ಸುಪ್ರೀಂ ನೇಮಿಸಿದ ಸಮಿತಿ ಕಾಯ್ದೆ ರದ್ದತಿ ಬಗ್ಗೆ ಪ್ರಸ್ತಾಪಿಸಿಲ್ಲ-ರೈತ ಹೋರಾಟ ಮುಂದುವರೆದಿದೆ: ಕೋಡಿಹಳ್ಳಿ ಚಂದ್ರಶೇಖರ್‌

ಸೆ.27ರ ಕರ್ನಾಟಕ ಬಂದ್‌ ಯಶಸ್ಸಿಗೆ ರೈತ-ಕಾರ್ಮಿಕ ದಲಿತ ಮತ್ತು ಎಲ್ಲ ಜನಪರ ಸಂಘಟನೆ ಕರೆ

ಬೆಂಗಳೂರು: ರೈತರ ಹೋರಾಟ ತೀವ್ರತೆಯಿಂದಾಗಿ ದೇಶದ ಸರ್ವೋಚ್ಛ ನ್ಯಾಯಾಲಯ ಮಧ್ಯಪ್ರವೇಶಿಸಿ ಸಮಿತಿಯೊಂದನ್ನು ರಚಿಸಿದ್ದು ಆ ಸಮಿತಿಯ ಕೆಲವು ಸೂಚನೆಗಳು ಶೇ.100ರಷ್ಟು ರೈತಪರವಾಗಿ ಇದ್ದೇವೆ ಎಂದು ಹೇಳಿದರೂ ಸಹ ಕೃಷಿ ಕಾಯ್ದೆಗಳ ರದ್ದತಿ ಬಗ್ಗೆ ಪ್ರಸ್ತಾಪಿಸಿಲ್ಲ, ಬದಲಿಗೆ ಬದಲಾವಣೆಗಳನ್ನು ಸೂಚಿಸಿದೆ. ಸಮಿತಿ ರಚನೆ ಮಾಡಿದಾಗಲೇ ದೇಶದ ಎಲ್ಲಾ ರೈತ ಸಂಘಟನೆಗಳ ಜಂಟಿ ವೇದಿಕೆ ವಿರೋಧಿಸಿತ್ತು. ಹಾಗಾಗಿಯೇ ರೈತ ಹೋರಾಟ ಮುಂದುವರೆದಿದೆ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.

ಸೆಪ್ಟಂಬರ್‌ 27ರಂದು ಹಮ್ಮಿಕೊಂಡಿರುವ ಭಾರತ್‌ ಬಂದ್‌ ಕರೆಯ ಬಗ್ಗೆ ತಿಳಿಸಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರು ಹಾಗೂ ಸಂಯುಕ್ತ ಹೋರಾಟ-ಕರ್ನಾಟಕ ದ ಸಂಯೋಜಕರಾದ ಕೋಡಿಹಳ್ಳಿ ಚಂದ್ರಶೇಖರ್‌ ಅವರು ಮಾತನಾಡಿದರು.

ಕೃಷಿ ಕಾಯ್ದೆಗಳ ರದ್ದತಿಗಾಗಿನ ಹೋರಾಟ ಕೇವಲ ಉತ್ತರ ಭಾರತದ ಪಂಜಾಬ್‌, ಹರಿಯಾಣಕ್ಕೆ ಸೀಮಿತವಾಗಿಲ್ಲ. ದೇಶದ ಎಲ್ಲೆಡೆ ಹೋರಾಟಗಳು ನಡೆಯುತ್ತಿದೆ. ಕರ್ನಾಟಕದಲ್ಲಿ ಕೋವಿಡ್‌ ಪರಿಸ್ಥಿತಿ ಹೆಚ್ಚಿನ ಗಂಭೀರತೆ ತೀವ್ರವಾಗದೆ ಇದ್ದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚಿನ ಸೇರಬಹುದಾದ ಮಹಾಪಂಚಾಯತ್‌ಗಳನ್ನು 8 ರಿಂದ 10ಕ್ಕೂ ಹೆಚ್ಚು ಕಡೆಗಳಲ್ಲಿ ಹಮ್ಮಿಕೊಳ್ಳಲಾಗುತ್ತಿತ್ತು. ಮುಂಬರುವ ದಿನಗಳಲ್ಲಿ ಕೋವಿಡ್‌ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೋರಾಟ ಮುಂದುವರೆಸಲು ಸಂಯುಕ್ತ ಹೋರಾಟ – ಕರ್ನಾಟಕ ನಿರ್ಧರಿಸಿದೆ.

ಮುಂದುವರೆದು ಮಾತನಾಡಿದ ಅವರು ʻʻಎಂಎಸ್‌ಪಿ ಬಗೆಗಿನ ಗೊಂದಲಗಳ ಬಗ್ಗೆ ಭಾರೀ ಪ್ರಚಾರ ಮಾಡಿ ಅತ್ಯಧಿಕ ಬೆಲೆ ನಿಗದಿ ಮಾಡಲಾಗುತ್ತಿದೆ ಎಂದು ಹೇಳುತ್ತಿರುವುದ ಸಹ ಬೋಗಸ್‌ ಆಗಿದೆ. ಅದು ಇಡೀ ದೇಶದ ರೈತರನ್ನು ಅಪಮಾನ ಮಾಡುವುದಾಗಿದೆ. ರೈತರಿಗೆ ಬೇಕಿರುವುದು ಸಾಮಾನ್ಯ ಕನಿಷ್ಠ ಬೆಂಬಲ ಬೆಲೆ ಅಲ್ಲ, ರೈತನ ರಕ್ಷಣೆಗಾಗಿ ಬೆಲೆ ಬೇಕಾಗಿದೆ. ಇವೆಲ್ಲವುಗಳಲ್ಲಿ ಪ್ರಸಕ್ತ ಎಂ.ಎಸ್‌.ಸ್ವಾಮಿನಾಥನ್‌ ಅವರ ವರದಿಯು ರೈತರಿಗೆ ಅನುಕೂಲವಾಗಲಿದ್ದು ಅದನ್ನು ಜಾರಿ ಮಾಡಲು ಮುಂದಾಗುತ್ತಿಲ್ಲ. ಕಳೆದ ಏಳು ವರ್ಷಗಳಿಂದ ಸ್ವಾಮಿನಾಥನ್‌ ವರದಿ ಜಾರಿ ಮಾಡುತ್ತೇವೆ ಎಂದು ಪ್ರಚಾರ ಮಾಡುವ ಬಿಜೆಪಿ ಸರಕಾರಗಳು ಅದನ್ನು ಜಾರಿಗೆ ತರದೇ ದೇಶ ವಿರೋಧಿ, ಜನವಿರೋಧಿ ಕಾಯ್ದೆಗಳನ್ನು ತರುವ ಮೂಲಕ ಕಾರ್ಪೋರೇಟ್‌ ಕಂಪನಿ ನೀತಿಗೆ ಮುಂದಾಗುತ್ತಿದೆ ಎಂದು ಹೇಳಿದರು.

ಇದನ್ನು ಓದಿ: ಸೆ.27ರ ಭಾರತ್ ಬಂದ್ ಕರೆಗೆ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಬೆಂಬಲ

ಕೇಂದ್ರದ ಬಿಜೆಪಿ ಸರಕಾರ ಅನುಸರಿಸುತ್ತಿರುವ ನೀತಿಗಳನ್ನೇ ರಾಜ್ಯದಲ್ಲಿಯೂ ಜಾರಿಗೆ ತರುತ್ತಿರುವ ರಾಜ್ಯ ಸರಕಾರವು ಕಾಯ್ದೆ ಜಾರಿಯಲ್ಲಿನ ಲೋಪದೋಷಗಳನ್ನು ಸಹ ಪರಿಶೀಲಿಸುವ ಅಗತ್ಯವಿದೆ. ಉಳುವವನೇ ಭೂ ಒಡೆಯ ಎಂಬ ಕಾನೂನಿನ ಪ್ರಸಕ್ತ ಪರಿಸ್ಥಿತಿಯನ್ನು ಸಮಗ್ರವಾದ ಅಧ್ಯಯನ ನಡೆಸಿ ವಾಸ್ತವತೆಯನ್ನು ಅರಿತುಕೊಂಡು ಸರಕಾರ ಮುನ್ನಡೆಯಬೇಕು ಅಲ್ಲಿಯವರೆಗೂ ಜನಪರ ಎಂದು ಹೇಳಿಕೊಂಡು ಜಾರಿಗೊಳಿಸಲಾಗುತ್ತಿರುವ ಯಾವುದೇ ಕಾಯ್ದೆಗಳು ನಿಜವಾಗಿಯೂ ಜನಪರವಲ್ಲ, ಜನವಿರೋಧಿಯಾಗಿದೆ ಹಾಗಾಗಿ ಜನ ವಿರೋಧಿ, ದೇಶ ವಿರೋಧಿ ನೀತಿಗಳ ವಿರುದ್ಧ ಸೆಪ್ಟೆಂಬರ್‌ 27ರಂದು ಭಾರತ್‌ ಬಂದ್‌ ನಡೆಯುತ್ತಿದೆ ಎಂದರು.

ಎಲ್ಲಾ ಕಾರ್ಮಿಕ ಸಂಘಟನೆಗಳ ಪರವಾಗಿ ಮಾತನಾಡಿದ ಸಿಐಟಿಯು ರಾಜ್ಯ ಅಧ್ಯಕ್ಷರಾದ ಎಸ್‌.ವರಲಕ್ಷ್ಮಿ ʻʻಕಾರ್ಮಿಕರ ಕಾನೂನುಗಳನ್ನು ದಮನ ಮಾಡುವ ಮೂಲಕ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಅಲ್ಲದೆ, ಕೇಂದ್ರ ಸರಕಾರ ನಗದೀಕರಣದ ಹೆಸರಿನಲ್ಲಿ ದೇಶದ ಸಾರ್ವಜನಿಕ ಆಸ್ತಿಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ಮೂಲಕ ಅತ್ಯಂತ ದೇಶವನ್ನು ಕಾರ್ಪೋರೇಟೀಕರಣಕ್ಕೆ ಒಳಪಡಿಸಲು ದಾಪುಗಾಲು ಇಡುತ್ತಿವೆ. ಕಾರ್ಮಿಕರ ಬಗೆಗಿನ ಹಲವು ಸುಗ್ರೀವಾಜ್ಞೆಗಳ ಮೂಲಕ, ಎಸ್ಮಾ ಜಾರಿಯ ಮೂಲಕ ಜನಪರವಾದ ಇಲ್ಲದಂತೆ ಮಾಡಲಾಗುತ್ತಿದೆ. ಎಲ್ಲದರಲ್ಲೂ ತಾ ಮುಂದು ಎಂದು ರಾಜ್ಯ ಸರಕಾರ ಮುಂದಾಗುತ್ತಿದ್ದು ಎಲ್ಲವನ್ನು ಯಥಾವತ್ತಾಗಿ ಜಾರಿಗೊಳಿಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ ರಾಜ್ಯ ಸರಕಾರದ ಮೂಲಕವೇ ಎಲ್ಲೆಡೆ ಅನ್ವಯಗೊಳಿಸಲಿಕ್ಕಾಗಿ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಿ, ನೀತಿಯ ವಿರೋಧಗಳ ಬಗ್ಗೆ ಗಮನಹರಿಸದೆ, ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದೆ ಇವೆಲ್ಲವುಗಳನ್ನು ಒಳಗೊಂಡು ದೇಶವ್ಯಾಪಿ ರೈತ ಕಾರ್ಮಿಕರ ಬೃಹತ್‌ ಭಾರತ್‌ ಬಂದ್‌ ಹಮ್ಮಿಕೊಳ್ಳಲಾಗಿದೆʼ ಎಂದು ತಿಳಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಅಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ  ಮಾತನಾಡಿ ʻʻಕೇಂದ್ರದ ಮೂರು ಕೃಷಿ ಕಾಯ್ದೆಗಳು, ವಿದ್ಯುತ್‌ ಮಸೂದೆ, ಕನಿಷ್ಠ ಬೆಂಬಲ ಬೆಲೆ ಕಾನೂನು ಬೇಡಿಕೆಗಳ ಜೊತೆಗೆ ರಾಜ್ಯದ ಕೃಷಿ ಭೂಮಿಯನ್ನು ಶ್ರೀಮಂತರು, ಕಾರ್ಪೋರೇಟ್‌ ಕಂಪನಿಗಳಿಗೆ ವಹಿಸಲು ಜಾರಿಗೆ ತಂದ ʻʻಭೂ ಸುಧಾರಣಾ ಕಾಯ್ದೆ ತಿದ್ದುಪಡಿʼʼ, ಕೃಷಿ ಉತ್ಪಾದನೆಯ ಜೊತೆಗೆ ಕೃಷಿ ಮಾರುಕಟ್ಟೆಯನ್ನು ಕಾರ್ಪೋರೇಟ್‌ ಕಂಪನಿಗಳಿಗೆ ದಾರೆ ಎರೆಯಲು ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ, ಹೈನುಗಾರಿಕೆಯಲ್ಲಿ ತೊಡಗಿರುವ ಅಸಂಖ್ಯಾತ ರೈತರು, ಕೃಷಿಕೂಲಿಕಾರರು ಹಾಗೂ ದಲಿತರು, ಅಲ್ಪಸಂಖ್ಯಾತರು ನದುಕು, ಆಹಾರದ ಹಕ್ಕಿನ ಮೇಲಿನ ದಾಳಿ ನಡೆಸುತ್ತಿರುವ ʻಗೋ ಹತ್ಯೆ ನಿಷೇಧ ಕಾಯ್ದೆʼಗೆ ತಂದಿರುವ ತಿದ್ದುಪಡಿಗಳನ್ನು ರಾಜ್ಯ ಸರಕಾರ ಕೈಬಿಡಬೇಕು. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೋರೇಟ್‌ ಪರವಾದ ನಾಲ್ಕು ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ಕೈಬಿಡಬೇಕೆಂದು ಕಂಪನಿಗಳಿಗಾಗಿ ಲಾಭ ತರಲು ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನೀತಿಗಳ ವಿರುದ್ಧ ಸೆಪ್ಟೆಂಬರ್‌ 27ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.  ಬಂದ್‌ ಅನ್ನು ಯಶಸ್ವಿಗೊಳಿಸಬೇಕೆಂದು ಎಲ್ಲಾ ಜನತೆಗೆ ಹಾಗೂ ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನ, ಮಹಿಳೆಯರು, ಕನ್ನಡ ಪರ ಸಂಘಟನೆಗಳು ಹಾಗೂ ವರ್ತಕರನ್ನು ಸಂಯುಕ್ತ ಹೋರಾಟ-ಕರ್ನಾಟಕ ಮೂಲಕ ವಿನಂತಿಸಿಕೊಳ್ಳುತ್ತೇವೆ ಎಂದರು.

ಇದನ್ನು ಓದಿ: ಸಂಯುಕ್ತ ಕಿಸಾನ್ ಮೋರ್ಚಾ ಕರೆ: ಸೆಪ್ಟೆಂಬರ್ 25ರಂದು ಭಾರತ್ ಬಂದ್

ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ ʻʻಜನತೆಯ ಸಾರ್ವಭೌಮತೆಯೆ ಧಕ್ಕೆ ಎದುರಾದಾಗ ಹೋರಾಟ ಅನಿವಾರ್ಯ. ಜನತೆಯ ವಿರುದ್ಧವಾದ ನೀತಿಗಳನ್ನು ರೂಪಿಸಲು ನಾವೇ ಚುನಾಯಿಸಿದ ಸರಕಾರದ ಪ್ರತಿನಿಧಿ ಪ್ರಧಾನಿ ನರೇಂದ್ರಮೋದಿ ದಳ್ಳಾಳಿಯಂತೆ ವರ್ತಿಸುತ್ತಿದ್ದು, ದೇಶವನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ನಮ್ಮ ಹೋರಾಟ ಸ್ವಾತಂತ್ರ್ಯ ಹೋರಾಟದ ಮುಂದುವರೆಕೆಯಾಗಿದೆ. ನಿಜವಾದ ದೇಶಪ್ರೇಮ ಹೋರಾಟ ಇದಾಗಿದೆ. ಇತ್ತೀಚಿಗೆ ಮುಜಾಫರ್‌ ನಗರದಲ್ಲಿ ಸಂಘಟಿಸಿದ ಮಹಾಪಂಚಾಯತ್‌ ಸಭೆಯಲ್ಲಿ 11 ಲಕ್ಷಕ್ಕೂ ಹೆಚ್ಚಿನ ಜನಸ್ತೋಮ ಸೇರಿದ್ದು, ಸಮಸ್ಯೆಯ ಅಗಾಧತೆಯನ್ನು ತಿಳಿಯಬಹುದಾಗಿದೆ. ಹೋರಾಟದ ಮುಂದುವರೆದ ಭಾಗವಾಗಿ ಎಲ್ಲರೂ ಒಗ್ಗಟ್ಟಾಗಿ ಚಳುವಳಿಯಲ್ಲಿ ತೊಡಗಿಕೊಂಡಿದ್ದಾರೆʼ ಎಂದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್‌ ಮಾತನಾಡಿ ʻʻರೈತ ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ಸಂಕಷ್ಟಗಳು ಎದುರಾಗಲಿದೆ. ಎಲ್ಲ ಜನಪರ ಪರವಾದ ಹಕ್ಕುಗಳಿಗಾಗಿ, ದೇಶದ ಜನತೆಯ ವಿರುದ್ಧವಾಗಿ ಹಲವು ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿ ದೇಶ ವಿರೋಧಿಯಾಗಿ ಕಾರ್ಪೋರೇಟ್‌ ಕಂಪನಿ ನೀತಿಗೆ ಜಾರಿಗೆ ಮುಂದಾಗುತ್ತಿವೆ. ಸರಕಾರಿ ಒಡೆತನದ ಎಲ್ಲವನ್ನು ಮಾರಾಟಕ್ಕೆ ಮುಂದಾಗಿರುವುದೇ ದೇಶ ವಿರೋಧಿಯಾಗಿದೆ. ಎಲ್ಲಾ ಜನತೆ ಕರ್ನಾಟಕ ಬಂದ್‌ನಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.

ಕರ್ನಾಟಕ ಜನಶಕ್ತಿ ಪರವಾಗಿ ಕುಮಾರ್‌ ಸಮತಳ ಮತ್ತು ಕಾರ್ಮಿಕ ಮುಖಂಡ ಎಸ್‌.ಎನ್‌.ಸ್ವಾಮಿ ಅವರು ಮಾತನಾಡಿದರು.

ವರದಿ: ವಿನೋದ ಶ್ರೀರಾಮಪುರ

Donate Janashakthi Media

Leave a Reply

Your email address will not be published. Required fields are marked *