ಭಾರತೀಯರ ಒಡೆತನದ ಕಡಲಾಚೆಯ ʻಚಿಪ್ಪುʼ ಕಂಪನಿಗಳ ಬಗ್ಗೆ ಮೋದಿ ಸರ್ಕಾರದ ಬಳಿ ಮಾಹಿತಿಯಿಲ್ಲ?!

ಮಾರ್ಚ್ 21ರಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ

ʻʻಭಾರತೀಯ ನಾಗರಿಕರ ಒಡೆತನದ ಕಡಲಾಚೆಯ ಶೆಲ್ ಕಂಪನಿಗಳ ದತ್ತಾಂಶ/ವಿವರಗಳು ಲಭ್ಯವಿಲ್ಲʼʼ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲಿಖಿತವಾಗಿ ತಿಳಿಸಿದ್ದಾರೆ.

ಬ್ರಿಟಾಸ್ ಕೇಳಿರುವ ಪ್ರಶ್ನೆಗಳು ಹೀಗಿದ್ದವು:

ʻʻ(ಎ) ʻಅಂತಿಮ ಫಲದಾಯಕ ಮಾಲೀಕತ್ವʼ(ಯುಬಿಒ) ವನ್ನು ಭಾರತೀಯ ನಾಗರಿಕರು ಹೊಂದಿರುವ ಕಡಲಾಚೆಯ ಶೆಲ್ ಕಂಪನಿಗಳ ವಿವರಗಳು

ʻʻ(ಬಿ) ತೆರಿಗೆ-ಧಾಮ ದೇಶಗಳಲ್ಲಿ ನೋಂದಾವಣೆಗೊಂಡಿರುವ ಕಡಲಾಚೆಯ ಕಂಪನಿಗಳಲ್ಲಿ ಭಾರತೀಯ ನಾಗರಿಕರ ಯುಬಿಒ ವಿವರಗಳನ್ನು ಸಂಗ್ರಹಿಸಲು ಸರ್ಕಾರವು ಇಲ್ಲಿಯವರೆಗೆ ತೆಗೆದುಕೊಂಡ ಕ್ರಮಗಳ ವಿವರಗಳು

ಇದನ್ನು ಓದಿ: ವಿಶ್ವದೆಲ್ಲೆಡೆ ನಿರ್ದಯ ಲೂಟಿಗೆ ವಿಧ-ವಿಧ ಪರಿಕಲ್ಪನೆ

ʻʻ(ಸಿ) ಪನಾಮ ಪೇಪರ್‌ಗಳು, ಪಂಡೋರಾ ಪೇಪರ್‌ಗಳು, ಪ್ಯಾರಡೈಸ್ ಪೇಪರ್‌ಗಳು ಮತ್ತು ಇತರ ಸೋರಿಕೆಗಳ ಮೂಲಕ ಹೆಸರುಗಳು ಪ್ರಕಟಗೊಂಡ ಭಾರತೀಯ ನಾಗರಿಕರ ವಿರುದ್ಧ ತೆಗೆದುಕೊಂಡ ಕ್ರಮಗಳ ಸ್ಥಿತಿ-ಗತಿ

“(ಡಿ) ಭಾರತೀಯ ನಾಗರಿಕರ ಕಡಲಾಚೆಯ ವ್ಯವಹಾರಗಳನ್ನು ಹಂಚಿಕೊಳ್ಳಲು ವಿದೇಶಿ ಸರ್ಕಾರಗಳ ಕೇಂದ್ರ ಸರ್ಕಾರಕ್ಕೆ ನೀಡಿದ ವಿವರಗಳು ಮತ್ತು

“(ಇ) ಅದರ ವಿವರಗಳು ಮತ್ತು ಅದರ ಮೇಲೆ ತೆಗೆದುಕೊಂಡ ಕ್ರಮಗಳು.”

ಇದಕ್ಕೆ ಸರಕಾರದಿಂದ ದೊರೆತಿರುವ ಉತ್ತರ: ʻʻಹಣಕಾಸು ಸಚಿವಾಲಯವು ನಿರ್ವಹಿಸುವ ಕಾಯಿದೆಗಳಲ್ಲಿ ಕಡಲಾಚೆಯ ಶೆಲ್ ಕಂಪನಿಯ ವ್ಯಾಖ್ಯಾನ ನೀಡಲಾಗಿಲ್ಲ. ಭಾರತೀಯ ನಾಗರಿಕರ ಒಡೆತನದ ಕಡಲಾಚೆಯ ಶೆಲ್ ಕಂಪನಿಗಳಿಗೆ ಸಂಬಂಧಿಸಿದ ದತ್ತಾಂಶಗಳು/ ವಿವರಗಳು ಲಭ್ಯವಿಲ್ಲ.ʼʼ

ಇದರಿಂದಾಗಿ ಬ್ರಿಟ್ಟಾಸ್‍ ರವರು ತಮ್ಮ ಪ್ರಶ್ನೆಗಳಲ್ಲಿ ಕೇಳಿರುವ ʻನಿರ್ದಿಷ್ಟ ಕ್ರಮಗಳ ವಿವರಗಳನ್ನು ಕೊಡುವ ಪ್ರಶ್ನೆ ʻʻಉದ್ಭವಿಸುವುದಿಲ್ಲʼʼ ಸರಕಾರದ ಉತ್ತರ ಹೇಳಿದೆ. ಪನಾಮ ಪೇಪರ್ಸ್, ಪ್ಯಾರಡೈಸ್ ಪೇಪರ್ಸ್, ಪಂಡೋರಾ ಪೇಪರ್ಸ್ ಮತ್ತು ಇತರ ಸೋರಿಕೆಯಾದ ದಾಖಲೆಗಳಲ್ಲಿ ಹೆಸರು ಹೊಂದಿರುವ ಭಾರತೀಯರ ಸಂಖ್ಯೆ ಮತ್ತು ವಿವರಗಳನ್ನು ಕೂಡ ಮಂತ್ರಿಗಳ ಉತ್ತರ ತಿಳಿಸಲಿಲ್ಲ.

ʻಕಾರ್ಯಪಡೆʼ ಸಾಧನೆ ಎಲ್ಲಿ ಹೋಯಿತು?

ಈ ಮೊದಲು ಜೂನ್‍ 8, 2018ರಲ್ಲಿ ಹಣಕಾಸು ಸಚಿವಾಲಯ ನೀಡಿದ್ದ ಪ್ರಕಟಣೆಯಲ್ಲಿ, ಫೆಬ್ರುವರಿ 2017ರಲ್ಲಿ ಪ್ರಧಾನ ಮಂತ್ರಿಗಳ ಕಚೇರಿ ನೇಮಿಸಿದ್ದ ಶೆಲ್‍ ಕಂಪನಿಗಳನ್ನು ಕುರಿತ ಕಾರ್ಯಪಡೆ ಈ ʻಚಿಪ್ಪುʼ ಕಂಪನಿಗಳ ʻʻಪಿಡುಗನ್ನು ತಡೆಯಲು ತಾನೇ ಮುಂದಾಗಿ ಕ್ರಮಗಳನ್ನು ಕೈಗೊಂಡಿದೆ, ಶೆಲ್‍ ಕಂಪನಿಗಳ ಒಂದು ದತ್ತಾಂಶ ನೆಲೆಯನ್ನು ಕಲೆ ಹಾಕಿರುವುದು ಈ ಕಾರ್ಯಪಡೆಯ ಸಾಧನೆಗಳಲ್ಲಿ ಒಂದುʼʼ ಎಂದಿತ್ತು ಎಂಬುದು ಗಮನಾರ್ಹ.

ಇದನ್ನು ಓದಿ: ವರಮಾನಗಳ ಅಸಮತೆ ಹೆಚ್ಚುವುದರಿಂದಾಗಿಯೇ ಸಂಪತ್ತಿನ ಅಸಮತೆಯೂ ಹೆಚ್ಚುತ್ತದೆ

ಪ್ರೆಸ್‍ ಇನ್‍ಫಾರ್ಮೇಷನ್ ಬ್ಯುರೊ(ಪಿಐಬಿ)ದ ಈ ಹೇಳಿಕೆ, ಈ ಕುರಿತಂತೆ ಮೂರು ಪಟ್ಟಿಗಳನ್ನು ತಯಾರಿಸಲಾಗಿದೆ-ದೃಢೀಕರಿಸಿದ ಪಟ್ಟಿ, ವ್ಯುತ್ಪನ್ನ ಪಟ್ಟಿ ಮತ್ತು ಸಂದೇಹಿತ ಪಟ್ಟಿ ಎಂದಿತ್ತು. ಇವುಗಳಲ್ಲಿ ಅನುಕ್ರಮವಾಗಿ 16537, 16,739 ಮತ್ತು 80,670 ಶೆಲ್ ಕಂಪನಿಗಳಿವೆ ಎಂದೂ ಹೇಳಿತ್ತು. ಅಂದರೆ ಒಟ್ಟು 113946 ಶೆಲ್‍ ಕಂಪನಿಗಳ ದತ್ತಾಂಶ ನೆಲೆಯನ್ನು 2018ರ ವೇಳೆಗೇ ಗುರುತಿಸಿರಲಿಲ್ಲವೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ʻʻಕೃಪಾಪೋಷಣೆಯನ್ನು ಅಡಗಿಸಿಡಲು…ʼʼ

ʻʻಅದಾನಿಗೆ ತನ್ನ ಕೃಪಾಪೋಷಣೆಯನ್ನು ಅಡಗಿಸಿಡಲು ಮೋದಿ ಸರಕಾರ ಎಂತಹ ಅದ್ಭೂತ ಮಟ್ಟಕ್ಕೂ ಹೋಗಬಲ್ಲದು. 2018ರಲ್ಲಿ ಶೆಲ್ ಕಂಪನಿಗಳ ʻಪಿಡುಗʼನ್ನು ನಿಭಾಯಿಸಲು ಒಂದು ಕಾರ್ಯಪಡೆಯನ್ನು ಪ್ರಕಟಿಸಲಾಗುತ್ತದೆ. ಸಂಸತ್ತಿನಲ್ಲಿ ಇಂದು ಸರಕಾರ ತನ್ನ ಬಳಿ ಶೆಲ್‍ ಕಂಪನಿಯನ್ನು ಗುರುತಿಸುವ ವ್ಯಾಖ್ಯಾನ ಎನ್ನುತ್ತದೆ. ಹೇಳುತ್ತದೆʼʼ ಎಂದು ಕುರಿತು ಟಿಪ್ಪಣಿ ಮಾಡುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹೇಳಿದ್ದಾರೆ.

ಇದಲ್ಲದೆ ಎರಡು ವರ್ಷಗಳ ಹಿಂದೆ, ಜುಲೈ 27, 2021ರಂದು ಇದೇ ಸರಕಾರದ ಕಾರ್ಪೊರೇಟ್‍ ವ್ಯವಹಾರಗಳ ರಾಜ್ಯಮಂತ್ರಿ ರಾಜ್ಯಸಭೆಗೆ ನೀಡಿದ್ದ ಲಿಖಿತ ಉತ್ತರದಲ್ಲಿ 2018-2021 ರ ನಡುವೆ ಅಂತಹ 2,38,223 ಕಂಪನಿಗಳಿವೆ ಎಂದು ಒಪ್ಪಿಕೊಂಡಿತ್ತು ಎಂದೂ ವರದಿಯಾಗಿದೆ.

ʻಅದಾನಿ ಕುಟುಂಬ ಚಿಪ್ಪುಗಳ ಪ್ರಶ್ನೆ ಬಂದಾಗ…ʼ

ಅಂದರೆ ಕಾನೂನಿನಲ್ಲಿ ಶೆಲ್‍ ಕಂಪನಿ ಬಗ್ಗೆ ನಿರ್ದಿಷ್ಟ ವ್ಯಾಖ್ಯಾನ ಇಲ್ಲದೆಯೇ ಸರಕಾರ ಇವನ್ನು ʻಚಿಪ್ಪುʼ ಕಂಪನಿಗಳೆಂದು ಗುರುತಿಸಿತೇ ಎಂದು ಟಿಎಂಸಿ ಸಂಸದೆ ಮಹುವಾ ಮೈತ್ರ ಒಂದು ಟ್ವೀಟ್‍ನಲ್ಲಿ ಪ್ರಶ್ನಿಸಿದ್ದಾರೆ.  ಮಾರಿಷಸ್‍ನಲ್ಲಿ ಅದಾನಿ ಸಮೂಹದ ಕುಟುಂಬ ಚಿಪ್ಪುಗಳ ಪ್ರಶ್ನೆ ಬಂದಾಗ ಮಾತ್ರ ಕಣ್ಣುಪಟ್ಟಿ ಬಂದು ಬಿಡುತ್ತದೆ ಎಂದು ಅವರು ಟಿಪ್ಪಣಿ ಮಾಡಿದ್ದಾರೆ.

ಲಂಡನ್ನಿನ ʻಫೈನಾನ್ಶಿಯಲ್ ಟೈಮ್ಸ್ʼ ಪತ್ರಿಕೆಯಲ್ಲಿ ಈ ತಿಂಗಳು ಪ್ರಕಟವಾಗಿರುವ ವರದಿಯ ಪ್ರಕಾರ, ಅದಾನಿಯವರ 5.7 ಬಿಲಿಯ ಡಾಲರುಗಳು (ಸುಮಾರು ರೂ.20,000 ಕೋಟಿ) ಎಫ್‍ಡಿಐ ಒಳಹರಿವಿನಲ್ಲಿ 50% ದಷ್ಟು ಈ ಸಮೂಹದೊಂದಿಗೆ ʻʻಸಂಪರ್ಕ ಹೊಂದಿರುವ ಅಪಾರದರ್ಶಕ ಸಾಗರೋತ್ತರ ಘಟಕಗಳಿಂದʼʼ ಬಂದಿದೆ (ದಿ ವೈರ್, ಮಾರ್ಚ್ 26).

ಈ ಹಿನ್ನೆಲೆಯಲ್ಲಿ ಮಾರ್ಚ್ 25 ರಂದು ಈಗ ಲೋಕಸಭೆಯಿಂದ ಅನರ್ಹಗೊಳಿಸಲಾಗಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ʻʻಅದಾನಿ ಸಮೂಹದಲ್ಲಿ ಯಾರೋ ಶೆಲ್ ಕಂಪನಿಗಳ ಮೂಲಕ 20,000 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆʼʼ ಎಂದು ಹೇಳಿರುವುದು ಅದಾನಿ ಪ್ರಶ್ನೆಗೆ ಮತ್ತೊಂದು ಆಯಾಮ ಸೇರಿಸಿದೆ.

ʻʻನರೇಂದ್ರ ಮೋದಿ ಜಿ ಮತ್ತು ಶ್ರೀ ಅದಾನಿ ನಡುವೆ ಆಳವಾದ ಸಂಬಂಧವಿದೆ – 20,000 ಕೋಟಿ ರೂಪಾಯಿಗಳು ಇದ್ದಕ್ಕಿದ್ದಂತೆ ಶ್ರೀ ಅದಾನಿ ಶೆಲ್ ಕಂಪನಿಗಳಿಗೆ ಎಲ್ಲಿಂದ ಬಂತು?ʼʼ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *