ನವದೆಹಲಿ: ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದು, ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ನಾಲ್ಕು ತಿಂಗಳ ಜೈಲು ಶಿಕ್ಷೆ ಮತ್ತು ₹2,000 ದಂಡವನ್ನು ವಿಧಿಸಿ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಶಿಕ್ಷೆ ಅತ್ಯಗತ್ಯ. ಮಲ್ಯ ಯಾವುದೇ ಪಶ್ಚಾತ್ತಾಪ ತೋರಿಸಲಿಲ್ಲ ಎಂದು ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಹೇಳಿದೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ಕುಟುಂಬ ಸದಸ್ಯರಿಗೆ ವರ್ಗಾಯಿಸಲಾದ 40 ಮಿಲಿಯನ್ ಡಾಲರ್‌ಗಳನ್ನು ಒಂದು ತಿಂಗಳಲ್ಲಿ ಬಡ್ಡಿ ಸಮೇತ ಠೇವಣಿ ಇಡಬೇಕು. ಇಲ್ಲವಾದರೆ ಮಲ್ಯ ಆಸ್ತಿಯನ್ನು ಜಫ್ತಿ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.
ಕಿಂಗ್‌ಫಿಶರ್ ಏರ್‌ಲೈನ್ಸ್ ಪಡೆದಿದ್ದ ₹9,000 ಕೋಟಿ ಸಾಲ ಪಾವತಿಸದಿರುವುದಕ್ಕೆ ಸಂಬಂಧಿಸಿದಂತೆ ವಿಜಯ್ ಮಲ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗಿತ್ತು. ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಸಾಲ ನೀಡುವವರ ಒಕ್ಕೂಟ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ 2017ರಲ್ಲಿ ತಾನು ನೀಡಿದ್ದ ತೀರ್ಪನ್ನು ಪಾಲಿಸದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿತ್ತು.
ತಮ್ಮ ವಿರುದ್ಧದ ಪ್ರಕರಣದಲ್ಲಿ ವಿಚಾರಣೆ ಸಂದರ್ಭದಲ್ಲಿ ವಿಜಯ್ ಮಲ್ಯ ಖುದ್ದು ಹಾಜರಾಗಬೇಕೆಂದು ನ್ಯಾಯಾಲಯವು ಆದೇಶಿಸಿತ್ತು. ಈ ವೇಳೆಗಾಗಲೇ ದೇಶ ತೊರೆದಿದ್ದ ವಿಜಯ್ ಮಲ್ಯ ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. 2017ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಮಲ್ಯ ಸಲ್ಲಿಸಿದ್ದ ಮನವಿಯನ್ನು 2020ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ವಜಾ ಮಾಡಿತ್ತು.
ವಾಸ್ತವಿಕ ವಿಚಾರಗಳನ್ನು ಬಚ್ಚಿಟ್ಟು ಮಲ್ಯ ಅವರು ತಮ್ಮ ಪುತ್ರ ಸಿದ್ಧಾರ್ಥ್ ಮಲ್ಯ, ಪುತ್ರಿಯರಾದ ಲಿಯನ್ನಾ ಮತ್ತು ತಾನ್ಯಾ ಮಲ್ಯ ಅವರ ಖಾತೆಗೆ ಕರ್ನಾಟಕ ಹೈಕೋರ್ಟ್ ಆದೇಶಗಳನ್ನು ಉಲ್ಲಂಘಿಸಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಬ್ಯಾಂಕ್‌ಗಳು ನಿರ್ದಿಷ್ಟ ಆರೋಪ ಮಾಡಿದ್ದವು.
ವಿಜಯ್ ಮಲ್ಯ ಅವರು ಮಾರ್ಚ್ 2016 ರಿಂದ ಇಂಗ್ಲೆಂಡಿನಲ್ಲಿದ್ದಾರೆ. ಏಪ್ರಿಲ್ 18, 2017 ರಂದು ಸ್ಕಾಟ್ಲೆಂಡ್ ಯಾರ್ಡ್ ಜಾರಿಗೊಳಿಸಿದ ಹಸ್ತಾಂತರ ವಾರಂಟ್ ನ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ಇದ್ದಾರೆ.