ನವದೆಹಲಿ: ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯೋಗ ಸೃಷ್ಟಿಗಾಗಿ ರೂ. 100 ಲಕ್ಷ ಕೋಟಿ ಕಾರ್ಯಯೋಜನೆಯನ್ನು ಕೈಗೊಳ್ಳುವುದಾಗಿ ತಿಳಿಸಿದರು. ಆದರೆ ಇದು ಹಳೆಯ ಭಾಷಣವೇ ಆಗಿದ್ದು, ಭಾಷಣದಲ್ಲಿ ಹೊಸತನವೇನೂ ಇಲ್ಲ ಎಂದು ಆರೋಪಗಳು ಕೇಳಿ ಬರುತ್ತಿವೆ.
ಪ್ರಧಾನಿ ನರೇಂದ್ರ ಮೋದಿ 2019 ಹಾಗೂ 2020ರ ಸ್ವಾತಂತ್ರ್ಯ ದಿನದ ಭಾಷಣಗಳಲ್ಲೂ ಇದೇ ವಿಚಾರವನ್ನು ಘೋಷಣೆ ಮಾಡಿದ್ದರು. ಗತಿ ಶಕ್ತಿ ಎಂಬ ಈ ಯೋಜನೆ ಭಾರತದ ಆರ್ಥಿಕತೆಗೆ ಪುನಶ್ಚೇತನ ನೀಡುವುದು ಎಂದು ಕೆಂಪು ಕೋಟೆಯಲ್ಲಿ ಭಾಷಣ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ.
ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲ ಪ್ರಧಾನಿಯ ಭಾಷಣದ ಬಗ್ಗೆ ಪ್ರತಿಕ್ರಿಯಿಸಿ ಕಳೆದೆರಡು ವರ್ಷಗಳ ಸ್ವಾತಂತ್ರ್ಯ ದಿನದ ಭಾಷಣದ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದರಲ್ಲದೆ ಸತತ ಮೂರು ವರ್ಷ ಅದೇ ಯೋಜನೆಯನ್ನು ಬೇರೆ ಬೇರೆ ಹೆಸರು ನೀಡಿ ಪ್ರಸ್ತಾಪಿಸಿದ್ದಾರೆ ಎಂದು ಪ್ರಧಾನಿಯನ್ನು ಟೀಕಿಸಿದ್ದಾರೆ.
“ನಿಜ, ಠೊಳ್ಳು ಭರವಸೆಗಳನ್ನು ನೀಡುವುದರಲ್ಲಿ ಏನಿದೆ ಆದರೆ ಈಗ ಈ ಠೊಳ್ಳು ಭರವಸೆಗಳು ಕೂಡ ಹಳೆಯದ್ದಾಗಿವೆ” ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.
2020ರ ಭಾಷಣ ಸಂದರ್ಭದಲ್ಲಿಯೂ ಮೋದಿ ಈ ಯೋಜನೆಗೆ ನ್ಯಾಷನಲ್ ಇನ್ಫ್ರಾಸ್ಟ್ರಕ್ಚರ್ ಪೈಪ್‍ಲೈನ್ ಯೋಜನೆ ಎಂದು ಬಣ್ಣಿಸಿದ್ದರು. ಅದಕ್ಕೆ ರೂ 110 ಲಕ್ಷ ಕೋಟಿ ಖರ್ಚು ಮಾಡಲಾಗುವುದು ಎಂದಿದ್ದರೆ, 2019ರ ಭಾಷಣದಲ್ಲಿ ಆಧುನಿಕ ಮೂಲಭೂತ ಯೋಜನೆಗಳ ಅಭಿವೃದ್ಧಿಗೆ ರೂ 100 ಲಕ್ಷ ಕೋಟಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ ಎಂದಿದ್ದರು.
ಈ ವರ್ಷದ ಭಾಷಣದಲ್ಲಿ ಈ ಯೋಜನೆಗೆ ಗತಿ ಶಕ್ತಿ ಯೋಜನೆ ಎಂಬ ಮರು ಹೆಸರು ನೀಡುವ ಮೂಲಕ ಹಳೆಯದಕ್ಕೆ ಹೊಸ ಬಣ್ಣ ಬಳಿದಂತೆ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ.
100 லட்சம் கோடி; மூன்று முறை ஒரே வடையை வாயால் சுடும் மோடி… #GoldMedalinJumla #ModiALiar #JumlaGovt pic.twitter.com/ERCkdzZyfk
— CPIM Tamilnadu (@tncpim) August 16, 2021
ಮೋದಿ ಭಾಷಣದ ಕಳೆದ ಮೂರು ವರ್ಷಗಳ ಭಾಷಣಗಳ ಬಗ್ಗೆ ಸಿಪಿಐ(ಎಂ) ತಮಿಳುನಾಡು ಟ್ವಿಟ್ಟರ್‌ನಲ್ಲಿಯೂ ಪ್ರಸ್ತಾಪಿಸಿ ʻʻನೂರು ಲಕ್ಷ ಕೋಟಿ ಬಗ್ಗೆ ಮೂರು ಬಾರಿ ಹೇಳಲಾಗಿದೆʼʼ ಎಂದು ಟ್ವೀಟ್ ಮಾಡಿದೆ.
ರಾಜ್ಯಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ‘ಪ್ರಧಾನಿ ಅಧಿಕಾರ ಸ್ವೀಕರಿಸಿದ ನಂತರ ದೇಶವು ಅದೇ ಭಾಷಣಗಳನ್ನು ಕೇಳುತ್ತಿದೆ. ಆದರೆ ರೈತರು ಸೇರಿದಂತೆ ಅನ್ಯಾಯಕ್ಕೊಳಗಾದವರಿಗೆ ಯಾವುದೇ ಪರಿಹಾರಗಳನ್ನು ನೀಡುತ್ತಿಲ್ಲ. ಮೋದಿ ಅವರು ಹೊಸ ಯೋಜನೆಗಳನ್ನು ಘೋಷಿಸುತ್ತಾರೆ, ಆದರೆ ಅವುಗಳನ್ನು ಎಂದಿಗೂ ಕಾರ್ಯಗತಗೊಳಿಸುವುದಿಲ್ಲ’ ಎಂದು ಟೀಕಿಸಿದ್ದಾರೆ.
ಸಿಪಿಐ(ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ‘ಕೋವಿಡ್ ಸಾಂಕ್ರಾಮಿಕದ ಪರಿಸ್ಥಿತಿಯಿಂದ ಉಂಟಾದ ಅಸಮರ್ಪಕ ನಿರ್ವಹಣೆ ಹಾಗೂ ಲಸಿಕೆ ಕೊರತೆಗಳ ಬಗ್ಗೆ ಕೋಟ್ಯಂತರ ಜನರಿಗೆ ಯಾವುದೇ ಭರವಸೆ ನೀಡಲಿಲ್ಲ. ನಿರುದ್ಯೋಗ, ಬಡತನ, ಹಸಿವು, ಬೆಲೆಗಳು ಹೆಚ್ಚಳವಾಗುತ್ತಿವೆ. ನಮ್ಮ ಜೀವನ ಮತ್ತಷ್ಟು ಕೆಟ್ಟ ಸ್ಥಿತಿಯಲ್ಲೇ ಮುಂದುವರಿಯುವ ಎಚ್ಚರಿಕೆ ಇದು’ ಎಂದು ಅವರು ಪ್ರಧಾನಿ ಭಾಷಣವನ್ನು ವಿಶ್ಲೇಷಿಸಿದ್ದಾರೆ.
ಅಲ್ಲದೆ, ಭಾರತೀಯರ ಸಂಕಷ್ಟಗಳನ್ನು ಮೋದಿ ಅಣಕಿಸುತ್ತಿದ್ದಾರೆ. ದೇಶದ ಅರ್ಥವ್ಯವಸ್ಥೆಯನ್ನು ಹಾಳು ಮಾಡುವ ಮೂಲಕ ಜನರನ್ನು ಹಿಂದೆಂದಿಗಿಂತಲೂ ಹೆಚ್ಚು ಅಸಮಾನತೆಯೆಡೆಗೆ ಕೊಂಡ್ಯೊತ್ತಿದ್ದಾರೆ. ಕಳೆದೆರಡು ವರ್ಷಗಳ ಭಾಷಣಗಳ ಪೊಳ್ಳು ಪದಗಳನ್ನೇ ಮರುಬಳಕೆ ಮಾಡಿ ಭಾಷಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಅವರು ʻದೇಶ ಎದುರಿಸುತ್ತಿರುವ ಪ್ರಮುಖ ಗಂಭೀರ ಸಮಸ್ಯೆಗಳ ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಅವರ ಭಾಷಣ ನಿರಾಶಾದಾಯಕವಾಗಿದೆ ಎಂದು ಹೇಳಿದರು. ನಿರುದ್ಯೋಗಿ ಯುವಕರು ಮತ್ತು ರೈತರ ಸಂಕಷ್ಟಗಳನ್ನು ಕಡೆಗಣಿಸಿದ ಪ್ರಧಾನಿ, ಖಾಲಿ ಘೋಷಣೆಗಳಿಗೆ ಮಾತ್ರ ಸೀಮಿತರಾಗಿದ್ದಾರೆ ಎಂದರು.
ರಕ್ಷಣಾ ಸಚಿವಾಲಯ ನಡೆಸುವ ಸೈನಿಕ್ ಶಾಲೆಗಳು ಈಗ ಬಾಲಕಿಯರಿಗೂ ಪ್ರವೇಶವಿದೆ ಎಂದು ಅವರು ಹೇಳಿದ್ದರು. ಆದರೆ ವಾಸ್ತವವಾಗಿ ಐದು ಸೈನಿಕ್ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರವೇಶ ನೀಡಲು 2019ರಲ್ಲಿಯೇ ನಿರ್ಧರಿಸಲಾಗಿತ್ತು.
ರೇಷನ್ ಅಂಗಡಿಗಳಲ್ಲಿ ಮತ್ತು ಶಾಲೆಗಳಲ್ಲಿ ಮಧ್ಯಾಹ್ನದ ಊಟಕ್ಕೆ ವಿತರಿಸಲಾಗುವ ಅಕ್ಕಿಯನ್ನು ಕಬ್ಬಿಣದ ಸತ್ವ ಮತ್ತು ವಿಟಮಿನ್‍ಗಳಿಂದ ಫೋರ್ಟಿಫೈ ಮಾಡುವ ಸರಕಾರದ ಉದ್ದೇಶದ ಕುರಿತು ಮೋದಿ ತಮ್ಮ ರವಿವಾರದ ಭಾಷಣದಲ್ಲಿ ಘೋಷಿಸಿದ್ದರು. ಆದರೆ ಮಾಜಿ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ 2019ರಲ್ಲಿಯೇ ಇಂತಹ ಒಂದು ಪ್ರಾಯೋಗಿಕ ಯೋಜನೆಯನ್ನು ಘೋಷಿಸಿದ್ದರು.
ಮೋದಿ ತಮ್ಮ ಭಾಷಣದಲ್ಲಿ ಘೋಷಿಸಿದ ನ್ಯಾಷನಲ್ ಹೈಡ್ರೋಜನ್ ಮಿಷನ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಈ ವರ್ಷದ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು.