ಇಬ್ಬರು ಮಹಿಳೆಯರ ಸಾವು; ಡಿಬಿಎಲ್‌ ಕಂಪನಿ ವಿರುದ್ಧ ಕ್ರಮ- ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಸಂಘಟನೆಗಳ ಮನವಿ

ಮದ್ದೂರು: ತಾಲೂಕು ಆತಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಆಲಂ ಶೆಟ್ಟಹಳ್ಳಿ ಗ್ರಾಮದ ಕೆರೆಯಲ್ಲಿ ದಿಲೀಪ್‌ ಬಿಲ್ಡರ್ಸ್‌ ಕಂಪನಿ(ಡಿಬಿಎಲ್‌)ಯೂ ಅವೈಜ್ಞಾನಿಕವಾಗಿ ಕೆರೆಯ ದಡದಲ್ಲಿ 20 ಅಡಿಗೂ ಹೆಚ್ಚು ಮಣ್ಣು ತೆಗೆದಿರುವುದರಿಂದ ಬಟ್ಟೆ ಒಗೆಯಲು ಹೋಗಿದ್ದ ವೇಳೆ ಒಂದೇ ಕುಟುಂಬದ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಸೂಕ್ತ ಪರಿಹಾರ ಹಾಗೂ ಡಿಬಿಎಲ್‌ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿವೆ.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಕುಮಾರಿ ಮಾತನಾಡಿ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡುವ ಸಲುವಾಗಿ ಆಲಂ ಶೆಟ್ಟಹಳ್ಳಿ ಗ್ರಾಮದ 28 ಎಕರೆಯ ಕೆರೆಯಲ್ಲಿ ಅವೈಜ್ಞಾನಿಕವಾಗಿ ದಿಲೀಪ್ ಬಿಲ್ಡರ್ ಕಂಪನಿಯವರು ಕೆರೆಯ ದಡದಲ್ಲಿ ಮಣ್ಣು ತೆಗೆದ ಪರಿಣಾಮ ಬಟ್ಟೆ ಒಗೆಯಲು ಹೋಗಿದ್ದ ಮಹಿಳೆಯರಿಬ್ಬರೂ ಸಾವನ್ನಪ್ಪಿದ್ದಾರೆ. ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಮೃತರ ಮಕ್ಕಳು ಇನ್ನೂ ಚಿಕ್ಕವರಾಗಿದ್ದು, ಅವರ ಭವಿಷ್ಯವನ್ನು ರೂಪಿಸುವುದು ಕಷ್ಟಕರವಾಗಿದೆ.‌ ಡಿಬಿಎಲ್ ಕಂಪನಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನು ಓದಿ: ಹೆದ್ದಾರಿ ಕೆಳ ಸೇತುವೆ ನಿರ್ಮಿಸುವಂತೆ ದಶಪಥ ರಸ್ತೆ ತಡೆದು ಪ್ರತಿಭಟನೆ – ಪೊಲೀಸರಿಂದ ಲಾಠಿ ಪ್ರಹಾರ

ಜಿಲ್ಲಾಧಿಕಾರಿ ಎಚ್.ಎನ್. ಗೋಪಾಲಕೃಷ್ಣ ಅವರು ಪ್ರತಿಕ್ರಿಯಿಸಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಂದ ವಿವರವಾದ ಮಾಹಿತಿಯನ್ನು ಸಂಗ್ರಹಿಸಿ ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.‌

ದಲಿತ ಹಕ್ಕುಗಳ ಸಮಿತಿ-ಕರ್ನಾಟಕ(ಡಿಹೆಚ್‌ಎಸ್‌), ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯೂಎ), ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು), ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌)ಗಳ ವತಿಯಿಂದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಪೊಲೀಸ್ ವರಿಷ್ಠಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶರು ಸೇರಿದಂತೆ ಇತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ. ಪುಟ್ಟಮಾದು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಹನುಮೇಶ್, ರಾಜ್ಯ ಸಮಿತಿ ಸದಸ್ಯ ಮಧುಕುಮಾರ, ಮುಖಂಡರಾದ ಚೊಟ್ಟನಹಳ್ಳಿ ನಾರಾಯಣ್, ಬಿ.ಸ್ವಾಮಿ, ಕೋಣಸಾಲೆ ಗಿರೀಶ್, ಟಿ.ಪಿ. ಅರುಣ್ ಕುಮಾರ್, ಶಂಕರ್, ಸಿದ್ದೇಗೌಡ, ಸಂತೋಷ, ಮಹಾಲಿಂಗ ಸೇರಿದಂತೆ ಇತರರಿದ್ದರು.

ಆಲಂ ಶೆಟ್ಟಹಳ್ಳಿ ಗ್ರಾಮದ ಶಿವಣ್ಣ ಅವರ ಪತ್ನಿ ದೊಡ್ಡತಾಯಮ್ಮ(35) ಹಾಗೂ ಸ್ವಾಮಿ ಎಂಬುವರ ಪತ್ನಿ ಶಾರದಾ(32) ಮಾರ್ಚ್‌ 11ರಂದು ಸಾವಿಗೀಡಾಗಿದ್ದರು. ಕೆಸ್ತೂರು ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *