ಪಿಎಂ ಕೇರ್ಸ್ ನಲ್ಲಿ ಸಂಗ್ರಹವಾಗಿರುವ ಎಲ್ಲ ನಿಧಿಗಳನ್ನು ಒದಗಿಸಬೇಕು ಮತ್ತು ಸಾಮೂಹಿಕ ಲಸಿಕೆ ನೀಡಿಕೆಯನ್ನು ತುರ್ತಾಗಿ ತೀವ್ರಗೊಳಿಸಬೇಕು.
ಇದನ್ನು ಓದಿ : ಸರ್ವಪಕ್ಷಗಳ ಸಭೆಗೆ ಆಹ್ವಾನ ನೀಡದ ಮುಖ್ಯಮಂತ್ರಿಗಳಿಗೆ ಸಿಪಿಐಎಂ ನಿಂದ ಬಹಿರಂಗ ಪತ್ರ
ಈ ಸನ್ನಿವೇಶ ಜನಗಳ ಜೀವನೋಪಾಯಗಳ ಪರಿಸ್ಥಿತಿಗಳನ್ನು ಕೂಡ ಉಲ್ಬಣಗೊಳಿಸುತ್ತಿದೆ ಮತ್ತು ಹೆಚ್ಚಿನ ಸಂಕಟಗಳನ್ನು ಹೇರುತ್ತಿದೆ. ಸರಕಾರ ತಕ್ಷಣವೇ ತಿಂಗಳಿಗೆ ರೂ.7500ರೂ. ನೇರ ನಗದು ವರ್ಗಾವಣೆ ಮತ್ತು ಅಗತ್ಯವಿರುವ ಎಲ್ಲರಿಗೆ ಆಹಾರ ಧಾನ್ಯಗಳ ಉಚಿತ ವಿತರಣೆ ಮೂಲಕ ಜನಗಳಿಗೆ ಪರಿಹಾರ ಒದಗಿಸಬೇಕು, ಮತ್ತು ಮನರೇಗ ಕಾರ್ಯಕ್ರಮವನ್ನು ವಿಶಾಲವಾಗಿ ವಿಸ್ತರಿಸಬೇಕು. ಆದಷ್ಟು ಬೇಗನೇ ಒಂದು ನಗರ ಉದ್ಯೋಗ ಖಾತ್ರಿ ಕಾರ್ಯಕ್ರಮವನ್ನು ಕೂಡ ಆರಂಭಿಸಬೇಕು.
ಇವು ತಕ್ಷಣವೇ ಕೈಗೊಳ್ಳಬೇಕಾದ ಕನಿಷ್ಟ ಕ್ರಮಗಳು ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಕ್ರಮಗಳನ್ನಾದರೂ ಯುದ್ಧೋಪಾದಿಯಲ್ಲಿ ಜಾರಿಗೊಳಿಸಬೇಕು ಎಂದು ಪ್ರಧಾನ ಮಂತ್ರಿಗಳು ಮತ್ತು ಕೇಂದ್ರ ಸರಕಾರವನ್ನು ಆಗ್ರಹಿಸಿದೆ.