ರಾಜ್ಯದ 3 ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ-ರಫ್ತಿಗೆ ಸುಪ್ರೀಂ ಕೋರ್ಟ್​ ಅನುಮತಿ

ನವದೆಹಲಿ: ಕರ್ನಾಟಕ ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆ ಮೂಲಕ ತೆಗೆದ ಕಬ್ಬಿಣದ ಅದಿರನ್ನು ರಫ್ತು ಮಾಡಲು ಗಣಿಗಾರಿಕೆ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಈ ಮೂರು ಜಿಲ್ಲೆಗಳಲ್ಲಿ ಈಗಾಗಲೇ ಅಗೆದ ಕಬ್ಬಿಣದ ಅದಿರಿನ ದಾಸ್ತಾನು ಇತ್ಯಾದಿಗಳನ್ನು ಮಾರಾಟ ಮಾಡಲು ನಾವು ಮೇಲ್ಮನವಿದಾರರಿಗೆ ಅನುಮತಿ ನೀಡುತ್ತೇವೆ. ಕಬ್ಬಿಣದ ಅದಿರಿನ ಇ-ಹರಾಜಿಗೆ ಆಶ್ರಯಿಸದೆ ನೇರ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಹಂಚಿಕೆಗೆ ಅನುಮತಿ ನೀಡುತ್ತಿದ್ದೇವೆ. ಕರ್ನಾಟಕದಲ್ಲಿ ಉತ್ಪಾದಿಸಲಾದ ಕಬ್ಬಿಣದ ಅದಿರನ್ನು ಭಾರತ ಸರ್ಕಾರದ ನೀತಿಗಳ ಪ್ರಕಾರ ವಿದೇಶಗಳಿಗೆ ರಫ್ತು ಮಾಡಲು ಅರ್ಜಿದಾರರಿಗೆ ಅನುಮತಿ ನೀಡುತ್ತೇವೆಂದು ತೀರ್ಪು ಪ್ರಕಟವಾಗಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ  ನ್ಯಾಯ ಪೀಠವು ಕೇಂದ್ರ ಸರ್ಕಾರದ ನಿಲುವನ್ನು ಗಮನಿಸಿ ಕಬ್ಬಿಣದ ಅದಿರು ರಫ್ತು ಮೇಲಿನ ನಿರ್ಬಂಧವನ್ನು ತೆಗೆದುಹಾಕಿತು. ಅಧಿಕಾರಿಗಳು ವಿಧಿಸಿರುವ ಷರತ್ತುಗಳನ್ನು ಗಮನಿಸುವಂತೆ ಸಂಸ್ಥೆಗಳಿಗೆ ಸೂಚಿಸಿದೆ.

ಇದರಿಂದಾಗಿ ಉಕ್ಕು ಉತ್ಪಾದನಾ ಘಟಕಗಳು ಸ್ಥಳೀಯವಾಗಿ ಅದಿರು ಖರೀದಿಸಲು ನಿಯಮಗಳಲ್ಲಿ ರಿಯಾಯಿತಿ ದೊರೆತಂತಾಗಿದೆ. ರಾಜ್ಯದ ಗಣಿಗಳಿಂದ ಹೊರ ತೆಗೆಯಲಾದ ಕಬ್ಬಿಣದ ಅದಿರನ್ನು ರಫ್ತು ಮಾಡುವ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳಿಗೆ ಸೂಚಿಸಿತ್ತು. ಇದಕ್ಕೆ‌ ಕಳೆದ ತಿಂಗಳು ಪ್ರತಿಕ್ರಿಯೆ ನೀಡಿದ್ದ ಕರ್ನಾಟಕ ಸರ್ಕಾರ, ಅದಿರು ರಫ್ತಿನ ವಿರುದ್ಧ ತನ್ನ ನಿಲುವು ಸ್ಪಷ್ಟಪಡಿಸಿತ್ತು.

ಕರ್ನಾಟಕದಿಂದ ಕಬ್ಬಿಣದ ಅದಿರು ರಫ್ತು ಮಾಡುವುದನ್ನು ಸುಪ್ರೀಂ ಕೋರ್ಟ್ 2012ರಲ್ಲಿ ನಿಷೇಧಿಸಿತ್ತು. ಪರಿಸರ ಅವನತಿಯನ್ನು ತಡೆಗಟ್ಟುವ ಉದ್ದೇಶದಿಂದ ಮತ್ತು ರಾಜ್ಯದ ಖನಿಜ ಸಂಪನ್ಮೂಲಗಳನ್ನು ಭವಿಷ್ಯದ ಪೀಳಿಗೆಗೆ ಸಂರಕ್ಷಿಸಲು ನಿಷೇಧ ಹೇರಲಾಗಿತ್ತು.

ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆ ಮಾಡಿದ ಕಬ್ಬಿಣದ ಅದಿರು ಮಾರಾಟದ ಮೇಲಿನ ನಿರ್ಬಂಧಗಳನ್ನು ಸಡಿಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಉತ್ಖನನ ಮಾಡಿದ ಕಬ್ಬಿಣದ ಅದಿರನ್ನು ರಫ್ತು ಮಾಡಲು ನ್ಯಾಯಾಲಯ ಅನುಮತಿ ನೀಡಿದೆ.

ಈಗಾಗಲೇ ಹೊರತೆಗೆಯಲಾದ ಕಬ್ಬಿಣದ ಅದಿರನ್ನು ಇ-ಹರಾಜಿನ ಮಾರ್ಗವನ್ನು ತೆಗೆದುಕೊಳ್ಳದೆ ಮಾರಾಟ ಮಾಡಲು ಮತ್ತು ನೇರ ಒಪ್ಪಂದಗಳಿಗೆ ಅನುಮತಿ ನೀಡಲಾಗಿದ್ದು, ಕಬ್ಬಿಣದ ಅದಿರು ಹಂಚಿಕೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ.

Donate Janashakthi Media

Leave a Reply

Your email address will not be published. Required fields are marked *