ತಡೆಗೋಡೆ ನಿರ್ಮಿಸಲು ಮನಪಾ ವಿಳಂಬ-ದಲಿತ ಮಹಿಳೆಯ ಮನೆ ಅಪಾಯದಲ್ಲಿ: ಡಿಹೆಚ್‌ಎಸ್‌ ಪ್ರತಿಭಟನೆ

ಮಂಗಳೂರು: ಮಳೆ ನೀರು ಚರಂಡಿಗೆ ತಡೆಗೋಡೆ ನಿರ್ಮಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಮಂಗಳೂರು ನಗರ ಪಾಲಿಕೆಯ ಕ್ರಮದಿಂದಾಗಿ ದಲಿತ ಮಹಿಳೆಯ ಮನೆ ಅಪಾಯದಲ್ಲಿದ್ದು ಕೂಡಲೇ ಕ್ರಮಜರುಗಿಸಬೇಕೆಂದು ದಲಿತ ಹಕ್ಕುಗಳ ಸಮಿತಿ-ಕರ್ನಾಟಕ(ಡಿಹೆಚ್‌ಎಸ್‌) ಕಾರ್ಯಕರ್ತರು ಪ್ರತಿಭಟನೆ ಮೂಲಕ ಆಗ್ರಹಿಸಿದೆ.

ಪಾಲಿಕೆ ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದ ಡಿಹೆಚ್‌ಎಸ್‌ ಕಾರ್ಯಕರ್ತರು, ಅಳಪೆ ಉತ್ತರ ವಾರ್ಡಿನ ಕೊಡಕ್ಕಲ್ ಪ್ರದೇಶದ ದಲಿತ ಸಮುದಾಯಕ್ಕೆ ಸೇರಿದ ಲೀಲಾರವರ ಮನೆಯ ಎರಡೂ ಭಾಗದಲ್ಲಿ ಮಳೆನೀರು ಹರಿಯುವ ರಾಜಕಾಲುವೆಗೆ ತಡೆಗೋಡೆ ನಿರ್ಮಿಸಿಲ್ಲ. ಇದರಿಂದ ಮಹಿಳೆಯ ಮನೆಯ ಅಪಾಯದಲ್ಲಿದೆ ಇದಕ್ಕೆ ಮಂಗಳೂರು ನಗರ ಪಾಲಿಕೆಯ ನಿರ್ಲಕ್ಷ್ಯವೇ ಕಾರಣವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಜೀತವಿಮುಕ್ತ ದಲಿತರಿಗೆ ಭೂ ಸಾಗುವಳಿಗೆ ಜಮೀನು ಮಂಜೂರು ಮಾಡಬೇಕೆಂದು ಪ್ರತಿಭಟನೆ

ಪ್ರತೀ ವರ್ಷವೂ ಸುರಿಯುವ ವಿಪರೀತ ಮಳೆಗೆ ರಾಜಕಾಲುವೆಗಳು ಭರ್ತಿಗೊಂಡು ಕೃತಕ ನೆರೆ ಉಂಟಾಗುತ್ತಿದೆ. ಕಳೆದ ವರ್ಷ ಸುರಿದ ಮಳೆಗೆ ಲೀಲಾರವರ ಮನೆ ಮುಳುಗಿದ್ದು, ಅಕ್ಕಪಕ್ಕದ ಮನೆಗಳಿಗೂ ಭಾರೀ ಹಾನಿ ಉಂಟಾಗಿತ್ತು. ಆ ಸಂದರ್ಭದಲ್ಲಿ ತಡೆಗೋಡೆ ನಿರ್ಮಿಸುವುದಾಗಿ ಭರವಸೆ ನೀಡಿದ ಮನಪಾ ಇವತ್ತಿನವರೆಗೂ ಚಕಾರವೆತ್ತಿಲ್ಲ. ಈತನ್ಮದ್ಯೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕೂಡಲೇ ತಡೆಗೋಡೆ ನಿರ್ಮಿಸದಿದ್ದರೆ ಮುಂದಿನ ಮಳೆಗೆ ಇದೇ ಪರಿಸ್ಥಿತಿ ಮುಂದುವರೆಯಲಿದೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಗಂಟೆಗಟ್ಟಲೆ ಕಾಯಿಸಿದ ಆಯಕ್ತರು

ದಲಿತ ಹಕ್ಕುಗಳ ಸಮಿತಿಯ ನಿಯೋಗವೊಂದು ಮನಪಾ ಆಯುಕ್ತರನ್ನು ಭೇಟಿ ಮಾಡಿ ಸಮಸ್ಯೆಯ ಕುರಿತು ಸೂಕ್ತ ಕ್ರಮವಹಿಸಬೇಕೆಂದು ನಿರ್ಧರಿಸಿದರು. ಆದರೆ, ಮನಪಾ ಆಯುಕ್ತರು ಡಿಹೆಚ್‌ಎಸ್‌ ಮುಖಂಡರು ಗಂಟೆಗಟ್ಟಲೆ ಕಾಯಿಸಿದ ಪ್ರಸಂಗ ನಡೆದಿದ್ದು, ಈ ವೇಳೆ ಆಯುಕ್ತರ ಕಾರ್ಯಾಲಯದಲ್ಲಿ ಸಂಘಟನೆಯ ಮುಖಂಡರು ಹಾಗೂ ಆಯುಕ್ತರ ನಡುವೆ ವಾಗ್ವಾದ ನಡೆದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಐಟಿಯು ಮುಖಂಡ ಸುನೀಲ್‌ ಕುಮಾರ್‌ ಬಜಾಲ್‌ ಸಾರ್ವಜನಿಕರ ಭೇಟಿಯ ನಿಗದಿತ ಸಮಯದಲ್ಲಿ ಜನರನ್ನು ಗಂಟೆಗಟ್ಟಲೆ ಕಾಯಿಸಿ ಸಭೆ ಮಾಡುತ್ತಿದ್ದಾರೆ. ಸಾಮಾನ್ಯ ಜನರ ಬಗ್ಗೆ ಅವರಿಗೆ ಕಾಳಜಿಯೇ ಇಲ್ಲವಾಗಿದೆ ಎಂದರು.

ಪ್ರತಿಭಟನೆಯಲ್ಲಿ ಡಿಹೆಚ್‌ಎಸ್‌ ಮುಖಂಡರಾದ ಕೃಷ್ಣ ತಣ್ಣೀರುಬಾವಿ, ಯೋಗೀಶ್ ಜಪ್ಪಿನಮೊಗರು, ಸುನಿಲ್ ಕುಮಾರ್ ಬಜಾಲ್, ಸಾಮಾಜಿಕ ಹೋರಾಟಗಾರರಾದ ಪ್ರಮೀಳಾ ದೇವಾಡಿಗ, ಆಸುಂತ ಡಿಸೋಜ, ಮಂಜುಳಾ ನಾಯಕ್, ಸಮರ್ಥ ಭಟ್, ಶೋಭಾ ಕೇಶವ್ ಪಡೀಲ್, ಕಾರ್ಮಿಕ ಮುಖಂಡರಾದ ಭಾರತಿ ಬೋಳಾರ, ವಿದ್ಯಾರ್ಥಿ ನಾಯಕರಾದ ವಿನೀತ್ ದೇವಾಡಿಗ, ರೇವಂತ್ ಕದ್ರಿ, ಶಾಹಿದ್ ಮುಂತಾದವರು ಭಾಗವಹಿಸಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *