ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಆಗ್ರಹ; ಅಕ್ಟೋಬರ್ 28ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ

ಮಂಗಳೂರು: ಸುರತ್ಕಲ್ ಎನ್​ಐಟಿಕೆಯ ಟೋಲ್‌ಗೇಟ್ ತೆರವುಗೊಳಿಸಬೇಕೆಂದು ನಡೆಸಲಾಗುತ್ತಿರುವ ಹೋರಾಟದ ಮುಂದುವರೆದ ಭಾಗವಾಗಿ ಅಕ್ಟೋಬರ್ 28 ರಿಂದ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಮುಷ್ಕರ ಕೈಗೊಳ್ಳ ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ನಿರ್ಧರಿಸಿದೆ.

ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್‌ ಕಾಟಿಪಳ್ಳ ಮಾತನಾಡಿ, ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು, ಟೋಲ್‌ಗೇಟ್‌ ತೆರವಿಗೆ 20 ದಿನಗಳ ಕಾಳಾವಕಾಶ ಕೇಳಿದ್ದಾರೆ. ಅವರು ನೀಡಿದ ಭರವಸೆಯನ್ನು ಮರೆಯಬಾರದು ಎಂದು ಆಗ್ರಹಿಸುವ ನಿಟ್ಟಿನಲ್ಲಿ ಹಗಲು ರಾತ್ರಿ ಧರಣಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಟೋಲ್‌ಗೇಟ್ ತೆರವಿಗೆ ಅಕ್ಟೋಬರ್ 18ರಂದು ನಡೆದ ಹೋರಾಟಕ್ಕೆ ಜನತೆಯ ಭಾರೀ ಬೆಂಬಲ ವ್ಯಕ್ತವಾಯಿತು. ಅಂದು ನಡೆದ ಹೋರಾಟದಲ್ಲಿ ನಾವು ಟೋಲ್‌ಗೇಟ್ ಮುತ್ತಿಗೆ ಹಾಕಿದೇವು. ಅಂದು ಕೆಲಹೊತ್ತು ಟೋಲ್ ಸಂಗ್ರಹ ಸ್ಥಗಿತಗೊಳಿಸಲು ಸಾಧ್ಯವಾಯಿತು. ಹೋರಾಟ ದೊಡ್ಡ ಮಟ್ಟದಲ್ಲಿ ನಡೆದಿದೆ. ಅದರಂತೆ ಸಂಸದ ನಳಿನ್ ಕುಮಾರ್ ಕಟೀಲ್ 20 ದಿನಗಳಲ್ಲಿ ತೆರವು ಮಾಡುವ ಭರವಸೆ ನೀಡಿದ್ದಾರೆ. ಆದರೆ ಅವರ ಭರವಸೆ ಮೇಲೆ ನಂಬಿಕೆ ಇಲ್ಲವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ನಡೆಸಿದ ಸಭೆಯಲ್ಲಿ ಟೋಲ್ ಗೇಟ್ ಬಂದ್ ಮಾಡಲು 15 ದಿನದ ಕಾಲಾವಕಾಶ ಕೇಳಿದ್ದರು. ಎಸಿಪಿ ಕಚೇರಿಯಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಭೆಯಲ್ಲಿ 15 ದಿವಸಗಳ ಕಾಲಾವಕಾಶ ಕೇಳಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು 20 ದಿನಗಳ ಕಾಲಾವಕಾಶ ಕೇಳಿದ್ದರು. ಇದೀಗ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರು ನವೆಂಬರ್ ಅಂತ್ಯ ಎಂದು ಹೇಳುತ್ತಿದ್ದಾರೆ. ಇವರ ಯಾವುದೇ ಹೇಳಿಕೆಯನ್ನು ನಂಬುವ ಸ್ಥಿತಿಯಲ್ಲಿ ನಾವು ಇಲ್ಲ. ಇದಕ್ಕಾಗಿ ಟೋಲ್ ಗೇಟ್ ಬಂದ್ ಮಾಡುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಸಂಸದರ ಭರವಸೆಯಂತೆ ನವೆಂಬರ್ 7ಕ್ಕೆ ಟೋಲ್ ಗೇಟ್ ಬಂದ್ ಆಗಬೇಕು. ಅಕ್ಟೋಬರ್ 28 ರಿಂದ ಆರಂಭವಾಗುವ ಹಗಲು ರಾತ್ರಿ ಮುಷ್ಕರ ಟೋಲ್ ಗೇಟ್ ಬಂದ್ ಆಗುವವರೆಗೂ ನಡೆಯಲಿದೆ ಎಂದರು.

Donate Janashakthi Media

Leave a Reply

Your email address will not be published. Required fields are marked *