– AIKSCC ಕರ್ನಾಟಕ ರೈತ ಜಾಥಾಕ್ಕೆ ಮಧ್ಯಪ್ರದೇಶದ ಗುಣನಗರದಲ್ಲಿ ಮೇಧಾಪಾಟ್ಕರ್ ನೇತೃತ್ವದಲ್ಲಿ ಭರ್ಜರಿ ಸ್ವಾಗತ
– ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ದೆಹಲಿ ಚಲೋ
ಗುಣನಗರ (ಮಧ್ಯಪ್ರದೇಶ): ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ನ.27ರಂದು ರೈತರು ನಡೆಸುತ್ತಿರುವ ದೆಹಲಿ ಚಲೋ ಅಂಗವಾಗಿ ವಿವಿಧ ಕಡೆಗಳಿಂದ ಜಾಥಾ ದೆಹಲಿಯತ್ತ ಮುನ್ನುಗ್ಗುತ್ತಿದೆ.
ಮಧ್ಯಪ್ರದೇಶದ ಮುಲ್ತಾನಿ ಸಭೆ ಮುಗಿಸಿ ಹೊರಟ ಜಾಥಾ ಮದ್ಯಾಹ್ನ ಇಟ್ರಾಸಿ ತಲುಪಿದಾಗ ಕೃಷಿ ಕಾಯ್ದೆಗಳ ವಿರುದ್ಧ ಆಕ್ರೋಶ ಇದ್ದ ಯುವ ರೈತರ ತಂಡ ಸ್ವಾಗತಿಸಿ ಸ್ಥಳೀಯ ಪತ್ರಕರ್ತರನ್ನು ಆಹ್ವಾನಿಸಿ ಜಾಥಾ ಉದ್ದೇಶ ವಿವರಿಸಲು ಅವಕಾಶ ಮಾಡಿಕೊಟ್ಟಿತು.
ಅಲ್ಲಿಂದ ಹೊರಟ ಜಾಥಾ ಇದೇ ರಾಜ್ಯದ ಗುಣ ನಗರ ತಲುಪಿದಾಗ ಅಷ್ಟೊತ್ತಿಗಾಗಲೇ ಇಂದೋರ್ ನಿಂದ ಬಂದಿದ್ದ ಇದೇ ಉದ್ದೇಶದ ಮತ್ತೊಂದು ಜಾಥಾ ಬಂದಿತ್ತು. ಕರ್ನಾಟಕ ದ ರೈತ ಜಾಥಾ ವನ್ನು ಅತ್ಯಂತ ಸಂಭ್ರಮದಿಂದ ನರ್ಮದಾ ಬಚಾವ್ ಆಂದೋಲನದ ಸುಪ್ರಸಿದ್ಧ ನಾಯಕಿ ಮೇಧಾ ಪಾಟ್ಕರ್ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು.
ಇಲ್ಲಿನ ಶಾಸ್ತ್ರಿ ಪಾರ್ಕ್ ನಡೆಯುತ್ತಿದ್ದ ಸಭೆಯ ವೇದಿಕೆಗೆ ಆಹ್ವಾನಿಸಿದಾಗ ಕನ್ನಡದಲ್ಲಿ ಕ್ರಾಂತಿಕಾರಿ ಘೋಷಣೆಗಳನ್ನು ಮೊಳಗಿಸಲಾಯಿತು.
ಇನ್ನು ಮುಂದೆ ಇಂದೊರ್ ಹಾಗೂ ಕರ್ನಾಟಕ ಜಾಥಾ ಎರಡನ್ನೂ ಮೇಧಾ ಪಾಟ್ಕರ್ ರವರೇ ಮುನ್ನಡೆಸಲಿದ್ದಾರೆ.
ರಾತ್ರಿ ಇಲ್ಲೇ ಉಳಿದಿದ್ದ ಜಾಥಾ ಮೇಧಾ ಪಾಟ್ಕರ್ ನೇತೃತ್ವದಲ್ಲಿ ಮಧ್ಯಪ್ರದೇಶದ ಕೊಲಾರಾಸ್ ಕಡೆ ಸಾಗುತ್ತಿದೆ.
22 ನವೆಂಬರ್ 2020 ರಂದು ಬೆಂಗಳೂರಿನ ಮೇಕ್ರಿ ವೃತ್ತದಿಂದ ಆರಂಭವಾದ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ-ಕರ್ನಾಟಕ ರೈತ ಜಾಥಾ ದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (KPRS-AIKS) ಸೇರಿದಂತೆ ಎಲ್ಲಾ ಸಹಭಾಗಿ ಸಂಘಟನೆಗಳ ಕಾರ್ಯಕರ್ತರು ಇದ್ದು ನವೆಂಬರ್ 26 ರಂದು ಸಂಸತ್ ಬೀದಿಯಲ್ಲಿ ಸಮಾವೇಶಗೊಳ್ಳುವ ದೆಹಲಿ ಚಲೋದಲ್ಲಿ ವಿಲೀನವಾಗಲಿದೆ.