ಕೋಲಾರ: ಕೇಂದ್ರ ಸರಕಾರ ಸ್ವಯಂ ಉದ್ಯೋಗಕ್ಕಾಗಿ ಸ್ಪೂರ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ನಿರುದ್ಯೋಗಿಗಳು ಕ್ಲಸ್ಟರ್ ಗಳಲ್ಲಿ ತರಬೇತಿ ಪಡೆದು ಸ್ವಯಂ ಉದ್ಯೋಗ ಪ್ರಾರಂಭಿಸುವ ಮೂಲಕ ಉದ್ಯೋಗಸ್ಥರಾಗಿ ನಾಲ್ಕು ಮಂದಿಗೆ ಉದ್ಯೋಗ ನೀಡುವಂತಾಗಬೇಕು ಎಂದು ರಾಜ್ಯ ಖಾದಿ ಗ್ರಾಮೋದ್ಯೋಗ ಆಯೋಗದ ನಿರ್ದೇಶಕ ವೆಟ್ಟ ಮೋಹನ್ ರಾವ್ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಹೊರವಲಯದ ಕಲ್ಲಂಡೂರು ಗ್ರಾಮದ ಶ್ರೀ ಮಂಜುನಾಥೇಶ್ವರ ವಿವಿಧ ಉದ್ದೇಶ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಖಾದಿ ಗ್ರಾಮೋದ್ಯೋಗ ಆಯೋಗ, ಕೆವಿಐಸಿ ಹಾಗೂ ಕಲ್ಲಂಡೂರು ಪೋಟ್ರರಿ ಕ್ಲಸ್ಟರ್ ವತಿಯಿಂದ ಕುಂಬಾರ ಕುಲಕಸಬುದಾರರಿಗೆ ಮಾಹಿತಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಅವರು ಪ್ರಸ್ತುತ ಸಮಾಜದಲ್ಲಿ ಓದಿದ ಎಲ್ಲಾ ವಿದ್ಯಾವಂತರಿಗೆ ಉದ್ಯೋಗ ನೀಡುವ ಸ್ಥಿತಿಯಿಲ್ಲದ ವಾತಾವರಣವಿರುವಾಗ ತಾವು ಸ್ವಯಂ ಉದ್ಯೋಗ ಮಾಡಿ ಆರ್ಥಿಕವಾಗಿ ಜೀವನವನ್ನು ನಡೆಸಬೇಕಾಗಿದೆ ಎಂದು ತಿಳಿಸಿದರು.
ದೇಶಾದ್ಯಂತ ಸುಮಾರು 45 ಕಛೇರಿಗಳು ಕಾರ್ಯನಿರ್ವಹಿಸುತ್ತಾ ಇದ್ದು ಸ್ಪೂರ್ತಿ ಯೋಜನೆಯಡಿ ಈಗಾಗಲೇ ಕೆಲವು ಕಡೆ ತರಬೇತಿ ಪಡೆದು ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗಾವಕಾಶ ನೀಡಿ ಬ್ಯಾಂಕ್ ಮೂಲಕ ಸಬ್ಸಿಡಿ ಸಾಲ ಕೊಡಿಸಿ ಸ್ವಯಂ ಉದ್ಯೋಗಿಗಳಾಗಿ ಮಾಡಿದ್ದಾರೆ. ತಾವುಗಳು ತರಬೇತಿಯಲ್ಲಿ ನೈಪುಣ್ಯತೆಯನ್ನು ಪಡೆದು ಸಮುದಾಯದ ಮತ್ತು ಕುಟುಂಬ ವರ್ಗದವರ ಏಳಿಗೆಗಾಗಿ ಶ್ರಮಿಸ ಬೇಕಾಗಿದೆ ಎಂದರು.
ಜಿಲ್ಲಾ ಕೈಗಾರಿಕಾ ಸಂಸ್ಥೆಯ ಜಂಟಿ ನಿರ್ದೇಶಕ ರವಿಚಂದ್ರ ಮಾತನಾಡಿ ಕ್ಲಸ್ಟರ್ ಗಳು ತಮ್ಮಲ್ಲಿನ ಪ್ರತಿಭೆಯನ್ನು ತೋರಿಸಲು ಸಾಧ್ಯವಾಗುತ್ತದೆ ಕೊರೊನಾ ಸಾಂಕ್ರಾಮಿಕ ರೋಗ ದೇಶದಲ್ಲಿ ಬಂದ ನಂತರ ಉದ್ಯೋಗ ಅವಕಾಶಗಳು ಇಲ್ಲವಾಗಿದ್ದು ಸರಕಾರದ ಇಂತಹ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕಾಗಿದೆ ಇಂತಹ ಯೋಜನೆಗಳಿಗೆ ಬ್ಯಾಂಕಿನಿಂದ ಪಡೆದ ಸಾಲವನ್ನು ಉದ್ದೇಶಿತ ಯೋಜನೆಗೆ ಬಳಸಿಕೊಂಡು ಸಕಾಲಕ್ಕೆ ಮರು ಪಾವತಿ ಮಾಡುವ ಮೂಲಕ ಬ್ಯಾಂಕ್ ಗಳ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದರು.
ಕಲ್ಲಂಡೂರು ಪ್ರೋಟ್ರರಿ ಕ್ಲಸ್ಟರ್ ಅಧ್ಯಕ್ಷ ಡಾ ಕೆ. ನಾಗರಾಜ್ ಮಾತನಾಡಿ ದೇಶದಲ್ಲ ಶೇ.40 ಗಿಂತ ಹೆಚ್ಚು ನಿರುದ್ಯೋಗಿಗಳಿದ್ದಾರೆ. ಕೌಶಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ವಿಫಲವಾಗಿದ್ದೇವೆ. ಕೌಶಲ್ಯಾಧಾರಿತ ಶಿಕ್ಷಣ ಬದುಕಿಗೆ ಅವಶ್ಯವಾಗಿದ್ದು ಯುವಜನರು ಹೆಚ್ಚಾಗಿ ಕ್ಲಸ್ಟರ್ ಗಳಲ್ಲಿ ತರಬೇತಿ ಪಡೆಯುವ ಮೂಲಕ ಉದ್ಯೋಗಸ್ಥರಾಗಬೇಕು ಕುಂಬಾರ ಸಮುದಾಯದ ಅಭಿವೃದ್ಧಿಗೆ ಹಾಗೂ ಉತ್ತೇಜನಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಬಳಸಿಕೊಳ್ಳಬೇಕು ಇದೇ ಸಂದರ್ಭದಲ್ಲಿ ಡಾ.ಕೆ ನಾಗರಾಜ್ ನೇತೃತ್ವದಲ್ಲಿ ಕುಂಬಾರ ಕುಲ ಕಸಬು ಮಾಡುವ ಕುಂಬಾರರಿಗೆ 150 ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಕೆವಿಐಸಿ ನೋಡಲ್ ಅಧಿಕಾರಿ ಬಾಲಕೃಷ್ಣ, ಮಾಲೂರು ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸತೀಶ್, ಜಿಲ್ಲಾ ಕಾರ್ಮಿಕ ಇಲಾಖೆಯ ಪ್ರಕಾಶ್, ತಾಲೂಕು ಕುಂಬಾರ ಸಂಘದ ಅಧ್ಯಕ್ಷ ನಂದೀಶ್, ಕುಂಬಾರ ಸಮುದಾಯದ ಮುಖಂಡರಾದ ನಂಜುಂಡಪ್ಪ, ಗಂಗರಾಜು ಈರಣ್ಣ, ಜಗದೀಶ್, ಸುಧಾಕರ್, ಡಾಸಹನಾ, ಸರೋಜಮ್ಮ, ರಾಘವೇಂದ್ರ, ಅನಂತಪದ್ಮನಾಭ, ಮುಂತಾದವರಿದ್ದರು.