ದುಬೈ: ಐಸಿಸಿ ಟಿ20 ವಿಶ್ವಕಪ್ ಆರನೇ ಆವೃತ್ತಿಗೆ ಇಂದು ಅಧಿಕೃತ ಚಾಲನೆ ದೊರೆಯಲಿದೆ. ಕಳೆದ ಭಾನುವಾರದಿಂದ (ಅಕ್ಟೋಬರ್ 17) ಆರಂಭವಾಗಿರುವ ಪ್ರತಿಷ್ಠಿತ ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು, ಇಂದಿನಿಂದ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗುತ್ತಿವೆ. 4 ತಂಡಗಳು ಸೇರಿದಂತೆ ಒಟ್ಟು 12 ತಂಡಗಳ ಮುಖಾಮುಖಿಯಾಗಲಿವೆ. ವಿಶೇಷ ಎಂದರೆ ಇಂದಿನ ಮೊದಲ ಪಂದ್ಯದಲ್ಲೇ ಈವರೆಗೆ ಕಪ್ ಗೆಲ್ಲದ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಣೆಸಲಿವೆ.
ಆಸ್ಟ್ರೇಲಿಯಾ ತಂಡವನ್ನು ಆ್ಯರೋನ್ ಫಿಂಚ್ ಮುನ್ನಡೆಸಿದರೆ, ಆಫ್ರಿಕಾಕ್ಕೆ ತೆಂಬಾ ಬವುಮಾ ನಾಯಕನಾಗಿದ್ದಾರೆ. ಉಭಯ ತಂಡಗಳಿಗೂ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿ ಮಹತ್ವದ್ದಾಗಿದೆ. ಇವೆರಡೂ ಬಲಿಷ್ಠ ತಂಡಗಳಾದರೂ ಕೂಟದ ನೆಚ್ಚಿನ ತಂಡಗಳಂತೂ ಅಲ್ಲ. 2010ರಲ್ಲಿ ಫೈನಲ್ ಪ್ರವೇಶಿಸಿದ್ದಷ್ಟೇ ಆಸ್ಟ್ರೇಲಿಯದ ಅತ್ಯುತ್ತಮ ಸಾಧನೆ. ಇನ್ನೊಂದೆಡೆ, ದಕ್ಷಿಣ ಆಫ್ರಿಕಾ ತಂಡ ಫೈನಲ್ ಕೂಡ ಮರೀಚಿಕೆಯಾಗಿದೆ.
ಉಭಯ ತಂಡಗಳು ಈವರೆಗೆ ಒಟ್ಟು 22 ಬಾರಿ ಟಿ20 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ 13 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದರೆ, ದಕ್ಷಿಣ ಆಫ್ರಿಕಾ ಎಂಟು ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಮೊದಲ ಪಂದ್ಯಕ್ಕೂ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ಸಾಕಷ್ಟು ತೊಂದರೆಗಳಿವೆ. ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಫಾರ್ಮ್‌ನಲ್ಲಿ ಇಲ್ಲದೇ ಇರುವುದು ತಂಡವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ. ಅಲ್ಲದೆ, ನಾಯಕ ಆ್ಯರೋನ್ ಫಿಂಚ್ ಮೊಣಕಾಲಿನ ಶಸ್ತ್ರಚಿಕಿತ್ಸೆ ಕಳೆದು ಬಂದಿದ್ದು, ಪಂದ್ಯ ಆಡಲಿದ್ದಾರೆ ಎಂದು ಕಾದುನೋಡಬೇಕಿದೆ.
ಇತ್ತ ಐಸಿಸಿ ಆಯೋಜಿಸುವ ಟೂರ್ನಿಗಳಲ್ಲಿ ನಿರೀಕ್ಷಿತ ಸಾಧನೆ ಮಾಡಲು ದಕ್ಷಿಣ ಆಫ್ರಿಕಾ ಅಂದಿನಿಂದಲೂ ಎಡವುತ್ತಿದೆ. ಆದರೆ, ಆಸ್ಟ್ರೇಲಿಯಕ್ಕೆ ಹೋಲಿಸಿದರೆ ದಕ್ಷಿಣ ಆಫ್ರಿಕಾ ಹೆಚ್ಚು ಬಲಿಷ್ಠ ಎಂಬುದು ಗೋಚರಿಸುತ್ತದೆ. ತಾಂತ್ರಿಕವಾಗಿಯೂ ಮೇಲುಗೈ ಹೊಂದಿದೆ. ವಿಂಡೀಸ್, ಐರ್ಲೆಂಡ್ ಮತ್ತು ಲಂಕಾ ವಿರುದ್ಧ ಸರಣಿ ಗೆದ್ದ ಬಳಿಕ ಎರಡೂ ಅಭ್ಯಾಸ ಪಂದ್ಯಗಳನ್ನೂ ಗೆದ್ದುಕೊಂಡಿದೆ.
ಈ ನಡುವೆ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಕಾದಾಟದ ಬಗ್ಗೆ ಹೆಚ್ಚಿನ ಸುದ್ದಿಗೆ ಗ್ರಾಸವಾಗಿದೆ. ಈ ನಡುವೆ ಟಿ20 ಕ್ರಿಕೆಟ್‍ನಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆಗೆ ಈ ಅಂಕಿ ಅಂಶ ಉತ್ತರ ನೀಡುತ್ತಿದೆ.
ಪ್ರಸ್ತುತ ಟಿ20 ಕ್ರಿಕೆಟ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಸಾಧನೆಯನ್ನು ಗಮನಿಸಿದರೆ, ರ‍್ಯಾಂಕಿಂಗ್ ನಲ್ಲಿ ಭಾರತ ತಂಡ 2ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ತಂಡ 3ನೇ ಸ್ಥಾನದಲ್ಲಿದೆ. ತಂಡಗಳ ರ‍್ಯಾಂಕಿಂಗ್, ಆಟಗಾರರ ರ‍್ಯಾಂಕಿಂಗ್ ಗಮನಿಸದರೆ ಎರಡು ತಂಡಗಳ ಪ್ರದರ್ಶನ ಶ್ರೇಷ್ಠ ಮಟ್ಟದಲ್ಲಿದೆ.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎರಡು ಬಾರಿ ಫೈನಲ್ ಪ್ರವೇಶಿಸಿದ್ದು ತಲಾ ಒಂದೊಂದು ಬಾರಿ ಚಾಂಪಿಯನ್ ಆಗಿದೆ ಜೊತೆಗೆ ಒಂದೊಂದು ಬಾರಿ ರನ್ನರ್ ಅಪ್ ಆಗಿ ತೃಪ್ತಿಪಟ್ಟಿದೆ. 2007ರಲ್ಲಿ ಆರಂಭಗೊಂಡ ಮೊದಲ ವಿಶ್ವಕಪ್‍ನಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದರೆ, 2009ರ ವಿಶ್ವಕಪ್‍ನಲ್ಲಿ ಪಾಕಿಸ್ತಾನ ವಿಶ್ವಕಪ್ ಗೆದ್ದುಕೊಂಡಿದೆ.
ಸೂಪರ್ 12 ಗುಂಪುಗಳು ಹೀಗಿವೆ
ಗ್ರೂಪ್ 1: ವೆಸ್ಟ್ ಇಂಡೀಸ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ ಶ್ರೀಲಂಕಾ
ಗ್ರೂಪ್ 2: ಅಫ್ಘಾನಿಸ್ತಾನ, ಭಾರತ, ಸ್ಕಾಟ್ಲೆಂಡ್, ಪಾಕಿಸ್ತಾನ, ನ್ಯೂಜಿಲೆಂಡ್, ನಮೀಬಿಯಾ
ಸೂಪರ್ 12 ಸುತ್ತಿನಲ್ಲಿ ಭಾರತದ ಪಂದ್ಯಗಳು
- ಭಾರತ ಹಾಗೂ ಪಾಕಿಸ್ತಾನ – ಅಕ್ಟೋಬರ್ 24
- ಭಾರತ ಹಾಗೂ ನ್ಯೂಜಿಲೆಂಡ್ – ಅಕ್ಟೋಬರ್ 31
- ಭಾರತ ಹಾಗೂ ಅಫ್ಘಾನಿಸ್ತಾನ – ನವೆಂಬರ್ 3
- ಭಾರತ ಹಾಗೂ ಸ್ಕಾಟ್ಲೆಂಡ್ – ನವೆಂಬರ್ 5
- ಭಾರತ ಹಾಗೂ ನಮೀಬಿಯಾ – ನವೆಂಬರ್ 8