ಟೋಕಿಯೊ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪದಕಗಳ ಬೇಟೆ ಭರ್ಜರಿಯಾಗಿ ಮುಂದುವರೆದಿದ್ದು ಇಂದು ಮತ್ತೊಂದು ಚಿನ್ನದ ಪದಕ ಲಭಿಸಿದೆ. ಸುಮಿತ್ ಅಂತಿಲ್ ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಜಾವಲಿನ್ ಥ್ರೋನ ಫೈನಲ್ ವಿಭಾಗದಲ್ಲಿ ಭಾರತದಿಂದ ಸುಮಿತ್ ಅಂತಿಲ್ ಮತ್ತು ಸಂದೀಪ್ ಭಾಗವಹಿಸಿದ್ದರು. ಸುಮಿತ್ ಅಂತಿಲ್ 68.55 ಮೀಟರ್ ದೂರಕ್ಕೆ ಥ್ರೋ ಎಸೆಯುವ ಮೂಲಕ ವಿಶ್ವ ದಾಖಲೆಯೊಂದಿಗೆ ಚಿನ್ನವನ್ನು ತಮ್ಮದಾಗಿಸಿಕೊಂಡರು.
ಇದನ್ನು ಓದಿ: ಚಿನ್ನಕ್ಕೆ ಗುರಿಯಿಟ್ಟ ಶೂಟರ್ : ಇತಿಹಾಸ ನಿರ್ಮಿಸಿದ ಅವನಿ ಲೇಖರಾ
5ನೇ ಪ್ರಯತ್ನದಲ್ಲಿ 68.55 ಮೀಟರ್ ಎಸೆದು ಒಂದೇ ಫೈನಲ್ಸ್ನಲ್ಲಿ 3 ಬಾರಿ ವಿಶ್ವದಾಖಲೆ ಮಾಡಿದ ಹೆಗ್ಗಳಿಗೆ ಸುಮಿತ್ ಅಂತಿಲ್ ಅವರದ್ದಾಗಿದೆ.
ಸಂದೀಪ್ 62.20 ಮೀಟರ್ ದೂರಕ್ಕೆ ಥ್ರೋ ಎಸೆಯುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಸುಮಿತ್ ಅಂತಿಲ್ ತಮ್ಮ ಫೈನಲ್ಸ್ನಲ್ಲಿ ಮೂರು ಬಾರಿ ವಿಶ್ವ ದಾಖಲೆ ಮುರಿದರು. ಮೊದಲ ಪ್ರಯತ್ನದಲ್ಲಿ 66.95 ಮೀಟರ್ ಎಸೆದು ವಿಶ್ವದಾಖಲೆ ಬರೆದ ಅವರು, 2ನೇ ಬಾರಿಗೆ 68.08 ಮೀಟರ್ ಎಸೆದು ಮತ್ತೆ ತಮ್ಮದೇ ದಾಖಲೆ ವಿಸ್ತರಿಸಿಕೊಂಡರು.
ಪದಕಗಳ ಬೇಟೆಯಲ್ಲಿ ಈಗಾಗಲೇ 10 ಮೀಟರ್ ಏರ್ ರೈಫಲ್ನಲ್ಲಿ 19 ವರ್ಷದ ಅವಿನ ಲೇಖಾರಾ ಅವರು ವಿಶ್ವದಾಖಲೆಯೊಂದಿಗೆ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದು ಕೊಟ್ಟಿದ್ದರು.
ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಇದುವರೆಗೆ ಭಾರತಕ್ಕೆ 7 ಪದಕಗಳು ಲಭಿಸಿದೆ. 2 ಚಿನ್ನ, 4 ಬೆಳ್ಳಿ ಮತ್ತು 1 ಕಂಚಿನ ಪದಕ ಸೇರಿದೆ. ಜಾವಲಿನ್ ಎಫ್46 ವಿಭಾಗದಲ್ಲಿ ದೇವೇಂದ್ರ ಸಿಂಗ್ ಜಜಾರಿಯಾ ಬೆಳ್ಳಿ ಮತ್ತು ಸುಂದರ್ ಸಿಂಗ್ ಗುರ್ಜಾರ್ ಕಂಚಿನ ಪದಕ ಪಡೆದಿದ್ದರು.
2016ರಲ್ಲಿ ಪ್ಯಾರಾಲಿಂಪಿಕ್ಸ್ನಲ್ಲಿ 4 ಪದಕವನ್ನು ಗೆದ್ದಿದ್ದ ಭಾರತವು ಈ ಬಾರಿ 7 ಪದಕದೊಡನೆ ಗರಿಷ್ಠ ಪದಕದ ಸಾಧನೆ ಮಾಡಿದೆ. ಆಗಸ್ಟ್ 24ರಿಂದ ಸೆಪ್ಟೆಂಬರ್ 5ರವರೆಗೆ ನಡೆಯಲಿರುವ ಪ್ಯಾರಾಲಿಂಪಿಕ್ಸ್ ಪಂದ್ಯಗಳು ನಡೆಯಲಿದ್ದು, ಭಾರತ ಪದಕ ಗೆಲ್ಲುವ ಅವಕಾಶಗಳು ಮತ್ತಷ್ಟು ಇವೆ.