ನವದೆಹಲಿ: ನೂತನವಾಗಿ ಚುನಾಯಿತ ಅಧ್ಯಕ್ಷ ಸಂಜಯ್ ಸಿಂಗ್ ಅವರ ನೇತೃತ್ವದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಸಂಸ್ಥೆಯನ್ನು ಕೇಂದ್ರ ಕ್ರೀಡಾ ಸಚಿವಾಲಯ ಭಾನುವಾರ ಅಮಾನತುಗೊಳಿಸಿದೆ. ಡಬ್ಲ್ಯುಎಫ್ಐನ ವ್ಯವಹಾರಗಳನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ತಾತ್ಕಾಲಿಕ ಸಂಸ್ಥೆಯನ್ನು ರಚಿಸುವಂತೆ ಕ್ರೀಡಾ ಸಚಿವಾಲಯವು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ಗೆ (ಐಒಎ) ಕೇಳಿದೆ ಎಂದು ವರದಿಗಳು ಉಲ್ಲೇಖಿಸಿದೆ.
ಹೊಸದಾಗಿ ಚುನಾಯಿತ ಸಂಸ್ಥೆಯಿಂದ ಆತುರದ ನಿರ್ಧಾರಗಳನ್ನು ಉಲ್ಲೇಖಿಸಿರುವ ಸಚಿವಾಲಯವು, “ಕುಸ್ತಿ ಫೆಡರೇಶನ್ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ” ಎಂದು ಡಿಸೆಂಬರ್ 24 ರಂದು ಅಧಿಕೃತ ಹೇಳಿಕೆಯಲ್ಲಿ ಪ್ರಕಟಿಸಿದೆ.
ಇದನ್ನೂ ಓದಿ: KSRTC | 20 ಟ್ರಕ್ಗಳೊಂದಿಗೆ ಲಾಜಿಸ್ಟಿಕ್ಸ್ ವ್ಯವಹಾರಕ್ಕೆ ಪ್ರವೇಶಿಸಿದ ಕೆಎಸ್ಆರ್ಟಿಸಿ!
ಸರ್ಕಾರವು ಫೆಡರೇಷನ್ ಅನ್ನು ವಜಾಗೊಳಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅದರ ನೂತನ ಚುನಾಯಿತ ಅಧ್ಯಕ್ಷ ಸಂಜಯ್ ಸಿಂಗ್, ಡಬ್ಲ್ಯುಎಫ್ಐ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಸರ್ಕಾರಕ್ಕೆ ವಿವರಿಸುವ ಮೂಲಕ ತನ್ನ ಅಮಾನತು ರದ್ದುಗೊಳಿಸುವಂತೆ ಕೋರುತ್ತದೆ. ಒಂದು ವೇಳೆ ಸಮಸ್ಯೆ ಪರಿಹಾರವಾಗದಿದ್ದರೆ ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದು ಹೇಳಿದ್ದಾರೆ.
“ನಾವು ಕ್ರೀಡಾ ಸಚಿವರಿಂದ ಸಮಯ ಕೇಳುತ್ತಿದ್ದು, ಅಮಾನತು ಹಿಂತೆಗೆದುಕೊಳ್ಳುವಂತೆ ವಿನಂತಿಸುತ್ತೇವೆ. ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹಾರವಾಗದಿದ್ದರೆ, ನಾವು ಕಾನೂನು ಆಯ್ಕೆಗಳನ್ನು ಹುಡುಕುತ್ತೇವೆ” ಎಂದು ಸಂಜಯ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
“ನಾವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಿಯಮಗಳನ್ನು ಅನುಸರಿಸಿದ್ದೇವೆ ಎಂದು ನಾವು ವಿವರಿಸುತ್ತೇವೆ. ಆ ಬಗ್ಗೆ ನಾವು ಪುರಾವೆಗಳನ್ನು ಪ್ರಸ್ತುತಪಡಿಸುತ್ತೇವೆ. ಏನೇ ನಿರ್ಧಾರಗಳನ್ನು ತೆಗೆದುಕೊಂಡರೂ ಒಮ್ಮತದಿಂದ ತೆಗೆದುಕೊಳ್ಳಲಾಗಿದೆ. ಅದು ನನ್ನ ವೈಯಕ್ತಿಕ ನಿರ್ಧಾರವಾಗಿರಲಿಲ್ಲ. 24 ರಾಜ್ಯ ಸಂಘಗಳು ಅಫಿಡವಿಟ್ಗಳನ್ನು ನೀಡಿವೆ ಮತ್ತು ನಮಗೆ ಇಮೇಲ್ಗಳು ಬಂದಿವೆ, ನಮ್ಮಲ್ಲಿ ಎಲ್ಲವೂ ಲಿಖಿತವಾಗಿ ಇದೆ” ಎಂದು ಕ್ರೀಡಾ ನಿರ್ವಾಹಕರು ಹೇಳಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಮೋದಿ – ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ
ಸರ್ಕಾರದ ನಿರ್ಧಾನ ಸ್ವಾಗತಿಸಿದ ಒಲಿಂಪಿಯನ್ ಸಾಕ್ಷಿ ಮಲಿಕ್
ಕುಸ್ತಿ ಫೆಡರೇಶನ್ನ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಚಳವಳಿಯ ಪ್ರಮುಖ ಹೋರಾಟಗಾರ್ತಿ, ಒಲಿಂಪಿಯನ್ ಸಾಕ್ಷಿ ಮಲಿಕ್ ಅವರು ಡಬ್ಲ್ಯುಎಫ್ಐ ಅಮಾನತುಗೊಳಿಸುವಿಕೆಯನ್ನು ಸ್ವಾಗತಿಸಿದ್ದು, “ಒಳ್ಳೆಯ ಘಟನೆಯ ಕಡೆಗೆ ಇದು ಮೊದಲ ಹೆಜ್ಜೆಯಾಗಿದೆ. ನಾವು ಯಾವ ಕಾರಣಕ್ಕಾಗಿ ಹೋರಾಡುತ್ತಿದ್ದೇವೆ ಎಂಬುದನ್ನು ಸರ್ಕಾರ ಅರ್ಥಮಾಡಿಕೊಂಡಿದೆ ಎಂದು ನಾನು ಭಾವಿಸುತ್ತೇನೆ. ಮಹಿಳಾ ಒಕ್ಕೂಟದ ಅಧ್ಯಕ್ಷೆ ಇದ್ದರೆ, ಮಹಿಳಾ ಕುಸ್ತಿಪಟುಗಳ ಸುರಕ್ಷತೆ ಉತ್ತಮವಾಗಿರುತ್ತದೆ. ಇದು ದೇಶದ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಹೋರಾಟವಾಗಿತ್ತು” ಎಂದು ಅವರು ತಿಳಿಸಿದ್ದಾರೆ.
ಸಂಜಯ್ ಸಿಂಗ್ ಅವರನ್ನು ಕುಸ್ತಿ ಫೆಡರೇಶನ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದನ್ನು ವಿರೋಧಿಸಿ ಶುಕ್ರವಾರ ತಮ್ಮ ಪದ್ಮಶ್ರೀ ಪದಕವನ್ನು ಸರ್ಕಾರಕ್ಕೆ ಹಿಂದಿರುಗಿಸಿದ ಭಜರಂಗ್ ಪುನಿಯಾ ಅವರು ತಮ್ಮ ಪ್ರಶಸ್ತಿಯನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ. “ಈಗ ನಾನು ಅದನ್ನು ಹಿಂತಿರುಗಿಸಿದ್ದೇನೆ, ಹಾಗಾಗಿ ಅದನ್ನು ಹಿಂಪಡೆಯಲು ಹೋಗುವುದಿಲ್ಲ. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಗೌರವ ಯಾವುದೇ ಪ್ರಶಸ್ತಿಗಿಂತ ದೊಡ್ಡದಾಗಿದೆ. ಏನಾಗುತ್ತಿದೆ ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ. ನ್ಯಾಯ ಸಿಕ್ಕ ನಂತರವೇ ನಾನು ಅದನ್ನು ಹಿಂಪಡೆಯುವ ಬಗ್ಗೆ ಯೋಚಿಸುತ್ತೇನೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ನಾವು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಡಬ್ಲ್ಯುಎಫ್ಐ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಪೂನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಆರೋಪಿಸಿದ್ದರು.
ವಿಡಿಯೊ ನೋಡಿ: ಅಂಗನವಾಡಿ ನೌಕರರಿಗೆ ಇಡಿಗಂಟು : ಹೈಕೋರ್ಟ್ ನಿರ್ದೇಶನ ಸರಿ ಇಲ್ಲ – ಎಸ್ ವರಲಕ್ಷ್ಮೀ ಆಕ್ರೋಶ