ಬಿಲ್ಕಿಸ್‌ ಬಾನು ಪ್ರಕರಣ:11 ಅಪರಾಧಿಗಳಿಗೆ ಶಿಕ್ಷೆಯನ್ನು ಕಡಿತದ ಮೂಲ ದಾಖಲೆಗಳನ್ನು ಸಲ್ಲಿಸಲು ಕೇಂದ್ರ,ಗುಜರಾತ್‌ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ನಿರ್ದೇಶನ

ನವದೆಹಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದ ಎಲ್ಲಾ 11 ಅಪರಾಧಿಗಳಿಗೆ ಶಿಕ್ಷೆಯನ್ನು ಕಡಿತಗೊಳಿಸುವುದಕ್ಕೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳನ್ನು ಅಕ್ಟೋಬರ್‌ 16ರ ಒಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಕೇಂದ್ರ ಮತ್ತು ಗುಜರಾತ್‌ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಈ ಹಿಂದೆ ಅಂತಿಮ ವಿಚಾರಣೆಗಾಗಿ ಪಟ್ಟಿ ಮಾಡಲಾಗಿದ್ದ ಅಪರಾಧಿಗಳ ಕ್ಷಮಾಪಣೆ ವಿರುದ್ಧದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಬಿಲ್ಕಿಸ್ ಬಾನು ಅವರ ವಕೀಲರು ಮತ್ತು ಕೇಂದ್ರದ ವಕೀಲರು, ಗುಜರಾತ್ ಸರ್ಕಾರ ಮತ್ತು ಪಿಐಎಲ್ ಅರ್ಜಿದಾರರ ವಾದಗಳನ್ನು ಆಲಿಸಿದ ನಂತರ, ಪೀಠವು ಆದೇಶವನ್ನು ಕಾಯ್ದಿರಿಸಿತು.

ಸಾಮೂಹಿಕ ಅತ್ಯಾಚಾರ ಮತ್ತು ಸಾಮೂಹಿಕ ಕೊಲೆ ಪ್ರಕರಣದ ಆರೋಪಿಗಳ ಬಿಡುಗಡೆಯನ್ನು ಪ್ರಶ್ನಿಸಿ ಪ್ರಕರಣದ ಸಂತ್ರಸ್ತೆ ಬಿಲ್ಕಿಸ್ ಬಾನು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.ಜೊತೆಗೆ ಸಿಪಿಐ(ಎಂ) ನಾಯಕಿ ಸುಭಾಷಿಣಿ ಅಲಿ, ಸ್ವತಂತ್ರ ಪತ್ರಕರ್ತೆ ರೇವತಿ ಲಾಲ್ ಮತ್ತು ಲಖನೌ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ರೂಪ್ ರೇಖಾ ವರ್ಮಾ ಸೇರಿದಂತೆ ಹಲವಾರು ಮಂದಿ ಪಿಐಎಲ್‌ಗಳನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ: ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ : ಮರೆಮಾಚಿದ ಸತ್ಯಗಳು

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಅಪರಾಧಿಗಳಿಗೆ ನೀಡಲಾದ ಕ್ಷಮಾಪಣೆ ಮತ್ತು ಅವರ ಅವಧಿಪೂರ್ವ ಬಿಡುಗಡೆಯ ವಿರುದ್ಧ ಪಿಐಎಲ್ ಸಲ್ಲಿಸಿದ್ದಾರೆ.

ಆರೋಪ ಸಾಬೀತಾಗಿ 11 ಅಪರಾಧಿಗಳು 15ಕ್ಕೂ ಹೆಚ್ಚು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಗುಜರಾತ್ ಸರ್ಕಾರ ಸನ್ನಡತೆ ಆಧಾರದಲ್ಲಿ ಕೈದಿಗಳ ಬಿಡುಗಡೆಗೆ ಅನುಮತಿ ನೀಡಿತ್ತು. ಹೀಗಾಗಿ ಆಗಸ್ಟ್ 15ರಂದು ಅವರೆಲ್ಲರೂ ಗೋಧ್ರಾ ಉಪ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.

ಗುಜರಾತ್ ಸರ್ಕಾರವು ಪ್ರಕರಣದ 11 ಅಪರಾಧಿಗಳ ಅವಧಿಪೂರ್ವ ಬಿಡುಗಡೆಯನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಅವರು ಕಳೆದ ನವೆಂಬರ್ 30 ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಪರಾಧಿಗಳ ಬಿಡುಗಡೆಯು ಸಮಾಜದ ಆತ್ಮಸಾಕ್ಷಿಯನ್ನು ಅಲ್ಲಾಡಿಸಿದೆ ಎಂದು ಹೇಳಿದ್ದರು.

ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಅಪರಾಧಿಗಳನ್ನು ಅವಧಿ ಪೂರ್ವ ಬಿಡುಗಡೆಯ ಗುಜರಾತ್ ಸರ್ಕಾರದ ನಿರ್ಧಾರದ ‘ಸನ್ನಡತೆ’ಯನ್ನು ಮಾತ್ರ ಪರಿಗಣಿಸುತ್ತಿದೆ ಎಂದು ಹೇಳಿದೆ.

ವಿಡಿಯೋ ನೋಡಿ: ಜೀವ ಜಗತ್ತಿನ ಓಟದಲ್ಲಿ ಗೆದ್ದ ಆಮೆಯೆಂಬ ಅದ್ಭುತ ಪ್ರಾಣಿ Janashakthi Media

Donate Janashakthi Media

Leave a Reply

Your email address will not be published. Required fields are marked *