ಬಾನುಗೊಂದಿ ಲಿಂಗರಾಜು
- ಸುರಂಗ ನಿರ್ಮಾಣದಿಂದ 13 ಮನೆಗಳಿಗೆ ಹಾನಿ
- ಎರಡು ವರ್ಷ ಅಲೆದಾಡಿದರೂ ಒಂದು ಪೈಸೆ ಪರಿಹಾರ ಸಿಕ್ಕಿಲ್ಲ
ಬಯಲು ಸೀಮೆ ಜಿಲ್ಲೆಗಳ ಜನರ ಬಾಯಾರಿಕೆ ನೀಗಿಸುವ ಉದ್ದೇಶದಿಂದ ಕೈಗೊಂಡಿರುವ ಎತ್ತಿನಹೊಳೆ ಯೋಜನೆಗಾಗಿ ಸಕಲೇಶಪುರ ತಾಲೂಕಿನ ಎರಡು ಕಡೆ ನಿರ್ಮಿಸಿರುವ ಸುರಂಗ ಮಾರ್ಗದಿಂದ ಹಾನಿಯಾಗಿರುವ ಮನೆಗಳಿಗೆ ಎರಡು ವರ್ಷ ಕಳೆದರೂ ಪರಿಹಾರ ಸಿಕ್ಕಿಲ್ಲ. ಈ ಹಿನ್ನೆಲೆ ಸಂತ್ರಸ್ತ ಕುಟುಂಬಗಳು ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದು ಅಲೆದು ಹೈರಾಣಾಗಿವೆ.
ಹೌದು, ಬಯಲು ಸೀಮೆಯ ಏಳು ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ಮಹತ್ವದ ಎತ್ತಿನಹೊಳೆ ಯೋಜನೆಗಾಗಿ ಸಕಲೇಶಪುರ ತಾಲೂಕಿನ ಮೂಗಲಿ ಹಾಗೂ ಹೆಬ್ಬನಹಳ್ಳಿ ಗ್ರಾಮದಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಇದರಿಂದ ಎರಡೂ ಗ್ರಾಮದ 13 ಮನೆಗಳಿಗೆ ಹಾನಿಯಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡ ಹಾನಿಯಾಗಿರುವ ಮನೆಗಳ ಸಮೀಕ್ಷೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಪರಿಹಾರ ಸಂತ್ರಸ್ತರ ಕೈ ಸೇರಿಲ್ಲ.ಇದರಿಂದ ಸಂತ್ರಸ್ತ ಕುಟುಂಬಗಳು ಪರಿಹಾರ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
1೦೦ ಅಡಿ ಆಳದಲ್ಲಿ ಸುರಂಗ: ಎತ್ತಿನಹೊಳೆ ಯೋಜನೆಯ ಗುರುತ್ವಾ ಕಾಲುವೆಯ ಸರಪಳಿ ೦.೦೦೦ ಕಿ.ಮೀ. ನಿಂದ 1.156 /1.500 ಕಿ.ಮೀ ವರೆಗೆ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ನಾಲಾ ಪಂಕ್ತೀಕರಣದ ಮಧ್ಯಭಾಗದಿಂದ ಎರಡೂ ಬದಿಗಳಲ್ಲಿ ಒಟ್ಟು ೯ ವಾಸದ ಮನೆಗಳಿದ್ದು, ಈ ಮನೆಗಳು ಸುರಂಗ ಮಾರ್ಗದಿಂದ ಕೇವಲ 15 ಮೀಟರ್‌ನಿಂದ 120 ಮೀ. ದೂರದಲ್ಲಿ ಇವೆ. ಅಲ್ಲದೆ ಸುರಂಗ ಮಾರ್ಗದ ನಾಲಾ ಪಂಕ್ತೀಕರಣದ ಮೇಲ್ಭಾಗದಲ್ಲಿ 2 ಮನೆಗಳಿವೆ.
ಮನೆಗಳಿಗೆ ಭಾರೀ ಹಾನಿ: ಸುರಂಗ ಮಾರ್ಗ ಕಾಮಗಾರಿ ನಿರ್ವಹಿಸುವ ಸಂದರ್ಭದಲ್ಲಿ ಡ್ರಿಲ್ಲಿಂಗ್, ಬ್ಲಾಸ್ಟಿಂಗ್ ಹಾಗೂ ಇತರೆ ಕೆಲಸಲಗಳಿಂದ ಉಂಟಾದ ಕಂಪನದಿAದಾಗಿ ಸುರಂಗ ಮಾರ್ಗದ ಎರಡೂ ಬದಿಗಳಲ್ಲಿ ಸುಮಾರು ೧೫ ಮೀಟರ್‌ನಿಂದ ೧೨೦ ಮೀಟರ್ ದೂರ ಇರುವ ಮನೆಗಳಲ್ಲಿ ಬಿರುಕು ಉಂಟಾಗಿ ಭಾರೀ ಹಾನಿಯಾಗಿದೆ.
೨ ಮನೆ ಸ್ಥಳಾಂತರಕ್ಕೆ ನಿರ್ಲಕ್ಷ್ಯ : ಸುರಂಗ ಮಾರ್ಗದ ಕ್ಯಾವಿಟಿಯು ಗುರುತ್ವಾ ಕಾಲುವೆ ಸರಪಳಿ ೦+೨೬೫ ಕೀಮೀನಲ್ಲಿದ್ದು ಈ ಸ್ಥಳದಿಂದ ಸುಮಾರು ೮ ರಿಂದ ೨೦ ಮೀಟರ್ ಹಿಂಭಾಗಕ್ಕೆ ಪಂಕ್ತೀಕರಣದ ಮೇಲ್ಬಾಗದಲ್ಲೇ ಲೋಕೇಶ್ ಎಂಬುವವರ ಮನೆ ಇದೆ. ಈ ಭಾಗದಲ್ಲಿ ಮಣ್ಣು ಹೆಚ್ಚು ವಿಘಟಿತವಾಗಿದೆ. ಈ ಭಾಗವು ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು ಹೆಚ್ಚು ಮಳೆಯಾದಲ್ಲಿ ಸುರಂಗ ಮಾರ್ಗದ ಒಳಗೆ ಬಸಿನೀರು ಹೆಚ್ಚು ಹರಿದು ಬರುತ್ತದೆ.ಇದರಿಂದ ಮಣ್ಣು ಕುಸಿಯುವ ಸಂಭವವಿದ್ದು ಕೆಲಸ ಮಾಡುವ ಸಂದರ್ಭದಲ್ಲಿ ಸುರಂಗದ ಮೇಲ್ಭಾಗದಲ್ಲಿರುವ ಎರಡು ಮನೆಗಳಿಗೆ ಹೆಚ್ಚು ಹಾನಿಯಾಗುವ ಸಂಭವವಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಎರಡೂ ಮನೆಗಳನ್ನೂ ಸ್ಥಳಾಂತರಿಸುವAತೆ ಎತ್ತಿನಹೊಳೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆದರೆ ಇದುವರೆಗೂ ಈ ಎರಡೂ ಮನೆಗಳನ್ನೂ ಸ್ಥಳಾಂತರಿಸಿಲ್ಲ. ಇತ್ತೀಚೆಗೆ ಸುರಿದ ಮಳೆಯಿಂದ ಸುರಂಗ ಮಾರ್ಗದ ಸಮೀಪ ಭೂ ಕುಸಿತ ಉಂಟಾಗಿದ್ದು ಎರಡೂ ಕುಟುಂಬದವರು ಆತಂಕದಿಂದ ಜೀವನ ಸಾಗಿಸುತ್ತಿವೆ.
ಇದನ್ನೂ ಓದಿ : ಕೂಲಿ ಕೆಲಸ ಕೇಳಿಕೊಂಡು ಬಂದವರನ್ನೇ ಜೀತಕ್ಕೆ ತಳ್ತಾ ಇದ್ದ ಕಿರಾತಕ
13 ಮನೆಗಳಿಗೆ 38 ಲಕ್ಷ ಪರಿಹಾರ ನಿಗದಿ: ಸುರಂಗ ಮಾರ್ಗದಿಂದಾಗಿ ಹೆಬ್ಬನಹಳ್ಳಿ ಗ್ರಾಮದ ಸದಾಶಿವ, ಯಶೋಧಮ್ಮ, ಮೂಗಲಿ ಗ್ರಾಮದ ಲೋಕೇಶ್, ನರಸಮ್ಮ, ಸರೋಜಾ, ಶೇಷಪ್ಪ, ಅಕ್ಕಮ್ಮ, ರಾಮಾ, ಸೋಮಶೇಖರ್, ನಿರ್ವಾಣಯ್ಯ, ಬಸಯ್ಯ, ಪುಟ್ಟರಾಜು ಹಾಗೂ ಕಾವೇರಿ ಸೇರಿದಂತೆ ಒಟ್ಟು 13ಮನೆಗಳಿಗೆ ಹಾನಿಯಾಗಿದ್ದು ಮನೆ ಮಾಲೀಕರು 2019 ರ ನ.5ರಂದು ಹೆಬ್ಬನಹಳ್ಳಿಯಲ್ಲಿ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಹಾರ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ಹಾನಿಯಾಗಿರುವ ೧೩ ಮನೆಗಳ ಮೌಲ್ಯಮಾಪನ ಮಾಡಿಸಿ ಲೋಕೋಪಯೋಗಿ ಇಲಾಖೆ ನಿಬಂದನೆಗಳನ್ವಯ ಒಟ್ಟು 38, 47,548ರೂ. ಪರಿಹಾರ ಮೊತ್ತ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಪರಿಹಾರದ ಹಣ ಸಂತ್ರಸ್ತರ ಕೈ ಸೇರಿಲ್ಲ.
ಪರಿಹಾರ ಹಣ ನೀಡುವಂತೆ ಸಂತ್ರಸ್ತ ಕುಟುಂಬಗಳು ವಿಶ್ವೇಶ್ವರಯ್ಯ ಜಲ ನಿಗಮ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಪರಿಪರಿಯಾಗಿ ಕೇಳಿಕೊಂಡರೂ ಕೇವಲ ಭರವಸೆ ನೀಡುತ್ತಾರೆ ಹೊರತು ಇದುವರೆಗೂ ಸಂತ್ರಸ್ತರ ಕೈ ಸೇರಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಡ ಕುಟುಂಬಗಳಿಗೆ ಪರಿಹಾರ ಹಣ ಕೊಡಿಸಲು ಮುಂದಾಗಬೇಕಿದೆ.