ಒಕ್ಕೂಟ ತತ್ವವನ್ನು ಬಲಪಡಿಸುವ ಚಾರಿತ್ರಿಕ ತೀರ್ಪು: ಸಿಪಿಐ(ಎಂ) ಸ್ವಾಗತ
ತಮಿಳುನಾಡು ವಿಧಾನ ಸಭೆ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯುವ ತಮಿಳುನಾಡು ರಾಜ್ಯಪಾಲರ ನಿರ್ಧಾರವನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ನ ತೀರ್ಪು ಒಂದು ಮೈಲಿಗಲ್ಲಾದ ತೀರ್ಪು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಸ್ವಾಗತಿಸಿದೆ.
ರಾಜ್ಯಪಾಲರು ತಡೆಹಿಡಿದಿದ್ದ ಹತ್ತು ಶಾಸನಗಳು ಈಗ ಕಾನೂನುಗಳಾಗುತ್ತವೆ ಎಂದು ನ್ಯಾಯಾಲಯ ಘೋಷಿಸಿದೆ.
ಇದನ್ನೂ ಓದಿ:ತಮಿಳುನಾಡು ರಾಜ್ಯಪಾಲರನ್ನು ತರಾಟೆಗೆ ತೆಗೆದು ಕೊಂಡ ಸುಪ್ರೀಂ ಕೋರ್ಟ್
ರಾಜ್ಯಪಾಲರ ಕ್ರಮಗಳು ‘ಕಾನೂನುಬಾಹಿರ ಮತ್ತು ಸ್ವೇಚ್ಛಾಚಾರದ್ದು’ ಎಂದು ಸುಪ್ರೀಂ ಕೋರ್ಟ್ ಹೆಸರಿಸಿದೆ. ಮಸೂದೆಗಳನ್ನು ವಿಧಾನಸಭೆ ಅಂಗೀಕರಿಸಿದ ನಂತರ, ರಾಜ್ಯಪಾಲರು ಕ್ರಮ ಕೈಗೊಳ್ಳಲು ನ್ಯಾಯಾಲಯವು ಒಂದು ಸಮಯಪಟ್ಟಿಯನ್ನು ನಿಗದಿಪಡಿಸಿದೆ. ಇದೊಂದು ಚಾರಿತ್ರಿಕ ತೀರ್ಪು, ಏಕೆಂದರೆ, ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳ ಅನೇಕ ರಾಜ್ಯಪಾಲರು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಒಕ್ಕೂಟ ತತ್ವಗಳನ್ನು ಉಲ್ಲಂಘಿಸಿ ವರ್ತಿಸುತ್ತಿರುವುದರ ವಿರುದ್ಧ ಇದು ಬಲವಾದ ಟಿಪ್ಪಣಿ ಮಾಡಿದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.
ಈ ತೀರ್ಪು ಈಗ ರಾಜ್ಯಪಾಲರು ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಶಾಸನಗಳನ್ನು ಜಾರಿಗೆ ತರುವುದನ್ನು ತಡೆಹಿಡಿದಿರುವ, ಕೇರಳ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಪೂರ್ವನಿದರ್ಶನವನ್ನು ಹಾಕಿ ಕೊಟ್ಟಿದೆ.
ಇದನ್ನೂ ಓದಿ:ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ!
ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಒಕ್ಕೂಟ ತತ್ವಗಳನ್ನು ಬಲಪಡಿಸುವಲ್ಲಿ ಸಹಾಯ ಮಾಡುವ ತೀರ್ಪು ಇದು ಎಂದು ಸ್ವಾಗತಿಸುತ್ತ, ಸಿಪಿಐ(ಎಂ), ಸುಪ್ರೀಂ ಕೋರ್ಟ್ನ ಈ ತೀರ್ಪು ಸರ್ವಾಧಿಕಾರಶಾಹಿಯ ವಿರುದ್ಧ ಮತ್ತು ರಾಜ್ಯ ಸರ್ಕಾರಗಳ ಹಕ್ಕುಗಳ ರಕ್ಷಣೆಯ ಹೋರಾಟವನ್ನು ಬಲಪಡಿಸುತ್ತದೆ ಎಂದು ಹೇಳಿದೆ.