ನಮ್ಮ ವಿರುದ್ಧ ಹೋರಾಟ ಮಾಡಿ, ಬಿಜೆಪಿಗೆ ಅಡಿಪಾಯ ಹಾಕಿದವರನ್ನು ಮನೆಯಲ್ಲಿ ಕೂರಿಸಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್

Please follow and like us:
ಉತ್ತರ ಕನ್ನಡ :“ನಮ್ಮ ವಿರುದ್ಧ ಹೋರಾಟ ಮಾಡಿದ, ಬಿಜೆಪಿ ಪಕ್ಷಕ್ಕೆ ಅಡಿಪಾಯ ಹಾಕಿದವರನ್ನು ಮನೆಯಲ್ಲಿ ಕೂರಿಸಿ, ಹೊಸಮುಖಗಳನ್ನು ಕಣಕ್ಕೆ ಇಳಿಸಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಗೋಕರ್ಣ ಮಹಾಬಲೇಶ್ವರ ದೇಗುಲದಲ್ಲಿ ಬುಧವಾರ ಪೂಜೆ ಸಲ್ಲಿಸಿದ ನಂತರ ಶಿವಕುಮಾರ್ ಅವರು ಬುಧವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುತ್ತಾ, “ದಳದವರು ಆರಂಭದಲ್ಲೇ ಎಡವಿದ್ದಾರೆ. ಆ ಪಕ್ಷದಲ್ಲಿ ಜಾತ್ಯಾತೀತ ತತ್ವ ಇಲ್ಲವಾಗಿದೆ. ಅಲ್ಲಿ ಪಕ್ಷದ ವಿಚಾರವೇ ಇಲ್ಲ. ಅವರ ಕುಟಂಬದ ಸದಸ್ಯರನ್ನು ಬೇರೆ ಪಕ್ಷದಿಂದ ಕಣಕ್ಕಿಳಿಸಿದ ಮೇಲೆ ಜೆಡಿಎಸ್ ಇದೆ ಎಂದು ಹೇಳಲು ಸಾಧ್ಯವೇ?. ಇನ್ನು ಬಿಜೆಪಿಯಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ನಾನು ಹೇಳುವ ಅಗತ್ಯವಿಲ್ಲ. ಅಲ್ಲಿ ಪಕ್ಷದ ಮಾಜಿ ಅಧ್ಯಕ್ಷರು, ಮಾಜಿ ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳಿಗೆ ಟಿಕೆಟ್ ಇಲ್ಲವಾಗಿದೆ. ಪಕ್ಷಕ್ಕೆ ಭದ್ರ ಬುನಾದಿ ಹಾಕಿದವರಿಗೆ, ರಾಜ್ಯ ಪ್ರವಾಸ ಮಾಡಿದವರಿಗೆ, ನಮ್ಮ ವಿರುದ್ಧ ಹೋರಾಟ ಮಾಡಿದವರನ್ನು ಮನೆಗೆ ಕಳಿಸಿ ಹೊಸಬರನ್ನು ಕಣಕ್ಕಿಳಿಸಿದ್ದಾರೆ” ಎಂದು ತಿಳಿಸಿದರು.

ದೇವಾಲಯದ ಅರ್ಚಕರು ತಾವು ಸಿಎಂ ಆಗಬೇಕು ಎಂದು ಪೂಜೆ ಮಾಡಿದ್ದಾರೆ ಎಂದು ಕೇಳಿದಾಗ, “ಅರ್ಚಕರು ಕೇಳುವುದರಲ್ಲಿ ತಪ್ಪೇನಿದೆ. ಅವರ ಆಸೆ ಅವರು ಕೇಳಿದ್ದಾರೆ. ಈಗ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ಅವರ ಕೆಳಗೆ ಉಪಮುಖ್ಯಮಂತ್ರಿಯಾಗಿ, ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಯಾರು ಏನೇ ಆಸೆ ಪಟ್ಟರು ಅಂತಿಮವಾಗಿ ಪಕ್ಷ ತೀರ್ಮಾನ ಮಾಡಲಿದೆ. ಈಗ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನಾವು ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಿ ರಾಜ್ಯ ಪ್ರಗತಿ ಸಾಧಿಸಲಿ ಎಂಬುದು ನಮ್ಮ ಆಸೆ. ನಮ್ಮ ಅಭಿಮಾನಿಗಳು ಕೇಳಿದಾಗ ಅವರ ಬಾಯಿ ಮುಚ್ಚಿಸಲು ಆಗುವುದಿಲ್ಲ” ಎಂದು ತಿಳಿಸಿದರು.

ಕೇಂದ್ರ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದವರ ವಿರುದ್ಧ ಐಟಿ, ಇಡಿ ಸಿಬಿಐ ದಾಳಿ ಬಗ್ಗೆ ಕೇಳಿದಾಗ, “ಇದು ಚುನಾವಣೆ ಸಮಯ. ಪ್ರಕೃತಿ ನಿಯಮ ಹಾಗೂ ಸಮಯ ಎಲ್ಲದಕ್ಕೂ ಉತ್ತರ ನೀಡಲಿದೆ. ಅದು , ಡಿ.ಕೆ. ಶಿವಕುಮಾರ್, ಕೇಜ್ರಿವಾಲ್ ಪ್ರಕರಣ ಸೇರಿದಂತೆ ಏನೆಲ್ಲಾ ನಡೆಯುತ್ತಿದೆ ಎಂದು ಜನ ನೋಡುತ್ತಿದ್ದು, ಅವರೇ ಉತ್ತರ ನೀಡಲಿದ್ದಾರೆ” ಎಂದರು.

ಇಲ್ಲಿ ಪಕ್ಷ ಸಂಘಟನೆಗೆ ಕಾರ್ಯಕರ್ತರಿಗೆ ಏನು ಸೂಚನೆ ನೀಡಿದ್ದೀರಿ ಎಂದು ಕೇಳಿದಾಗ, “ಇಲ್ಲಿ ಹಿಂದುತ್ವ ಹಾಗೂ ರಾಮ ಮಂದಿರ, ಬಿಜೆಪಿ ಅಲೆ ಇಲ್ಲ. ಹೀಗಾಗಿ ಬಿಜೆಪಿ ಗ್ಯಾರಂಟಿ ಎಂದು ಹೇಳುವ ಬದಲು ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ” ಎಂದರು.

ಬಿಜೆಪಿ ಹಿಂದುತ್ವ ಪ್ರತಿಪಾದಕರಿಗೆ ಟಿಕೆಟ್ ನೀಡದೇ ಎಲ್ಲರನ್ನು ಸಮಾನವಾಗಿ ನೋಡುವ ಸಂದೇಶ ಸಾರುತ್ತಿದ್ದಾರಾ ಎಂದು ಕೇಳಿದಾಗ, “ಅವರ ಸಂದೇಶ ಏನೂ ಇಲ್ಲ, ಸಮಾನತೆಯೂ ಇಲ್ಲ. ಹೋರಾಟ ಮಾಡಿದವರಿಗೆ ವಿಶ್ರಾಂತಿ ಪಡೆಯಿರಿ ಎಂದು ಮನೆಯಲ್ಲಿ ಕೂರಿಸಿದ್ದಾರೆ” ಎಂದು ತಿಳಿಸಿದರು.

ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಸೇರ್ಪಡೆಗೆ ವಿರೋಧವಿದೆ ಎಂಬ ಪ್ರಶ್ನೆಗೆ, “ನಮ್ಮ ಪಕ್ಷದ ನಾಯಕತ್ವ, ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಸ್ವಾಗತಿಸುತ್ತೇವೆ. ಯಾರನ್ನೂ ವಿರೋಧ ಮಾಡುವ ಪ್ರಶ್ನೆ ಇಲ್ಲ. ಪಕ್ಷ ತೀರ್ಮಾನದ ವಿರುದ್ಧ ಆಂತರಿಕವಾಗಿ ಹಾಗೂ ಬಹಿರಂಗವಾಗಿ ವಿರೋಧಿಸುವಂತಿಲ್ಲ”ಎಂದು ತಿಳಿಸಿದರು.

Please follow and like us:
Donate Janashakthi Media

Leave a Reply

Your email address will not be published. Required fields are marked *