ಸೆ.27ರ ಭಾರತ್ ಬಂದ್ ಕರೆಗೆ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಬೆಂಬಲ

ದೇಶದ ಅನ್ನದಾತ ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಮತ್ತು ಕಾರ್ಪೊರೇಟ್ ಕಂಪೆನಿಗಳಿಂದ ನಿರ್ದೇಶಿತ ಶ್ರಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ರದ್ದು ಮಾಡಬೇಕು. ಇಲ್ಲದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ತ್ಯಜಿಸಬೇಕು ಎಂದು ಒತ್ತಾಯಿಸಿ ಸೆಪ್ಟೆಂಬರ್‌ 27 ರಂದು ನಡೆಯಲಿರುವ ಭಾರತ್ ಬಂದ್ ಆಂದೋಲನಕ್ಕೆ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ವಿವಿಧ ಹಂತದ ಘಟಕಗಳು ಸಂಪೂರ್ಣ ಬೆಂಬಲ ನೀಡಲಿವೆ ಎಂದು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್ ಹೇಳಿದರು. ಅವರು ಅಗಸ್ಟ್ 28 ಮತ್ತು 29 ರಂದು ಎರಡು ದಿನಗಳ ಕಾಲ ಮಂಡ್ಯ ನಗರದ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆಯುತ್ತಿದ್ದ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯ ಚರ್ಚೆಯನ್ನು ಅಂತಿಮಗೊಳಿಸಿ ಮಾತನಾಡುತ್ತಿದ್ದರು.

ಸಂಘದ ಅಧ್ಯಕ್ಷರಾದ ಎ. ವಿಜಯರಾಘವನ್‌ರವರ ಗೈರುಹಾಜರಿ ನಿಮಿತ್ತ ಸಭೆಯ ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷರೂ, ಕೇರಳದ ಸಿಪಿಐ(ಎಂ) ನೇತೃತ್ವದ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಅಬಕಾರಿ ಸಚಿವರಾದ ಎಂ.ವಿ. ಗೋವಿಂದನ್ ಮಾಸ್ತರ್ ವಹಿಸಿದ್ದರು.

ಕೇರಳ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ತ್ರಿಪುರ, ಪಂಜಾಬ್‌, ಕರ್ನಾಟಕ, ಬಿಹಾರ್, ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ್, ಹರ್ಯಾಣ, ಒಡಿಸ್ಸಾ, ಮತ್ತು ಮಧ್ಯಪ್ರದೇಶ ರಾಜ್ಯಗಳಿಂದ ಒಟ್ಟು 45 ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರು ಎರಡು ದಿನಗಳ ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನು ಓದಿ: ಕೃಷಿ ಕೂಲಿಕಾರರು ಅಪೌಷ್ಠಿಕತೆಯಿಂದ ಬಳಲುವುದನ್ನು ಸರಕಾರಗಳು ತಪ್ಪಿಸಲಿ – ಜಿ.ಎನ್. ನಾಗರಾಜ್

ಈ ಅವಧಿಯಲ್ಲಿ ಅಗಲಿದ ಸಂಗಾತಿಗಳಿಗೆ 2 ನಿಮಿಷ ಮೌನ ಆಚರಿಸಿ ಶ್ರದ್ದಾಂಜಲಿ ಸಲ್ಲಿಸಿದ ಬಳಿಕ ಪ್ರಧಾನ ಕಾರ್ಯದರ್ಶಿಗಳು ಎಲಾ ರಾಜ್ಯಗಳ ಕೆಲಸದ ವರದಿಯನ್ನು ಮುಂದಿನ ಕರ್ತವ್ಯಗಳ ಪ್ರಸ್ತಾವವನ್ನು ಮಂಡಿಸಿದರು. ಪ್ರಧಾನ ಕಾರ್ಯದರ್ಶಿಯವರು ಮಂಡಿಸಿದ ವರದಿಯ ಮೇಲೆ ಕಾರ್ಯಕಾರಿ ಸಮಿತಿ ಸದಸ್ಯರು ಚರ್ಚೆಮಾಡಿದರು.

ವಿಶ್ವದಲ್ಲಿ ಹಾಗೂ ನಮ್ಮ ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ಭೀಕರ ಹಾವಳಿ ಮುಂದುವರೆದಿದೆ. ವಿಶ್ವದ ಶ್ರೀಮಂತ ರಾಷ್ಟ್ರ ಎಂಬ ಖ್ಯಾತಿ ಪಡೆದ ಅಮೇರಿಕಾ ದೇಶದಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ್ದರೂ ಅಲ್ಲಿ ಲಕ್ಷಾಂತರ ಜನ ಕೋವಿಡ್‌ಗೆ ಬಲಿಯಾಗಿ ಸಾವನ್ನಪ್ಪಿದರು. ಭಾರತ ದೇಶದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಯಿತು. ಸಾಂಕ್ರಾಮಿಕದ ಎರಡನೇ ಅಲೆ ಹರಡುವುದನ್ನು ತಡೆಯುವುದು ಭಾರತ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಈಗ ಮೂರನೇ ಅಲೆಯ ಭೀತಿ ಹಬ್ಬುತ್ತಿದ್ದು ಅದನ್ನು ತಡೆಯುವ ಯಾವುದೇ ಕಾರ್ಯಕ್ರಮ ಸರ್ಕಾರದ ಬಳಿ ಇಲ್ಲ. ಇದುವರೆಗೆ ಕೇವಲ 11.3 ರಷ್ಟು ಜನಗಳಿಗೆ ಮೊದಲ ಲಸಿಕೆ ನೀಡಲಾಗಿದೆ. ಬಹುತೇಕ ರಾಜ್ಯಗಳಲ್ಲಿ ಲಸಿಕೆಗಳ ಕೊರತೆ ಇದೆ.

ಕೇರಳ ರಾಜ್ಯದಲ್ಲಿ ಮಾತ್ರ ಒಳ್ಳೆಯ ಕೆಲಸ ನಡೆದಿದೆ. ಇಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತದೆ. ಇಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಇಲ್ಲಿ ವ್ಯಾಪಕವಾದ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂಬ ವಾಸ್ತವಾಂಶವನ್ನು ಮರೆಮಾಚಲಾಗುತ್ತಿದೆ. ಕೇರಳದಲ್ಲಿ ಈಗಾಗಲೇ 23% ನಾಗರಿಕರಿಗೆ ಪೂರ್ಣ ಪ್ರಮಾಣದ ಲಸಿಕೆ ವಿತರಣೆ ಪೂರ್ಣಗೊಳಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರ ಕೋವಿಡ್ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೀಡಾದ 54 ಲಕ್ಷ ಜನರಿಗೆ ಪ್ರತಿ ತಿಂಗಳು ರೂ.1,600 ರಂತೆ ಅವರಿಗೆ ಪರಿಹಾರ ನೀಡುತ್ತಾ ಬಂತು. ಇದು ಬಿಜೆಪಿ, ಕಾಂಗ್ರೆಸ್ ಆಡಳಿತವಿರುವ ಯಾವ ರಾಜ್ಯದಲ್ಲೂ ಮಾಡದೇ ಇರುವ ಕೆಲಸ ಯಾರೂ ಹಸಿವೆಯಿಂದ ಸಾಯದಂತೆ ಕೇರಳ ಸರ್ಕಾರ ನೋಡಿಕೊಂಡಿದೆ.

ಇದನ್ನು ಓದಿ: ಸಂಯುಕ್ತ ಕಿಸಾನ್ ಮೋರ್ಚಾ ಕರೆ: ಸೆಪ್ಟೆಂಬರ್ 25ರಂದು ಭಾರತ್ ಬಂದ್

ಭಾರತದಲ್ಲಿ ಹಿಂದೆಂದೂ ಕಾಣದ ಬಡತನ ಎದ್ದು ನಿಂತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿ ಕಾಯ್ದೆ ಉದ್ಯೋಗ ಒದಗಿಸುವ ವಿಷಯದಲ್ಲಿ ಗಮನಾರ್ಹ ಪಾತ್ರವನ್ನು ನಿರ್ವಹಿಸಬಹುದು. ಆದರೆ ಶ್ರೀಮಂತರ ಪರವಾಗಿ ನಿಂತಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆಯನ್ನು ಬಲಪಡಿಸಿ ಜಾರಿಮಾಡುವಲ್ಲಿ ಆಸಕ್ತಿ ಹೊಂದಿಲ್ಲ. ಪ್ರತಿ ವರ್ಷ ನೀಡುವ ಅನುದಾನವನ್ನು ಹೆಚ್ಚಿಸುವ ಬದಲಾಗಿ ಕಡಿಮೆ ಮಾಡಲಾಗುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಕೃಷಿ ಕೂಲಿಕಾರರನ್ನು ಒಡೆದು ಆಳುವ ನೀತಿಯನ್ನು ಅನುಸರಿಸಲು ಹೊರಟಿದೆ. ಅವರಲ್ಲಿ ಜಾತಿ ವಿಷ ಬೀಜ ಬಿತ್ತಿ ಅವರ ಒಗಟ್ಟಿನ ಶಕ್ತಿಯನ್ನು ಒಡೆಯುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯನ್ನೇ ನಿರ್ಮೂಲನೆ ಮಾಡುವಂತೆ ರಾಜ್ಯಗಳಿಗೆ ಸಲಹೆ ನೀಡಿದೆ.

ಕೇಂದ್ರ ಸರ್ಕಾರದ ಇಂತಹ ಧೋರಣೆಗಳಿಂದಾಗಿ ಅತಿ ಹೆಚ್ಚು ಸಂಕಷ್ಟಕ್ಕೆ ಗುರಿಯಾದವರು ಕೃಷಿ ಕೂಲಿಕಾರರು. ಅವರಿಗೆ ಕನಿಷ್ಟ ವೇತನ ದೊರಕುವುದಿಲ್ಲ. ವರ್ಷದಲ್ಲಿ 30 ರಿಂದ 40 ದಿನಗಳು ಮಾತ್ರ ಅವರಿಗೆ ಕೃಷಿಯಲ್ಲಿ ಕೆಲಸ ಸಿಗುತ್ತದೆ. ಉದ್ಯೋಗ ಖಾತ್ರಿಯಲ್ಲಿ ಕೆಲವರು ಮಾತ್ರ ವರ್ಷದಲ್ಲಿ 100 ದಿನಗಳ ಕೆಲಸ ಪಡೆಯುತ್ತಾರೆ. ಅವರ ಮನೆಗಳಲ್ಲಿರುವ ಮತ್ತು ಹೊರಗಿರುವ ಅದಷ್ಟೋ ಮಂದಿಗೆ ಈ ಕೆಲಸ ಸಿಗುವುದಿಲ್ಲ. ಕೋವಿಡ್ ಕಾರಣದಿಂದ ನಗರಗಳಿಗೆ ವಲಸೆ ಹೋಗಿದ್ದ ಗ್ರಾಮೀಣ ಕೆಲಸಗಾರರಿಗೆ ನಗರಗಳಲ್ಲಿಯೂ ಕೆಲಸ ಸಿಗದೆ ವಾಪಾಸ್ ಹಳ್ಳಿಗಳಿಗೆ ಹಿಂತಿರುಗುತ್ತಾರೆ. ಉದ್ಯೋಗ ಖಾತ್ರಿಯಲ್ಲಿ ಕನಿಷ್ಟ 200 ದಿನಗಳ ಕೆಲಸ ಸಿಗುವಂತಾದರೆ ಅವರು ಕನಿಷ್ಟ ಮಟ್ಟದ ಜೀವನವನ್ನಾದರೂ ಜೀವಿಸಬಹುದು.

ಕೃಷಿ ಕ್ಷೇತ್ರದಲ್ಲಿ ಕೂಲಿಕಾರರಿಗೆ ಸಿಗುವ ಕೆಲಸದ ದಿನಗಳು ಕುಸಿಯುತ್ತಿರುವುದರಿಂದ ಅವರ ಭೂಮಿಯ ಹಸಿವು ಹೆಚ್ಚುತ್ತಿದೆ. ಅವರು ಸರ್ಕಾರಿ ಕಂದಾಯ ಅಥವ ಮರಗಳೇ ಇಲ್ಲದ ಅರಣ್ಯಭೂಮಿಯಲ್ಲಿ ಬೇಸಾಯ ಮಾಡಿ ಜೀವನ ಸಾಗಿಸಲು ಯತ್ನಿಸುತ್ತಾರೆ. ಆದರೆ ಅವರು ಒಕ್ಕಲೆಬ್ಬಿಸಲ್ಪಡುವ ಭೀತಿಗೆ ಒಳಗಾಗಿರುತ್ತಾರೆ. ಅವರನ್ನು ಸಂಘಟಿಸಿ ಭೂಮಿಯ ಪ್ರಶ್ನೆಗಾಗಿ ಅವರನ್ನು ಹೋರಾಟಕ್ಕೆ ಇಳಿಸುವುದಕ್ಕೆ ಸಂಘ ಹೆಚ್ಚಿನ ಆಸಕ್ತಿ ತೋರಬೇಕು. ಕೂಲಿ ಕಾರ್ಮಿಕರ ಆದಾಯ ಅತಿ ಕನಿಷ್ಠ ಇರುವುದರಿಂದ ಸರ್ಕಾರದಿಂದ ಉಚಿತವಾಗಿ ಅಗತ್ಯ ಆಹಾರದಾನ್ಯಗಳನ್ನು ಪಡೆಯಲು ಪ್ರಯತ್ನ ತೀವ್ರಗೊಳಿಸಬೇಕು ಮಾತ್ರವಲ್ಲ ಸಮರ್ಪಕ ಪಡಿತರ ಪದ್ಧತಿಗಾಗಿ ಹೋರಾಡಬೇಕು. ಅದೇ ಸಮಯದಲ್ಲಿ ವಲಸೆ ಕಾರ್ಮಿಕರ ಹಕ್ಕುಗಳಿಗಾಗಿ ಬಲವಾದ ಹೋರಾಟ ನಡೆಯಬೇಕು.

ಇವೆಲ್ಲದರ ನಡುವೆ, ದೆಹಲಿ ಗಡಿಯಲ್ಲಿ ಕಳೆದ 9 ತಿಂಗಳುಗಳಿಂದ ರೈತರು ನಡೆಸುತ್ತಿರುವ ದಿಟ್ಟ ಹೋರಾಟಕ್ಕೆ ಕೃಷಿ ಕಾರ್ಮಿಕರು ಸಂಪೂರ್ಣ ಬೆಂಬಲ ನೀಡಬೇಕು. ಈ ಚಾರಿತ್ರಿಕ ಹೋರಾಟ ಗುರಿ ಮುಟ್ಟದೆ ಅಂತ್ಯಗೊಳ್ಳಲಾರದು. ಇದರೊಂದಿಗೆ ಕೈಗಾರಿಕಾ ಕಾರ್ಮಿಕರ ಬೇಡಿಕೆಗಳಿಗಾಗಿ, ಖಾಸಗೀಕರಣದ ವಿರುದ್ಧ, ವಿದ್ಯುತ್ ರಂಗವನ್ನು ಸಾರ್ವಜನಿಕ ರಂಗದಲ್ಲಿ ಉಳಿಸಲು ನಡೆಸುವ ಜಂಟಿ ಹೋರಾಟಗಳಲ್ಲಿ ಕೃಷಿ ಕೂಲಿಕಾರರು ದೊಡ್ಡ ಮಟ್ಟದಲ್ಲಿ ಭಾಗವಹಿಸಬೇಕು. ವಿದ್ಯುತ್ ರಂಗದ ಖಾಸಗೀಕರಣವನ್ನು ಪ್ರಬಲವಾಗಿ ವಿರೋಧಿಸಬೇಕು. ವಲಸೆ ಕಾರ್ಮಿಕರ ಬೇಡಿಕೆಗಳಿಗಾಗಿ, ದಲಿತರ, ಮಹಿಳೆಯರ, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ನಿರಂತರ ಹೋರಾಟಗಳನ್ನು ನಡೆಸಬೇಕು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಕರ್ನಾಟಕ ರಾಜ್ಯ ಘಟಕವಾಗಿದೆ. ಮಂಡ್ಯ ಒಂದು ಪ್ರಮುಖ ಜಿಲ್ಲೆ. ಉಳಿದ ಜಿಲ್ಲೆಗಳಲ್ಲಿಯೂ ಪ್ರತಿ ವರ್ಷ ಸದಸ್ಯತ್ವವನ್ನು ಹೆಚ್ಚಿಸುತ್ತಾ, ಸ್ಥಳೀಯ ಪ್ರಶ್ನೆಗಳಿಗಾಗಿ ಹೋರಾಟಗಳನ್ನು ತೀವ್ರಗೊಳಿಸುತ್ತಾ ಚಳುವಳಿಯನ್ನು ಬಲಪಡಿಸಬೇಕು ಎಂದು ಬಿ. ವೆಂಕಟ್ ಅವರು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *