ಭಾರತೀಯ ಕುಸ್ತಿ ಫೆಡರೇಶನ್ ಅಮಾನತು | ಮೌನ ಮುರಿದ ಬ್ರಿಜ್ ಭೂಷಣ್ ಹೇಳಿದ್ದೇನು?

ನವದೆಹಲಿ: ಕೇಂದ್ರ ಕ್ರೀಡಾ ಸಚಿವಾಲಯವು ಹೊಸದಾಗಿ ಆಯ್ಕೆಯಾದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾವನ್ನು ಅಮಾನತುಗೊಳಿಸಿದ ನಂತರ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಪ್ರಜಾಪ್ರಭುತ್ವದ ರೀತಿಯಲ್ಲಿ ಚುನಾವಣೆ ನಡೆಸಲಾಗಿದೆ ಎಂದು ಡಬ್ಲ್ಯುಎಫ್‌ಐ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ. ಕ್ರೀಡಾ ಸಚಿವಾಲಯದ ನಿರ್ಧಾರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾಕ್ಷಿ ಮಲಿಕ್, ಸರ್ಕಾರದ ನಿರ್ಧಾರವು ಸ್ವಾಗತಾರ್ಹ ಎಂದು ಹೇಳಿದ್ದು, “ಇದು ಮೊದಲ ಹೆಜ್ಜೆ” ಎಂದು ತಿಳಿಸಿದ್ದಾರೆ.

ಬ್ರಿಜ್ ಭೂಷಣ್, “ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾವಣೆಗಳನ್ನು ನಡೆಸಿ ಆ ಸಂಸ್ಥೆಯನ್ನು ರಚಿಸಲಾಗಿದೆ. ಈಗ ಅವರು ಸರ್ಕಾರದೊಂದಿಗೆ ಮಾತನಾಡಲು ಅಥವಾ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಬಯಸಿದರೆ ಅದು ಅವರ (ಫೆಡರೇಶನ್ ಸದಸ್ಯರು) ನಿರ್ಧಾರವಾಗಿದೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಮೋದಿ – ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ

ಈ ಬಗ್ಗೆ ಮಾತನಾಡಿರುವ ಸಾಕ್ಷಿ ಮಲಿಕ್‌ ಅವರ ತಂದೆ ಸುಖ್‌ಬೀರ್ ಮಲಿಕ್, “ಸರ್ಕಾರದ ನಿರ್ಧಾರದಿಂದ ನಮಗೆ ಸಂತೋಷವಾಗಿದೆ ಆದರೆ ನಾವು ಇದನ್ನು ವಿಜಯವಾಗಿ ನೋಡುವುದಿಲ್ಲ. ಸರ್ಕಾರ ಮತ್ತು ಕ್ರೀಡಾ ಸಚಿವಾಲಯವು ಡಬ್ಲೂಎಫ್‌ಐಗೆ ಉತ್ತಮ ಮತ್ತು ಪ್ರಾಮಾಣಿಕ ವ್ಯಕ್ತಿಯನ್ನು ಹಾಕಬೇಕೆಂದು ನಾವು ಬಯಸುತ್ತೇವೆ” ಎಂದು ಹೇಳಿದ್ದಾರೆ.

ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅನ್ನು ಕ್ರೀಡಾ ಸಚಿವಾಲಯ ಭಾನುವಾರ ಅಮಾನತುಗೊಳಿಸಿದೆ. ಹೊಸದಾಗಿ ಚುನಾಯಿತರಾದ ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್ ಸಿಂಗ್ ಅವರು ಇದನ್ನು ವಿರೋಧಿಸಿದ್ದು, ಸರ್ಕಾರದ ಜೊತೆಗೆ ಮಾತನಾಡುತ್ತೇವೆ ಒಂದು ವೇಳೆ ಕೇಳಿಸಿಕೊಳ್ಳದಿದ್ದರೆ, ಕಾನೂನಾತ್ಮಕವಾಗಿ ಹೋಗಲಿದ್ದೇವೆ ಎಂದು ಎಚ್ಚರಿಸಿದ್ದಾರೆ.

“ನಾವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಿಯಮಗಳನ್ನು ಅನುಸರಿಸಿದ್ದೇವೆ ಎಂದು ನಾವು ವಿವರಿಸುತ್ತೇವೆ. ಆ ಬಗ್ಗೆ ನಾವು ಪುರಾವೆಗಳನ್ನು ಪ್ರಸ್ತುತಪಡಿಸುತ್ತೇವೆ. ಏನೇ ನಿರ್ಧಾರಗಳನ್ನು ತೆಗೆದುಕೊಂಡರೂ ಒಮ್ಮತದಿಂದ ತೆಗೆದುಕೊಳ್ಳಲಾಗಿದೆ. ಅದು ನನ್ನ ವೈಯಕ್ತಿಕ ನಿರ್ಧಾರವಾಗಿರಲಿಲ್ಲ. 24 ರಾಜ್ಯ ಸಂಘಗಳು ಅಫಿಡವಿಟ್‌ಗಳನ್ನು ನೀಡಿವೆ ಮತ್ತು ನಮಗೆ ಇಮೇಲ್‌ಗಳು ಬಂದಿವೆ, ನಮ್ಮಲ್ಲಿ ಎಲ್ಲವೂ ಲಿಖಿತವಾಗಿ ಇದೆ” ಎಂದು ಡಬ್ಲ್ಯುಎಫ್‌ಐ ಕ್ರೀಡಾ ನಿರ್ವಾಹಕರು ಹೇಳಿದ್ದಾರೆ.

ಇದನ್ನೂ ಓದಿ: KSRTC | 20 ಟ್ರಕ್‌ಗಳೊಂದಿಗೆ ಲಾಜಿಸ್ಟಿಕ್ಸ್ ವ್ಯವಹಾರಕ್ಕೆ ಪ್ರವೇಶಿಸಿದ ಕೆಎಸ್‌ಆರ್‌ಟಿಸಿ!

ಕುಸ್ತಿ ಫೆಡರೇಶನ್‌ನ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಚಳವಳಿಯ ಪ್ರಮುಖ ಹೋರಾಟಗಾರ್ತಿ, ಒಲಿಂಪಿಯನ್ ಸಾಕ್ಷಿ ಮಲಿಕ್ ಅವರು ಡಬ್ಲ್ಯುಎಫ್‌ಐ ಅಮಾನತುಗೊಳಿಸುವಿಕೆಯನ್ನು ಸ್ವಾಗತಿಸಿದ್ದು, “ಒಳ್ಳೆಯ ಘಟನೆಯ ಕಡೆಗೆ ಇದು ಮೊದಲ ಹೆಜ್ಜೆಯಾಗಿದೆ. ನಾವು ಯಾವ ಕಾರಣಕ್ಕಾಗಿ ಹೋರಾಡುತ್ತಿದ್ದೇವೆ ಎಂಬುದನ್ನು ಸರ್ಕಾರ ಅರ್ಥಮಾಡಿಕೊಂಡಿದೆ ಎಂದು ನಾನು ಭಾವಿಸುತ್ತೇನೆ. ಮಹಿಳಾ ಒಕ್ಕೂಟದ ಅಧ್ಯಕ್ಷೆ ಇದ್ದರೆ, ಮಹಿಳಾ ಕುಸ್ತಿಪಟುಗಳ ಸುರಕ್ಷತೆ ಉತ್ತಮವಾಗಿರುತ್ತದೆ. ಇದು ದೇಶದ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಹೋರಾಟವಾಗಿತ್ತು” ಎಂದು ಅವರು ತಿಳಿಸಿದ್ದಾರೆ.

ಸಂಜಯ್ ಸಿಂಗ್ ಅವರನ್ನು ಕುಸ್ತಿ ಫೆಡರೇಶನ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದನ್ನು ವಿರೋಧಿಸಿ ಶುಕ್ರವಾರ ತಮ್ಮ ಪದ್ಮಶ್ರೀ ಪದಕವನ್ನು ಸರ್ಕಾರಕ್ಕೆ ಹಿಂದಿರುಗಿಸಿದ ಭಜರಂಗ್ ಪುನಿಯಾ ಅವರು ತಮ್ಮ ಪ್ರಶಸ್ತಿಯನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ. “ಈಗ ನಾನು ಅದನ್ನು ಹಿಂತಿರುಗಿಸಿದ್ದೇನೆ, ಹಾಗಾಗಿ ಅದನ್ನು ಹಿಂಪಡೆಯಲು ಹೋಗುವುದಿಲ್ಲ. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಗೌರವ ಯಾವುದೇ ಪ್ರಶಸ್ತಿಗಿಂತ ದೊಡ್ಡದಾಗಿದೆ. ಏನಾಗುತ್ತಿದೆ ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ. ನ್ಯಾಯ ಸಿಕ್ಕ ನಂತರವೇ ನಾನು ಅದನ್ನು ಹಿಂಪಡೆಯುವ ಬಗ್ಗೆ ಯೋಚಿಸುತ್ತೇನೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ನಾವು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಪೂನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಆರೋಪಿಸಿದ್ದರು.

ವಿಡಿಯೊ ನೋಡಿ: ಅಂಗನವಾಡಿ ನೌಕರರಿಗೆ ಇಡಿಗಂಟು : ಹೈಕೋರ್ಟ್ ನಿರ್ದೇಶನ ಸರಿ ಇಲ್ಲ – ಎಸ್ ವರಲಕ್ಷ್ಮೀ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *