ಮಂಡ್ಯ ಲೋಕಸಭಾ ಕ್ಷೇತ್ರ: ಸಂಸದೆ ಸುಮಲತಾ ಬೆಂಬಲ ಪಡೆಯುವರೆ ಕುಮಾರಸ್ವಾಮಿ?

ಸಂಧ್ಯಾ ಸೊರಬ
ಬದಲಾದ ರಾಜಕೀಯ ಪರಿಸ್ಥಿತಿ ಶತೃಗಳನ್ನು ಮಿತ್ರರನ್ನಾಗಿಯೂ, ಮಿತ್ರರನ್ನು ಶತೃಗಳನ್ನಾಗಿಯೂ ಮಾಡಿಬಿಡುತ್ತದೆ. ರಾಜಕೀಯ ಪರಿಸ್ಥಿತಿಯನುಸಾರ ತನ್ನ ರಂಗು ಬದಲಾಯಿಸುತ್ತಲೇ ಇರುತ್ತದೆ. ಇದರಿಂದ ಘಟನಾಘಟಿ ರಾಜಕಾರಣಿಗಳೇನೂ ಹೊರತಾಗಿಲ್ಲ. ಸುಮಲತಾ

ಈಗ ಇಂತಹದ್ದೇ ಪರಿಸ್ಥಿತಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಲೆದೋರಿದಂತಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಎನ್ಒ‌ಡಿಎ ಕ್ಕೂಟದ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಹೆಚ್.ಡಿ.ಕುಮಾರಸ್ವಾಮಿ ಕಣಕ್ಕಿಳಿಯುತ್ತಿದ್ದಾರೆ. ಆದರೆ, ಮಂಡ್ಯದಲ್ಲಿ ಅಭ್ಯರ್ಥಿಯೆಂದು ತಮ್ಮನ್ನು ತಾವು ಘೋಷಿಸಿಕೊಳ್ಳುವ ಮೊದಲೇ ಅಲ್ಲಿನ ರಾಜಕೀಯ ವಾತಾವರಣವನ್ನು ತಿಳಿಗೊಳಿಸುವುದು ಮುಖ್ಯವಾಗಿದೆ. ಹೀಗಾಗಿ ಮಂಡ್ಯದ ಹಾಲಿ ಸಂಸದೆಯಾಗಿರುವ ಸುಮಲತಾ ಅಂಬರೀಷ್‌, ಅವರ ಮನೆಯ ಕದ ಬಡಿಯುವುದು ಹೆಚ್.ಡಿ.ಕುಮಾರಸ್ವಾಮಿಗೆ ಅನಿವಾರ್ಯವಾಗಲಿದೆ.

ಜೆಡಿಎಸ್‌ ನಿರೀಕ್ಷಿಸಿದಂತೆ ಮಂಡ್ಯ ಕ್ಷೇತ್ರವನ್ನು ಬಿಜೆಪಿ ತೆನೆಹೊತ್ತ ಮಹಿಳೆಗೆ ಬಿಟ್ಟುಕೊಟ್ಟಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಗ ನಿಖಿಲ್‌ನನ್ನು ಕಣಕ್ಕಿಳಿಸಿ ಏಟು ತಿಂದಿದ್ದ ಹೆಚ್‌ಡಿಕೆಗೆ ಹಳೆಯ ಜಿದ್ದು, ಒಂದು ಕಡೆಯಾದರೆ, ಇನ್ನೊಂದು ಕಡೆ ಹಳೆ ಮೈಸೂರು ಭಾಗದ ಮಂಡ್ಯವನ್ನು ತೆನೆಹೊತ್ತ ಮಹಿಳೆಗೆ ಉಳಿಸಿಕೊಡಲೇಬೇಕೆಂಬ ಉದ್ದೇಶ. ಆದರೆ, ಅಂದುಕೊಂಡಂತ ಪರಿಸ್ಥಿತಿ ಇಲ್ಲ ಅಲ್ಲೀಗ. ಬೂತ್‌ಗಳಲ್ಲಿ ಕೆಲಸ ಮಾಡಬೇಕಾದ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಇನ್ನೂ ಒಟ್ಟಾಗಿಲ್ಲ.

ಇದನ್ನೂ ಓದಿಲೋಕಸಭಾ ಚುನಾವಣೆ : 3ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿ ಪ್ರಕಟ

ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ ಪತ್ನಿ ಸುಮಲತಾ ಅಂಬರೀಶ್‌ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಅನುಕಂಪದ ಅಲೆಯ ಕಾರಣಕ್ಕೆ ಹೆಚ್ಚಿನ ಜನ ಬೆಂಬಲ ಪಡೆದಿದ್ದು, ಸ್ಯಾಂಡಲ್‌ವುಡ್‌ನ ನಟ ದರ್ಶನ್‌ ಹಾಗೂ ಯಶ್‌ ಕೂಡ ಬೆಂಬಲ ನೀಡಿದ್ದರು. ಇಬ್ಬರು ಕೂಡ ಜೋಡೆತ್ತಾಗಿ ನಿಂತು ಸುಮಲತಾ ಅಂಬರೀಶ್‌ ಅವರ ಗೆಲುವಿಗೆ ಶ್ರಮಿಸಿದ್ದರು. ಇನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸುಮಲತಾ ಕಾಂಗ್ರೆಸ್ ಮತಗಳಿಂದ ಗೆದ್ದರೇ ಹೊರತು ಅವರು ಬಿಜೆಪಿ ಬೆಂಬಲದಿಂದಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.

ಜೆಡಿಎಸ್‌ ಹಿಡಿತದಲ್ಲಿದ್ದ ಕ್ಷೇತ್ರವನ್ನು ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಸುಮಲತಾಗೆ, ಈಗ ಬಿಜೆಪಿಯಿಂದ ಟಿಕೆಟ್‌ ಮಿಸ್‌ ಆಗಿದೆ. ಮಂಡ್ಯದ ಪಕ್ಷೇತರ ಸಂಸದೆಯಾಗಿರುವ ಸುಮಲತಾ ಅಂಬರೀಶ್‌ ಬಿಜೆಪಿಯಿಂದ ಮತ್ತೊಮ್ಮೆ ಚುನಾವಣೆ ಎದುರಿಸಲು ಬಯಸಿದ್ದರು. ಆದರೆ, ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಕಾರಣಕ್ಕೆ ಸುಮಲತಾ ಅಂಬರೀಶ್‌, ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.

ಕಳೆದ ವರ್ಷದ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಗೆ ಬೆಂಬಲ ನೀಡಿದ್ದ ಸುಮಲತಾ ಅಂಬರೀಶ್‌ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಮಾಡಿ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರು. ಅದು ಏನೋ ಹೇಳಿ ಬಿಜೆಪಿ ನಾಯಕರು ಸುಮಲತಾ ಮೇಡಂರನ್ನು ಸುಮ್ಮನಾಗಿಸಿದ್ದಾರೆ. ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೈತಪ್ಪಿದ್ದು ಈ ಮಧ್ಯೆ ಅವರು ಕಾರ್ಯಕರ್ತರ ತುರ್ತು ಸಭೆ ಕರೆದಿದ್ದಾರೆ. ಬೆಂಬಲಿಗರ ಜೊತೆ ಚರ್ಚಿಸಿ ಅವರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ.

ಸುಮಲತಾ, ತಟಸ್ಥರಾದರೂ ಹೆಚ್.ಡಿಕೆಗೆ ಕಷ್ಟಯಿದೆ. ಸಪೋರ್ಟ್‌ ಮಾಡದೇ ಇದ್ದರೂ ಕಷ್ಟವಿದೆ ಸ್ವಾಭಿಮಾನದ  ಪ್ರತೀಕದಿಂದ ಬಂಡಾಯವೆಂದು ನಿಂತರೂ ಈ ಬಾರಿ ಆ ಪರಿಸ್ಥಿತಿ ಇಲ್ಲ. ಬಿಜೆಪಿ- ಜೆಡಿಎಸ್‌ ಮೈತ್ರಿಯಾಗಿರುವುದರಿಂದ ಈಗಾಗಲೇ ಕಾಂಗ್ರೆಸ್‌, ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.  ಕಳೆದ ಬಾರಿಯಷ್ಟೂ ಪಕ್ಷೇತರ ಅಭ್ಯರ್ಥಿಯಾಗುವಷ್ಟೂ ಈಗಿನ ಸ್ಥಿತಿ ಸುಮಲತಾಗಿಲ್ಲ. ಸುಮಲತಾರನ್ನು ಎದುರು ಹಾಕಿಕೊಂಡು ಹೋಗುವ ಸ್ಥಿತಿಯೂ ಹೆಚ್.ಡಿ.ಕೆಗೆ ಇಲ್ಲ. ಹೀಗಾಗಿ ಸ್ವಾಭಿಮಾನ ಬಿಟ್ಟು ರಾಜಕೀಯಕ್ಕಾಗಿ ಸುಮಲತಾ ಅವರ ಬೆಂಬಲವನ್ನು ಹೆಚ್.ಡಿ.ಕುಮಾರಸ್ವಾಮಿ  ಪಡೆಯುವರೆ?  ಕಾದುನೋಡಬೇಕಿದೆ!

ವಿಡಿಯೋ ನೋಡಿಮಂಡ್ಯ ಲೋಕಸಭಾ ಕ್ಷೇತ್ರ : ಕ್ಷೇತ್ರದ ಹಿನ್ನೆಲೆ, ಸಮಸ್ಯೆ -ಸವಾಲುಗಳು

Donate Janashakthi Media

Leave a Reply

Your email address will not be published. Required fields are marked *