ಸುರತ್ಕಲ್: ಸುರತ್ಕಲ್ ಅಕ್ರಮ ಟೋಲ್‌ಗೇಟ್ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದ ಸುಮಾರು 101 ಮಂದಿ ಹೋರಾಟಗಾರರ ಮೇಲೆ ಸುರತ್ಕಲ್ ಪೊಲೀಸರು ಜಾರ್ಜ್ ಶೀಟ್ ಸಲ್ಲಿಸಿದ್ದು, ಸೋಮವಾರ ಹಲವು ಹೋರಾಟಗಾರರ ಮೊಬೈಲ್‌ಗಳಿಗೆ ಮೆಸೇಜ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆಯಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಟೋಲ್‌ಗೇಟ್ ವಿರುದ್ಧ 2022ರ ನವೆಂಬರ್‌ನಲ್ಲಿ ಟೋಲ್‌ಗೇಟ್ ತೆರವು ಹೋರಾಟ ಸಮಿತಿ ಟೋಲ್ ಗೇಟ್‌ನ್ನು ತೆರವುಗೊಳಿಸಲು ನೇರ ಕಾರ್ಯಾಚರಣೆಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ಹೋರಾಟಗಾರರು ಪೊಲೀಸರ ಸರ್ಪಗಾವಲನ್ನು ಹಿಮ್ಮೆಟ್ಟಿಸಿ ಟೋಲ್ ಬೂತ್‌ಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ಸುಮಾರು 250ಕ್ಕೂ ಅಧಿಕ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದರು.
ಘಟನೆಗೆ ಸಂಬಂಧಿಸಿ ಟೋಲ್‌ಗೇಟ್ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಸೇರಿದಂತೆ 101 ಮಂದಿ ಹೋರಾಟಗಾರರ ಮೇಲೆ ಭಾರತೀಯ ದಂಡ ಸಂಹಿತೆ 143, 147, 341, 283 ಆರ್‌ಡಬ್ಲ್ಯೂ ಹಾಗೂ 149 ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಈ ಸಂಬಂಧ 2023ರ ಅಕ್ಟೋಬರ್ ತಿಂಗಳಲ್ಲಿ ಸುರತ್ಕಲ್ ಪೊಲೀಸರು ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಪ್ರಕರಣದಲ್ಲಿ ಸುಮಾರು 250ಕ್ಕೂ ಹೆಚ್ಚಿನವರು ಹೋರಾಟದಲ್ಲಿ ಭಾಗಿಗಳಾಗಿದ್ದರು. ಈ ಪೈಕಿ ಘಟನಾವಳಿಯ ವೀಡಿಯೊ ಸಾಕ್ಷ್ಯದ ಆಧಾರದಲ್ಲಿ 101 ಮಂದಿಯ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಮೂಲ ಮಾಹಿತಿ ನೀಡಿದೆ.
ಇದನ್ನೂ ಓದಿ : ಪುಟಾಣಿಗಳ ಶಿಕ್ಷಣಕ್ಕಿಲ್ಲ ಬಲ! 25 ಮಕ್ಕಳಿರುವ ಅಂಗನವಾಡಿಗೆ ಶಿಕ್ಷಕಿಯೂ ಇಲ್ಲ, ಸಹಾಯಕಿಯೂ ಇಲ್ಲ
ಹೋರಾಟದ ಸಂದರ್ಭದಲ್ಲಿ ಯಾವುದೇ ಹಿಂಸಾಚಾರವಾಗಿಲ್ಲ. ಪ್ರಾಣ ಹಾನಿ ಸಂಭವಿಸಿಲ್ಲ. ಇದು ಚಾರ್ಜ್ ಶೀಟ್ ದಾಖಲಿಸುವ ಪ್ರಕರಣವೇ ಅಲ್ಲ. ಹಾಕಲೇಬೇಕೆಂದಿದ್ದರೆ, 10-15 ಮಂದಿ ಮುಖಂಡರ ಮೇಲೆ ದಾಖಲಿಸಬಹುದಿತ್ತು. ಆದರೆ, 101 ಮಂದಿ ಹೋರಾಟಗಾರ ಮೇಲೆ ಆರೋಪ ಪಟ್ಟಿ ಸಲ್ಲಿಸಿರುವುದು ಆಶ್ಚರ್ಯ ಮೂಡಿಸಿದೆ ಎಂದು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.